ಇಪ್ಪತ್ತೆಂಟು ಮೂಲಗುಣಗಳನ್ನು ಮೂವತ್ತನಾಲ್ಕು ಉತ್ತರಗುಣಗಳನ್ನು ದಶಧರ್ಮಗಳನ್ನು ಪಂಚಾಚಾರಗಳನ್ನು ಎಂಟು ಶುದ್ಧಿಗಳನ್ನು ಪಂಚ ಚಾರಿತ್ರವನ್ನು ಧರ್ಮ ಮತ್ತು ಶುಕ್ಲಧ್ಯಾನಗಳನ್ನು ಆಚರಿಸುವವರು ಯತಿಗಳು.
ಐದು ಮಹಾವ್ರತಗಳು, ಪಂಚಸಮಿತಿಗಳು, ಪಂಚೇಂದ್ರಿಯ ನಿರೋಧ, ಕೇಶಲೋಚ, ಆರು ಅವಶ್ಯಕ್ರಿಯೆಗಳು, ಅಚೇಲತ್ವ, ದಿಗಂಬರತ್ವ, ಅಸ್ನಾನ, ಭೂಶಯನ, ಅದಂತಧಾವನ, ಸ್ಥತಿಭೋಜನ ಮತ್ತು ಏಕಭುಕ್ತತ್ವ-ಇವು ಇಪ್ಪತ್ತೆಂಟು ಮೂಲಗುಣಗಳು. ಇಪ್ಪತ್ತೆರಡು ಪರೀಹಪಹಜಯಗಳೂ ಹನ್ನೆರಡು ತಪಸ್ಸುಗಳೂ ಸೇರಿ ಮೂವತ್ತನಾಲ್ಕು ಉತ್ತರಗುಣಗಳೂ ಏರ್ಪಡುತ್ತವೆ.
ಹಿಂಸೆಯನ್ನು ಸರ್ವಥಾ ಬಿಡುವುದು… ಅಹಿಂಸಾಮಹಾವ್ರತ ..
ಪ್ರಶಸ್ತವಚನವನ್ನೇ ಆಡುವುದು.. ಸತ್ಯಮಹಾವ್ರತ ..
ಪರಸ್ವತ್ತನ್ನು ಸರ್ವಥಾ ಸ್ವೀಕರಿಸದಿರುವುದು… ಅಚೌರ್ಯಮಹಾವ್ರತ …
ಸ್ತ್ರೀವ್ಯಾಮೋಹವನ್ನು ಸರ್ವಥಾ ತ್ಯಾಗಮಾಡುವುದೂ… ಆತ್ಮನಲ್ಲಿ ಲೀನವಾಗುವುದೂ ಬ್ರಹ್ಮಚರ್ಯಾಮಹಾವ್ರತ
ಪರವಸ್ತುಗಳ ವ್ಯಾಮೋಹಬಿಟ್ಟು ಜಾತರೂಪಧರನಾಗುವುದು ಅಪರಿಗ್ರಹವ್ರತ
ಇದು ವ್ರತಗಳ ಧಾರಣೆ.
ಇವೇ ವಿಶ್ವಶಾಂತಿಗೆ ಮೂಲಪಂಚಪಾತಕಗಳ ಪರಿತ್ಯಾಗರೂಪವಾದ ಪಂಚಶೀಲಗಳು .
ಪ್ರಾಣಿಭಾದೆಯಾಗದಂತೆ ನೋಡಿ ನಡೆಯುವುದು ಈರ್ಯಾಸಮಿತಿ, ಹಿತ, ಮಿತ, ಮಧುರ, ನಿಶ್ಚಿತ ಮಾತುಗಳನ್ನಾಡುವುದು, ಭಾಷಾಸಮಿತಿ
ಉದ್ಗಮಾದಿ ಅಂತರಾಯಗಳಿಲ್ಲದೆ, ಗೋಚರಾದಿ ವೃತ್ತಿಯಿಂದ ಪ್ರಾಸುಕವಾದ ಶುದ್ಧಾಹಾರವನ್ನು ಪಾಣಿಪಾತ್ರಪುಟದಿಂದಂಗೀಕರಿಸುವುದು ಏಷಣಾಸಮಿತಿ
ಧರ್ಮಸಾಧನೆ ಪುಸ್ತಕ, ಪಿಂಛ, ಕಮಂಡಲಾಧಿಗಳನ್ನು ಪ್ರಾಣಪೀಡೆಯಾಗದಂತೆ ತೆಗೆದುಕೊಳ್ಳುವುದೂ ಇಡುವುದೂ ಆದಾನ ನಿಕ್ಷೇಪಣಸಮಿತಿ
ನಿರ್ಜಂತುಕಪ್ರದೇಶದಲ್ಲಿ ಮಲಮೂತ್ರಾದಿವಿಸರ್ಜನೆ ಉತ್ಸರ್ಗಸಮಿತಿ .
ಇವೇ ಐದು ಸಮಿತಿಗಳು.
ಸ್ವರ್ಶನಾದಿ ಪಂಚೇಂದ್ರಿಯಗಳನ್ನು ವಶದಲ್ಲಿಡುವುದು
ಇಂದ್ರಿಯ ನಿರೋಧ .
ಕೇಶಲೋಚವೆಂದರೆ ಕೈಯಿಂದಲೇ ತಲೆಯ ಕೂದಲುಗಳನ್ನು ಕೀಳುವುದು.
ಸಾಮಾಯಿಕ (ಸಮತಾಭಾವದಿಂದ ಏಕಾಗ್ರಚಿತ್ತದಿಂದ ತತ್ತ್ವ ಚಿಂತನೆ, ಶುದ್ಧಾತ್ಮ ಚಿಂತನೆಗಳನ್ನು ತ್ರಿಸಂಧ್ಯೆಯಲ್ಲಿಯೂ ಇಷ್ಟೇ ಸಮಯವೆಂದು ಕಾಲನಿಯಮದಿಂದ ಮಾಡುವುದು),
ಚತುರ್ವಿಂಶತಿ ಸ್ತವನ (ಇಪ್ಪತ್ತುನಾಲ್ಕು ಋಷಭಾದಿ ತೀರ್ಥಂಕರರ ವಸ್ತುಸ್ತವ, ರೂಪಸ್ತವ ಮತ್ತು ಗುಣಸ್ತವರೂಪಸ್ತುತಿ ಮಾಡುವುದು),
ವಂದನೆ (ತ್ರಿಕರಣಶುದ್ಧಿಯಿಂದ 108 ಸಾರಿ ಪಂಚಪರಮೇಷ್ಠಿಗಳ ನಾಮಮಂತ್ರವನ್ನು ಜಪಿಸುತ್ತ ನಾಲ್ಕು ದಿಕ್ಕುಗಳಲ್ಲಿ ಒಂದೊಂದು ನಮಸ್ಕಾರಕ್ಕೆ ಮೂರು ಮೂರು ಆವರ್ತಗಳಂತೆ ನಾಲ್ಕು ನಮಸ್ಕಾರಗಳನ್ನು ಹನ್ನೆರಡು ಆವರ್ತಗಳೊಡನೆ ಮಾಡುವುದು)
ಪ್ರತಿಕ್ರಮಣ (ಹಿಂದೆ ಮಾಡಿದ ದೋಷಪರಿತ್ಯಾಗ)
ಪ್ರತ್ಯಾಖ್ಯಾನ (ಮುಂದಿನ ದೋಷನಿವೃತ್ತಿ), ಕಾಯೋತ್ಸರ್ಗ (ಶರೀರಮೋಹನಿವೃತ್ತಿ)-ಇವು ಆರು ಅವಶ್ಯ ಕ್ರಿಯೆಗಳು.
ಅಚೇಲತ್ವವೆಂದರೆ ದಿಗಂಬರನಾಗಿ ಜಾತರೂಪಧರನಾಗಿ ನಿರಾವರಣನಾಗಿರುವುದು.
ಅಸ್ನಾನವೆಂದರೆ ಆತಪಸ್ನಾನವಲ್ಲದೆ ಜಲಸ್ನಾನವನ್ನು ತ್ಯಾಗಮಾಡುವುದು.
ಭೂಶಯನವೆಂದರೆ ಏನನ್ನೂ ಹಾಸದೆ ಹಲಗೆಯ ಮೇಲೆ ಕಲ್ಲಿನ ಮೇಲೆ ಮಲಗುವುದು.
ಅದಂತಧಾವನವೆಂದರೆ ಉಪವಾಸ, ರಸತ್ಯಾಗಗಳಿಂದಲೇ ಮುಖಶುದ್ಧಿ ಮಾಡಿಕೊಳ್ಳುವುದು, ಹಲ್ಲನ್ನುಜ್ಜದಿರುವುದು.
ಸ್ಥಿತಿಭೋಜನವೆಂದರೆ -ನಿಂತೇ ಊಟಮಾಡುವುದು.
ಏಕ್ತಭುಕ್ತತ್ವವೆಂದರೆ ದಿನಕ್ಕೊಂದೂಟಮಾಡುವುದು. ಇಪ್ಪತ್ತ್ತೆರಡು ಷರೀಷಹಗಳೂ ಹನ್ನೆರಡು ತಪಸುಗಳೂ ಮುನಿಗಳ ಮೂವತ್ತನಾಲ್ಕು ಉತ್ತರಗುಣಗಳು.
ರಾಗದ್ವೇಷಗಳಿಲ್ಲದವರೂ ಮನೋದಂಡ ವಚನದಂಡ ಕಾಯದಂಡಗಳಿಲ್ಲದವರೂ ಮಾಯಾ, ಮಿಥ್ಯಾ, ನಿದಾನಗಳೆಂಬ ಮೂರು ಶಲ್ಯರಹಿತರೂ ಶಬ್ದ ಗೌರವ, ಋದ್ಧಿಗೌರವ, ರಸಗೌರವ ವಿರಹಿತರೂ ತ್ರಿಕರಣಶುದ್ಧರೂ ಆದವರು ಯತಿಗಳಾಗುವರು. ದರ್ಶನ, ಜ್ಞಾನ, ಚಾರಿತ್ರ್ಯಾದಿ ಆರು ಆಚಾರಗಳನ್ನಿವರು ಪಾಲಿಸಬೇಕು.
ಮುನಿಗಳಿಗಾಗಿ ವಿಧಿಸಿರುವ ದಶಧರ್ಮಗಳು :
1 ಉತ್ತಮ ಕ್ಷಮಾಧರ್ಮ-ಕ್ರೋಧಪರಿತ್ಯಾಗ,
2 ಉತ್ತಮಮಾರ್ದವ-ಮಾನಕಷಾಯ ತ್ಯಾಗ,
3 ಉತ್ತಮಾರ್ಜವ-ವಂಚನೆಯನ್ನು ಬಿಡುವುದು.
4 ಉತ್ತಮ ಶೌಚ-ಲೋಭಕಷಾಯತ್ಯಾಗ,
5 ಉತ್ತಮ ಸತ್ಯ-ಪ್ರಶಸ್ತ ವಚನ,
6 ಉತ್ತಮ ಸಂಯಮ-ಪಂಚೇಂದ್ರಯ ಜಯ,
7 ಉತ್ತಮ ತಪೀಧರ್ಮ-ಕರ್ಮ ಕ್ಷಯಮಾಡಲು ತಪಸ್ಸನ್ನಾಚರಿಸುವುದು.
8 ಉತ್ತಮತ್ಯಾಗ-ಜ್ಞಾನಾದಿ ದಾನಮಾಡುವುದು,
9 ಉತ್ತಮ ಆಂಕಿಚಿನ್ಯ-ಧನಧಾನ್ಯಾದಿ ಮದಮತ್ಸರಾದಿ ಪರಿಗ್ರಹತ್ಯಾಗ,
10 ಉತ್ತಮ ಬ್ರಹ್ಮಚರ್ಯ-ಸರ್ವಥಾ ಸ್ತ್ರೀವ್ಯಾಮೋಹ ತ್ಯಜಿಸಿ ಶುದ್ಧಾತ್ಮಚಿಂತನೆ ಮಾಡುವುದು.
ಮುನಿಗಳು ಬಾರಿಬಾರಿಗೂ ಭಾವಿಸುವ ಹನ್ನೆರಡು ಅನುಪೇಕ್ಷೆಗಳು :
ಅನಿತ್ಯ, ಆಸರಣ, ಸಂಸಾರ, ಏಕತ್ವ, ಅನ್ಯತ್ವ, ಅಶುಚಿತ್ವ, ಆಸ್ರವ, ಸಂವರ, ನಿರ್ಜರಾ, ಲೋಕ, ಬೋಧಿದುರ್ಲಭ, ಧರ್ಮಚಿಂತಾನುಪ್ರೇಕ್ಷೆ .
ಮುನಿಗಳು ಜಪಿಸುವ ಮಂತ್ರವಿದು :
ಓಂ ಣಮೋ ಅರಿಹಂತಾಣಂ, ಣಮೋ ಸಿದ್ದಾಣಂ,
ಣಮೋ ಆಇರಿಯಾಣಂ. ಣಮೋ ಉವಜ್ಝಾಯಾಣಂ, ಣಮೋ ಲೋ ಏಸವ್ವಸಾಹೂಣಂ.
ಮುನಿಗಳಲ್ಲಿರುವ ಎಂಟು ಶುದ್ದಿಗಳು:
1 ಭಾವಶುದ್ಧಿ -ಗೋಡೆಯ ಮೇಲೆ ಬಿಡಿಸಿದ ಚಿತ್ರದಂತೆ ಕರ್ಮಗಳ ಕ್ಷಯೋಪಶಮದಿಂದ ಮೋಕ್ಷಮಾರ್ಗದಲ್ಲಿ ಪರಿಶುದ್ಧವಾದ ಅಭಿರುಚಿ,
2 ಕಾಯಶುದ್ಧಿ -ದಿಗಂಬರನಾಗಿ ಪರಮಹಂಸನಾಗಿರುವುದು.
3 ವಿನಯ ಶುದ್ಧಿ -ದೇವಶಾಸ್ತ್ರ ಮತ್ತು ಗುರುಗಳ ಮೇಲೆ ಭಕ್ತಿ ಇಡುವುದು.
4 ಈರ್ಯಾಪಥಶುದ್ಧಿ -ಹೆಜ್ಜೆಹೆಜ್ಜೆಗೇ ಪ್ರಾಣಿ ಪೀಡೆಯಾಗದಂತೆ ನಡೆಯುವುದು.
5 ಭಿಕ್ಷಾಶುದ್ಧಿ -ಯತ್ಯಾಚಾರ ಸೂತ್ರದಲ್ಲಿ ಹೇಳಿದಂತೆ ಆಹಾರವನ್ನು ಗೋಚಾರ, ಅಕ್ಷಮ್ರಕ್ಷಣ, ಭ್ರಾಮರೀ, ಉದರಾಗ್ನಿ ಶಮನ ಮತ್ತು ಶ್ವಭ್ರಪೂರಣ ವೃತ್ತಿಗಳಿಂದ ಪ್ರಾಸುಕಾಹಾರವನ್ನು ಪಾಣಿಪಾತ್ರದಿಂದ ತೆಗೆದುಕೊಳ್ಳುವುದು.
6 ಪ್ರತಿಷ್ಠಾಪನಶುದ್ಧಿ -ಉಗುರು, ಕೂದಲು, ಸಿಂಬಳ, ಉಗುಳು, ಮಲ ಮತ್ತು ಮೂತ್ರಾದಿ ವಿಸರ್ಜನೆಯನ್ನು ಶರೀರಸ್ಥಾಪನೆಯನ್ನು ಯೋಗ್ಯ ದೇಶಕಾಲಗಳನ್ನರಿತು ಪ್ರಾಣಿಗಳಿಗೆ ಬಾಧೆಯಾಗದಂತೆ ಮಾಡುವುದು.
7 ಶಯನಾಸನ ಶುದ್ಧಿ -ಪ್ರಾಣಿಬಾಧೆಯಾಗದಂತೆ ಯೋಗ್ಯ ಪ್ರದೇಶದಲ್ಲಿ ಮನಸ್ಸಿಗೆ ವಿಕಾರವಾಗದಿರುವ ಸ್ಥಾನದಲ್ಲಿ ಮಲಗುವುದು. ಕುಳಿತುಕೊಳ್ಳುವುದು.
8 ವಾಕ್ಯಶುದ್ಧಿ -ಯತಿಗಳು ವಿಕಥೆಗಳನ್ನಾಡದೆ ಧರ್ಮವೃದ್ಧಿಯ ಮಾತನ್ನು; ಹಿತ. ಮಿತ, ಮಧುರವಾಣಿಯಿಂದ ಆಡುವುದು.
ಏಳನೆಯ ಉಪಾಸಕಾಧ್ಯಯನಾಂಗದಲ್ಲಿ ಜೈನಾಶ್ರಮಗಳಾದ ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ ಮತ್ತು ಭಿಕ್ಷುಕ ಎಂಬ ನಾಲ್ವರ ವಿವರಗಳಿವೆ .
ಬ್ರಹ್ಮಚಾರೀ ಹಂತದಲ್ಲಿ ಉಪನಯನ, ಅವಲಂಬ, ಅದೀಕ್ಷಿತ, ಗೂಢ, ಮತ್ತು ನೈಷ್ಠಿಕ ಎಂದು ಐದು ವಿಧ.
1 ಶಿಖಾ ಎಂಬ ಶಿರೋಲಿಂಗ, ಗಣಧರಸೂತ್ರವೆಂಬ ಉರೋಲಿಂಗಗಳನ್ನೂ ಉಳ್ಳವನೂ ಕಟಿಸೂತ್ರವುಳ್ಳಳವನೂ ಆಗಮವನ್ನು ಅಭ್ಯಾಸಮಾಡುತ್ತಿರುವವನೂ ಗೃಹಸ್ಥಧರ್ಮವನ್ನು ಆಚರಿಸುವವನೂ ಉಪನಯನ ಬ್ರಹ್ಮಚಾರಿ.
2 ಕ್ಷುಲ್ಲಕನಾಗಿ ಮನೆಯಲ್ಲಿದ್ದುಕೊಂಡು ಆಗಮಾಭ್ಯಾಸ ಮಾಡುವವನು ಅವಲಂಬ ಬ್ರಹ್ಮಚಾರಿ.
3 ಬ್ರಹ್ಮಚಾರಿಯ ವೇಷವಿಲ್ಲದೆ ಆಗಮಾಭ್ಯಾಸನಿರತನೂ ಗೃಹಿಯೂ ಆದವನು …
ಅದೀಕ್ಷಿತ ಬ್ರಹ್ಮಚಾರಿ.
4 ಕುಮಾರಶ್ರಮಣನಾಗಿದ್ದು
ಕೊಂಡು ಆಗಮಾಭ್ಯಾಸವನ್ನು ಸ್ವೀಕರಿಸಿ ದುಃಸಹ ಷರೀಷಹಗಳನ್ನು ಸಹಿಸುತ್ತ ಮನೆಯಲ್ಲಿರುವವನು…
ಗೂಢ ಬ್ರಹ್ಮಚಾರಿ.
5 ತಲೆಯ ಮೇಲೆ, ಶಿಖಾರೂಪ ಶಿರೋಲಿಂಗ ಉಳ್ಳವನೂ ಎದೆಯ ಮೇಲೆ ಗಣಧರ ಸೂತ್ರ, ಯಜ್ಞೋವೀತರೂಪ ಉರೋಲಿಂಗವುಳ್ಳವನೂ ಕೌಪೀನ ಧರಿಸಲು ಕಟಲಿಂಗವುಳ್ಳವನೂ ಬಿಳಿ ಅಥವಾ ಕಾವಿ ಬಟ್ಟೆಯ ಕೌಪೀನವನ್ನು ಧರಿಸುವವನೂ ಭಿಕ್ಷಾಹಾರಿಯೂ ದೇವತಾರ್ಚನಪರನೂ ಆದವ ನೈಷ್ಠಿಕ ಬ್ರಹ್ಮಚಾರಿ.
ಗೃಹಸ್ಥನೆಂದರೆ ಅಸಿ, ಮಷಿ, ಕೃಷಿ, ವಾಣಿಜ್ಯ, ವಿದ್ಯಾ, ಶಿಲ್ಪಾದಿ ವೃತ್ತಿವುಳ್ಳವ, ದೇವಪೂಜೆ ಗುರೂಪಾಸ್ತಿ, ಸ್ವಾಧ್ಯಾಯ, ಸಂಯಮ ಮತ್ತು ದಾನ ಈ ಆರು ನಿತ್ಯಕರ್ಮವನ್ನು ಮಾಡುವವ, ಅಹಿಂಸಾದಿ ಹನ್ನೆರಡು ವ್ರತಗಳನ್ನು ಧರಿಸುವವ. ಗೃಹದಲ್ಲಿ ವಾಸಿಸುವವ.
ವಾನಪ್ರಸ್ಥನೆಂದರೆ ಖಂಡವಸ್ತ್ರವನ್ನು ಧರಿಸುವ ನಿರತಿಶಯತಪಸ್ವಿ .
ಭಿಕ್ಷುಗಳೆಂದರೆ ಜೈನರೂಪಧಾರಿಗಳೂ ಮಹಾವ್ರತಿಕರೂ ಆದ ಮಹಾಮುನಿಗಳು. ಅನಾಗಾರರು, ಯತಿಗಳು, ಮುನಿಗಳು, ಋಷಿಗಳು ಎಂದು ಭಿಕ್ಷುಗಳಲ್ಲಿ ನಾಲ್ಕು ಬಗೆ.
ಇಪ್ಪತ್ತೆಂಟು ಮೂಲಗುಣಗಳನ್ನು ಧಾರಣೆ ಮಾಡುವ ಸಾಮಾನ್ಯ ಸಂಯಮಿಯೇ ಅನಾಗಾರ
ಚತುರ್ದಶಪೂರ್ವಧರರಾದ ಉಪಶಮ, ಕ್ಷಪಕ, ಶ್ರೇಣಿಯವರು ಯತಿಗಳು
ಅವಧಿಜ್ಞಾನಿಗಳೂ ಮನಃಪರ್ಯಯ ಜ್ಞಾನಿಗಳೂ ಕೇವಲಜ್ಞಾನಿಗಳೂ ಮುನಿ ಗಳೆನ್ನಿಸಿಕೊಳ್ಳುತ್ತಾರೆ.
ತಪೋನಿರತರೇ ಋಷಿಗಳು . ಋಷಿಗಳಲ್ಲಿ ನಾಲ್ಕು ಬಗೆ –ರಾಜರ್ಷಿ, ಬ್ರಹ್ಮರ್ಷಿ, ದೇವರ್ಷಿ, ಪರಮರ್ಷಿ ಎಂದು. ತಪಸ್ಸಿನಲ್ಲಿ ಅಂತರಂಗ ಬಹಿರಂಗ ಎಂದು ಎರಡು ಬಗೆಗಳಿದ್ದು ಒಂದೊಂದರಲ್ಲೂ ಆರು ವಿಭಾಗಗಳುಂಟು._
🌴🌴🌴🌴🌴🌴🌴🌴