ಎಲ್ಲರಿಗೂ ಸ್ವಾಗತ

ಜೈನ ಧರ್ಮವು ಜಗತ್ತಿನ ಅನಾದಿನಿದನ ಧರ್ಮವಾಗಿದೆ. ಈ ಧರ್ಮವನ್ನು ಯಾರೂ ಸ್ಥಾಪಿಸಿಯೂ ಇಲ್ಲ ಹಾಗೂ ನಾಶವಾಗುವುದೂ ಇಲ್ಲ. ಅವಿರತವಾಗಿ ಇರುವ ಜಗತ್ತಿನ ಏಕೈಕ ಧರ್ಮ ಜೈನ ಧರ್ಮವಾಗಿದೆ. ಘಾತಿ ಕರ್ಮಗಳನ್ನು ಗೆದ್ದು ಸಮವಸರಣದಲ್ಲಿ ದಿವ್ಯ ಉಪದೇಶವನ್ನು ನೀಡುವ ಜಿನನ ಅನುಯಾಯಿಗಳ ಧರ್ಮವೇ ಜೈನ ಧರ್ಮವಾಗಿದೆ. ಸಮಸ್ತ ಜಗತ್ತಿನ ಸಮಸ್ತ ಜೀವಿಗಳ ಹಿತವನ್ನು ಜೈನ ಧರ್ಮ ಬಯಸುತ್ತದೆ. ಬದುಕು ಬದುಕಲು ಬಿಡು ಎಂಬ ಮಹಾನ್ ತತ್ವವನ್ನು ಜೈನ ಧರ್ಮ ಪ್ರತಿಪಾದಿಸುತ್ತದೆ. ಪ್ರಬಲ ಅಹಿಂಸೆಯನ್ನು ಜೀವ ಜಗತ್ತಿಗೆ ಸಾರಿ ಹೇಳಿರುವ ಜೈನ ಧರ್ಮ ವಿಶ್ವದ ಅಗ್ರಮಾನ್ಯ ಧರ್ಮವಾಗಿದೆ. ಹಿಂಸೆಯೆಂಬುದು ಮಹಾ ಪಾಪವಾಗಿದ್ದು ಅದು ಜೀವ ಜಗತ್ತಿನ ಕ್ಷೇಮವನ್ನು ಕಾಪಾಡುವುದಿಲ್ಲ ಎಂದು ಜೈನ ಧರ್ಮವು ವಿಶ್ವಾಸ ಇಟ್ಟಿದೆ.

ಜೀವನಕ್ಕೆ ಅತೀ ಅಗತ್ಯಕ್ಕಿಂತ ಹೆಚ್ಚು ಪರಿಗ್ರಹ ( ಸಂಪತ್ತು ) ಸಂಗ್ರಹಿಸುವುದೂ ಕೂಡ ಸಂಸಾರದ ದುಃಖಕ್ಕೆ ಕಾರಣವಾಗುತ್ತದೆ ಎಂದು ತೀರ್ಥಂಕರರು ಪ್ರತಿಪಾದಿಸಿದ್ದಾರೆ. ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ, ದಾನ, ತ್ಯಾಗ ಮುಂತಾದವುಗಳು ಜೈನ ಧರ್ಮದ ಪರಮೋಚ್ಛ ಮೂಲ ಮಂತ್ರವಾಗಿದೆ. ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ ಎಂದು ಜೈನ ಧರ್ಮ ಅನಾದಿ ಕಾಲದಿಂದಲೂ ಸಾರುತ್ತಾ ಬಂದಿದೆ.

ವರ್ತಮಾನ ಕಾಲದಲ್ಲಿ ಭಗವಾನ್ ಆದಿನಾಥರಿಂದ ಹಿಡಿದು ಭಗವಾನ್ ಮಹಾವೀರರವರೆಗೆ‌ ಜೈನ ಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು. ತದನಂತರ ಅನ್ಯ ಮತ ಧರ್ಮಗಳ‌ ಪ್ರಭಾವ ಇದ್ದರೂ ಇಂದಿಗೂ ಜೈನ ಧರ್ಮ ಪರಮ ಶ್ರೇಷ್ಟವಾಗಿಯೇ ಉಳಿದಿದೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ಈ ಪಂಚಮ ಕಾಲದಲ್ಲೂ ನಿರ್ಗ್ರಂಥ ಮುನಿಗಳು ಇರುವುದು. ಮರಣಕ್ಕೆ ಹೆದರದ ಧರ್ಮ, ಜನಗಳು ಇಲ್ಲ. ಆದರೆ ಜೈನ ಧರ್ಮವು ಮರಣವನ್ನು ಮಹೋತ್ಸವವನ್ನಾಗಿ ಆಚರಿಸುವ ವಿಶ್ವದ ಏಕೈಕ ಧರ್ಮವಾಗಿದೆ.

ಈ ವಿಶ್ವದ ಸೃಷ್ಟಿಗೆ ಒಬ್ಬ ದೇವರಿದ್ದಾನೆ, ರಕ್ಷಣೆಗೆ ಒಬ್ಬ ದೇವರಿದ್ದಾನೆ ಹಾಗು ನಾಶ ಮಾಡಲು ಅಥವಾ ಪಾಪಿಗಳಿಗೆ ಶಿಕ್ಷೆ ಕೊಡಲು ಒಬ್ಬ ದೇವರಿದ್ದಾನೆ ಎಂಬುದನ್ನು ಒಪ್ಪದ ಜಗತ್ತಿನ ಏಕೈಕ ಧರ್ಮವೆಂದರೆ ಅದು ಜೈನ ಧರ್ಮವಾಗಿದೆ. ತಾನು ಮಾಡುವ ಕರ್ಮಗಳಿಗೇ ( ಕ್ರಿಯೆಗಳು / ಕೆಲಸಗಳು ) ತನಗೆ ಶುಭ / ಅಶುಭ ಫಲಗಳು ದೊರೆಯುತ್ತದೆ ಎಂಬುದನ್ನು ಜೈನ ಧರ್ಮವು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಹಸಿವಾದಾಗ ಉಣ್ಣುವುದು ಪ್ರಕೃತಿ ( ಕರ್ಮ ) . ಈ ಕ್ರಿಯೆಯನ್ನೇ ಕರ್ಮ ಎನ್ನುವುದು. ಇದರಿಂದ ಶರೀರದ ಸುಸ್ಥಿತಿಗೆ ಅನುಕೂಲವಾಗುತ್ತದೆ. ಹಸಿವಾಗದೇ ಉಣ್ಣುವುದು ವಿಕೃತಿ ( ಕರ್ಮ ) . ಆದರೆ ಇದರಿಂದ ಶರೀರದ ದುರವಸ್ಥೆಗೆ ಕಾರಣವಾಗುತ್ತದೆ. ಇಂತಹುದೇ ನಿಯಮ ನಮ್ಮ ಆತ್ಮನಿಗೂ ಅನ್ವಯವಾಗುತ್ತದೆ. ಆತ್ಮನ ಕಲ್ಯಾಣವಾಗಬೇಕಾದರೆ ಜಿನ ಭಗವಂತರು ಹೇಳಿರುವ / ಸಾಗಿರುವ ದಾರಿಯಲ್ಲಿ ಸಾಗಬೇಕು. ಹಾಗಾದಾಗ ನಮ್ಮ ಆತ್ಮನು ಪರಮ ಹಾಗೂ ಅಂತಿಮ ಪದವಿಯಾದ ಮೋಕ್ಷವನ್ನು ಹೊಂದಬಹುದು. ಇಲ್ಲದೇ ಹೋದಲ್ಲಿ ದುಃಖವನ್ನು ಅನುಭವಿಸುತ್ತಾ ಸಂಸಾರದಲ್ಲಿ ( ನಾಲ್ಕು ಗತಿಗಳಲ್ಲಿ ) ಇರಬೇಕಾಗುತ್ತದೆ. ಪ್ರತೀ ಆತ್ಮವೂ ಪರಮಾತ್ಮನಾಗಬಹುದು ಎಂದು ಜೈನ ಧರ್ಮವು ಹೇಳುತ್ತದೆ. ಆದರೆ ಅದಕ್ಕೆ ಸಾಧನೆ ಮಾಡಬೇಕಾಗುತ್ತದೆ.

ಜೈನ ಧರ್ಮವು ವಿಶ್ವಕ್ಕೆ ಅಹಿಂಸೆಯೆಂಬ ಮಹಾನ್ ಕೊಡುಗೆಯನ್ನು ನೀಡಿದೆ. ಹಿಂಸಾತ್ಮಕ ಜಗತ್ತು ಸುಸ್ಥಿತಿಗೆ ಬರಬೇಕಾದರೆ ಜೈನ ಧರ್ಮದ ಅಹಿಂಸೆ ಅತೀ ಅಗತ್ಯವಾಗಿದೆ. ಪರಮಾಣು ಬಾಂಬುಗಳಿಂದ ನಡೆಯುವ ಯುದ್ಧ ಕ್ಷೇಮದಿಂದಿರಲು ಸಾಧ್ಯವಿಲ್ಲ. ಇದಕ್ಕೆ ಅಹಿಂಸೆಯೆಂಬ ಅಸ್ತ್ರವು ಅತೀ ಅಗತ್ಯವಾಗಿದೆ. ಅಹಿಂಸೆಯು ಜೀವ ಜಗತ್ತಿಗೆ ಸುಖವನ್ನು ನೀಡುವ ಮಹಾನ್ ಸಾಧನವಾಗಿದೆ.

ಜೈನ ಪರಂಪರೆಯು ಭಾರತಕ್ಕೆ ಮಹತ್ತರ ಕೊಡುಗೆ ನೀಡಿದೆ. ಧರ್ಮ, ಕಲೆ, ಸಂಸ್ಕೃತಿಗೆ ಜೈನ ಧರ್ಮವು ಅಪಾರ ಕೊಡುಗೆ ನೀಡಿದೆ. ಜೈನ ಧರ್ಮದ ಅನುಯಾಯಿ ರಾಜ ಮಹಾರಾಜರುಗಳು ಸುಗಮ ಆಡಳಿತವನ್ನು ನಡೆಸಿ ಪ್ರಜಾ ಕ್ಷೇಮದ ರೂವಾರಿಗಳಾಗಿರುವುದು ಚರಿತ್ರೆಯಿಂದ ತಿಳಿದು ಬರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಜೈನ ಧರ್ಮದ ಛಾಪು ಎದ್ದು ಕಾಣುತ್ತಿದೆ. ಶಿಲ್ಪಕಲೆ ಸಾಹಿತ್ಯಕ್ಕೆ ಕೊಡಮಾಡಿರುವ ಕಾಣಿಕೆ ಮರೆಯಲಾಗದ್ದು ಆಗಿರುತ್ತದೆ.

ಈ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಜೈನ ಧರ್ಮದ ಉನ್ನತೋನ್ನತ ಪರಂಪರೆಯ ಪರಿಚಯವನ್ನು ಸ್ವಧರ್ಮೀಯರಿಗೆ ಪರಿಚಯ / ಜಾಗೃತಿ ಮೂಡಿಸಲು ಈ ವೇದಿಕೆಯನ್ನು ನಿರ್ಮಿಸಲಾಗಿದೆ. ಜೈನ ಧರ್ಮದ ಹಿರಿಮೆ ಗರಿಮೆಯನ್ನು ಪ್ರಚುರಪಡಿಸಬೇಕಾಗಿದೆ. ಅದಕ್ಕಾಗಿ ಈ ನಿಟ್ಟಿನತ್ತ ಸಾಗಲು ನಮಗೊಂದು ದಾರಿ ಸೂಚಿಯಾಗಲು ಈ ವೇದಿಕೆ / ಮಾಧ್ಯಮ ಸಹಾಯಕ ಆಗಬಹುದು ಎಂದು ನಮ್ಮ ನಂಬಿಕೆಯಾಗಿದೆ.

ನಮ್ಮ ಪ್ರಯತ್ನಕ್ಕೆ ನಿಮ್ಮ ಸಲಹೆ ಸಹಕಾರ ಕೊಡಲು ಇಚ್ಛೆ ಇದ್ದರೆ ಸಂಪರ್ಕಿಸಿ

jainajagruti@gmail.com
ಜೈ ಜಿನೇಂದ್ರ.

Translate »
error: Content is protected !!