ಉತ್ತಮ ಸಂಯಮಧರ್ಮ
ಹಿಂಸೆಯನ್ನು ತ್ಯಾಗ ಮಾಡಿ ಶುಭ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪಾಪಗಳ ತ್ಯಾಗ ಮಾಡಿ ಸಕಲ ಜೀವರಾಶಿಗಳ ರಕ್ಷಣೆಗೆ ನೆರವಾಗುತ್ತಾ ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ ಸಂಯಮ ಧರ್ಮವಾಗಿದೆ.
ಸಂಯಮವಿಲ್ಲದ ಜೀವನ ವ್ಯರ್ಥ
ಸಂಯಮ ಇಲ್ಲದ ಜೀವನವು ಸೂತ್ರವಿಲ್ಲದ ಗಾಳಿ ಪಟದಂತೆ ಇರುತ್ತದೆ. ಸಂಯಮ ಇಲ್ಲದ ಮನುಷ್ಯನು ಕ್ರೋಧಿತನಾಗಿ , ವಿವೇಕರಹಿತನಾಗಿ ಹಿಂಸಾ ರೂಪವನ್ನು ತಾಳುತ್ತಾನೆ. ಅಧರ್ಮದ ದಾರಿಯಲ್ಲಿ ಮುನ್ನಡೆಯುತ್ತಾ ಧರ್ಮ ಕಂಟಕನಾಗುತ್ತಾನೆ. ತನ್ನ ಅಸಂಯಮದ ಪ್ರವೃತ್ತಿಯಿಂದಾಗಿ ಹಿಂಸಾ ಮಾಧ್ಯಮದ ಮೂಲಕ ತನ್ನ ಆಕ್ರೋಶ, ಅಸಹನೆಯನ್ನು ವಾಮಮಾರ್ಗದ ಮೂಲಕ ತೋರ್ಪಡಿಸಿ ಅಶಾಂತಿಗೆ ಕಾರಣನಾಗುತ್ತಾನೆ. ಇಂದ್ರಿಯಗಳಿಗೆ ವಶೀಭೂತನಾಗಿ ಇಂದ್ರಿಯಗಳ ದಾಸನಾಗಿ ಘೋರತರವಾದ ಪಾಪ ಕಾರ್ಯಗಳಿಗೆ ಇಳಿಯುತ್ತಾನೆ. ಸಂಯಮ ರಹಿತ ಮನುಷ್ಯ ಈ ಸಮಾಜದಲ್ಲಿ ನಿಂದನೆಗೆ ಒಳಗಾಗುತ್ತಾನೆ. ನಿಂದನೆಗೆ ಒಳಗಾದ ವ್ಯಕ್ತಿ ಮಾನಸಿಕವಾಗಿ, ದೈಹಿಕವಾಗಿ ಬಳಲಿ ಬೆಂಡಾಗುತ್ತಾನೆ. ಮಾನಸಿಕ ಕ್ಷೋಭೆಗೆ ಒಳಗಾಗುತ್ತಾನೆ. ತನ್ನ ಸಂಯಮ ಕೊರತೆಯಿಂದ ಇತರರೂ ಸಂಯಮ ಕಳೆದುಕೊಳ್ಳುವ ಅವಕಾಶ ಇರುತ್ತದೆ. ಪ್ರಾಣಿಗಳಲ್ಲಿ, ಅಧರ್ಮಿಗಳಲ್ಲಿ, ನಾರಕಿಗಳಲ್ಲಿ, ದೇವಗತಿಯವರಲ್ಲಿ, ಸಂಯಮವಿರುವುದಿಲ್ಲ. ಸಂಯಮವಿರದ ಮನುಷ್ಯನ ಧರ್ಮಕಾರ್ಯವು ನಿಷ್ಫಲವಾಗಿರುತ್ತದೆ. ಕೆಲವರು ಕ್ಷಣಿಕ ಸುಖದ ಲಾಲಸೆಗಾಗಿ ಸಂಯಮ ರಹಿತರಾಗಿ ಅಗಾಧವಾದ, ದೀರ್ಘವಾದ ದುಃಖವನ್ನು ಅನುಭವಿಸಬೇಕಾಗುತ್ತದೆ ಎಂಬ ಪರಿಜ್ಞಾನವಿಲ್ಲದೇ ಶೋಕ ಸಾಮ್ರಾಜ್ಯದ ಒಡೆಯರಾಗುತ್ತಾರೆ. ಜೇನು ಗೂಡನ್ನು ಕಂಡ ವ್ಯಕ್ತಿಯು ಜೇನಿದ ಮಧುರ ಆಸ್ವಾದಕ್ಕಾಗಿ ಹಾತೊರೆದು ಸಂಯಮ ರಹಿತನಾಗಿ ಜೇನು ಗೂಡಿಗೆ ಕೈಯಿಕ್ಕುತ್ತಾನೆ. ಕ್ಷಣಭಂಗುರವಾದ ನಾಲಗೆ ಚಾಪಲ್ಯಕ್ಕಾಗಿ ಜೇನು ಗೂಡಿಗೆ ದಾಳಿ ಇಟ್ಟವನಿಗೆ ಸಹಸ್ರ, ಸಹಸ್ರ ಸಂಖ್ಯೆಯ ದುಂಬಿಗಳು ಮುತ್ತಿಕ್ಕುತ್ತವೆ. ಮತ್ತಿದ ರಭಸಕ್ಕೆ ವ್ಯಕ್ತಿಯು ಅಸಂಖ್ಯಾತ ಪಟ್ಟು ಶಾರೀರಿಕ ವೇದನೆಗೆ ಒಳಗಾಗಿ ಮರಣ ಸಾಮ್ರಾಜ್ಯದ ಬಾಗಿಲು ತಟ್ಟಲೂಬಹುದು. ಅತೀವ ದಾಹಗೊಂಡವನು ಅಪಾರ ಜಲರಾಶಿಯ ಸಾಗರದ ನೀರನ್ನು ಕಂಡೊಡನೇ ಬೊಗಸೆಯಲ್ಲಿ ಎತ್ತಿ ಎತ್ತಿ ಕುಡಿಯುತ್ತಾನೆ. ಆದರೆ ಲವಣಯುಕ್ತವಾದ ಜಲವನ್ನು ಕುಡಿದ ಅಸಂಯಮೀ ವ್ಯಕ್ತಿಯು ಮತ್ತಷ್ಟು ದಾಹಿತನಾಗಿ ಮರಣದ ದ್ವಾರವನ್ನು ತಲುಪುತ್ತಾನೆ. ಸುಖ, ಭೋಗದ ಲಾಲಸೆಗೆ ಒಳಗಾಗಿ ಅದು ದೊರಕದೇ ಇದ್ದಾಗ ಸಂಯಮದ ನಾಶ ಮಾಡಿಕೊಂಡು ಪ್ರಾಣಿಗಿಂತ ನಿಕೃಷ್ಟನಾಗುತ್ತಾನೆ. ಅಸಂಯಮಿಯ ಮನ, ವಚನ, ಕಾಯಗಳು ವಿಕಲ್ಪಕ್ಕೆ ಒಳಗಾಗುತ್ತದೆ. ವಿಕಲ್ಪಕ್ಕೆ ಈ ಸಕಲ್ಪ ಸಮಾಜದಲ್ಲಿ ಎಳ್ಳಷ್ಟೂ ಬೆಲೆ ಇರುವುದಿಲ್ಲ. ವಿಕಲ್ಪ ಕೃತ್ಯಗಳು ಯಾವಾಗಲೂ ಕಾನೂನು ಬಾಹಿರವೂ, ಧರ್ಮ ಬಾಹಿರವೂ, ಅಧರ್ಮವೂ ಆಗಿರುತ್ತದೆ.
ಉತ್ತಮ ಸಂಯಮವೇ ಧರ್ಮವಾಗಿದೆ
ಸಂಯಮ ಸಹಿತ ಇರುವುದೇ ಧರ್ಮವಾಗಿದೆ. ಸಂಯಮವು ಧರ್ಮಕ್ಕೆ ಭೂಷಣವಾಗಿದೆ. ಧರ್ಮದ ಮಾರ್ಗದಲ್ಲಿ ನಡೆಯುವವನು ಸಂಯಮವಂತನು ಆಗಿರುತ್ತಾನೆ. ಹಾಗಾಗಿಯೇ ಆತ ಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾನೆ . ಸಂಯಮವಂತನು ಲೋಕದ ವ್ಯವಹಾರಗಳನ್ನು ಬಹಳ ತಾಳ್ಮೆಯಿಂದ, ವಿವೇಕದಿಂದ, ದೂರದೃಷ್ಟಿ ಪೂರ್ವಕವಾಗಿ ಅವಲೋಕಿಸುತ್ತಾನೆ. ಆತನು ಸಾಧಕ, ಬಾಧಕಗಳನ್ನು ಚೆನ್ನಾಗಿ ಅರಿತು ಸಾಧಕ ಅಂಶಗಳನ್ನು ಮಾತ್ರ ಸ್ವೀಕರಿಸಿ ತನ್ನ ಕಾರ್ಯದಲ್ಲಿ ಜಯಶಾಲಿಯಾಗುತ್ತಾನೆ. ಅಹಿಂಸಾ ಪಥದ ಸ್ವೀಕಾರ ಮಾಡಿ ಪಾಪಗಳಿಂದ ರಹಿತನಿರುತ್ತಾನೆ. ಇಂತಹ ವ್ಯಕ್ತಿಯನ್ನು ಕುಟುಂಬ ಹಾಗೂ ಸಾಧರ್ಮಿ ಬಂಧುಗಳು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ಕೃಷ್ಣನು ಬೇಡನೊಬ್ಬನ ಬಾಣಕ್ಕೆ ಈಡಾಗಿ ಮರಣಕ್ಕೆ ಸನ್ನಿಹಿತವಾಗಿದ್ದರೂ ಬೇಡನನ್ನು ಅತ್ಯಂತ ಸಂಯಮ ಪೂರ್ವಕವಾಗಿ ಕ್ಷಮಿಸಿ ಬೇಡನೇ ನೀನು ಇಲ್ಲಿಂದ ಬೇಗ ಹೋಗು, ಇಲ್ಲದಿದ್ದರೆ ಬಲರಾಮ ಬಂದು ಸಂಯಮ ಕಳೆದುಕೊಂಡು ನಿನ್ನ ಪ್ರಾಣಕ್ಕೆ ತೊಂದರೆ ಮಾಡಬಹುದು ಎಂದನು. ತನ್ನ ಮರಣಕ್ಕೆ ಕಾರಣನಾದ ಬೇಡನನ್ನು ತನ್ನ ಸಂಯಮದ ಕಾರಣದಿಂದಾಗಿ ಪ್ರಾಣಾಪಾಯದಿಂದ ಕೃಷ್ಣ ಕಾಪಾಡಿದ. ಇದು ಉತ್ತಮ ಸಂಯಮವಾಗಿದೆ. ಸಕಲ ಜೀವರಾಶಿಗಳಲ್ಲಿ ಸಂಯಮದೊಡನೆ ವ್ಯವಹರಿಸಿ ಜೀವ ಜಗತ್ತಿನ ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇಂದ್ರಿಯಗಳ ಆಸಕ್ತಿಯನ್ನು ಸಂಯಮ ಪೂರ್ವಕವಾಗಿ ನಿಗ್ರಹಿಸಿ ಅತಿಯಾದ ಭೋಗ ಭಾಗ್ಯಗಳನ್ನು ಪಡೆಯಲಿಚ್ಚಿಸದೇ ಸಮತಾ ಪೂರ್ವಕವಾಗಿ ಬದುಕುವುದೇ ಶ್ರೇಷ್ಟವಾಗಿದೆ. ಸಂಯಮವು ಸಕಲ ಸಂಪತ್ತಿಗಿಂತಲೂ ಶ್ರೇಷ್ಠವಾಗಿದೆ ಹಾಗೂ ಅಹಿಂಸಾಯುಕ್ತವಾಗಿದೆ. ಸಂಯಮವು ಲೋಕದಲ್ಲಿ ಉತ್ತೋರೋತ್ತರ ಪ್ರಗತಿಗೆ ಕಾರಣವಾಗುತ್ತದೆ ಹಾಗೂ ಪೂಜ್ಯತೆಯನ್ನು ಪಡೆಯುತ್ತದೆ. ಭಗವಾನ್ ಪಾರ್ಶ್ವನಾಥರು ಉತ್ತಮ ಸಂಯಮದಿಂದಲೇ ಕಮಠನ ಉಪಸರ್ಗವನ್ನು ಜನ್ಮಾಜನ್ಮಾಂತರದಿಂದ ಸಹಿಸಿ ಇಂದು ತ್ರಿಲೋಕ ವಂದ್ಯರಾಗಿದ್ದಾರೆ.
ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಸಂಯಮ ಧರ್ಮದ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ
ನಿರಂಜನ್ಜೈನ್ಅಳದಂಗಡಿ
9945563529.