ಉತ್ತಮ ಶೌಚಧರ್ಮ
ಶೌಚದ ಅರ್ಥವು ಪವಿತ್ರತೆ ಇದೆ. ಇಲ್ಲಿ ಕೇವಲ ದೇಹವನ್ನು ಪವಿತ್ರಗೊಳಿಸದೇ ಅಂತರಂಗವನ್ನು ಶುಚಿಗೊಳಿಸುವುದೇ ಶೌಚ ಧರ್ಮವಾಗಿದೆ.
ಅಶುಚಿಗೆ ಕಾರಣಗಳು
ಮನುಷ್ಯನ ಅತಿ ಲಾಲಸೆಗಳು , ಭೋಗ ಭಾಗ್ಯಗಳ ಅಪೇಕ್ಷೆ, ಲೋಭ ಇತ್ಯಾದಿಗಳ ಕಾರಣದಿಂದ ಆತ್ಮನು ಮಲಿನನಾಗುತ್ತಾನೆ. ಎಷ್ಟೇ ಇದ್ದರೂ ಮತ್ತಷ್ಟೂ ಬೇಕೆನ್ನುವ ತುಡಿತದಿಂದಾಗಿ ಮನುಷ್ಯ ಅಧಃಪತನದತ್ತ ಸಾಗುತ್ತಾನೆ. ತೃಪ್ತಿಯ ಭಾವವಿಲ್ಲದ ಮನಸ್ಸು ಮತ್ತಷ್ಟು ಮತ್ತಷ್ಟು ಬೇಕೆನ್ನುತ್ತದೆ. ಲೋಭದ ವಶನಾಗಿ ಸಂಸಾರದಲ್ಲಿ ಪರಧನದ ಇಚ್ಛೆ, ಪರಸ್ತ್ರೀಯ ಇಚ್ಛೆ, ಭೋಗ ಭಾಗ್ಯಗಳ ಅತೀವ ಆಸಕ್ತಿಯಿಂದಾಗಿ ವಿವೇಕರಹಿತನಾಗಿ ಅಧರ್ಮದ ದಾರಿ ಹಿಡಿಯುತ್ತಾನೆ. ತಾನು ಬಯಸಿದ್ದು ತನಗೆ ಸಿಗಲೇ ಬೇಕು ಎಂಬ ಹಠಕ್ಕೆ ಬಿದ್ದು ಅಧರ್ಮದ ದಾರಿಯಲ್ಲಿ ನಡೆದು ದುಃಖಕ್ಕೆ ಒಳಗಾಗುತ್ತಾನೆ. ಹಪಹಪಿಸುತ್ತಾ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಆತ್ಮೋನ್ನತಿಯನ್ನು ಮರೆಯುತ್ತಾನೆ. ಅತಿ ಲೋಭವು ಪಾಪದ ಜನಕನಿದ್ದಾನೆ. ಪಂಚ ಪಾಪಗಳಲ್ಲಿ ಮಿಂದೇಳುತ್ತಾ ಎಲ್ಲರಿಗೂ ದ್ರೋಹಿಯಾಗಿ ಪರಿವರ್ತಿತನಾಗುತ್ತಾನೆ. ಅನ್ಯರ ವೈಭವವನ್ನು ನೋಡಿ ಅಸೂಯೆ ಪಡುತ್ತಾನೆ. ಸರ್ವ ಜನರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಾನೆ. ಇದರಿಂದಾಗಿ ಭವಭವಾಂತರಗಳಲ್ಲಿ ಕಷ್ಟವನ್ನು ಅನುಭವಿಸುತ್ತಾನೆ.
ಲೋಭದ ತ್ಯಾಗವೇ ಶೌಚ ಧರ್ಮ
ಲೋಲುಪತೆಯನ್ನು ತ್ಯಾಗ ಮಾಡಿದವನು ಅಂತರಂಗದಲ್ಲಿ ಶುಚಿರ್ಭೂತನಾಗುತ್ತಾನೆ. ತನ್ನ ಆತ್ಮನ ಉನ್ನತಿಯನ್ನು ಬಯಸುವವನು ಪಾಪದ ಧನ, ಪರಸ್ತ್ರೀ, ಮುಂತಾದವುಗಳತ್ತ ಚಿತ್ತ ಹರಿಸುವುದಿಲ್ಲ. ಇದ್ದುದರಲ್ಲಿಯೇ ಸಂತೃಪ್ತಿಯ ಜೀವನ ನಡೆಸುತ್ತಾ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾನೆ. ಅಹಿಂಸೆ, ಸತ್ಯ , ಚೌರ್ಯ ರಹಿತ ಕಾಯಕಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಆತ್ಮನ ಪವಿತ್ರತೆಯ ಕಡೆಗೆ ಗಮನ ಕೊಡುತ್ತಾನೆ. ಭಗವಂತನ ನಾಮ ಸ್ಮರಣೆ ಮಾಡುತ್ತಾ ಅಂತರಂಗ ಶುದ್ಧಿಯ ಕಡೆಗೆ ಮನಸ್ಸನ್ನು ಪರಿವರ್ತನೆಗೊಳಿಸುತ್ತಾನೆ. ಯಾರು ಸಮಭಾವ ಹಾಗೂ ಸಂತೋಷದಿಂದ ಇರುವರೋ ಅಂತಹವರ ಆತ್ಮವು ಮಲ ರಹಿತವಾಗಿರುತ್ತದೆ. ಹೀನಾಚಾರದಿಂದ ಮುಕ್ತನಾಗಿ ತನ್ನ ಆತ್ಮನನ್ನು ಸಹಜ ಸ್ಥಿತಿಯತ್ತ, ನಿರ್ಮಲತೆಯತ್ತ ಕೊಂಡೊಯ್ಯುವುದೇ ಉತ್ತಮ ಶೌಚ ಧರ್ಮವಾಗಿದೆ.
ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಶೌಚ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ
ಉತ್ತಮ ಶೌಚ ಧರ್ಮಕೀ ಜೈ
ನಿರಂಜನ್ಜೈನ್ಅಳದಂಗಡಿ
9945563529.