ಉತ್ತಮಾ ಕ್ಷಮಾ
ಮನುಷ್ಯನ ಸ್ವಭಾವಗಳಲ್ಲಿ ಕ್ರೋಧವು ಕೂಡ ಒಂದು ಅಂಗವಾಗಿದೆ. ಕ್ರೋಧ ರಹಿತ ಭಾವ ಆತ್ಮನ ಮೂಲಗುಣವಾಗಿದೆ. ಅಂದರೆ ಕ್ರೋಧ ಮಾಡದೇ ಕ್ಷಮಾ ಗುಣ ಹೊಂದುವುದು ಅಥವಾ ಕ್ರೋಧದ ಅಭಾವದಿಂದಿರುವುದು ಆತ್ಮನ ಸಹಜ ಹಾಗೂ ಉನ್ನತವಾದ ಭಾವವಾಗಿದೆ.
ಕ್ರೋಧಕ್ಕೆ ಕಾರಣ
ಕ್ರೋಧವು ಮನುಷ್ಯನ ಸಾತ್ವಿಕ ಗುಣವನ್ನು ನಾಶ ಮಾಡುತ್ತದೆ. ಅಸಂಯಮದಿಂದ , ವಿವೇಕ ರಹಿತತೆಯಿಂದ, ಅಜ್ಞಾನದಿಂದ, ಅಸ್ವಾಭಾವಿಕ ಮನೋಭಾವದಿಂದ ಹಾಗೂ ಪ್ರಕೃತಿಯ ವಿರುದ್ಧವಾಗಿ ನಡೆಯುವ ಕಾರಣದಿಂದ ಕ್ರೋಧವು ಉತ್ಪನ್ನವಾಗುತ್ತದೆ. ತಾನು ಬಯಸಿದ್ದು ಸಿಗದೇ ಹೋದಾಗ ವ್ಯಕ್ತಿಯು ಕ್ರೋಧಿತನಾಗುತ್ತಾನೆ. ಮದದಿಂದ ಕೂಡಿದ ವ್ಯಕ್ತಿಯು ಆತನಿಗೆ ಮಾನ್ಯತೆ ದೊರೆಯದಿದ್ದಾಗ ಕ್ರೋಧದ ವಶನಾಗುತ್ತಾನೆ. ಬಲಶಾಲಿ ವ್ಯಕ್ತಿ ತನಗಿಂತ ಬಲಹೀನನಲ್ಲಿ ಕ್ರೋಧಗೊಳ್ಳುತ್ತಾನೆ. ಎಲ್ಲರೂ ತನ್ನನ್ನು ಗೌರವಿಸಬೇಕು, ಮಾನ್ಯತೆ ಮಾಡಬೇಕು, ಪುರಸ್ಕರಿಸಬೇಕು ಎಂಬ ಮನೋಭಾವ ಹೊಂದಿದ ವ್ಯಕ್ತಿ ತನ್ನ ಆಶಯಗಳು ಈಡೇರದೇ ಹೋದಲ್ಲಿ ಪರಸ್ಪರರಲ್ಲಿ ಕ್ರೋಧಗೊಳ್ಳುತ್ತಾನೆ. ಅತೀವವಾದ ಲಾಲಸೆಗಳಿಂದ ಕೂಡಿದ ವ್ಯಕ್ತಿಯು ತನ್ನ ಲಾಲಸೆಗಳು ಈಡೇರದೇ ಹೋದಲ್ಲಿ ಕ್ರೋಧಗೊಂಡು ವಿವಶನಾಗುತ್ತಾನೆ. ಕೆಲವು ಹಣವಂತರಲ್ಲಿ, ವಿದ್ಯಾವಂತರುಗಳಲ್ಲಿ ಕ್ರೋಧವು ಇರುತ್ತದೆ. ಒಟ್ಟಾರೆಯಾಗಿ ಮನದಲ್ಲಿ ಹುದುಗಿರುವ ದುರ್ವಿಚಾರಗಳಿಗೆ ತೊಂದರೆಯಾದಾಗ ಅಥವಾ ಸುವಿಚಾರಗಳಿಗೂ ಎಡರು ತೊಡರಾದಾಗ ವಿವೇಕರಹಿತನಾಗಿ ಕ್ರೋಧಿತನಾಗುತ್ತಾನೆ.
ಕ್ರೋಧದ ಪರಿಣಾಮಗಳು
ಕ್ರೋಧಿತ ವ್ಯಕ್ತಿಯು ಸಕಲರಿಂದಲೂ ನಿಂದನೆಗೆ ಒಳಗಾಗುತ್ತಾನೆ. ಕ್ರೋಧಕ್ಕೆ ಜಗತ್ತಿನಲ್ಲಿ ಒಂದಿನಿತೂ ಗೌರವ ಸಿಗುವುದಿಲ್ಲ. ಒಂದು ಕುಟುಂಬದಲ್ಲಿ ಹಲವು ಜನರಿದ್ದು ಅದರಲ್ಲಿ ಒಬ್ಬನೇ ಒಬ್ಬನಿಗೂ ಕ್ರೋಧ ಇದ್ದರೂ ಆ ಕುಟುಂಬದ ನೆಮ್ಮದಿ ನಾಶವಾಗುತ್ತದೆ. ಅದೆಷ್ಟೋ ಕ್ರೋಧಿತ ಜನರಿಂದ ಅದೆಷ್ಟೋ ಕುಟುಂಬಗಳು ನೆಮ್ಮದಿಯನ್ನು ಕಳೆದುಕೊಂಡು ವಿನಾಶವಾದ ಪ್ರಕರಣಗಳು ನಮ್ಮ ಮುಂದಿವೆ. ಕ್ರೋಧಗೊಂಡ ವ್ಯಕ್ತಿಯು ಮತ್ತೊಬ್ಬನ ಕ್ರೋಧಕ್ಕೂ ಕಾರಣನಾಗುತ್ತಾನೆ. ಕ್ರೋಧಕ್ಕೆ ಬಲಿಯಾಗಿ ತಾನೂ ನಾಶವಾಗುವುದಲ್ಲದೆ ಇತರರನ್ನೂ ನಾಶ ಮಾಡುತ್ತಾನೆ. ಕ್ರೋಧಿತನು ಎಷ್ಟೇ ಜ್ಞಾನವಂತನಾಗಿದ್ದರೂ, ವ್ರತ ನಿಯಮಗಳನ್ನು ಮಾಡುತ್ತಿದ್ದರೂ ಅವುಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಆತನು ಮಾಡುವ ವ್ರತ ನಿಯಮಗಳು ಮೌಲ್ಯವನ್ನು ಕಳೆದುಕೊಂಡು ನಿಷ್ಪ್ರಯೋಜಕ ಆಗುತ್ತದೆ. ಕ್ರೋಧಗೊಂಡ ವ್ಯಕ್ತಿಯ ಕುಟುಂಬವೂ , ಕುಟುಂಬದ ಸದಸ್ಯರೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ನೆಮ್ಮದಿ ಇಲ್ಲದ ಬದುಕು ಬಹು ದುರಂತಗಳಿಗೆ ಕಾರಣವಾಗುತ್ತದೆ. ಕ್ರೋಧಗೊಂಡ ವ್ಯಕ್ತಿಗೆ ಜ್ಞಾನಿಗಳ, ವಿವೇಕವಂತರ ಮಾತು ಅಪಥ್ಯವೆನಿಸುತ್ತದೆ.
ಉತ್ತಮ ಕ್ಷಮೆಯೇ ಶ್ರೇಷ್ಟ
ಕ್ರೋಧವನ್ನು ತೊರೆದು ಸಕಲ ಜೀವಿಗಳಲ್ಲಿ ಕ್ಷಮಾ ಭಾವನೆಯನ್ನು ಹೊಂದುವುದೇ ಧರ್ಮವಾಗಿದೆ. ತನ್ನ ಮನಸ್ಸಿನ ವಿಕಲ್ಪಗಳ ಪರಿಣಾಮದಿಂದ ಉಂಟಾಗುವ ಕ್ರೋಧವನ್ನು ಜಯಿಸಿ ಮಾನವೀಯತೆಯ ಅಮೃತಧಾರೆಯ ಪ್ರವಹಿಸುವುದೇ ಶ್ರೇಷ್ಟ ಧರ್ಮವಾಗಿದೆ. ಕ್ರೋಧ ರಹಿತನಾದವನು ಸರ್ವರಿಂದಲೂ ಪ್ರಶಂಸೆಗೆ ಒಳಗಾಗಿ ಗೌರವಿಸಲ್ಪಡುತ್ತಾನೆ. ಕ್ಷಮೆಯು ಮನುಷ್ಯನ ಶ್ರೇಷ್ಡತೆಯನ್ನು ವೃದ್ಧಿಸುತ್ತದೆ. ಸಾಮಾಜಿಕ, ಕೌಟುಂಬಿಕ, ಹಾಗೂ ಮಾನಸಿಕ ಶಾಂತಿಯಿಂದ ವ್ಯಕ್ತಿಯು ಶ್ರೇಷ್ಠತಮವಾದ ಸಹಜ ಗುಣದಿಂದ ಶೋಭಿಸುತ್ತಾನೆ. ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಆದರೆ ತಪ್ಪು ಮಾಡಿದವನನ್ನು ಕ್ಷಮಿಸುವುದು ಮತ್ತಷ್ಟೂ ಉತ್ತಮವಾದ ಗುಣವಾಗಿದೆ. ಕ್ಷಮಾ ಗುಣವನ್ನು ಜಗತ್ತು ಗೌರವಿಸುತ್ತದೆ ಹಾಗೂ ಅದು ಆತನ ಹಿರಿಮೆ ಗರಿಮೆಗೆ ಸಾಕ್ಷಿಯಾಗುತ್ತದೆ. ಕ್ಷಮೆಯನ್ನು ಹೊಂದಿದ ವ್ಯಕ್ತಿಯ ಮಾನವೀಯತೆಯ ಮೌಲ್ಯವು ಸಮಾಜದಲ್ಲಿ ದೇದಿಪ್ಯಮಾನವಾಗಿ ಕಂಗೊಳಿಸಲ್ಪಡುತ್ತದೆ. ತಪ್ಪು ಮಾಡಿದವರ ತಪ್ಪುಗಳನ್ನು ಕ್ಷಮಿಸಿ ಆತನು ಈ ಸಮಾಜದ ಮುಖ್ಯವಾಹಿನಿಯಲ್ಲಿ ಬರುವಂತೆ ಮಾಡಲು ಕ್ಷಮೆಯು ಸಹಾಯಕವಾಗುತ್ತದೆ.
ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಕ್ಷಮಾ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ
ಉತ್ತಮ ಕ್ಷಮಾ ಧರ್ಮಕೀ ಜೈ
ನಿರಂಜನ್ಜೈನ್ಅಳದಂಗಡಿ
9945563529.