ಉತ್ತಮ ಅಂಕಿಚನ್ಯಧರ್ಮ
ಸಮಸ್ತ ಪರಿಗ್ರಹಗಳನ್ನು ತ್ಯಾಗ ಮಾಡಿ, ನನ್ನ ಹೊರಗೆ ಇರುವ ಸಮಸ್ತ ಪದಾರ್ಥಗಳಲ್ಲಿ ರಾಗ ಭಾವನೆ ಇಡದಿರುವುದೇ ಉತ್ತಮ ಅಂಕಿಚನ್ಯ ಧರ್ಮವಾಗಿದೆ. ರತ್ನತ್ರಯ ಪ್ರಾಪ್ತಿಯಾಗಬೇಕಾದರೆ ಮೋಕ್ಷಮಾರ್ಗ ಸಿಗಬೇಕಾದರೆ ಉತ್ತಮ ಅಂಕಿಚನ್ಯ ಧರ್ಮ ಬೇಕಾಗುತ್ತದೆ.
ಯಾಕೆಬೇಕು ಅಂಕಿಚನ್ಯ_ಧರ್ಮ
ದೀಪಾವಳಿಗೆ ಮದುವೆ ಮಾಡಿಕೊಟ್ಟ ತಂಗಿಯನ್ನು ಗಂಡನ ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಬರಲು ಅಣ್ಣ ಹೋಗುತ್ತಾನೆ. ಅಣ್ಣ ಕಡು ಬಡವನಾಗಿಯೇ ಇದ್ದ. ತಂಗಿಯ ಗಂಡನ ಮನೆಯವರೋ ಅಗರ್ಭ ಶ್ರೀಮಂತರು. ಅಣ್ಣನ ಜೊತೆಯಲ್ಲಿ ತಂಗಿಯನ್ನು ಗಂಡನ ಮನೆಯವರು ಕಳುಹಿಸಿಕೊಟ್ಟರು. ತಂಗಿ ಮೈ ತುಂಬಾ ಆಭರಣಗಳ ರಾಶಿಯನ್ನು ಹಾಕಿಕೊಂಡಿದ್ದಳು. ದಾರಿಯಲ್ಲಿ ಬರುವಾಗ ತಂಗಿಯ ಆಭರಣಗಳ ರಾಶಿಯನ್ನು ಕಂಡು ಅಣ್ಣನ ಮನಸ್ಸು ಕದಡಿತು. ತಂಗಿಯನ್ನು ಕೊಂದು ಈ ಆಭರಣಗಳನ್ನೆಲ್ಲಾ ನಾನು ತೆಗೆದುಕೊಂಡರೆ ನನ್ನ ಬಡತನ ನಿರ್ಮೂಲನೆ ಆಗಬಹುದು ಎಂದು ಯೋಚಿಸಿದ. ನಡು ದಾರಿಯಲ್ಲಿ ಬರುವಾಗ ತಂಗಿಯನ್ನು ಮರಕ್ಕೆ ಕಟ್ಟಿಹಾಕಿದ, ಎಲ್ಲಾ ಆಭರಣಗಳನ್ನು ತೆಗೆದುಕೊಂಡ. ಇನ್ನು ಕಲ್ಲು ಎತ್ತಿ ಹಾಕಿ ತಂಗಿಯನ್ನು ಕೊಲ್ಲೋಣವೆಂದು ಭಾವಿಸಿ ಕಲ್ಲನ್ನು ಎತ್ತಲು ಹೋದ. ಆದರೆ ಕಲ್ಲಿನ ಅಡಿಯಲ್ಲಿ ಮೃತ್ಯು ರೂಪದಲ್ಲಿ ಹುದುಗಿದ್ದ ಸರ್ಪವೊಂದು ಅಣ್ಣನನ್ನು ಕಚ್ಚಿತು. ಅಣ್ಞ ಸತ್ತು ಹೋದ. ಇದನ್ನು ಕಂಡ ತಂಗಿ ಬಹಳ ರೋಧಿಸಿದಳು. ಇದೆಲ್ಲವೂ ನನ್ನಿಂದಲೇ ಆಗಿದೆ. ಈ ನಶ್ವರವಾದ ಶರೀರಕ್ಕೆ ಭಾರಿ ಒಡವೆಗಳಿಂದ ಶೃಂಗರಿಸಿದ ಕಾರಣಕ್ಕೆ ಅಣ್ಣನ ಮನಸ್ಸು ಕೆಟ್ಟು ಹೋಯಿತು. ಒಂದು ವೇಳೆ ನಾನು ಒಡವೆಗಳನ್ನು ಧರಿಸದೇ ಇದ್ದಿದ್ದರೆ ನಾನು ಈ ಹೊತ್ತು ಅಣ್ಣನ ಮಡಿಲಲ್ಲಿ ಇರುತ್ತಿದ್ದೆ ಎಂದು ಶೋಕಪಟ್ಟಳು. ಈ ಬಿದ್ದು ಹೋಗುವ ಶರೀರದ ಸೊಗಸಿಗಾಗಿ ಮರುಳಾಗಿ ದುಃಖವನ್ನು ಅನುಭವಿಸುತ್ತಿದ್ದೇನೆ ಎಂದು ಹಲುಬಿದಳು.
ಉತ್ತಮ ಅಂಕಿಚನ್ಯವೇಧರ್ಮ
ಆತ್ಮನ ನಿಜ ಗುಣಗಳನ್ನು ಮರೆತು ಪರಪದಾರ್ಥಗಳನ್ನು ಅನುಭವಿಸಬೇಕೆನ್ನುವ ಇಚ್ಛೆ ಮಾಡುವುದು ದುಃಖಕ್ಕೆ ಕಾರಣವಾಗಿದೆ. ನಾವುಗಳು ಸರಳತೆಯನ್ನು ಮರೆತು ಕ್ಷಣಭಂಗುರವಾದ ಸುಖ ಭೋಗಗಳತ್ತ ವಾಲಿದ್ದೇವೆ. ಆದರೆ ಅದರ ಅವಧಿ ಮುಗಿದ ನಂತರ ಶೋಕ ಸಾಗರದಲ್ಲಿ ಮುಳುಗುತ್ತೇವೆ. ದೇಹವನ್ನು ಶೃಂಗಾರಮಯವನ್ನಾಗಿಸಿ ನಮ್ಮ ಬುದ್ಧಿಯನ್ನೂ ಕೆಡಿಸಿಕೊಂಡು ಇತರರ ಮನಸ್ಸಿನ ವಿಕಲ್ಪಗಳಿಗೂ ಕಾರಣರಾಗುತ್ತೇವೆ. ಆಡಂಬರದ ಬದುಕಿಗೆ ಬಲಿ ಬಿದ್ದು ನೈಜತೆಯನ್ನು ಮರೆತು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಾವುಗಳು ನಶ್ವರವಾದ ಶರೀರದ ವೈಭವಕ್ಕಾಗಿ ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತೇವೆ. ಯಾರಿಗೂ ತೃಪ್ತಿಯೆಂಬುದೇ ಇಲ್ಲ. ಕಾಮದೇವರುಗಳೇ ಈ ಶರೀರ ನಶ್ವರವೆಂದು ಭಾವಿಸಿ ಅಂಕಿಚನ್ಯ ಧರ್ಮದ ಮೂಲಕ ಮೋಕ್ಷಗಾಮಿಗಳಾಗಿದ್ದಾರೆ. ಸಿಕಂದರನು ಬಹಳ ದರ್ಪದಿಂದ ಜೀವನ ನಡೆಸುತ್ತಿದ್ದ. ಆದರೆ ಮರಣದ ಸಮಯದಲ್ಲಿ ವಾಸ್ತವತೆ ಅವನಿಗೆ ಅರಿವಾಗಿತ್ತು. ಈ ಜಗತ್ತಿನಲ್ಲಿ ಮರಣವನ್ನು ತಪ್ಪಿಸುವ ಯಾವ ವೈದ್ಯನೂ ಇಲ್ಲವೆಂದು ಹೇಳಿದನು. ಹೂಳುವಾಗ ನನ್ನ ಎರಡು ಕೈಗಳನ್ನು ಮೇಲೆ ಕಾಣುತ್ತಿರುವಂತೆ ಮಾಡಬೇಕು ಅಂದನು. ಯಾರೂ ಸಾಯುವಾಗ ಏನನ್ನೂ ಕೊಂಡುಹೋಗುವುದಿಲ್ಲ ಎಂದು ಜಗತ್ತಿಗೆ ಗೊತ್ತಾಗಬೇಕು ಅಂದನು. ಆದರೆ ನಾವುಗಳು ಇದೆಲ್ಲವೂ ನನ್ನದೂ, ನನ್ನದೂ ಎಂದು ವಿಕಲ್ಪಗಳನ್ನು ಮೈಗೂಡಿಸಿಕೊಂಡು ನೈಜತೆಯನ್ನು ಮರೆತ್ತಿದ್ದೇವೆ. ನಮ್ಮ ಆತ್ಮ ಚೈತನ್ಯ ಸ್ವರೂಪಿ ಅನಂತಜ್ಞಾನಿ ಎಂಬುದನ್ನು ಮರೆತು ಪರಿಗ್ರಹದ ಬೆನ್ನು ಹತ್ತಿದ್ದೇವೆ. ಇದರಿಂದಾಗಿ ಮಾನಸಿಕ , ದೈಹಿಕ ವೇದನೆಯನ್ನು ಅನುಭವಿಸುತ್ತಿದ್ದೇವೆ. ಆತ್ಮನ ಚಿಂತನೆಯನ್ನು ಮಾಡುತ್ತಾ ಯಾವುದೇ ಪದಾರ್ಥಗಳು ನಮ್ಮ ಹಿಂದೆ ಬರುವುದಿಲ್ಲ ಎಂಬುದನ್ನು ತಿಳಿದುಕೊಂಡು ಮೋಕ್ಷದ ಮಾರ್ಗದಲ್ಲಿ ಹಂತಹಂತವಾಗಿ ಮುನ್ನಡೆಯಬೇಕಾಗಿದೆ.
ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಅಂಕಿಚನ್ಯ ಧರ್ಮದ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ
#ನಿರಂಜನ್ಜೈನ್ಅಳದಂಗಡಿ
9945563529.