ವಿಕ್ರಿಯಾ ಋದ್ಧಿ
ಶರೀರವನ್ನು ಸಣ್ಣದು, ದೊಡ್ಡದು, ಹಗುರ, ಭಾರ ಮುಂತಾದ ಅನೇಕ ಪ್ರಕಾರವಾಗಿ ಮಾಡಿಕೊಳ್ಳುವುದು ವಿಕ್ರಿಯಾ ಋದ್ಧಿಯಾಗಿದೆ. ಇದು 11 ಪ್ರಕಾರವಾಗಿದೆ.
ಅಣಿಮಾ ಋದ್ಧಿ
ಶರೀರವನ್ನು ಅಣುವಿನಷ್ಟು ಸಣ್ಣದನ್ನಾಗಿ ಮಾಡಿಕೊಳ್ಳುವುದಕ್ಕೆ ಅಣಿಮಾ ಋದ್ಧಿ ಎನ್ನುತ್ತಾರೆ. ಋದ್ಧಿಯು ದೇವತೆಗಳಿಗೆ ಜನ್ಮದಿಂದಲೇ ಇರುತ್ತದೆ. ಇದು ಮುನಿಗಳಿಗೂ ಸಹ ತಪೋ ಬಲದಿಂದ ಪ್ರಾಪ್ತವಾಗುತ್ತದೆ.
ಮಹಿಮಾ ಋದ್ಧಿ
ತನ್ನ ಶರೀರವನ್ನು ಮೇರು ಪರ್ವತದಷ್ಟು ಎತ್ತರ ಮಾಡಿಕೊಳ್ಳುವುದು ಮಹಿಮಾ ಋದ್ಧಿಯಾಗಿದೆ.
ಲಘಿಮಾ ಋದ್ಧಿ
ಶರೀರವನ್ನು ಹವೆಗಿಂತಲೂ ಹೆಚ್ಚು ಹಗುರ ಮಾಡಿಕೊಳ್ಳುವುದು ಲಘಿಮಾ ಋದ್ಧಿಯಾಗಿದೆ.
ಗರಿಮಾ ಋದ್ಧಿ
ಶರೀರವನ್ನು ವಜ್ರಕ್ಕಿಂತಲೂ ಸಹ ಕಠೋರ ಮತ್ತು ಭಾರ ಮಾಡಿಕೊಳ್ಳುವುದು ಗರಿಮಾ ಋದ್ಧಿಯಾಗಿದೆ.
ಪ್ರಾಪ್ತಿ ಋದ್ಧಿ
ಭೂಮಿಯ ಮೇಲೆಯೇ ಇದ್ದುಕೊಂಡು ಬೆರಳಿನಿಂದ ಸೂರ್ಯ, ಚಂದ್ರ, ಮೇರು ಶಿಖರ ಮುಂತಾದವುಗಳನ್ನು ಮುಟ್ಟುವುದು ಪ್ರಾಪ್ತಿ ಋದ್ಧಿಯಾಗಿದೆ.
ಪ್ರಕಾಮ್ಯ ಋದ್ಧಿ
ನೀರಿನ ಸಮಾನ ಪೃಥ್ವಿಯ ಮೇಲೆ ಮತ್ತು ಪೃಥ್ವಿಯ ಸಮಾನ ನೀರಿನ ಮೇಲೆ ನಡೆಯುವುದು ಪ್ರಾಕಾಮ್ಯ ಋದ್ಧಿಯಾಗಿದೆ.
ಈಶಿತ್ವ ಋದ್ಧಿ
ಸಂಪೂರ್ಣ ಜಗತ್ತಿನ ಮೇಲೆ ಪ್ರಭುತ್ವ ನಡೆಸುವ ಶಕ್ತಿ ಹೊಂದಿರುವುದು ಈಶಿತ್ವ ಋದ್ಧಿಯಾಗಿದೆ.
ವಶಿತ್ವ ಋದ್ಧಿ
ಜೀವ ಸಮೂಹವನ್ನು ವಶದಲ್ಲಿ ಇಟ್ಟುಕೊಂಡು ಅವುಗಳ ಮನಸ್ಸು ಇಚ್ಛಿಸಿದಂತೆ ಆಕಾರಗೊಳಿಸುವಲ್ಲಿ ಸಮರ್ಥವಾಗುವುದು ವಶಿತ್ವ ಋದ್ದಿಯಾಗಿದೆ.
ಅಪ್ರತಿಘಾತ ಋದ್ಧಿ
ಕಲ್ಲು, ವೃಕ್ಷ, ಪರ್ವತ ಮುಂತಾದವುಗಳಲ್ಲಿ ಆರುಪಾರು ಹೋಗಿಬರಲು ಸಮರ್ಥವಾಗುವುದು ಅಪ್ರತಿಘಾತ ಋದ್ಧಿಯಾಗಿದೆ.
ಅಂತರ್ಧಾನ ಋದ್ಧಿ
ಅದೃಶ್ಯವಾಗುವ ಶಕ್ತಿ ಹೊಂದಿರುವುದು ಅಂತರ್ಧಾನ ಋದ್ಧಿಯಾಗಿದೆ.
ಕಾಮರೂಪಿತ್ವ ಋದ್ಧಿ
ಇಚ್ಛಾನುಸಾರ ಅನೇಕ ರೂಪವಾಗುವಲ್ಲಿ ಸಮರ್ಥವಾಗುವುದು ಕಾಮರೂಪಿತ್ವ ಋದ್ಧಿಯಾಗಿದೆ.
ತಪ ಋದ್ಧಿ
ಇದು ಏಳು ಪ್ರಕಾರವಾಗಿದೆ.
ಉಗ್ರ ತಪ ಋದ್ಧಿ
ದೀಕ್ಷೆ ಸ್ವೀಕರಿಸಿದಂದಿನಿಂದ ಮರಣದ ತನಕ ಉಪವಾಸಗಳನ್ನು ವೃದ್ಧಿಸುತ್ತಾ ಹೋಗುವುದು ಮತ್ತು ಶಿಥಿಲತಾ ಆಗಗೊಡದಿರುವುದು ಉಗ್ರ ತಪ ಋದ್ಧಿಯಾಗಿದೆ.
ಘೋರ ತಪ ಋದ್ಧಿ
ಉಪಸರ್ಗ ಅಥವಾ ಭಯಂಕರ ರೋಗದಿಂದ ಪೀಡಿತವಾಗಿದ್ದರೂ ಸಹ ಅತ್ಯಂತ ಕಠಿಣ ತಪ ಮಾಡುವಲ್ಲಿ ಸಮರ್ಥವಾಗುವುದು ಘೋರ ತಪ ಋದ್ಧಿಯಾಗಿದೆ.
ಘೋರ ಪರಾಕ್ರಮ ತಪ ಋದ್ಧಿ
ಮೂರು ಲೋಕಗಳನ್ನೇ ಎತ್ತಿ ಬಿಸಾಡುವುದು ಮತ್ತು ಸಮುದ್ರದ ನೀರನ್ನು ಒಣಗಿಸುವುದು ಮುಂತಾದ ಮಹಾನ್ ಸಾಮರ್ಥ್ಯ ಹೊಂದಿರುವುದು ಘೋರ ಪರಾಕ್ರಮ ತಪ ಋದ್ಧಿಯಾಗಿದೆ.
ಘೋರ ಬ್ರಹ್ಮಚರ್ಯ ತಪ ಋದ್ಧಿ
ಎಲ್ಲಾ ಗುಣಗಳಿಂದ ಸಂಪನ್ನವಾಗಿ ಅಖಂಡ ಬ್ರಹ್ಮಚರ್ಯದ ಪಾಲನೆ ಮಾಡುವುದು ಘೋರ ಬ್ರಹ್ಮಚರ್ಯ ತಪ ಋದ್ಧಿಯಾಗಿದೆ.
ತಪ್ತ ತಪ ಋದ್ಧಿ
ಉಂಡ ಅನ್ನಾಹಾರ ಮುಂತಾದವು ಮಲ ಮೂತ್ರದಲ್ಲಿ ಪರಿವರ್ತನೆಯಾಗದಿರುವುದು ತಪ್ತ ತಪ ಋದ್ಧಿಯಾಗಿದೆ.
ದೀಪ್ತ ತಪ ಋದ್ಧಿ
ನಿರಂತರ ಉಪವಾಸಾದಿಗಳನ್ನು ಮಾಡಿದರೂ ಸಹ ಸಾಧುವಿನ ಶರೀರದ ಪ್ರಭೆಯು ವೃದ್ಧಿಸುತ್ತಾ ಹೋಗುವುದು ದೀಪ್ತ ತಪ ಋದ್ಧಿಯಾಗಿದೆ.
ಮಹಾ ತಪ ಋದ್ಧಿ
ಮಹಾನ್ ಉಪವಾಸ ಮುಂತಾದವುಗಳನ್ನು ಮಾಡಿದರೂ ಸಹ ಶರೀರದಲ್ಲಿ ಶಿಥಿಲತೆಯಾಗದಿರುವುದು ಮಹಾ ತಪ ಋದ್ಧಿಯಾಗಿದೆ.
ಬಲ ಋದ್ಧಿ
ಬಲ ಋದ್ಧಿಯು ಮೂರು ಪ್ರಕಾರವಾಗಿದೆ.
ಮನೋಬಲ ಋದ್ಧಿ
ಒಂದು ಮುಹೂರ್ತದಲ್ಲಿ ಸಂಪೂರ್ಣ ದ್ವಾದಶಾಂಗ ಶಾಸ್ತ್ರದ ಚಿಂತನೆ ಮಾಡುವಲ್ಲಿ ಸಮರ್ಥವಾಗುವುದು ಮನೋಬಲ ಋದ್ಧಿಯಾಗಿದೆ.
ವಚನಬಲ ಋದ್ಧಿ
ಒಂದು ಮುಹೂರ್ತಕಾಲದಲ್ಲಿ ಸಂಪೂರ್ಣ ಶಾಸ್ತ್ರವನ್ನು ಸುಲಭವಾಗಿ ಉಚ್ಛರಿಸುವಲ್ಲಿ ಸಮರ್ಥವಾಗುವುದು ವಚನಬಲ ಋದ್ಧಿಯಾಗಿದೆ.
ಕಾಯಬಲ ಋದ್ಧಿ
ತಿಂಗಳಾನುಗಟ್ಟಲೆ ಕಾಯೋತ್ಸರ್ಗ ಮಾಡಿದರೂ ಸಹ ಪರಿಶ್ರಮ ಅಥವಾ ಖೇದದ ಅನುಭವ ಆಗದೇ ಇರುವುದು ಕಾಯಬಲ ಋದ್ಧಿಯಾಗಿದೆ.
ಔಷಧ ಋದ್ಧಿ
ಔಷಧ ಋದ್ಧಿಯು ಎಂಟು ಪ್ರಕಾರವಾಗಿದೆ.
ಅಮರ್ಷ ಔಷಧ ಋದ್ಧಿ
ಸಾಧುವಿನ ಯಾವುದೇ ಅಂಗವನ್ನು ಸ್ಪರ್ಶ ಮಾಡುವುದರಿಂದ ರೋಗ ನಿವಾರಣೆ ಆಗುವುದು. ಇದು ಅಮರ್ಷ ಔಷಧ ಋದ್ಧಿಯಾಗಿದೆ.
ಕ್ಷೇಲ ಔಷಧ ಋದ್ಧಿ
ಸಾಧುವಿನ ಉಗುಳು, ಕಫ, ಜೊಲ್ಲು, ಮೂಗಿನಲ್ಲಿಯ ಹೊಲಸು ಮುಂತಾದವುಗಳು ಸಹ ಜೀವಿಗಳ ರೋಗಗಳನ್ನು ದೂರಗೊಳಿಸುವಂಥವುಗಳಾಗಿವೆ. ಇದಕ್ಕೆ ಕ್ಷೇಲ ಔಷಧ ಋದ್ಧಿ ಎನ್ನುವರು.
ಜಲ್ಲ ಔಷಧ ಋದ್ಧಿ
ಬೆವರಿಗೆ ಆಶ್ರಿತವಾದ ಅಂಗ, ರಜ – ಜಲ್ಲವೆಂದು ಕರೆಯುತ್ತಾರೆ. ಸಾಧುವಿನ ಶರೀರದ ಮೇಲೆ ಮೆತ್ತಿಕೊಂಡ ಧೂಳು ಸಹ ಔಷಧ ರೂಪವಾಗಿರುತ್ತದೆ. ಇದು ಜಲ್ಲ ಔಷಧ ಋದ್ಧಿಯಾಗಿದೆ.
ಮಲ ಔಷಧ ಋದ್ಧಿ
ಸಾಧುವಿನ ನಾಲಿಗೆ, ಕಿವಿ, ಮೂಗು, ತುಟಿ ಮುಂತಾದವುಗಳ ಹೊಲಸು, ಜೀವಗಳ ರೋಗಗಳನ್ನು ದೂರಗೊಳಿಸಲು ಸಮರ್ಥವಾಗಿರುವುದು ಮಲ ಔಷಧ ಋದ್ದಿಯಾಗಿದೆ.
ವಿಟ್ ( ವಿಡ್ ) ಔಷಧ ಋದ್ಧಿ
ಸಾಧುವಿನ ಮಲ ಮೂತ್ರಗಳು ಸಹ ಜೀವಗಳ ರೋಗಗಳನ್ನು ನಾಶ ಗೊಳಿಸುವಂತಹದಾಗುವುದು.
ಸರ್ವ ಔಷಧ ಋದ್ಧಿ
ಸಾಧುವಿನ ಸ್ಪರ್ಶವಾದ ನೀರು, ಹವೆ, ಕೂದಲು ಮತ್ತು ಉಗುರು ಮುಂತಾದವುಗಳು ರೋಗಗಳನ್ನು ನಾಶ ಮಾಡುವಂಥವುಗಳಾಗಿವೆ. ಇದು ಸರ್ವ ಔಷಧ ಋದ್ಧಿಯಾಗಿದೆ.
ಮುಖ ನಿರ್ವಿಶ ಋದ್ಧಿ
ಯಾರ ಮುಖದಿಂದ ಹೊರಟಂಥ ವಚನಗಳನ್ನು ಕೇಳುವುದರಿಂದ ವಿಷ ಕುಡಿದ ವ್ಯಕ್ತಿಯು ಸಹ ನಿರ್ವಿಷನಾಗುತ್ತಾನೆಯೋ ಅವರಿಗೆ ಮುಖ ನಿರ್ವಿಶ ಋದ್ಧಿ ಪ್ರಾಪ್ತವಾಗುತ್ತದೆ.
ದೃಷ್ಟಿ ನಿರ್ವಿಷ ಋದ್ಧಿ
ಮುನಿಗಳನ್ನು ನೋಡುವುದರಿಂದಲೇ ಜೀವದ ವಿಷವು ಇಳಿದು ಹೋಗುತ್ತದೆ. ಅಂದರೆ ಅವನು ನಿರೋಗಿಯಾಗುತ್ತಾನೆ. ಇದು ದೃಷ್ಟಿ ನಿರ್ವಿಷ ಋದ್ಧಿಯಾಗಿದೆ.
ರಸ ಋದ್ಧಿ
ರಸ ಋದ್ಧಿಯು ಆರು ಪ್ರಕಾರವಾಗಿದೆ.
ಆಶೀರ್ವಿಶ ಋದ್ಧಿ
ಈ ಋದ್ಧಿಯಿಂದ ಸಾಧುವಿನ ವಚನಗಳು ವಿಷದ ಸಮಾನ ಘಾತಕವಾಗುತ್ತವೆ. ಸಾಧುವಿನ ಮೂಲಕ ಸತ್ತು ಹೋಗು ಎಂದು ಹೇಳಿದ ಬಳಿಕ ಎದುರಿನ ವ್ಯಕ್ತಿ ಸತ್ತು ಹೋಗುತ್ತಾನೆ. ಇದು ಆಶೀರ್ವಿಶ ಋದ್ಧಿಯಾಗಿದೆ.
ದೃಷ್ಟಿ ವಿಷ ಋದ್ಧಿ
ಕ್ರೋಧಯುಕ್ತ ಹೃದಯವುಳ್ಳ ಸಾಧುವಿನ ಮೂಲಕ ಕೇವಲ ನೋಡುವುದರಿಂದಲೇ ಜೀವವು ತಕ್ಷಣ ಸತ್ತು ಹೋಗುತ್ತದೆ. ಇದು ದೃಷ್ಟಿ ವಿಷ ಋದ್ದಿಯಾಗಿದೆ.
ಕ್ಷೀರ ಸ್ರಾವಿ ಋದ್ಧಿ
ಸಾಧುವಿನ ಕೈಯಲ್ಲಿ ಕೊಟ್ಟಂಥ ಅಪಕ್ವ, ಒಣಗಿದ ಭೋಜನವು ಹಾಲಿನಂತೆ ಆಗುವುದು ಇದು ಕ್ಷೀರ ಸ್ರಾವಿ ಋದ್ಧಿಯಾಗಿದೆ.
ಮಧು ಸ್ರಾವಿ ಋದ್ದಿ
ಸಾಧುವಿನ ಕೈಯಲ್ಲಿ ಇಟ್ಟಂತ ಅಪಕ್ವ , ಒಣಗಿದ ಭೋಜನವು ಮಧುರರಸ ( ಸ್ವಾದಿಷ್ಟ ) ವುಳ್ಳದ್ದಾಗಿರುತ್ತದೆ. ಇದಕ್ಕೆ ಮಧುಸ್ರಾವಿ ಋದ್ಧಿ ಎನ್ನುತ್ತಾರೆ.
ಘೃತಸ್ರಾವಿ ( ಸರ್ಪಿಸ್ರಾವಿ) ಋದ್ಧಿ
ಸಾಧುವಿನ ಕೈಯಲ್ಲಿ ಇಟ್ಟಂಥ ನೀರಸ , ಹಸಿ, ಒಣಗಿದ ಆಹಾರವು ಸಹ ತುಪ್ಪದಂತೆ ರಸವುಳ್ಳದ್ದಾಗಿರುತ್ತದೆ. ಇದಕ್ಕೆ ಘ್ರತಸ್ರಾವಿ ಋದ್ಧಿ ಅನ್ನುತ್ತಾರೆ.
ಅಮೃತ ಸ್ರಾವಿ ಋದ್ಧಿ
ಸಾಧುವಿನ ಕೈಯಲ್ಲಿ ಇಟ್ಟಂಥ ಹಸಿ, ಒಣಗಿದ ಆಹಾರವು ಅಮೃತದ ಸಮಾನವಾಗಿರುತ್ತದೆ. ಇದಕ್ಕೆ ಅಮೃತ ಸ್ರಾವಿ ಋದ್ಧಿ ಅನ್ನುತ್ತಾರೆ.
ಕ್ಷೇತ್ರ ಋದ್ಧಿ
ಕ್ಷೇತ್ರ ಋದ್ಧಿಯು ಎರಡು ಪ್ರಕಾರವಾಗಿದೆ.
೧. ಅಕ್ಷೀಣ ಮಹಾನಸ ಋದ್ಧಿ
೨. ಅಕ್ಷೀಣ ಮಹಾಲಯ ಋದ್ಧಿ
ಅಕ್ಷೀಣ ಮಹಾನಸ ಋದ್ಧಿ
ಮುನಿಗಳು ಆಹಾರ ಮಾಡಿದ ನಂತರ ಆ ಅಡಿಗೆಯ ಮನೆಯಲ್ಲಿ ಉಳಿದ ಭೋಜನವನ್ನು ಲಕ್ಷ ಲಕ್ಷ ಜನರಿಗೆ ಉಣಿಸಿದರೂ ಸಹ ಆ ಅಡಿಗೆಯು ಮುಗಿಯುವುದಿಲ್ಲ. ಇದು ಅಕ್ಷೀಣ ಮಹಾನಸ ಋದ್ಧಿಯಾಗಿದೆ.
ಅಕ್ಷೀಣ ಮಹಾಲಯ ಋದ್ಧಿ
ಮುನಿಗಳ ಸಮೀಪದಲ್ಲಿದ್ದ ಸ್ವಲ್ಪೇ ಸ್ಥಳದಲ್ಲಿ ಅಸಂಖ್ಯಾತ ಜೀವಗಳು ಸಹಜವಾಗಿ ಕೂಡ್ರಬಹುದಾಗಿದೆ. ಇದಕ್ಕೆ ಅಕ್ಷೀಣ ಮಹಾಲಯ ಋದ್ಧಿ ಅನ್ನುತ್ತಾರೆ.