ಉತ್ತಮ ಮಾರ್ದವಧರ್ಮ

ಉತ್ತಮ ಮಾರ್ದವಧರ್ಮ

ಕಠೋರತೆಯಿಂದ ರಹಿತವಾದುದು ಮಾರ್ದವ. ಮನ, ವಚನ ಕಾಯಗಳಲ್ಲಿ ಕಾಠಿಣ್ಯ ಇರದೇ ಕೋಮಲತೆಯಿಂದಿರುವುದು ಅಥವಾ ಮೃದುತ್ವದಿಂದಿರುವುದು ಅಥವಾ ಸಾಮ್ಯ ಭಾವದಿಂದ ಇರುವುದು , ಗರ್ವ ರಹಿತನಾಗಿ ಇರದಿರುವುದು, ಅಥವಾ ಮಾನ ರಹಿತನಾಗಿ ಇರುವುದು ಮಾರ್ದವ ಅದರಲ್ಲೂ ಉತ್ತಮ ಮಾರ್ದವತೆಯಿಂದ ಕೂಡಿರುವುದು ಧರ್ಮದ ಲಕ್ಷಣವಾಗಿದೆ.

ಕಠೋರತೆಯ ದುಷ್ಪರಿಣಾಮ

ಕಠೋರತೆಯು ಆತ್ಮನನ್ನು ಬಾಧಿಸುತ್ತದೆ. ಇತರರ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಕಠೋರವಾದ ಹಾಸುಗಲ್ಲು ಹೇಗೆ ಉಪಯೋಗವಿಲ್ಲವೋ ಹಾಗೆಯೇ ಮೃದುವಾದ, ಕೋಮಲವಾದ ಹಾಸುಗಲ್ಲು ನೆಲ್ಲಕ್ಕೆ ಹಾಕಿ ಉಪಯೋಗಿಸಲ್ಪಡುತ್ತದೆಯೋ ಕಠೋರವಾದ ವ್ಯಕ್ತಿಯು ಯಾರಿಗೂ ಪ್ರಿಯನಾಗನು. ಕೋಮಲ , ಮೃದು ಸ್ವಭಾವದವನು ಸರ್ವ ಜನರಿಗೂ ಪ್ರಿಯನಾಗುತ್ತಾನೆ. ಕಠೋರವಾದ ವಚನಗಳು, ಕಾರ್ಯಗಳು, ಮನಸ್ಸುಗಳು ಎಂದೂ ಯಾರಿಗೂ ಪ್ರಿಯವಾಗುವುದಿಲ್ಲ. ಇದು ಇನ್ನೊಬ್ಬರನ್ನು ನೋಯಿಸುತ್ತದೆ. ಬಾಧೆಗೊಳಿಸುತ್ತದೆ. ಕಠೋರ ಸ್ವಭಾವದವನ ಸ್ನೇಹವನ್ನು ಯಾರೂ ಬಯಸುವುದಿಲ್ಲ. ಅಭಿಮಾನ ತುಂಬಿ ತುಳುಕುತ್ತಿರುವವನಲ್ಲಿ ಕಠೋರತೆಯು ಮನೆ ಮಾಡಿರುತ್ತದೆ. ಅಹಂಕಾರ, ಮದ ಇತ್ಯಾದಿ ಇರುವವನಲ್ಲಿ ಕೋಮಲತೆಯು , ಮೃದುತ್ವವು ಇಲ್ಲವಾಗಿರುತ್ತದೆ. ತನ್ನಲ್ಲಿರಬಹುದಾದ ರೂಪ, ಜ್ಞಾನ, ಸಂಪತ್ತು ಇವುಗಳಿಂದ ಮದವಂತನಾಗಿ ಇತರರನ್ನು ತಾತ್ಸಾರ ಮನೋಭಾವದಿಂದ ಕಾಣುತ್ತಾನೆ. ಇಂತಹ ಮನೋಭಾವದ ವ್ಯಕ್ತಿಯ ಚಾರಿತ್ರವೂ ಹೀನವಾಗಿರುತ್ತದೆ. ಇಂತಹ ಚಾರಿತ್ರವನ್ನು ಸಾತ್ವಿಕ ಜನರು ಇಷ್ಟ ಪಡುವುದಿಲ್ಲ. ಬಹಳ ಅಭಿಮಾನವಂತನು ಅಪರಾಧ ಮಾಡಿರದಿದ್ದರೂ ಆ ಅಭಿಮಾನಿಯ ಹಿತೈಷಿ ಯಾರೂ ಇರುವುದಿಲ್ಲ.

ಮದ ರಹಿತನಾಗಿ ಇರುವುದೇ ಕೋಮಲತೆ

ಮಾನ ಅಭಿಮಾನಗಳಿಂದ ರಹಿತನಾಗಿ ಸರ್ವರಲ್ಲೂ ಮೃದು‌ ಮನೋಭಾವದಿಂದ ಇರುವುದು ಧರ್ಮದ ಲಕ್ಷಣವಾಗಿದೆ. ಮಾರ್ದವ ಗುಣವು ಸರ್ವರನ್ನು ಪ್ರೀತಿಸುವಂತೆ ಮಾಡುತ್ತದೆ. ರೂಪ, ಆರೋಗ್ಯ, ಸಂಪತ್ತು ಮುಂತಾದವುಗಳ ಬಗೆಗೆ ಗರ್ವ ಪಡೆಯದೇ ಅನ್ಯರನ್ನು ಸಮತಾಭಾವದಿಂದ ನೋಡುವುದು ಮಾರ್ದವ ಧರ್ಮವಾಗಿದೆ. ಮಾರ್ದವ ಗುಣದಿಂದ ಕೂಡಿದ ವ್ಯಕ್ತಿಯ ಕೆಲಸ ಕಾರ್ಯಗಳು ಯಾರನ್ನೂ ನೋಯಿಸದೇ ಇರುತ್ತದೆ ಹಾಗೂ‌ ಸರ್ವ ಜನ ಪ್ರಿಯತೆಯನ್ನು ಉಂಟುಮಾಡುತ್ತದೆ. ತಾನು ಎಲ್ಲರಿಗಿಂತ ಚಿಕ್ಕವನು ಎಂಬ ಮನೋಭಾವದಿಂದ ಕೂಡಿದವನು ಗರ್ವ ಮಾನ ಹೊಂದಲು ಸಾಧ್ಯವಿಲ್ಲ. ಮಾರ್ದವ ಗುಣದ ವ್ಯಕ್ತಿಯು ಬಾಲಕರಲ್ಲಿ, ವೃದ್ಧರಲ್ಲಿ, ಬಲಹೀನನಲ್ಲಿ, ಬುದ್ಧಿರಹಿತ ಮೂರ್ಖರಲ್ಲಿ ಯಾರೇ ಆಗಿರಲಿ ಅವರೊಡನೆ ಯಥಾಯೋಗ್ಯ ವಚನ, ಕಾರ್ಯಗಳನ್ನು ಮಾಡುತ್ತಾನೆ. ಇವರುಗಳ ಮನಸ್ಸನ್ನೂ ನೋಯಿಸುವುದಿಲ್ಲ.‌

ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಮಾರ್ದವ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ

ಉತ್ತಮ ಮಾರ್ದವ ಧರ್ಮಕೀ ಜೈ

ನಿರಂಜನ್ಜೈನ್ಅಳದಂಗಡಿ
9945563529

Translate »
error: Content is protected !!