ಉತ್ತಮ ಆರ್ಜವಧರ್ಮ

ಉತ್ತಮ ಆರ್ಜವಧರ್ಮ

ಯಾವುದು ಎಲ್ಲಾ ಜೀವಿಗಳನ್ನು ಸಂಸಾರದ ದುಃಖದಿಂದ ಪಾರು ಮಾಡುತ್ತದೆ ಅಥವಾ ವಸ್ತು ಸ್ವರೂಪವನ್ನು ತಿಳಿಸುತ್ತದೆಯೋ ಅಥವಾ ಸರ್ವ ಜೀವಿಗಳಲ್ಲಿ ಸಮತಾ ಭಾವವನ್ನು ಇರಿಸುತ್ತದೆಯೋ ಅದು ಧರ್ಮವಾಗಿದೆ.‌ ಜಗತ್ತಿನಲ್ಲಿ ಒಂದೇ ಧರ್ಮವಿರುವುದು. ಅನಾದಿಕಾಲದಿಂದ ಮುನಿ ಶ್ರೇಷ್ಟರುಗಳು, ಸಂತ ಮಹಾಶಯರು ಮುಂತಾದ ಅಗ್ರವೇಣ್ಯರು ಇದನ್ನೇ ಸಾರುತ್ತಾ ಬಂದಿದ್ದಾರೆ. ಅದರಲ್ಲೂ ಜೈನ ಧರ್ಮದ ದಾರ್ಶನಿಕರಂತೂ ಧರ್ಮದ ಬಗೆಗೆ ಬಹು ವಿಸ್ತಾರವಾದ ಶ್ರೇಷ್ಟತಮವಾದ ವಾಖ್ಯಾನವನ್ನು ನೀಡಿದ್ದಾರೆ. ವಸ್ತುವಿನ ಸ್ವಭಾವವೇ ಧರ್ಮವೆಂದು ಜೈನ ಧರ್ಮ ಹೇಳುತ್ತದೆ. ಯಾವುದೇ ಒಂದು ವಸ್ತು ತನ್ನ ಮೂಲಭೂತ ಗುಣವನ್ನು ಯಾವುದೇ ಕಾರಣಕ್ಕೂ ಮಾರ್ಪಾಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಬೆಂಕಿ. ಬೆಂಕಿಯ ಧರ್ಮವೆನೇಂದರೆ ಸುಡುವುದು. ಅದು ಎಂದೂ ಸುಡುವಿಕೆಯನ್ನು ಮರೆಯುವುದಿಲ್ಲ ಹಾಗೂ ತೊರೆಯುವುದಿಲ್ಲ. ಹಾಗೆಯೇ ನೀರು. ನೀರಿನ ಮೂಲ ಸ್ವಭಾವ ಅಥವಾ ಧರ್ಮ ತಣ್ಣಗಿರುವುದು. ನೀರನ್ನು ಬಿಸಿ ಮಾಡಬಹುದು ಆಗ ಅದು ಬಿಸಿಯಾಗುತ್ತದೆ ಆದರೆ ಬೆಂಕಿ ಆರಿದ ನಂತರ ಅದು ಪುನಃ ತಣ್ಣಗೆ ಆಗುತ್ತದೆ. ಅದು ಅದರ ಧರ್ಮವನ್ನು ಬಿಡುವುದಿಲ್ಲ. ಲೋಕದಲ್ಲಿ ಎಷ್ಟು ಪದಾರ್ಥಗಳಿವೆಯೋ‌ ಅವೆಲ್ಲವೂ ತಮ್ಮ ತಮ್ಮ ಸ್ವಭಾವವನ್ನು ಎಂದೂ ಬಿಟ್ಟು ಕೊಡುವುದಿಲ್ಲ. ಒಂದು ವೇಳೆ ಸ್ವಭಾವದ ನಾಶವಾಗಿ ಹೋದರೆ ವಸ್ತುವಿನ ಅಭಾವವಾಗಿ ಹೋಗುವುದು. ಆದರೆ ಹಾಗೆಂದೂ ಆಗುವುದಿಲ್ಲ.

ಜೈನ ಧರ್ಮವು ಧರ್ಮವನ್ನು ಬಹಳ ವಿಶಾಲವಾಗಿ ಅರ್ಥೈಸಿಕೊಂಡಿದೆ. ಧರ್ಮವನ್ನು ಸುಲಭವಾಗಿ ಅರಿಯುವ ಸಲುವಾಗಿ ಧರ್ಮದ ಹತ್ತು ಗುಣಲಕ್ಷಣಗಳನ್ನು ಪ್ರತಿಪಾದಿಸಲಾಗಿದೆ. ಆತ್ಮನು ಮೂಲತಃ ಪರಿಶುದ್ಧನಾಗಿದ್ದಾನೆ. ಆದರೆ ಕರ್ಮದ ನಿಮಿತ್ತದಿಂದ ಸಂಸಾರದಲ್ಲಿ ಅಲೆದಾಡುತ್ತಿದ್ದಾನೆ. ಸಂಸಾರ ಬಂಧನದಿಂದ ಬಿಡುಗಡೆಯಾಗಲು ಧರ್ಮದ ಹತ್ತು ಲಕ್ಷಣಗಳನ್ನು ಅಳವಡಿಸಿಕೊಳ್ಳಬೇಕು.

ಧರ್ಮದ ಹತ್ತು ಲಕ್ಷಣಗಳಲ್ಲಿ ಆರ್ಜವ ಧರ್ಮವೂ ಒಂದು. ಇದರ ಜೊತೆಗೆ ಉತ್ತಮ ಎಂಬ ಶಬ್ದವನ್ನು ಸೇರಿಸಲಾಗಿದೆ. ಸಮ್ಯಕ್ ದರ್ಶನ ಪೂರ್ವಕವಾಗಿ ಈ ಧರ್ಮದ ಮೂಲ ಸ್ವರೂಪವನ್ನು ಸ್ವೀಕಾರ ಮಾಡುತ್ತಾ ಇವುಗಳನ್ನು ಅಳವಡಿಸಿಕೊಳ್ಳಬೇಕೆಂದು ಆಶಯವಾಗಿದೆ. ಖ್ಯಾತಿ ತೋರಿಕೆಗೆ ಧರಿಸಲಾಗುವ ಧರ್ಮ ಎಂದೂ ಫಲ ನೀಡದು. ಇದರ ಪೂರ್ಣ ಪಾಲನೆಯನ್ನು ಮುನಿರಾಜರುಗಳು ಮಾಡುತ್ತಾರೆ. ಗೃಹಸ್ಥಾರಾದ ನಾವುಗಳು ಅಂಶಿಕರೂಪದಿಂದಲಾದರೂ ಆಚರಣೆ ಮಾಡಬೇಕು. ನಮ್ಮ ಶಕ್ತಿಗನುಸಾರವಾಗಿ ಆಚರಿಸಿ ಬದುಕನ್ನು ಹಸನುಗೊಳಿಸಬಹುದು. ಅದಕ್ಕಾಗಿ ಉತ್ತಮ ಎಂಬ ಪದವನ್ನು ಎಂದು ಸಂಭೋದಿಸಲಾಗುತ್ತದೆ.

ಧರ್ಮದ ಶ್ರೇಷ್ಟ ಲಕ್ಷಣವು ಆರ್ಜವವಿದೆ. ಬಹಳ ಸರಳತೆಯಿಂದಿರುವುದು ಆರ್ಜವವಿದೆ. ಪ್ರಪಂಚದಲ್ಲಿ ಸರಳತೆ ಎನ್ನುವುದು ಬಹು ಜನಪ್ರಿಯ ಗುಣವಾಗಿದೆ. ಸರಳತೆಗಿರುವಷ್ಟು ಮಾನ್ಯತೆ ಪ್ರಪಂಚದಲ್ಲಿ ಯಾವ ಗುಣಕ್ಕೂ ಇಲ್ಲ ಅನ್ನಬಹುದು. ಸರಳತೆ ಇದ್ದವನನ್ನು ಜಗತ್ತು ಕೊಂಡಾಡುತ್ತದೆ. ಸರಳತೆಯು ಮನ, ವಚನ, ಕಾಯದ ಮೂಲಕವೂ ಸರಳತೆಯಿರುವುದು. ಕೇವಲ ಒಂದರ ಮೂಲಕ ಸರಳತೆ ಇದ್ದರೆ ಸಾಲದು. ಮನದಲ್ಲೂ, ವಚನದಲ್ಲೂ, ಕಾಯದಲ್ಲೂ ಸರಳತೆ ಇರಬೇಕು. ಇದರಲ್ಲಿ ಮುಖ್ಯವಾಗಿ ಮನದಲ್ಲಿ ಸರಳತೆ ಇರಬೇಕು. ಮನದಲ್ಲಿ ಮುಖ್ಯವಾಗಿ ಸರಳತೆ ಮೂಡಿಬಂದರೆ ಉಳಿದ ಎರಡಲ್ಲೂ ಸರಳತೆ ಮೂಡಿ ಬಂದು ಪೂರ್ಣತೆಯನ್ನು ಸಾರುತ್ತದೆ. ಮನಸ್ಸಿನಲ್ಲಿ ಇನ್ನೊಬ್ಬರಿಗೆ ಮೋಸ, ವಂಚನೆ, ಕಪಟತೆಯನ್ನು ಮಾಡಬಾರದು. ಮೇಲುನೋಟಕ್ಕೆ ಇಂದು ಕಂಡುಬರದಿದ್ದರೂ ಇದು ತನ್ನನ್ನು ತಾನು ಮೋಸಗೊಳಿಸುವ ಯೋಜನೆಯಾಗಿದೆ. ತನ್ನ ಆತ್ಮನಿಗೆ ತಾನೇ ತಾನೇ ಮೋಸ ಮಾಡಿಕೊಂಡಂತೆ ಆಗುತ್ತದೆ. ಕಪಟತನ ಇತ್ಯಾದಿ ಜಗತ್ತಿನಲ್ಲಿ ನಿಂದ್ಯವಿದೆ ತಿರಸ್ಕಾರವಿದೆ. ಇಂತವನನ್ನು ಜಗತ್ತು ಎಂದೂ ಪ್ರೀತಿಸಲಾರದು. ಹಾಗೂ ಆತ್ಮನ ಹಿತವನ್ನು ಬಯಸುವವರು ಈ ಮಾಯಾಚಾರವನ್ನು ಮಾಡುವುದಿಲ್ಲ. ಮನಸ್ಸುನಲ್ಲಿ ಮಾಯಾಚಾರ ಇಟ್ಟುಕೊಂಡು ಏನೇ ಧರ್ಮದ ಕಾರ್ಯಗಳನ್ನು ಮಾಡಿದರೂ, ವ್ರತ, ತಪ ಏನೇ ಮಾಡಿದರೂ ನಿಷ್ಪ್ರಯೋಜಕವಿದೆ. ಮನದಲ್ಲಿ ಸರಳತೆ ಇರದವನು ವಚನ ಕಾಯದಲ್ಲೂ ಸರಳತೆ ಇರಲಾರದು. ಮನಸ್ಸಿಗೆ ಹಿತವಾಗದ ಅಥವಾ ಸಜ್ಜನರು ಮೆಚ್ಚತಕ್ಕಂತಹ ವಚನವನ್ನು ಆಡಲಾರನು. ಇಂತವನ ವಚನವು ಪರರನ್ನು ನೋಯಿಸುತ್ತದೆ. ಮಧುರ ಬಾಂಧವ್ಯದ ಅಭಾವವಾಗುತ್ತದೆ. ಲೋಕದಲ್ಲಿ ಅಪ್ರಿಯನಾಗುತ್ತಾನೆ. ಇಂಥವರು ಹೋದಲ್ಲಿ ಬಂದಲ್ಲಿ ಕಲಹಗಳು ಪ್ರಾರಂಭವಾಗುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂದರೆ ಮೌಲ್ಯಯುತವಾಗಿಯೂ, ಸುಂದರವಾಗಿಯೂ ಇರಬೇಕು ಎಂಬುದು ತಾತ್ಪರ್ಯವಾಗಿದೆ. ಕಪಟತನದ ಮಾತುಗಳು ಕಪಟಿಗಳ ಹೊರತು ಬೇರೆ ಯಾರಿಗೂ ರುಚಿಸದು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ನಾಣ್ಣುಡಿ ಲೋಕಪ್ರಿಯವಾಗಿದೆ. ಕಪಟದ ಮಾತುಗಳು ಧರ್ಮವಂತನ ಚಾರಿತ್ರವನ್ನು ಮಹಿಮೆಯನ್ನು ಹಾಳು ಮಾಡುತ್ತದೆ ಎಂಬುದಕ್ಕೆ ಮಹಾಭಾರತದಲ್ಲಿ ಒಂದು ಉತ್ತಮ ಉದಾಹರಣೆ ಇದೆ. ಮಹಾಭಾರತದಲ್ಲಿ ಧರ್ಮರಾಜನಷ್ಟು ಧರ್ಮಿಷ್ಟರು ಯಾರೂ ಇಲ್ಲ. ಮಹಾಭಾರತ ಯುದ್ಧದ ಸಮಯದಲ್ಲಿ ಆತನ ರಥವು ಭೂಮಿಯನ್ನು ಸ್ಪರ್ಶ ಮಾಡುತ್ತಿರಲಿಲ್ಲ. ಅವನು ಕಾಯ ವಾಚಾ ಮನಸಾದಿಂದ ಬಹಳ ಸರಳತೆಯಿಂದ ಇದ್ದ. ಹಾಗಾಗಿ ಅವನ ರಥವು ಭೂಮಿಯನ್ನು ಸ್ಪರ್ಶಿಸುತ್ತಿರಲಿಲ್ಲ. ಆದರೆ ಯುದ್ಧದ ಸಮಯದಲ್ಲಿ ಕೃಷ್ಣನ ನಿರ್ದೇಶನದಂತೆ ಅಶ್ವತ್ಥಾಮ ಸತ್ತನೆಂದು ಹೇಳಿದನು. ಇಂತಹ ಕಪಟ ಮಾತನ್ನು ಆಡಿದುದರಿಂದ ಧರ್ಮರಾಯನ ರಥವು ಭೂಮಿಯನ್ನು ಸ್ಪರ್ಶ ಮಾಡಿತು. ಕಪಟ ವಚನಗಳು ಮನುಷ್ಯರೊಳಗಿನ ಸಂಬಂಧವನ್ನು ನಾಶ ಮಾಡುತ್ತದೆ. ತಪಸ್ವಿಗಳ, ಸಂಯಮಿಗಳ ಕಪಟ ವಚನವು ಅವರಲ್ಲಿರುವ ಧರ್ಮದ ಮೌಲ್ಯವನ್ನು ಕುಗ್ಗಿಸುತ್ತದೆ. ಕಪಟತನ, ಮೋಸ , ವಂಚನೆಯಿಂದ ಕೂಡಿದ ಕೆಲಸ ಕಾರ್ಯಗಳು ಸ್ವಯಂ ಆತನ ಅಧಃಪತನದ ಸಂಕೇತವನ್ನು ಸಾರುತ್ತದೆ. ಮಹಾತ್ಮ ಗಾಂಧೀಜಿಯವರು ಮನ, ವಚನ, ಕಾಯದಿಂದ ಸರಳತೆಯಿಂದ ಇದ್ದರು. ಹಾಗಾಗಿ ಗಾಂಧೀಜಿಯವರು ವಿಶ್ವಮಾನ್ಯರಾಗಿದ್ದಾರೆ. ರಾಷ್ಟ್ರಪಿತರಾಗಿದ್ದಾರೆ. ಗಾಂಧೀಜಿಯವರು ಸರಳತೆಯಿಂದಾಗಿ ವಿಶ್ವದ ಅನೇಕಾನೇಕ ನಾಯಕರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದಿದ್ದರು. ಸುಭಾಶ್ಚಂದ್ರ ಭೋಸ್, ವಿನೋಭಾಭಾವೆ ಪಟೇಲರು ಕೂಡ ತುಂಬಾ ಸರಳತೆಯ ಕಾರಣದಿಂದಾಗಿ ಬಹು ಭಾರತೀಯರನ್ನು ಆಕರ್ಷಿಸಿದ್ದರು.

ಯಾವನು ಧನ, ಸಂಪತ್ತು , ಮೊದಲಾದವನ್ನು ಬಹುತೇಕವಾಗಿ ಪ್ರೀತಿಸುತ್ತಾನೋ ಅವನು ಮನ, ವಚನ, ಕಾಯದಿಂದ ಛಲ, ಕಪಟ, ಮೋಸ ಪ್ರಾರಂಭಿಸುತ್ತಾನೆ. ಯಾವನಿಗೆ ಆತ್ಮನ ಉನ್ನತಿಯ ಪ್ರಗತಿಯ ಬಯಸುತ್ತಾನೆ ಅವನು ಉತ್ತಮ ಆರ್ಜವ ಧರ್ಮದ ತೊಟ್ಟಿಲಲ್ಲಿ ಪವಡಿಸುತ್ತಾನೆ. ಆರ್ಜವ ಧರ್ಮವನ್ನು ಮೈಗೂಡಿಸಿಕೊಂಡವನು ಸರ್ವಜನ ಹಿತಕಾರಿಯಾಗಿರುತ್ತಾನೆ ಹಾಗೂ ನಿಧಾನವಾಗಿ ಪೂಜ್ಯತೆಯ ಮೆಟ್ಟಿಲನ್ನು ಏರತೊಡಗುತ್ತಾನೆ. ತನ್ನಲ್ಲಿರಬಹುದಾದ ದುಃಖಗಳಿಂದ ನಷ್ಟಗಳಿಂದ ಪಾರಾಗುತ್ತಾನೆ. ಶಾಶ್ವತವಾದ ಸುಖದತ್ತ ಊರ್ಧ್ವಗಾಮಿಯಾಗುತ್ತಾನೆ. ಜಿನೇಂದ್ರ ಭಗವಂತರ ನಿಜವಾದ ಭಕ್ತನು ಧರ್ಮದ ದಾರಿಯಲ್ಲಿ ನಡೆಯುತ್ತಾನೆ‌ ಹಾಗೂ ಧರ್ಮದ ಹತ್ತು‌ ಲಕ್ಷಣಗಳನ್ನು ಅನುಸರಿಸುತ್ತಾನೆ ಯಾಕೆಂದರೆ ಆ ಜಿನೇಂದ್ರ ಭಗವಂತರೂ ಕೂಡ ಇದೇ ದಾರಿಯಲ್ಲಿ ನಡೆದಿದ್ದರು.

ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಮಾರ್ದವ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ

ಉತ್ತಮ ಆರ್ಜವ ಧರ್ಮಕೀ ಜೈ

ನಿರಂಜನ್ಜೈನ್ಅಳದಂಗಡಿ
9945563529.

Translate »
error: Content is protected !!