ಕೊಡಗಿನ ಜೈನಕಾಶಿ ಮುಳ್ಳೂರು

ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ಹಚ್ಚಡವನ್ನೊದ್ದಿ ನಿಂತಿರುವ  ಕೊಡಗು ಜಿಲ್ಲೆ ಪ್ರಕೃತಿ ರಮಣೀಯ ಸ್ಥಳಗಳ ತವರೂರು. ನದಿಗಳ ಉಗಮಸ್ಥಾನ, ಕೆರೆತೊರೆ, ಜಲಪಾತ,ವನಸಿರಿಗಳ ಸಿರಿಯೂರು. ಹಾಗೆಯೇ ಐತಿಹಾಸಿಕವಾಗಿಯು ಕೊಡಗು ಪ್ರಸಿದ್ಧ. ಗಂಗ, ಚೋಳ, ಕೊಂಗಾಳ್ವ. ಚಂಗಾಳ್ವ, ವೀರಪಾಳೆಗಾರರ ಆಡಳಿತದ ಸವಿಯನ್ನುಂಡ ಬೀಡು. ಹೀಗಾಗಿ ಕೊಡಗಿನ ತುಂಬಾ ಹಲವು ಐತಿಹಾಸಿಕ ಕೇಂದ್ರಗಳು, ವನಸಿರಿಯ ಪ್ರದೇಶಗಳು ಪ್ರವಾಸಿಗರ ಮನತಣಿಸುತ್ತವೆ. ಇತಿಹಾಸ ಸಂಶೋಧಕರಿಗೆ ಪ್ರಾಕ್ತನಾ ಕೇಂದ್ರಗಳಾಗಿ ಸಂಶೋಧಕರ ಗಮನವನ್ನು ತನ್ನಡೆಗೆ ಸೆಳೆಯುತ್ತವೆ. ಇಂತಹ ಐತಿಹಾಸಿಕ ಕೇಂದ್ರಗಳಲ್ಲೊಂದು ಜೈನರಿಗಾಗಿ ಇರುವ ಕೊಡಗಿನ ಎಕೈಕ ಪವಿತ್ರ ಕೇಂದ್ರ . ಕೊಡಗಿನ ಜೈನಕಾಶಿ ಎಂದೇ ಹೆಸರಾಗಿರುವ ಮುಳ್ಳೂರು. ಮುಳ್ಳೂರು ಗ್ರಾಮವು ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಿಂದ ಬಾಣಾವರ ರಸ್ತೆಯಲ್ಲಿ ಸುಮಾರು 6 ಕಿ.ಮೀ. ದೂರದಲ್ಲಿ ಕಂಡು ಬರುತ್ತದೆ. ಮುಳ್ಳೂರು ಗ್ರಾಮದ ಬಸ್ ನಿಲ್ದಾಣದಿಂದ ಏಡಭಾಗಕ್ಕೆ ಅನತಿದೂರ ಚಲಿಸಿದರೆ ಪ್ರಕೃತಿಯ ಮಡಿಲಿನ ಕಾನನದೊಳಗೆ, ಮಾವಿನ ಮರದ ತೋಟದ ನಡುವೆ ತ್ರಿವಳಿ ಜೈನಬಸದಿಗಳ ತಾಣ ಕಂಗೊಳಿಸುತ್ತದೆ.

ಮುಳ್ಳೂರು ಕೊಂಗಾಳ್ವರ ಕಾಲದಲ್ಲಿ ರಾಜಧಾನಿಯಾಗಿ ವೈಭವ ಕಂಡ ಗ್ರಾಮ. ಹನಸೋಗೆಯ ಶಾಸನವು ಉಲ್ಲೇಖಿಸುವಂತೆ,ಗಂಗ-ಚೋಳರ ನಡುವೆ ಯುದ್ಧ ನೆಡೆದಾಗ ಕೊಡಗಿನ ಪ್ರಾಂತೀಯ ಪಾಳೆಗಾರರಾಗಿದ್ದ ಮೂಲ ಕೊಂಗಾಳ್ವರು ಚೋಳರ ಪರವಾಗಿ ನಿಂತು ಚೋಳರ ಗೆಲುವಿಗಾಗಿ ಯುದ್ಧ ಭೂಮಿಯಲ್ಲಿ ಸತತವಾಗಿ ಹೋರಾಡಿ ಜಯ ತರಲು ಕಾರಣರಾಗಿದ್ದರು. ಅದಕ್ಕಾಗಿ ಚೋಳರು ಕೊಂಗಾಳ್ವರ ವೀರ ಸೇನಾನಿ ಮನಿಜನಿಗೆ ಕೊಡಗಿನ ಆಡಳಿತವಹಿಸಿ ‘ಮಾಲಂಬಿ’ಎಂಬ ಗ್ರಾಮವನ್ನು ಅವನ ರಾಜಧಾನಿಯನ್ನಾಗಿ ಮಾಡಿ ಪಟ್ಟಾಭಿಷೇಕ ಮಾಡಿದರು. ಇದೇ ಕ್ರಿ.ಶ.1004ರ ಮಾಲಂಬಿಯಲ್ಲಿ ದೊರಕಿರುವ ಶಾಸನವು ಇದನ್ನು ಪುಷ್ಟಿಕರಿಸಿ ‘ಮನಿಜ’ ನನ್ನು “ ಕ್ಷತ್ರಿಯ ಶಿಖಾಮಣಿ ಕೊಂಗಾಳ್ವ:” ನೆಂದು ಚೋಳ ದೊರೆ ರಾಜಕೇಸರಿವರ್ಮನು ಬಿರುದು ನೀಡಿ ರಾಜ್ಯಾಡಳಿತ ವಹಿಸದನೆಂದು ಉಲ್ಲೇಖಿಸಿದೆ. ಇಲ್ಲಿಂದಲೇ ಕೊಡಗಿನ ಜೈನ ಇತಿಹಾಸ ಪ್ರಾರಂಭಗೊಳ್ಳುತ್ತದೆ. ಕೊಂಗಾಳ್ವ ಮತ್ತು ಚಂಗಾಳ್ವ ರಾಜಮನೆತನಗಳು ನಧರ್ಮಿರಾಗಿದ್ದು ಹಲವು ಜೈನ ಕೇಂದ್ರಗಳನ್ನು ಕೊಡಗಿನಲ್ಲಿ ಕಟ್ಟಿ ಬೆಳಸಿದರು. ಪೃಥ್ವಿ ರಾಜೇಂದ್ರ ಕೊಂಗಾಳ್ವನ ಕಾಲದಲ್ಲಿ ಮುಳ್ಳೂರು ರಾಜಧಾನಿಯಾಗಿತ್ತು. ಹೆಸರಿಗಷ್ಟೇ ಮುಳ್ಳೂರು ಎನಿಸದ್ದರೂ, ಇದನ್ನ ನೋಡ ಹೋದ ಪ್ರವಾಸಿಗರಿಗೆ, ಜೈನ ಧರ್ಮಿಯರಿಗೆ ಕಾಣುವುದು ಪ್ರಕೃತಿಯ ಮೃಧು ಮಧುರ ಹಸಿರ ವನಸಿರಿ, ಪಕ್ಷಿಗಳ ಇಂಚರ ದ್ವನಿ ಶಾಂತತೆಯ ರಮ್ಯತಾಣ. ಇಲ್ಲಿ ಜೈನ ತೀರ್ಥಂಕರರಾದ ಪಾಶ್ರ್ವನಾಥ, ಚಂದ್ರನಾಥ, ಶಾಂತಿನಾಥರ ತ್ರಿವಳಿ ಬಸದಿಗಳು ಎಲ್ಲರನ್ನೂ ಕೈಬೀಸಿ ತನ್ನಡೆಗೆ ಕರೆದು ಕೊಡಗಿನ ಜೈನ ಇತಿಹಾಸವನ್ನು ಸಾರುತ್ತವೆ.ಇದು ಕೇವಲ ಐತಿಹಾಸಿಕ ಕೇಂದ್ರವಾಗಿರದೆ, ಜೈನರ ಶ್ರದ್ಧಾಕೇಂದ್ರವಾಗಿದೆ.  ಮುಳ್ಳೂರಿನ ಜೈನಬಸದಿಗಳು ಅಷ್ಟೇನು ಕಲಾತ್ಮಕತೆ ಹೊಂದಿರದಿದ್ದರೂ, ಪಾವಿತ್ರತೆ ಹಾಗೂ ಪ್ರಾಚೀನತೆಯಿಂದ ಮಹತ್ವವಾಗಿದೆ. ಇಲ್ಲಿನ ಬಸದಿಗಳು ಉತ್ತರಾಭಿಮುಖವಾಗಿ ನಿರ್ಮಾಣವಾಗಿದ್ದು, ಮೂರು ಪ್ರಾಂಗಾಣಗಳನ್ನು ಹೊಂದಿದೆ. ಗರ್ಭಗುಡಿ, ಸುಖನಾಸಿ, ನವರಂಗಗಳನ್ನು ಹೊಂದಿದೆ. ಕಗ್ಗಲ್ಲಿನಿಂದ ನಿರ್ಮಿಸಿದ ಸರಳ ಮಂದಿರಗಳಾಗಿವೆ. ಈ ಬಸದಿಗಳನ್ನು ಕೊಂಗಾಳ್ವರಿಂದ ನಿರ್ಮಿಸಲು ಪ್ರೇರಕವಾಗಿದ್ದವರು ಕೊಂಗಾಳ್ವರ ಜೈನಗುರುಗಳಾಗಿದ್ದ “ ಜೈನ ದ್ರಮಿಳ ಸಂಘದ ನಂದಿಗಣದ ಅರುಂಗಾಳ್ವಯದ ಪುಷ್ಪಸೇನ ಸಿದ್ಧಾಂತ ದೇವರ ಶಿಷ್ಯರಾದ ಗುಣಸೇನ ಪಂಡಿತರು. ಇವರು ಅಂದಿನ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ಆಚಾರ್ಯರಾಗಿದ್ದರು. ಇವರು ಹೊಯ್ಸಳರ ದೊರೆ ವಿನಯಾದಿತ್ಯನ ಪರಮಗುರು ಆಗಿದ್ದನೆಂದು ಹಳೇಬೀಡಿನ ಬಸ್ತಿಹಳ್ಳಿಯಲ್ಲಿ ದೊರಕಿರುವ ಶಾಸನದಿಂದ ತಿಳಿಯುತ್ತದೆ.ಅಲ್ಲದೇ ಶ್ರವಣಬೆಳಗೊಳದಲ್ಲಿನ ಶಾಸನವು ಗುಣಸೇನ ಪಂಡಿತರು ಶ್ರವಣಬೆಳಗೊಳದಲ್ಲಿ ಪ್ರಸಿದ್ಧಿ ಹೊಂದಿದ್ದ ಬಗ್ಗೆ ಮತ್ತು ಗುಣಸೇನ ಪಂಡಿತರ ಸಮಾಧಿಮರಣವನ್ನು ಉಲ್ಲೇಖಿಸಿ ‘ಮುಳ್ಳೂರಿನ ವೈಡೂರ್ಯ ಸಾರವಸಧಿಯೇ ಕಳೆದು ಹೊಯಿತು” ಎಂದು ವರ್ಣಿಸಿದೆ.

ಮುಳ್ಳೂರಿನಲ್ಲಿರುವ ಬಸದಿಗಳಲ್ಲಿ ಪಾಶ್ರ್ವನಾಥ ಬಸದಿ ಅತ್ಯಂತ ಸುಂದರವಾಗಿದ್ದು, ಗರ್ಭಗುಡಿಯಲ್ಲಿ 5ಅಡಿ ಎತ್ತರದ ಪಾಶ್ರ್ವನಾಥ ಮೂರ್ತಿಯು ಪ್ರಮಾಣಬದ್ದವಾಗಿದ್ದು, ಯಕ್ಷ-ಯಕ್ಷಿಯರೊಂದಿಗೆ ನಮುದ್ರೆಯಲ್ಲಿದ್ದು ಒಳಹೊಕ್ಕ ಭಕ್ತರನ್ನು ಆಕರ್ಷಿಸಿ ಮಂತ್ರಮುಗ್ಧನ್ನಾಗಿಸುತ್ತಾನೆ. ಈ ಬಸದಿಯನ್ನು ಕ್ರಿ.ಶ.1059ರಲ್ಲಿ ಎರಡನೇ ರಾಜೇಂದ್ರ ಪೃಥ್ವಿ ಕೊಂಗಾಳ್ವ ಮತ್ತು ಅವನ ಪಟ್ಟದರಸಿಯಾದ ಪೋಚಬ್ಬರಸಿಯು ಜೈನಗುರು ಗುಣಸೇನ ಪಂಡಿತರಿಗಾಗಿ ನಿರ್ಮಾಣಮಾಡಿಸಿ,ಇಲ್ಲಿಯೇ ಗುರುಗಳಿಗೆ ಆಶ್ರಯ ಅವಕಾಶ ಕಲ್ಪಸಿದ ಬಗ್ಗೆ ಈ ಬಸದಿಯ ಪಕ್ಕದ ಶಾಸನ ಉಲ್ಲೇಖಿಸುತ್ತದೆ. ಅಲ್ಲದೇ ಕಾಜ್ಗೊಂಡನ ಹಳ್ಳಿಯನ್ನು ಬಸದಿಯ ಪೂಜೆಗಾಗಿ ಗುರುಗಳಿಗೆ ದಾನನೀಡಿದನೆಂದು ತಿಳಿಸುತ್ತದೆ.

ಮುಳ್ಳೂರಿನ ಮತ್ತೊಂದು ಬಸದಿ ಚಂದ್ರನಾಥ ಬಸದಿ ಈ ಬಸದಿಯನ್ನು ಎರಡನೇ ರಾಜಾಧಿರಾಜ ಕೊಂಗಾಳ್ವ ಮತ್ತು ಅವನ ಮಡದಿ ರುಕ್ಮಣಿದೇವಿಯರು ನಿರ್ಮಾಣ ಮಾಡಿಸಿ ಪೋಚಬ್ಬರಸಿಯ ನೆನೆಪಿಗಾಗಿ ಚಂದ್ರನಾಥ ಜಿನಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಸಿ ಸುತ್ತಲಿನ ಹಳ್ಳಿಗಳಲ್ಲಿ ತೋಟ ಮತ್ತು ಗದ್ದೆಗಳನ್ನು ಬಸದಿಗಾಗಿ ದಾನನೀಡಿದನೆಂದು ಈ ಬಸದಿಯ ಸಮೀಪದ ಕ್ರಿ.ಶ.1349ರ ಶಾಸನವು ಉಲ್ಲೇಖಿಸುತ್ತದೆ. ಅದಕ್ಕೆ ನಿದರ್ಶನ ಎಂಬಂತೆ ಬಸದಿಗೆ ಸೇರಿದ 6 ಎಕರೆ ಜಮೀನು ಇದೆ ಎಂದು ಸ್ಥಳಿಯರು ಹೇಳುತ್ತಾರೆ.ಈ ಬಸದಿಯು ಮುಂದೆ ಅವನತಿಯ ಹಂತದಲ್ಲಿದ್ದಾಗ ವಿಜಯನಗರದ ಇಮ್ಮಡಿ ಹರಿಹರನ ಕಾಲದಲ್ಲಿ ಇಲ್ಲಿನ ಸಾಮಂತನಾಗಿದ್ದ ಗುಂಡಪ್ಪ ದಂಡನಾಯಕನು ಪುನರ್ ಜೀರ್ಣೋದ್ಧಾರ ಗೊಳಿಸಿ ಕಾರಗೋಡು ಗ್ರಾಮಕ್ಕೆ “ಅಂಣಾಂಗಪುರ” ಎಂದು ಹೆಸರಿಟ್ಟು ಬಸದಿಗಾಗಿ ದಾನನೀಡಿದನೆಂದು ತಿಳಿಸುತ್ತದೆ. ಈ ಬಸದಿಯು ಮೂರು ಪ್ರಾಂಗಾಣ ಹೊಂದಿದ್ದು ಗರ್ಭಗುಡಿಯಲ್ಲಿ ಎತ್ತರದ ಪೀಠದಲ್ಲಿ ಮನೋಜ್ಞವಾದ ಚಂದ್ರನಾಥ ಬಿಂಬ ಕಂಗೊಳಿಸುತ್ತದೆ. ಬಸದಿಯ ದ್ವಾರದಲ್ಲಿ ಎರಡು ಬದಿಗಳಲ್ಲಿ ಸುಂದರವಾದ ದ್ವಾರಪಾಲಕರ ವಿಗ್ರಹಗಳಿದ್ದು ಕೈಯಲ್ಲಿ ವಿವಿಧ ಆಯುಧಗಳನ್ನಿಡಿದು ನಿಂತು ಬಸದಿಯ ರಕ್ಷಪಾಲಕರಂತೆ ಕಾಣುತ್ತಾರೆ.

ಇಲ್ಲಿನ ಇನ್ನೂಂದು ಬಸದಿ ಶಾಂತಿನಾಥ ತೀರ್ಥಂಕರ ಬಸದಿ ಈ ಬಸದಿಯನ್ನು ರಾಜೇಂದ್ರ ಕೊಂಗಾಳ್ವನು ನಿರ್ಮಾಣಮಾಡಿಸಿದ್ದು. ಕ್ರಿ.ಶ.1125ರಲ್ಲಿ ಜೈನಗುರುಗಳಾಗಿದ್ದ ಶ್ರೀಬಾಲತ್ರೈವಿದ್ಯದೇವನ ಮಲ್ಲಿಸೇನದೇವರು ಬಸದಿಯನ್ನು ಪುನರ್ ಪ್ರತಿಷ್ಠಾಪಿಸಿದನೆಂದು ಇಲ್ಲಿ ದೊರಕಿರುವ ಶಾಸನದಿಂದ ತಿಳಿಯುತ್ತದೆ. ಈ ಬಸದಿಯಲ್ಲಿ ಶಾಂತಿನಾಥ ಜಿನಬಿಂಬವು ಪದ್ಮಾಸನದಲ್ಲಿದ್ದು ಶಾಂತಮುದ್ರೆಯಲ್ಲಿ ಕಂಗೊಳಿಸುತ್ತದೆ.  ಶಾಂತಿನಾಥ ಬಸದಿಯ ಹಿಂಭಾಗದಲ್ಲಿ ಕ್ರಿ.ಶ. 11ನೇ ಶತಮಾನದಲ್ಲಿ ಜೈನಾಚಾರ್ಯ ಗುಣಸೇನ ಪಂಡಿತರು ಸ್ಥಳೀಯ ಜೈನ ವರ್ತಕರ ಸಹಾಯದಿಂದ ನಿರ್ಮಿಸಿದ “ನಾಗಬಾವಿ” ಯು ಕಂಡು ಬರುತ್ತದೆ. ಇದು ಒಂದು ನೀರಿನ ಕೊಳದಂತಿದ್ದು, ತಿಳಿಯಾದ ನೀರು ಯಾವಾಗಲೂ ಇಲ್ಲಿ ಕಂಡು ಬರುತ್ತದೆ ಎಂದು ಸ್ಥಳಿಯ ಜನರು ಹೇಳುತ್ತಾರೆ. ಈ ಬಾವಿಯನ್ನು ಬಸದಿಗಳಲ್ಲಿ ಪೂಜಾವ್ಯವಸ್ಥೆಗಾಗಿ, ಅಭಿಷೇಕಕ್ಕಾಗಿ ಬಳಕೆಮಾಡಲು ಜೈನಗುರು ನಿರ್ಮಾಣ ಮಾಡಿಸಿದನೆಂದು ಸೋಮವಾರಪೇಟೆ 39ರ ಶಾಸನ ಉಲ್ಲೇಖಿಸುತ್ತದೆ. ಸ್ಥಳಿಯರ ನಂಬಿಕೆ ಪ್ರಕಾರ ಇದು ಒಂದು ಪವಿತ್ರ ಕೊಳವಾಗಿದ್ದು ಇಲ್ಲಿನ ನೀರು ಔಷದಿಗಳನ್ನು ಹೊಂದಿದ್ದು ಹಲವು ಚರ್ಮವ್ಯಾದಿಗಳನ್ನು ಗುಣಪಡಿಸುತ್ತದೆ ಎನ್ನುತ್ತಾರೆ. ಈ ಪವಿತ್ರ ನೀರನ್ನು ಅಪವಿತ್ರಗೊಳಿಸಿದರೆ,ಗಲೀಜುಮಾಡಿದರೆ ನಾಗ ಪ್ರತ್ಯಕ್ಷನಾಗುತ್ತಾನೆಂಬ ನಂಬಿಕೆ ಸ್ಥಳಿಯರಲ್ಲಿದೆ. ಅದ್ದರಿಂದಲೇ ನೀರು ಶುದ್ಧವಾಗಿರಲು ಕಾರಣವಾಗಿರಬಹುದು ಎನ್ನಲಾಗಿದೆ. ಈ ತ್ರಿವಳಿ ಬಸದಿಗಳು ಕಲಾತ್ಮಕತೆ ಹೊಂದಿರದಿದ್ದರೂ,ಗಂಗ-ಚೋಳ ವಾಸ್ತುಶೈಲಿ ಯನ್ನೊಂದಿದೆ. ಬಸದಿಯ ಹೊರಗೋಡೆಗಳ ಮೇಲೆ ದ್ವಾರಪಾಲಕರ,ಜೈನಯಕ್ಷ-ಯಕ್ಷಿಯರ,ವಿವಿಧ ಪ್ರಾಣಿಗಳ ಅಲಂಕಾರ ಚಿತ್ರಗಳನ್ನುಕಾಣಬಹುದು. ಬಸದಿಗಳ ಮೇಲೆ ಅಷ್ಟೇನು ಎತ್ತರವಲ್ಲದ ಸಾಮಾನ್ಯ ಸುಂದರ ಶಿಖರಗಳನ್ನು ಕಾಣಬಹುದು.

ಬಸದಿಗಳ ಹೊರಭಾಗದಲ್ಲಿ ಹಲವು ಜೈನಮುನಿಗಳು, ಕಂತಿಯರು, ಸಲ್ಲೇಖನ ವ್ರತಧಾರಣೆ ಮಾಡಿ ಸಮಾಧಿ ಮರಣ ಹೊಂದಿದ ಬಗ್ಗೆ ಉಲ್ಲೇಖಿಸುವ ನಿಷಧಿ ಶಾಸನಗಳನ್ನು ಕಾಣಬಹುದು. ಇವುಗಳನ್ನು ಸಾಲಾಗಿ ಜೋಡಿಸಿ ಬಸದಿಯ ಹೊರಭಾಗದಲ್ಲಿ ನಿಲ್ಲಿಸಿ ಸಂರಕ್ಷಿಸಲಾಗಿದೆ.ಇವೆ ಅಲ್ಲದೇ ಹಲವು ಜೈನಯಕ್ಷ-ಯಕ್ಷಿಯರ ಮೂರ್ತಿಗಳು,ಜಿನಬಿಂಬಗಳು, ಅಲ್ಲಲ್ಲಿ ಕಂಡುಬಂದಿವೆ. ಮುಳ್ಳೂರು ಹಿಂದೆ ಜೈನಧರ್ಮಿಯರು ಅಪಾರ ಸಂಖ್ಯೆಯಲ್ಲಿದ್ದು ಕಾಲನಂತರದಲ್ಲಿ ಇಲ್ಲಿದ್ದ ಜೈನರು ಬೇರಡೆ ಹೋಗಿ ನೆಲಸಿದ್ದರಿಂದ ಇಲ್ಲಿ ಜೈನಬಸದಿಗಳಿದ್ದರೂ, ಬಸದಿಯಲ್ಲಿ ಪೂಜಾ ಕಾರ್ಯಗಳು ನೆಡೆಯುತ್ತಿಲ್ಲ. ಈ ಊರಿನಲ್ಲಿ ಒಂದೇ ಒಂದು ಜೈನ ಕುಟುಂಬವಿಲ್ಲ.

ಪ್ರಕೃತಿಯ ಮಡಿಲೊಳಗೆ ಕಂಗೊಳಿಸುವ ಈ ಬಸದಿಗಳು ಪುರಾತತ್ವ ಇಲಾಖೆಯ ವಶದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಈ ಬಸದಿಗಳ ವಿಕ್ಷಣೆಗಾಗಿ ಸೂಕ್ತ ಸೌಲಭ್ಯ ಕಲ್ಪಸಿಲ್ಲ. ಕೊಡಗಿನಲ್ಲಿಯೇ ಜೈನರ ಎಕೈಕ ಪವಿತ್ರ ಕ್ಷೇತ್ರವಾಗಿರುವ ಮುಳ್ಳೂರನ್ನು ಒಂದು ಪ್ರವಾಸಿ ಹಾಗೂ ಐತಿಹಾಸಿಕ ತಾಣವಾಗಿ ಅಭಿವೃದ್ಧಿ ಪಡಿಸಿದಲ್ಲಿ ಕೊಡಗಿನ ಖ್ಯಾತಿಯನ್ನು ಇಮ್ಮಡಿಗೊಳಿಸಬಲ್ಲದು

ಲೇಖಕ: ವೀರೇಂದ್ರ ಬೇಗೂರ್. ಹಾಸನ. ಮೊ;8310375564
ಚಿತ್ರಗಳು; ವೀರೇಂದ್ರ ಬೇಗೂರ್.

Translate »
error: Content is protected !!