ಉತ್ತಮ ತ್ಯಾಗಧರ್ಮ
ಯಾರು ಈ ಸಮಾಜದಲ್ಲಿ ದುಃಖಿತರಿದ್ದಾರೋ, ಅರ್ಹರಿದ್ಧಾರೋ, ಪರರ ಉಪಕಾರದ ಸಲುವಾಗಿ ಅಂತಹ ಯೋಗ್ಯರಿಗೆ ತನು, ಮನ, ಧನದ ಮೂಲಕ ಸಹಾಯ ಅಥವಾ ಬೆಂಬಲಿಸುವುದು ಹಾಗೂ ತನ್ನ ಅಂತರಗದಲ್ಲಿ ಹುದುಗಿರಬಹುದಾದ ಕಲ್ಮಶಗಳನ್ನು ದೂರೀಕರಿಸುಸುವುದೇ ಉತ್ತಮ ತ್ಯಾಗ ಧರ್ಮವಾಗಿದೆ.
ಉತ್ತಮ ತ್ಯಾಗವೇ ಪರಮ ಧರ್ಮವಾಗಿದೆ
ಜಗತ್ತಿನಲ್ಲಿ ತ್ಯಾಗಕ್ಕಿಂತ ಉತ್ತಮವಾದ ಧರ್ಮ ಯಾವುದೂ ಇರುವುದಿಲ್ಲ. ದಾನವು ತ್ಯಾಗದಲ್ಲಿ ಅಂತರ್ಗತವಾಗಿದೆ. ಆದರೆ ದಾನವು ಯೋಗ್ಯ ಜೀವಿಗಳಿಗೇ ಮಾಡಬೇಕು. ಪರಮ ದಿಗಂಬರ ಮುನಿಗಳಿಗೆ ಆಹಾರ ದಾನ, ಶಾಸ್ತ್ರ ದಾನ, ಪಿಂಛಿ ಕಮಂಡಲ ದಾನ ಮಾಡಬೇಕು. ಮುನಿಗಳು ಬದುಕುವುದಕ್ಕಾಗಿ ಜೀವನ ನಡೆಸುತ್ತಿಲ್ಲ, ತಮ್ಮ ಆತ್ಮ ಕಲ್ಯಣಕ್ಕಾಗಿ ಜೀವಿಸುತ್ತಿದ್ದಾರೆ. ಹಾಗಾಗಿ ಅವರುಗಳಿಗೆ ಆಹಾರ ಇತ್ಯಾದಿಗಳ ಅವಶ್ಯಕತೆ ಇರುತ್ತದೆ. ಈ ಸಾಮಾಗ್ರಿಗಳು ಅವರುಗಳಿಗೆ ಭೋಗ ಭಾಗ್ಯಗಳಿಗೆ ಇರದೇ ಆತ್ಮ ಕಲ್ಯಾಣದ ದಾರಿಯಲ್ಲಿ ಸಹಾಯಕವಾಗುತ್ತದೆ. ಹಾಗಾಗಿಯೇ ಶ್ರಾವಕರಾದ ನಾವುಗಳು ಮುನಿಗಳಿಗೆ ಯಾವುದು ಅಗತ್ಯವೋ ಅದನ್ನು ಮಾತ್ರ ದಾನ ಮಾಡಬೇಕು. ಪೂಜ್ಯ ಮುನಿಗಳ ಆತ್ಮ ಕಲ್ಯಾಣದ ದಾರಿಗೆ ಉಪದ್ರವ ಆಗುವಂತಹ ವಸ್ತುಗಳನ್ನು ನಾವು ದಾನ ಮಾಡಿದರೆ ನಮಗೆ ಎರಡು ರೀತಿಯ ಪಾಪ ಬಂಧವಾಗುತ್ತದೆ. ಒಂದನೆಯದಾಗಿ ನಾವು ಕೊಟ್ಟ ಪರಿಗ್ರಹದ ಸಾಮಾಗ್ರಿ ಮುನಿಗಳ ಆತ್ಮ ಕಲ್ಯಾಣದ ದಾರಿಗೆ ತೊಡಕಾಗಬಹುದು, ಹಾಗೂ ನಾವು ಬೇಡದ ವಸ್ತುಗಳನ್ನು ದಾನ ಮಾಡಿದಂತಾಗುತ್ತದೆ. ನಾವು ಮುನಿಗಳ ಆತ್ಮ ಕಲ್ಯಾಣದ ದಾರಿಗೆ ಸುಗಮವಾಗಬೇಕೇ ಹೊರತು ಕಂಟಕವಾಗಬಾರದು. ಒಳ್ಳೆಯ ದಾನ ಯಾವಾಗಲೂ ಉತ್ತಮ ತ್ಯಾಗದ ಪ್ರತೀಕವಾಗಿರುತ್ತದೆ.
ನಮ್ಮ ಸುತ್ತ ಮುತ್ತ ಅನೇಕ ಪ್ರಕಾರದ ಜನರು ಇರುತ್ತಾರೆ. ಕೆಲವರು ಸುಖಿಗಳು , ದುಃಖಿಗಳು ಇರುತ್ತಾರೆ. ಕಷ್ಟ, ನಷ್ಟದಲ್ಲಿರುವ ಜೀವಿಗಳಿಗೆ ತ್ಯಾಗ ಮನೋಭಾವದಿಂದ ನೆರವಿನ ಭರವಸೆ ನೀಡುವುದೇ ಅತೀ ಶ್ರೇಷ್ಠವಾಗಿದೆ. ನಮ್ಮ ಸುತ್ತಮುತ್ತಾ ಇರಬಹುದಾದ ವೃದ್ಧರು, ರೋಗಿಗಳು, ಅಶಕ್ತರು, ಅಸಹಾಯಕರು ಇವರಿಗೆ ಅವರ ಬೇಕು ಬೇಡಗಳನ್ನು ಚೆನ್ನಾಗಿ ಗಮನಿಸಿ ಅವರ ಯೋಗ್ಯತೆಗೆ ಅನುಸಾರವಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಧರ್ಮವಾಗಿದೆ. ನಾವು ಮಾಡಿದ ಸಹಾಯ, ದಾನ ಮುಂತಾದವುಗಳು ಆ ವ್ಯಕ್ತಿಯ ಸವಿ ಉನ್ನತಿಗೆ ಸಹಾಯವಾಗಬೇಕೇ ಹೊರತು ಆತನ ಪತನಕ್ಕೆ ಕಾರಣವಾಗಬಾರದು. ಉದಾಹರಣೆಗೆ ಕುಡುಕನಿಗೆ ಸಹಾಯ ಮಾಡಬೇಕು ಹೇಗೆಂದರೆ ಆತನಿಗೆ ಹಣ ನೀಡಬಾರದು, ಹಣ ನೀಡಿದರೆ ಆತ ಮತ್ತೆ ಕುಡಿಯಬಹುದು. ಅದರ ಬದಲಾಗಿ ಆತ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಹಸಿದಿದ್ದರೆ ಊಟ, ನೀರು ಕೊಡಬಹುದು, ಆತನ ಚಿಕಿತ್ಸೆಗೆ ಸಹಾಯ ಮಾಡಬಹುದು. ನಾವು ಮಾಡಿದ ಸಹಾಯ ಸದ್ವಿನಿಯೋಗವಾಗಬೇಕು. ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಿ ಆತ ರೋಗ ಮುಕ್ತವಾಗಲು ಸಹಾಯ ಮಾಡಬಹುದು. ಓದಲು ಅನುಕೂಲ ಇಲ್ಲದವರಿಗೆ ಅನುಕೂಲ ಸಲ್ಲಿಸಬಹುದು. ಮನೆ ಇಲ್ಲದವರಿಗೆ ಮನೆ, ನಿರುದ್ಯೋಗಿಗಳಿಗೆ ಉದ್ಯೋಗ, ಇತ್ಯಾದಿ ರೂಪದಲ್ಲಿ ನೆರವನ್ನು ನೀಡಬಹುದು. ಸಮಾಜದಲ್ಲಿನ ಪೂಜಾಲಯಗಳಿಗೆ, ವಿದ್ಯಾಕೇಂದ್ರಗಳಿಗೆ, ಆಶ್ರಮಗಳಿಗೆ ಇತ್ಯಾದಿ ವಿಭಾಗಗಳಲ್ಲಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗ್ಯ ರೀತಿಯಲ್ಲಿ ಸಹಕರಿಸುವುದು ಅಂದರೆ ದಾನದ ಮೂಲಕ ಪ್ರೇರಕರಾಗಬಹುದು.
ನಮ್ಮ ಜೀವನದಲ್ಲಿ ತ್ಯಾಗವು ಅತೀ ಮಹತ್ವ ಪಡೆಯುತ್ತದೆ. ಅಂತರಂಗ ಬಹಿರಂಗ ಪರಿಗ್ತಹಗಳ ತ್ಯಾಗ ಮಾಡಿ ಆತ್ಮನ ಉನ್ನತಿಯತ್ತ ಸಾಗುವುದು ಜಾಣತನವಾಗಿದೆ. ನಮಗೆ ಎಷ್ಟು ಪರಿಗ್ರಹಗಳ ಅಗತ್ಯ ಇದೆಯೋ ಅಷ್ಟನ್ನು ಮಾತ್ರ ಸಂಗ್ರಹಿಸಿಟ್ಟುಕೊಳ್ಳುವುದು ಉಚಿತವಾಗಿದೆ. ಮೊದಲು ಅಂತರಂಗ ಪರಿಗ್ರಹಗಳನ್ನು ಸೀಮಿತಗೊಳಿಸಿದರೆ ತನ್ನಿಂದತಾನೇ ಬಹಿರಂಗ ಪರಿಗ್ರಹವೂ ಸೀಮಿತಗೊಳ್ಳುತ್ತದೆ. ತನ್ನಲ್ಲಿರಬಹುದಾದ ರಾಗ ದ್ವೇಷ, ಕಷಾಯ ಇತ್ಯಾದಿಗಳನ್ನು ತ್ಯಾಗ ಮಾಡದ ಹೊರತು ನಮ್ಮ ಉದ್ಧಾರವಾಗಲಾರದು. ಭಗವಾನ್ ಬಾಹುಬಲಿಯು ಅಂತರಂಗ ಬಹಿರಂಗ ಪರಿಗ್ರಹಗಳನ್ನು ತ್ಯಾಗ ಮಾಡಿ ಭವಬಂಧನದಿಂದ ಮುಕ್ತನಾದ. ಅದೇ ರೀತಿ ಅನೇಕಾನೇಕ ಮಹಾ ಪುರುಷರು ಭೋಗ ಭಾಗ್ಯಗಳನ್ನು ತೊರೆದು, ಪರಿಗ್ರಹಗಳ ತ್ಯಾಗ ಮಾಡಿ ಪುನೀತರಾಗಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ಕಾರಣಕರ್ತರಾದ ಅನೇಕರು ತ್ಯಾಗ ಧರ್ಮದ ದಾರಿ ತುಳಿದಿದ್ಧಾರೆ. ಹೀಗಾಗಿ ಉತ್ತಮ ತ್ಯಾಗ ಧರ್ಮವು ನಮ್ಮ ಆತ್ಮನ ಉನ್ನತಿಗೆ ಕಾರಣವಾಗಿರುವುದರಿಂದ ನಾವೆಲ್ಲರೂ ಉತ್ತಮ ತ್ಯಾಗ ಧರ್ಮದ ಪಥದಲ್ಲಿ ಮುನ್ನಡೆಯಬೇಕಾಗಿದೆ.
ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ತ್ಯಾಗ ಧರ್ಮದ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ
ನಿರಂಜನ್ಜೈನ್ಅಳದಂಗಡಿ
9945563529.