ಉತ್ತಮ ಸತ್ಯಧರ್ಮ
ಸತ್ಯವನ್ನೇ ನುಡಿಯುವುದು, ಅಸತ್ಯದತ್ತ ಮುಖ ಮಾಡದೇ ಇರುವುದು, ಸತ್ಯವೇ ಧರ್ಮವೆಂದು ನಂಬಿ ಬದುಕುವುದು ಉತ್ತಮ ಸತ್ಯವಾಗಿದೆ. ಸತ್ಯವು ಹಿತಕಾರಿಯೂ, ಅಹಿಂಸಾ ಪೂರ್ವಕವಾದುದು, ಹಾಗೂ ಜೀವ ಸಂಕುಲದ ಕ್ಷೇಮವನ್ನು ಕಾಪಾಡುತ್ತದೆ. ಸತ್ಯವಂತನಿಗೆ ವಿವೇಕವು, ಯಶೋಗಾಥೆಯು , ಸಮ್ಮಾನವು ದೊರೆಯುತ್ತದೆ. ಸರ್ವ ಜನ ಪ್ರಿಯನಾಗುತ್ತಾ ಉತ್ತೋರೋತ್ತರ ಪ್ರತಿಯನ್ನು ಸತ್ಯವಂತನು ಕಾಣುತ್ತಾನೆ.
ಅಸತ್ಯದ ದುಷ್ಪರಿಣಾಮಗಳು
ಅಸತ್ಯ ವಚನ, ಕಾರ್ಯಗಳು ಹಿಂಸಾರೂಪವಾಗಿರುತ್ತದೆ. ಹಿಂಸೆಯು ಪಾಪ ರೂಪವಾಗಿದೆ. ಅಸತ್ಯ ನುಡಿಯುವುದರಿಂದ ಕ್ಷಣಕಾಲಕ್ಕೆ ಯಶ ದೊರೆತರೂ ಮರು ಕ್ಷಣವೇ ದುಃಖದ ಅನುಭವವಾಗುತ್ತದೆ. ಇಲ್ಲಿ ಅಸತ್ಯ ನುಡಿದವನಿಗಂತೂ ದುಃಖವಿದೆ ಹಾಗೂ ಯಾರಲ್ಲಿ ಅಸತ್ಯ ವ್ಯವಹಾರ ಇಟ್ಟುಕೊಂಡಿರುತ್ತಾನೋ ಅವನಿಗೂ ದುಃಖ ಬರಿಸುತ್ತಾನೆ. ಇದರಿಂದಾಗಿ ತಾನು ದುಃಖ ಪಡುವುದಲ್ಲದೇ ಇತರರ ದುಃಖಕ್ಕೂ ಕಾರಣನಾಗಿ ಭ್ರಷ್ಟನಾಗುತ್ತಾನೆ. ಅಸತ್ಯವಂತನನ್ನು ಈ ಸಮಾಜ, ಪ್ರಪಂಚ ನಂಬುವುದಿಲ್ಲ, ಗೌರವಿಸುವುದಿಲ್ಲ. ವಿಶ್ವಾಸಘಾತುಕನ ವ್ಯವಹಾರವನ್ನು ಸತ್ಯವಂತರು, ಧರ್ಮಿಷ್ಟರು ಏರ್ಪಡಿಸಿಕೊಳ್ಳುವುದಿಲ್ಲ. ಈ ಜಗತ್ತಿನಲ್ಲಿ ಅದೆಷ್ಟೋ ಅಸತ್ಯಗಳು ವಿಜ್ರಂಭಿಸಿ ಅದೆಷ್ಟೋ ಜೀವ ಜಗತ್ತಿನ ಜೀವಿಗಳಿಗೆ ಹಾನಿಯಾಗಿದೆ. ಅಸತ್ಯವಂತನನ್ನೂ ಆತನ ಮಾತಾ ಪಿತರು, ಹೆಂಡತಿ ಮಕ್ಕಳು, ಸಹೋದರ ಸಹೋದರಿಯರೂ ಮೆಚ್ಚುವುದಿಲ್ಲ. ಈತನ ಸ್ನೇಹವನ್ನೂ ಕೂಡ ಸಮಾಜದಲ್ಲಿನ ಉತ್ತಮ ವ್ಯಕ್ತಿಗಳು ಮಾಡಲಾರರು. ಅಸತ್ಯವಂತನನ್ನು ಯಾರಾದರೂ ಪ್ರೀತಿಸುವುದಂತೂ ದೂರದ ಮಾತು. ಎಲ್ಲರಿಂದಲೂ ಕಡೆಗಣಿಸಲ್ಪಟ್ಟು ಏಕಾಂಗಿಯಾಗಿ ದುಃಖವನ್ನು ಅನುಭವಿಸುತ್ತಾನೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು, ಸಮಾಜದಿಂದ ತಿರಸ್ಕೃತನಾಗಿ ನೋವನ್ನು ಅನುಭವಿಸುತ್ತಾನೆ. ಒಂದು ಸುಳ್ಳನ್ನು ಹೇಳಿ ಮತ್ತೆ ಆ ಸುಳ್ಳನ್ನು ಮುಚ್ಚಲು ಇನ್ನೊಂದು ಸುಳ್ಳನ್ನು ಹೇಳುತ್ತಾನೆ. ಮತ್ತೆ ಮತ್ತೆ ಸುಳ್ಳಗಳನ್ನು ಹೇಳುತ್ತಾ ತನ್ನ ದೋಷವನ್ನು ಮುಚ್ಚಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಇದರ ಸಂಬಂಧವಾಗಿ ಒಂದು ಗಾದೆ ಮಾತಿದೆ, ಕಳ್ಳನನ್ನಾದರೂ ನಂಬಬಹುದು, ಸುಳ್ಳು ಹೇಳುವವನನ್ನು ನಂಬಬಾರದು ಅಂತಾ ಇದೆ. ಅಸತ್ಯವು ಕಳ್ಳತನಕ್ಕಿಂತಲೂ ಘೋರವಾದ ಪಾಪವಾಗಿದೆ ಎಂದು ಇದರಿಂದ ವೇದ್ಯವಾಗುತ್ತದೆ. ಅಸತ್ಯದ ಕಾರ್ಯವು ಕುಟುಂಬದ ಸದಸ್ಯರೊಳಗೆ ವಿರಸ, ದ್ವೇಷವನ್ನು ಉಂಟುಮಾಡುತ್ತದೆ. ಅಸತ್ಯವಂತನಿಗಿಂತ ಬಾಯಿ ಬಾರದ ಮೂಕ ಪ್ರಾಣಿಗಳೇ ಮೇಲು ಎಂದು ಸಂಭಾವಿತರ ಅಭಿಪ್ರಾಯವಾಗಿದೆ. ಅಸತ್ಯವಂತನಿಗೆ ಅಪಾಯ, ಜೀವಹಾನಿ ಕಟ್ಟಿಟ್ಟಬುತ್ತಿಯಾಗಿದೆ.
ಅಸತ್ಯದ ತ್ಯಾಗವೇ ಉತ್ತಮ ಸತ್ಯಧರ್ಮ
ಅಸತ್ಯವನ್ನು ತ್ಯಾಗ ಮಾಡಿದಾಗಲೇ ವ್ಯಕ್ತಿಯ ಬದುಕು ಉತ್ತಮ ಸತ್ಯ ಧರ್ಮದ ದಾರಿಯಲ್ಲಿ ನಡಿಗೆ ಪ್ರಾರಂಭವಾಗುತ್ತದೆ. ಸತ್ಯವಂತನಿಗೆ ಜಯವು ಯಾವಾಗಲೂ ಶತಸಿದ್ಧ. ಸತ್ಯವಂತನಿಗೆ ಪ್ರಪಂಚದಲ್ಲಿ ಉನ್ನತವಾದ ಸ್ಥಾನಮಾನ , ಗೌರವಗಳು ತನ್ನಿಂದತಾನೇ ಪ್ರಾಪ್ತವಾಗುತ್ತದೆ. ಸತ್ಯವಂತನಿಗೆ ಪ್ರೀತಿ, ನೆಮ್ಮದಿ, ಸಂತೋಷ ಕಟ್ಟಿಟ್ಟ ಬುತ್ತಿಯಾಗಿದೆ. ಸತ್ಯವಂತನನ್ನು ಮಾತಾಪಿತರು, ಹೆಂಡತಿ ಮಕ್ಕಳು, ಸಹೋದರ ಸಹೋದರಿಯರು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಸತ್ಯವಂತರೊಡನೆ ವ್ಯವಹಾರವನ್ನು ಉತ್ತಮ ವ್ಯಕ್ತಿಗಳು ನಡೆಸಲು ಇಚ್ಚಿಸುತ್ತಾರೆ. ಉತ್ತಮ ವ್ಯಕ್ತಿಗಳೊಂದಿಗಿನ ವ್ಯವಹಾರವು ಸತ್ಯವಂತನ ಬದುಕನ್ನು ನಿರ್ಮಗೊಳಿಸುತ್ತದೆ ಹಾಗೂ ಹಸನುಗೊಳಿಸುತ್ತದೆ. ಅತ್ಯವಂತನು ಸಮಾಜದಲ್ಲಿ ವ್ಯವಹಾರವನ್ನು ನಿರ್ಭೀತಿಯಿಂದ , ನಿರಮ್ಮಳನಾಗಿ ನಡೆಸುತ್ತಾನೆ. ಸತ್ಯವಂತನಲ್ಲಿ ಅಹಿಂಸೆಯ ಜ್ಯೋತಿಯು ಪ್ರಖರವಾಗಿ ಬೆಳಗುತ್ತಿರುತ್ತದೆ. ಸತ್ಯವಂತನ ಎದುರು ಅಸತ್ಯವಂತನ ಆಟಕೂಟಗಳೆಲ್ಲ ನಡೆಯುವುದಿಲ್ಲ. ಸತ್ಯವಂತನು ಲೋಕಪ್ರಿಯನಾಗುತ್ತಾ ಇನ್ನೊಬ್ಬರ ಬದುಕಿಗೂ ಆಸರೆಯಾಗುತ್ತಾನೆ. ಸತ್ಯವಂತನೂ ಇತರರಿಗೂ, ಅಸತ್ಯವಂತನಿಗೂ ಬದುಕಿನ ದಾರಿಯನ್ನು ಸುಗಮಗೊಳಿಸಲು ಪ್ರೇರಣೆಯಾಗುತ್ತಾನೆ. ರಾಜಾ ಹರಿಶ್ಚಂದ್ರನು ಸತ್ಯದಿಂದಾಗಿ ಅನವರತ ಈ ಜಗತ್ತಿನಲ್ಲಿ ಸ್ಮರಿಸಲ್ಪಡುತ್ತಿದ್ದಾನೆ. ಹಾಗಾಗಿ ಉತ್ತಮ ಸತ್ಯವು ಈ ಜಗತ್ತಿನಲ್ಲಿ ಚಿರಸ್ಥಾಯಿಯಾಗಿ ಧರ್ಮವನ್ನು ಸಂರಕ್ಷಣೆ ಮಾಡುತ್ತಾ ದೇದಿಪ್ಯಮಾನವಾಗಿ ಕಂಗೊಳಿಸುತ್ತಾ ಬಂದಿದೆ.
ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಸತ್ಯ ಧರ್ಮದ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ
ಉತ್ತಮ ಸತ್ಯ ಧರ್ಮಕೀ ಜೈ
ನಿರಂಜನ್ಜೈನ್ಅಳದಂಗಡಿ
9945563529.