ಜೈನ ಸಂಸ್ಕೃತಿಯ ಪರಂಪರೆಯಲ್ಲಿ ದಿನದಲ್ಲಿ ಒಂದೇ ಸಲ ಆಹಾರ ಸ್ವೀಕರಿಸಿ ಸಂಪೂರ್ಣವಾಗಿ ತ್ಯಾಗಮಯ ಜೀವನದಲ್ಲಿ ತೊಡಗಿಸಿಕೊಳ್ಳುವ ತ್ಯಾಗಿಗಳೇ ದಿಗಂಬರ ಮುನಿಗಳು.
ಮುನಿ ದೀಕ್ಷೆಗೂ ಮುಂಚಿತವಾಗಿ ಪ್ರತಿಮಾಧಾರಿ ವೃತಿಕನಾಗಿ, ಐಲಕರಾಗಿ, ಕ್ಷುಲ್ಲಕರಾಗಿ, ತ್ಯಾಗ ಜೀವನಕ್ಕೆ ಪ್ರಥಮ ಮೆಟ್ಟಿಲಾಗಿ ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿಗೆ ಅರ್ಹತೆ ಪಡೆಯುತ್ತಾರೆ.
ಅಂದರೆ ತ್ಯಾಗ ಜೀವನಕ್ಕೆ ಕಾಲಿಡುವ ಮುಂಚಿತವಾಗಿ ತಾಯಿ–ತಂದೆ, ಬಂಧು, ಬಾಂಧವರ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ನಂತರ ತಮ್ಮ ತ್ಯಾಗ ಜೀವನದ ಸಾಧನೆಗಾಗಿ ವ್ರತಗಳ ಪಾಲನೆ, ಧರ್ಮ, ಗ್ರಂಥಗಳ ಸ್ವಾಧ್ಯಾಯ ಉಪವಾಸ, ನಿತ್ಯ ಜಪ, ಮುಂತಾದ ಕಠಿಣವಾದ ತಪಸ್ಸಿನಿಂದ ದೇಹವನ್ನು ಕ್ಷಯಿಸಿ, ಮೋಕ್ಷ ಮಾರ್ಗದ ಹಾದಿಯಲ್ಲಿ ಸಾಗುತ್ತಾ ತಮ್ಮ ಆತ್ಮಕಲ್ಯಾಣ ಮಾಡಿಕೊಳ್ಳುತ್ತಾರೆ.
ಮುನಿಗಳು ನಿರ್ದಿಷ್ಟವಾಗಿ ಒಂದೆಡೆ ಇರುವಂತಿಲ್ಲ. ನಿರಂತರವಾಗಿ ಪರ್ಯಟನೆ ಮಾಡಬೇಕಾಗಿರುತ್ತದೆ. ವರ್ಷದಲ್ಲಿ ಒಂದು ಸಲ ಮಾತ್ರ ಒಂದೇ ಕಡೆ ನೆಲೆಸುವುದು. ಅದು ಮಳೆಗಾಲದ ಚಾತುರ್ಮಾಸದ ಸಂದರ್ಭದಲ್ಲಿ. ತ್ಯಾಗ ಜೀವನದ ಸಾಧನೆಗಾಗಿ 4 ತಿಂಗಳು ವ್ರತಗಳಲ್ಲಿ ತೊಡಗಿಸಿಕೊಂಡು ಉಪವಾಸ, ಧರ್ಮ ಗ್ರಂಥಗಳ ನಿರಂತರ ಅಧ್ಯಯನ, ರಚನೆ ಮತ್ತು ಪ್ರಕಟಣೆ ಮಾಡುತ್ತಾರೆ.
ನಿರ್ಗ್ರಂಥ ಮುನಿಗಳ ಚರ್ಯೆಗಳಲ್ಲಿ ತ್ಯಾಗಿಗಳು ನಿಗದಿತ ಸಮಯದಲ್ಲಿ ನಿತ್ಯ ಬೆಳಗ್ಗೆ 9.30 ರಿಂದ 11 ಗಂಟೆ ಸಮಯದಲ್ಲಿ (ಸಂಜೆ 4.30ರವರಗೆ ತೆಗೆದುಕೊಳ್ಳಬಹುದು)ದಿನದಲ್ಲಿ ಒಂದೇ ಸಲ ಆಹಾರ ಸ್ವೀಕರಿಸುವ ಸಂಪ್ರದಾಯವಿದ್ದು, ಆಹಾರ ತೆಗೆದುಕೊಳ್ಳುವ ಮುಂಚಿತವಾಗಿ ಬಸದಿಗಳಿಗೆ ಹೋಗಿ ಜಿನ ಮೂರ್ತಿಯ ದರ್ಶನ ಪಡೆದು, ನಂತರ ತಮ್ಮ ಗುರುಗಳ ಆಜ್ಞೆ ಪಡೆದು ಬಸದಿಯಿಂದ ತೆರಳುತ್ತಾರೆ. ಹಾಗೆ ತೆರಳುವ ಮುಂಚೆ ತ್ಯಾಗಿಗಳು ತಮ್ಮ ಬಲಗೈ ಬೆರಳುಗಳನ್ನು ಆಹಾರ ಮುದ್ರೆಯಲ್ಲಿ ಬಲ ಭುಜದ ಮೇಲೆ ಇಟ್ಟುಕೊಂಡು ಮೌನಧಾರಿಗಳಾಗಿ ಊರಿನ ಬೀದಿಗಳಲ್ಲಿ ಆಹಾರಕ್ಕಾಗಿ ಮೀಸಲಾಗಿರುವ ಚೌಕ ಅಥವಾ ಊರಿನ ಶ್ರಾವಕರ ಮನೆಗಳತ್ತ ತೆರಳುತ್ತಾರೆ.
ಹಾಗೆ ಜಿನ ದರ್ಶನ ಪಡೆದು ಹೋಗುವಾಗ ತಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಹೊರಡುತ್ತಾರೆ. ಅಂದರೆ ಶ್ರಾವಕ ಅಥವಾ ಶ್ರಾವಕಿಯರು ಕಲಶ, ಹಣ್ಣು, ತೆಂಗಿನಕಾಯಿ, ಮುಂತಾದ ಮಂಗಲ ವಸ್ತುಗಳನ್ನು ಹಿಡಿದುಕೊಂಡು ನಿಂತಿದ್ದು, ಅವರ ಸಂಕಲ್ಪದಂತೆ ಅವುಗಳಿದ್ದರೆ ಅಲ್ಲಿಗೆ ಆಹಾರ ತೆಗೆದುಕೊಳ್ಳಲು ಅಥವಾ ಆಹಾರ ಪಡೆಯುವ ಮನೆ ಪ್ರವೇಶಿಸುತ್ತಾರೆ.
ಜೈನ ತ್ಯಾಗಿಗಳು ಸಂಪೂರ್ಣವಾಗಿ ಪರಿಗ್ರಹಗಳನ್ನು ತ್ಯಜಿಸಿದವರಾಗಿದ್ದು, ತಮ್ಮ ಆಹಾರವನ್ನು ಅವರು ತಯಾರಿಸಿಕೊಳ್ಳುವುದಿಲ್ಲ. ಜೈನ ಶ್ರಾವಕ , ಶ್ರಾವಕಿಯರು ಶುದ್ಧ ವಸ್ತ್ರಧಾರಿಗಳಾಗಿದ್ದು, ಶುದ್ಧ ಮನಸ್ಸಿನಿಂದ ತ್ಯಾಗಿಗಳಿಗೆಂದೇ ಶುದ್ಧವಾದ ಆಹಾರ ಸಿದ್ಧ ಮಾಡುತ್ತಾರೆ. ಅಂತಹ ಮನೆಗಳನ್ನು ಚೌಕ ಎಂದು ಕರೆಯಲಾಗುತ್ತದೆ. ಇವರು ಸೇವಿಸುವ ಆಹಾರದಲ್ಲಿ ಕಂದಮೂಲ ಅಂದರೆ ಗೆಡ್ಡೆ, ಗೆಣಸು, ಈರುಳ್ಳಿ, ಬೆಳ್ಳುಳ್ಳಿ ಆಲೂಗಡ್ಡೆ, ಕ್ಯಾರೆಟ್, ಮುಂತಾದ ತರಕಾರಿಗಳ ತ್ಯಾಗವಿದ್ದು, ಆಹಾರ ತಯಾರಿಸಲು ನೀರನ್ನು ಕಡ್ಡಾಯವಾಗಿ ತೆರೆದ ಬಾವಿಗಳಿಂದ ತಂದು ಸೋಸಿ, ಕುದಿಸಿ ಆರಿಸಿ ಬಳಸುತ್ತಾರೆ. ಉಪ್ಪಿನ ಬದಲಾಗಿ ಸೈಂಧವ ಲವಣ ಅಡಿಗೆಯಲ್ಲಿ ಬಳಸುತ್ತಾರೆ.
ಚೌಕದ ಮನೆಯ ಅಂಗಳದಲ್ಲಿ ನಿಂತ ಶ್ರಾವಕರು ಮಂಗಳ ಕಳಶ, ತೆಂಗಿನಕಾಯಿ ಇತರೆ ವಸ್ತು ಹಿಡಿದುಕೊಂಡು ಆಹಾರ ಸ್ವೀಕರಿಸಲು ತ್ಯಾಗಿಗಳನ್ನು ಭಕ್ತಿ ಪೂರ್ವಕವಾಗಿ ಆಹ್ವಾನಿಸುತ್ತಾರೆ. ಇದನ್ನು ‘ ಪಡಗಾಹನ (ಪ್ರದಕ್ಷಿಣೆ) ಎನ್ನುವರು. ನಂತರ ಮುನಿಗಳನ್ನು 3 ಸುತ್ತು ಪ್ರದಕ್ಷಿಣೆ ಹಾಕಿ ಶುದ್ಧ ಉಚ್ಛಾರಣೆಯಿಂದ ಪಂಚ ನಮಸ್ಕಾರ ಮಂತ್ರವನ್ನು ಹೇಳುತ್ತಾ ಚೌಕದ ಒಳಗಡೆ ಕರೆತಂದು ಭೂಮಿ ಶುಧ್ಧ ಮಾಡಿಶುದ್ಧವಾದ ಮಣೆಯ ಮೇಲೆ ಕುಳ್ಳಿರಿಸಿ ಭಕ್ತಿ, ಶ್ರದ್ಧೆ ಗೌರವದಿಂದ ಅವರ ಪಾದವನ್ನು ತೊಳೆದು ಅಷ್ಟವಿಧಾರ್ಚನೆಯ ಪೂಜೆ ಮಾಡಿ ನಮಸ್ಕರಿಸಿ ಪುನಃ ಶುದ್ದಿ ಹೇಳಿ ಅಹಾರ ಸ್ವೀಕರಿಸಿ ಅಂತ ನಿವೇದಿಸಿ ತಾವು ತಯಾರಿಸಿದ ಆಹಾರ ಇರಿಸಿದ ಪಾತ್ರೆಗಳನ್ನು ಅವರಿಗೆ ತೋರಿಸುತ್ತಾರೆ. ಆಹಾರ ನೋಡಿದ ಮೇಲೆ ಕೈ ಕೆಳಬಿಟ್ಟು ಅವರ ಬಾಯಿ ಶುದ್ದಿ ಮಾಡಿಕೊಂಡು ಎದ್ದು ನಿಲ್ಲುತ್ತಾರೆ…ಕೆಲವೊಂದು ಬಾರಿ ತಾವು ತ್ಯಜಿಸಿದ್ದ ಆಹಾರವಿದ್ದರೆ, ಅದನ್ನು ಹೊರಗೆ ತೆಗೆದಿಡಲು ಕೈ ಸನ್ನೆಯಿಂದಲೇ ತಿಳಿಸುತ್ತಾರೆ. ನಂತರ ಆಹಾರ ನೀಡುವ ಶ್ರಾವಕರು ಮನ ಶುದ್ಧಿ, ವಚನ ಶುದ್ಧಿ, ಕಾಯ ಶುದ್ಧಿ, ಆಹಾರ ಶುದ್ಧಿ, ಜಲ ಶುದ್ಧಿಯಿದ್ದು, ನವದಾಭಕ್ತಿಯಿಂದ ಆಹಾರ ನೀಡುವುದಾಗಿ ತಾವು ಸ್ವೀಕರಿಸಬೇಕು ಎಂದಾಗ ತ್ಯಾಗಿಗಳು ಆಹಾರ ಸ್ವೀಕರಿಸುತ್ತಾರೆ’
ದಿಗಂಬರ ಮುನಿಗಳು ಮಣೆಯ ಮೇಲೆ ನಿಂತುಕೊಂಡು ಎರಡೂ ಕೈಗಳನ್ನು ಜೋಡಿಸಿ ಬೊಗಸೆಯಲ್ಲಿ ಆಹಾರ ತೆಗೆದುಕೊಳ್ಳುತ್ತಾರೆ. ಮೊದಲು ನೀರನ್ನು ಸ್ವೀಕರಿಸಿ, ನಂತರ ಆಹಾರ ನೀಡುವ ಭಕ್ತರಿಂದ ಸೇವಿಸುವಷ್ಟು ಆಹಾರವನ್ನು ಹಲವು ಬಾರಿ ಹಾಕಿಸಿಕೊಂಡು ಪ್ರತಿ ತುತ್ತನ್ನೂ ಎಚ್ಚರ ವಹಿಸಿ ಶೋಧಿಸಿ ಸೂಕ್ಷ್ಮವಾಗಿ ಕಣ್ಣಾಡಿಸಿ ಯಾವುದೇ ಜೀವಿಗೆ ಹಿಂಸೆಯಾಗದಂತೆ ಸ್ವೀಕರಿಸುತ್ತಾರೆ. ತ್ಯಾಗಿಗಳು ದಿನದಲ್ಲಿ ಒಂದೇ ಬಾರಿ ಆಹಾರ ತೆಗೆದುಕೊಳ್ಳುವುದರಿಂದ ತಾವು ಆಹಾರ ಸೇವಿಸುವ ಸಮಯದಲ್ಲಿಯೇ, ನೀರು, ಹಾಲು, ಹಣ್ಣಿನ ರಸ, ಎಳನೀರು, ತಮ್ಮ ಕಾಯಿಲೆಗಳಿಗೆ ಸಂಬಂಧಿಸಿದಂತೆ ಆಯುರ್ವೇದ ಔಷಧ, ಮುಂತಾದವುಗಳನ್ನು ಸೇವಿಸುತ್ತಾರೆ.
ಒಂದು ವೇಳೆ ಕೈಗೆ ಪಡೆದ ಆಹಾರದಲ್ಲಿ ಕೂದಲು, ಇರುವೆ, ಹರಳು ಮುಂದಾದ ಅಶುದ್ಧ ವಸ್ತುಗಳು ಕಂಡುಬಂದರೆ ಅಲ್ಲಿಗೆ ಕೈ ಬಿಟ್ಟು ಆಹಾರ ಸೇವಿಸುವುದನ್ನು ನಿಲ್ಲಿಸುತ್ತಾರೆ. ನಂತರ ನೀರನ್ನೂ ಕೂಡ ಸೇವಿಸುವುದಿಲ್ಲ. ಇದನ್ನು ‘ ಅಂತರಾಯ ’ ಎನ್ನುವರು. ಪಾತ್ರೆ ತಟ್ಟೆ, ಎಲೆ ರಹಿತವಾಗಿ ನಿಂತುಕೊಂಡು ಆಹಾರವನ್ನು ಕೇವಲ ಕೈಗಳಿಂದಲೇ ತೆಗೆದುಕೊಳ್ಳುವ ಈ ಆಚರಣೆಯನ್ನು ‘ಸ್ಥಿತ ಭೋಜನ ’ ಎಂದು ಕರೆಯುತ್ತಾರೆ.
ಶ್ವೇತ ವಸ್ತ್ರಧಾರಿಗಳಾದ ಆರ್ಯಿಕೆಯರು (ಮಾತಾಜಿ) ಕುಳಿತುಕೊಂಡು ಕ್ಷುಲ್ಲಕ, ಕ್ಷುಲ್ಲಿಕಾ, ಐಲಕರು ಬಟ್ಟಲಿನಲ್ಲಿ, ಬ್ರಹ್ಮಚಾರಿಗಳು ಮತ್ತು ಖಾವಿ ಧರಿಸಿದ ಭಟ್ಟಾರಕರು ತಟ್ಟೆಗಳಲ್ಲಿ ಆಹಾರ ಸೇವಿಸುತ್ತಾರೆ. ಬ್ರಹ್ಮಚಾರಿಗಳು ಎರಡು ಬಾರಿ ಉಳಿದ ತ್ಯಾಗಿಗಳ ಆಹಾರ ದಿನದಲ್ಲಿ ಒಂದೇ ಬಾರಿ ಆಹಾರ ಸ್ವೀಕರಿಸುವ ನಿಯಮ ಆಗಿರುತ್ತದೆ. ಜೈನ ಧರ್ಮವು ತ್ಯಾಗದ ಮಹಿಮೆಯನ್ನು ಸ್ವತಃ ಆಚರಣೆಯನ್ನು ಮಾಡಿ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬುದಕ್ಕೆ ತ್ಯಾಗಿಗಳ ತ್ಯಾಗ ಜೀವನವು ಸಾಕ್ಷಿಯಾಗಿದೆ
🌴🌴🌴🌴🌴🌴🌴🌴