ತೀರ್ಥಂಕರ ಭಗವಂತರ 34 ಅತಿಶಯಗಳು
ತೀರ್ಥಂಕರ ಭಗವಂತರಿಗೆ ಮೂವತ್ತನಾಲ್ಕು ಅತಿಶಯಗಳಿರುತ್ತವೆ. ಅತಿಶಯ ಶಬ್ದಕ್ಕೆ ಶ್ರೇಷ್ಠತೆ, ಉತ್ತಮತೆ, ಮಹಿಮೆ, ಪ್ರಭಾವ, ಅಧಿಕತೆ, ಚಮತ್ಕಾರ ಮುಂತಾದ ಅನೇಕ ಅರ್ಥಗಳಿರುತ್ತವೆ. ಯಾವ ಗುಣಗಳ ಕಾರಣದಿಂದ ತೀರ್ಥಂಕರ ಪರಮಾತ್ಮರು ಸಮಸ್ತ ಜಗತ್ತಿಗೂ ಅತಿಶಯ – ಶ್ರೇಷ್ಠರಾಗಿ ಪ್ರತಿಭಾಸಿತರಾಗುತ್ತಾರೆಯೋ , ಆ ಗುಣಗಳಿಗೆ ಅತಿಶಯವೆಂದು ಹೇಳುತ್ತಾರೆ. ಜಗತ್ತಿನ ಯಾವುದೇ ಜೀವಿಯಲ್ಲಿ ತೀರ್ಥಂಕರರಿಗಿಂತಲೂ ಮಿಗಿಲಾದ ಗುಣ, ರೂಪ ವೈಭವವನ್ನು ಕಾಣಲಾಗುವುದಿಲ್ಲ. ಆದ್ದರಿಂದ ಅತಿಶಯವು ಅತಿಶಯವೇ ಆಗಿದೆ, ಅದು ಅನ್ಯರಿಗಿಂತ ತೀರ್ಥಂಕರರ ವಿಶೇಷತೆ ( ಪ್ರತ್ಯೇಕತೆ ) ಯನ್ನು ಘೋಷಣೆ ಮಾಡುತ್ತದೆ. ಅತಿಶಯಗಳು ತೀರ್ಥಂಕರರ ಲೋಕೋತ್ತರತೆಯ ದ್ಯೋತಕಗಳು. ಅತಿಶಯಗಳು 34 ಇರುತ್ತವೆ. ಅವುಗಳಲ್ಲಿ ಜನ್ಮಕೃತ ಅತಿಶಯಗಳು ಹತ್ತು, ಕರ್ಮಕ್ಷಯದಿಂದ ಹತ್ತು, ಮತ್ತು ದೇವಕೃತ ಅತಿಶಯಗಳು ಹದಿನಾಲ್ಕು ಇರುತ್ತವೆ.
ಜನ್ಮಕೃತ ಹತ್ತು ಅತಿಶಯಗಳು
೧ – ೨ . ಸ್ವೇದರಹಿತತ್ವ ಮತ್ತು ನಿರ್ಮಲವಾದ ಶರೀರ
೩. ರಕ್ತವು ಶ್ವೇತವಾಗಿರುವುದು
೪. ಅತಿಶಯ ರೂಪವಂತ ಶರೀರ
೫. ಲೋಕೋತ್ತರ ಸುಗಂಧ
೬. ಸಮಚತುರಸ್ರ ಸಂಸ್ಥಾನ
೭. ವಜ್ರವೃಷಭ ನಾರಾಚ ಸಂಹನನ
೮. ಸರ್ವಸುಲಕ್ಷಣತಾ
೯. ಅತುಲ ಬಲ
೧೦. ಪ್ರಿಯ ಹಿತವಾಣಿ
ಜನ್ಮಕೃತ ಹತ್ತು ಅತಿಶಯಗಳು
೧ – ೨. ಸ್ವೇದ ರಹಿತತ್ವ ಮತ್ತು ನಿರ್ಮಲವಾದ ಶರೀರ
ತೀರ್ಥಂಕರ ಭಗವಂತರ ಶರೀರವು ಬೆವರಿಲ್ಲದ್ದಾಗಿರುತ್ತದೆ. ಅದು ನಿರ್ಮಲವಾಗಿ ಎಂದರೆ ಮಲ ಮೂತ್ರರಹಿತವಾಗಿರುತ್ತದೆ. ಅವರಿಗೆ ಆಹಾರವಿರುತ್ತದೆ. ಆದರೆ ನೀಹಾರವಿರುವುದಿಲ್ಲ. ಈ ವಿಷಯವಾಗಿ ವೈಜ್ಞಾನಿಕ ಕಾರಣವೆಂದರೆ ತೀರ್ಥಂಕರರಂತಹ ಮಹಾನ್ ಆತ್ಮರ ಜಠರಾಗ್ನಿಯು ಪ್ರಬಲವಾಗಿರುವುದರಿಂದ ನೇರವಾಗಿ ರಸ ಮತ್ತು ರಕ್ತ ರೂಪವಾಗಿ ಪರಿಣಮಿಸುತ್ತದೆ. ಅವರ ಶರೀರದಲ್ಲಿ ವ್ಯರ್ಥವಾಗಿ ಹೊರದೂಡುವಂತಹ ಯಾವ ಪದಾರ್ಥವೂ ಸಹ ಉಳಿಯುವುದಿಲ್ಲ. ಈ ಕಾರಣದಿಂದಲೇ ತೀರ್ಥಂಕರರು ಆಹಾರ ಗ್ರಹಣೆ ಮಾಡಿದರೂ ಸಹ ನಿಹಾರವಿರುವುದಿಲ್ಲ.
೩. ರಕ್ತವು ಶ್ವೇತವಾಗಿರುವುದು
ತೀರ್ಥಂಕರ ಭಗವಂತರ ರಕ್ತವು ಹಸುವಿನ ಹಾಲಿನಂತೆ ಬೆಳ್ಳಗಿರುತ್ತದೆ. ಇದು ಸಾಧಾರಣ ಮನುಷ್ಯರಿಗೆ ಅವಿಶ್ವಾಸನೀಯವಾಗಿಯೂ ಮತ್ತು ಕಾಲ್ಪನಿಕವಾಗಿಯೂ ತೋರುತ್ತದೆ. ಆದರೆ ಇದು ಇರುವುದು ನಿಜ. ಇದರಲ್ಲಿ ಮನೋವೈಜ್ಞಾನಿಕ ಸತ್ಯವು ನಿಹಿತವಾಗಿದೆ. ಯಾವ ರೀತಿಯಾಗಿ ಪುತ್ರ ಸ್ನೇಹದಿಂದ ತಾಯಿಯ ಸ್ತನದಿಂದ ಹಾಲು ಉಕ್ಕುತ್ತದೆಯೋ , ಅದೇ ಪ್ರಕಾರವಾಗಿ ತೀರ್ಥಂಕರರ ರಕ್ತವು ಹಾಲಿನಂತೆ ಆಗುತ್ತದೆ. ಏಕೆಂದರೆ ಚರಾಚರ ಜಗತ್ತಿನ ಮೇಲೆ ಅವರಿಗೆ ಪ್ರೇಮ, ಕರುಣೆ , ವಾತ್ಸಲ್ಯ ಮತ್ತು ಮಮತೆಯೇ ತುಂಬಿರುತ್ತದೆ. #ಮಾತೇವಬಾಲಸ್ಯಹಿತಾನುಶಾಸ್ತಾ ಎಂದು ಹೇಳುತ್ತಾರೆ. ಜಗತ್ತಿನ ಜೀವಿಗಳ ಉದ್ಧಾರವನ್ನು ಒಬ್ಬ ತಾಯಿಯಂತೆ ಮಾಡುತ್ತಾರೆ. ಅವರು ಸಮಸ್ತ ಸಂಸಾರಿ ಜೀವಿಗಳಿಗೂ ಸುಖವನ್ನು ನೀಡುವ ಜನನಿಯಂತೆ ಇರುತ್ತಾರೆ. ಪ್ರಾಣಿ ಮಾತ್ರರ ದುಃಖವನ್ನು ದೂರ ಮಾಡುವ ಭಾವನೆ ಮತ್ತು ಅದಕ್ಕೆ ಯೋಗ್ಯವಾದ ಸಾಧನ ಸಾಮಾಗ್ರಿಯಿಂದ ಸಮನ್ವಿತರಾದ ಮಾತೃಚೇತಸ್ಕರಾದ , ತೀರ್ಥಂಕರ ಭಗವಂತರ ಶರೀರದಲ್ಲಿ ರಕ್ತವು ಬೆಳ್ಳಗಿರುವುದು ಅವರ ಉತ್ಕೃಷ್ಟವಾದ ಕಾರುಣಿಕ ವೃತ್ತಿ ಹಾಗೂ ಅಪಾರ ವಾತ್ಸಲ್ಯದ ಪರಿಣಾಮವನ್ನು ಪರಿಚಯಿಸುತ್ತದೆ.
ಜನ್ಮಕೃತ ಅತಿಶಯಗಳು
೪. ಅತಿಶಯ ರೂಪವಂತ ಶರೀರ
ತೀರ್ಥಂಕರ ಭಗವಂತರ ಸ್ವರೂಪವು ಅತ್ಯಂತ ರೂಪವಂತವಾಗಿರುತ್ತದೆ. ಲೋಕೋತ್ತರ ಸೌಂದರ್ಯವನ್ನು ಧರಿಸಿದ ತೀರ್ಥಂಕರ ಭಗವಂತರಂತಹ ಅದ್ಭುತ ರೂಪವು ಜಗತ್ತಿನಲ್ಲಿ ಮತ್ತೊಬ್ಬರಲ್ಲಿ ಇರುವುದಿಲ್ಲ. ಅವರ ರೂಪದಲ್ಲಿ ಮೋಹಕ ಆಕರ್ಷಣೆ ಇರುತ್ತದೆ. ಅವರ ಮೇಲೆ ದೃಷ್ಟಿ ಬಿದ್ದ ಕೂಡಲೇ ನೋಟಕನ ಅಂತಃಕರಣ ಅದ್ಭುತ ರಸ ಸ್ವಾದವನ್ನು ಮಾಡತೊಡಗುತ್ತದೆ. ಮತ್ತು ಅವನು ಭಗವಂತನ ಕಡೆಗೆ ಆಕರ್ಷಿತನಾಗುತ್ತಾನೆ. ನೋಟಕನ ದೃಷ್ಟಿ ಅವರ ಮೇಲೆ ಸ್ಥಿರವಾಗುತ್ತದೆ.
ಭಗವಂತರ ರೂಪ ಸೌಂದರ್ಯವು ಇಷ್ಟೊಂದು ಅಧಿಕವಾಗಿದ್ದರೂ ಸಹ ಅದರ ಅದ್ಭುತ ಎಂದರೆ #ತೀರ್ಥಂಕರಸ್ವರೂಪಂಸರ್ವರೆಷಾವೈರಾಗ್ಯಜನಕಂಸ್ಯಾನ್ನತುರಾಗಾದಿವರ್ಧಕಂಚೇತಿ
ತೀರ್ಥಂಕರ ಸ್ವರೂಪವು ಸರ್ವ ಜೀವರಿಗೂ ವೈರಾಗ್ಯಜನಕವಾಗಿರುತ್ತದೆ. ರಾಗಾದಿಗಳನ್ನು ಹೆಚ್ಚಿಸವುದಾಗಿರುವುದಿಲ್ಲ. ತಾತ್ಪರ್ಯವೆಂದರೆ ಯಾರು ಎಷ್ಟು ರಸಮಯವಾಗಿ ಪರಮಾತ್ಮನ ಸೌಂದರ್ಯದ ರಸಪಾನವನ್ನು ಮಾಡುತ್ತಾರೆಯೋ , ಅವರ ಅಂತರಂಗದಲ್ಲಿ ಅಷ್ಟೇ ವೈರಾಗ್ಯವು ಉಕ್ಕಿ ಬರುತ್ತದೆ. ಅನ್ಯ ಬೇರೆ ಜೀವರ ಸೌಂದರ್ಯವು ರಾಗವರ್ಧಕವಾಗಿದ್ದರೆ , ಪರಮಾತ್ಮನ ಸೌಂದರ್ಯವು ವೈರಾಗ್ಯವರ್ಧಕವಾಗಿರುತ್ತದೆ.
೫. – ಲೋಕೋತ್ತರ ಸುಗಂಧ
ತೀರ್ಥಂಕರ ಭಗವಂತರ ದೇಹದಿಂದ ಲೋಕೋತ್ತರವಾದ ಸುಗಂಧವು ಪ್ರವಹಿಸಿರುತ್ತದೆ.
೬. ಸಮಚತುರಸ್ರ ಸಂಸ್ಥಾನ
ಅವರು ಬಹಳ ಸಧೃಢರೂ ಮತ್ತು ಸಮಬದ್ಧ ಪ್ರಮಾಣವುಳ್ಳ ಆಕಾರವುಳ್ಳವರೂ ಆಗಿರುತ್ತಾರೆ. ಇವರಂತಹ ಪ್ರಮಾಣಬದ್ಧ ಶಾರೀರಿಕ ಸಂಸ್ಥಾನವು ಮತ್ತ್ಯಾರಲ್ಲೂ ಕಾಣಸಿಗುವುದಿಲ್ಲ.
ಜನ್ಮಕೃತ ಅತಿಶಯಗಳು
೭. ವಜ್ರ ವೃಷಭ ನಾರಾಚ ಸಂಹನನ
ತೀರ್ಥಂಕರರು ವಜ್ರ ವೃಷಭ ನಾರಾಚ ಸಂಹನನಧಾರಿಗಳಿರುತ್ತಾರೆ. ಇದು ಲೋಕೋತ್ತಮ ಸಂಹನನವಾಗಿದೆ. ಒಟ್ಟಿನಲ್ಲಿ ತೀರ್ಥಂಕರ ಭಗವಂತರ ಶಾರೀರಿಕ ಸಂರಚನೆಯು ಜಗತ್ತಿನಲ್ಲಿಯೇ ಸರ್ವಶ್ರೇಷ್ಠವಾಗಿರುತ್ತದೆ. ಅವರಂತಹ ರೂಪ, ಸೌಂದರ್ಯ, ಮತ್ತು ಆಕರ್ಷಣೆ ಅನ್ಯ ಯಾರಲ್ಲಿಯೂ ಇರುವುದಿಲ್ಲ. ಆಚಾರ್ಯ ಮಾನತುಂಗರು ಹೀಗೆ ಹೇಳಿದ್ದಾರೆ – ಜಗತ್ತಿನ ಸಮಸ್ತ ಶ್ರೇಷ್ಠ ಪರಮಾಣುಗಳು ತೀರ್ಥಂಕರ ಪ್ರಭುವಿನ ಸಂರಚನೆಯಲ್ಲಿ ತೊಡಗಿರುವಾಗ ಅವರಂತಹ ರೂಪವು ಅನ್ಯರಲ್ಲಿ ಕಂಡು ಬರುವುದಾದರೂ ಹೇಗೆ ? ( ಭಕ್ತಾಮರ ಸ್ತೋತ್ರ – 12 )
೮ – ಅತುಲ ಬಲ
ಪೂರ್ವ ಜನ್ಮದ ಲೋಕೋತ್ತರ ಸಾಧನೆ ಮತ್ತು ಪ್ರಬಲ ಪುಣ್ಯದ ಕಾರಣದಿಂದ ತೀರ್ಥಂಕರರ ಶರೀರದಲ್ಲಿ ಅತುಲ ಬಲವಿರುತ್ತದೆ. ಅವರು ಬಾಲ್ಯಾವಸ್ಥೆಯಲ್ಲಿಯೇ ಅತುಲ ಸಾಮರ್ಥ್ಯ ಉಳ್ಳವರೂ ಮತ್ತು ಪ್ರಭಾವಶಾಲಿಗಳೂ ಆಗಿರುತ್ತಾರೆ.
ಜನ್ಮಕೃತ ಅತಿಶಯಗಳು
೯. ಸರ್ವಸುಲಕ್ಷಣತಾ
ತೀರ್ಥಂಕರ ಭಗವಂತರ ಶರೀರವು ಸರ್ವಸುಲಕ್ಷಣ ಸಂಪನ್ನವಾಗಿರುತ್ತದೆ. ಸಾಮುದ್ರಿಕ ಶಾಸ್ತ್ರಕ್ಕೆ ಅನುಸಾರವಾಗಿ ೧೦೦೮ ಲಕ್ಷಣಗಳಿರುತ್ತವೆ. ಈ ಲಕ್ಷಣಗಳು ಶ್ರೇಷ್ಠವಾದ ಹಾಗೂ ಪವಿತ್ರವಾದ ಆತ್ಮಗಳಲ್ಲಿಯೇ ಸೇರಿರುತ್ತವೆ. ತೀರ್ಥಂಕರರ ಶರೀರದಲ್ಲಿ ಈ ಎಲ್ಲಾ ಸುಲಕ್ಷಣಗಳೂ ಕಂಡು ಬರುತ್ತವೆ. ಸಾಮುದ್ರಿಕ ಶಾಸ್ತ್ರಾನುಸಾರವಾಗಿ ಮೇಲೆ ಹೇಳಿದ ೧೦೦೮ ಚಿಹ್ನೆಗಳಲ್ಲಿ ಶಂಖ, ಚಕ್ರ, ಗದೆ ಮುಂತಾದ ೧೦೮ ಲಕ್ಷಣಗಳೂ ತಿಲ, ಮಸೂರಿಕಾ ಮುಂತಾದ ೯೦೦ ವ್ಯಂಜನಗಳೂ ಇರುತ್ತವೆ. ಇಂದು ಪುಣ್ಯಶಾಲಿಗಳಾದ ನರರತ್ನರ ಅಭಾವವಿರುವುದರಿಂದ ಇಷ್ಟೊಂದು ಚಿಹ್ನೆಗಳಿರುವ ವ್ಯಕ್ತಿಗಳ ದರ್ಶನವು ಆಗುವುದಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಯಾರಾದರೂ ವಿಶೇಷ ಪುಣ್ಯಶಾಲಿ ಜೀವರಲ್ಲಿ ಕೆಲವು ಚಿಹ್ನೆಗಳು ಕಂಡು ಬರುತ್ತವೆ. ತೀರ್ಥಂಕರರಲ್ಲದೇ ಅನ್ಯ ಯಾವ ಜೀವಗಳ ಶರೀರದಲ್ಲಿಯೂ ೧೦೦೮ ಲಕ್ಷಣಗಳು ಕಂಡು ಬರುವುದಿಲ್ಲ. ಆದ್ದರಿಂದ ಇಂತಹ ಲಕ್ಷಣಗಳಿರುವುದು ತೀರ್ಥಂಕರರ ವೈಶಿಷ್ಟ್ಯವಾಗಿದೆ. ಈ ಕಾರಣದಿಂದಲೇ ಭಗವಂತರ ಹೆಸರಿನ ಹಿಂದೆ ಸಾವಿರದ ಎಂಟು ( ೧೦೦೮ ) ಎಂದು ಬರೆಯುವ ರೂಢಿ ಪ್ರಚಲಿತವಾಗಿದೆ.
೧೦. ಪ್ರಿಯ ಹಿತ ವಾಣಿ
ತೀರ್ಥಂಕರರ ವಾಣಿಯು ಅತ್ಯಂತ ಮಧುರವೂ ಮತ್ತು ಮೋಹಕವೂ ಆಗಿರುತ್ತದೆ. ಅವರು ನುಡಿಯುವ ಒಂದೊಂದು ಶಬ್ದವೂ ಅಮೃತದ ಝರಿಯಂತೆ ಹೊರಡುತ್ತದೆ. ಆದ್ದರಿಂದಲೇ ಅವರು ಬಾಲ್ಯಾವಸ್ಥೆಯಿಂದಲೇ ಎಲ್ಲರಿಗೂ ಪ್ರಿಯ ಮತ್ತು ಆತ್ಮೀಯರಾಗಿರುತ್ತಾರೆ. ಅವರ ಮನೋಹರವಾದ ಶರೀರ , ಸಿಹಿಮಾತು, ಮಧುರ ನಿರೀಕ್ಷಣೆ ಮತ್ತು ನಸುನಗೆ ಇವೆಲ್ಲವೂ ಅವರನ್ನು ಪ್ರಪಂಚದಲ್ಲಿ ಎಲ್ಲರ ಪ್ರೇಮಕ್ಕೆ ಪಾತ್ರರಾಗುವಂತೆ ಮಾಡುತ್ತವೆ.
ಘಾತಿ ಕರ್ಮಗಳ ನಾಶದಿಂದ ಉತ್ಪನ್ನವಾಗುವ ಹತ್ತು ಅತಿಶಯಗಳು
೧. ನಾಲ್ಕು ನೂರು ಕೋಸುಗಳ ( ಮೈಲಿಗಳ ) ವರೆಗೆ ಸುಭಿಕ್ಷತೆ
೨. ಗಗನ ಗಮನ
೩. ಅಪ್ರಾಣಿ ವಧೆ
೪. ಭೋಜನ ಮಾಡದಿರುವುದು
೫. ಉಪಸರ್ಗವಿಲ್ಲದಿರುವುದು
೬. ಚತುರ್ಮುಖತೆ
೭. ಸರ್ವವಿದ್ಯೇಶ್ವರತಾ
೮. ನೆರಳಿಲ್ಲದಿರುವುದು
೯. ನಿರ್ನಿಮೇಷ ದೃಷ್ಟಿ
೧೦. ಕೂದಲು ಮತ್ತು ಉಗುರು ಬೆಳೆಯದಿರುವುದು.
ಈ ಹತ್ತು ಅತಿಶಯಗಳು ಘಾತಿ ಕರ್ಮ ಕ್ಷಯದಿಂದ ಭಗವಂತನಿಗೆ ಉತ್ಪನ್ನವಾಗುತ್ತವೆ.
ಘಾತಿ ಕರ್ಮಗಳ ನಾಶದಿಂದ ಉತ್ಪನ್ನವಾಗುವ ಹತ್ತು ಅತಿಶಯಗಳು
೧. ನಾಲ್ಕು ನೂರು ಕೋಸುಗಳ ( ಮೈಲಿ ) ಗಳವರೆಗೆ ಸುಭಿಕ್ಷತೆ
ತೀರ್ಥಂಕರ ಭಗವಂತರು ಎಲ್ಲಿ ವಿರಾಜಮಾನರಾಗಿರುತ್ತಾರೋ ಅಲ್ಲಿಂದ ನಾಲ್ಕು ದಿಕ್ಕಿನಲ್ಲಿಯೂ ನಾಲ್ಕು ನೂರು ಕೋಸ ( ನೂರು ಯೋಜನ ) ಪ್ರಮಾಣದ ಕ್ಷೇತ್ರದಲ್ಲಿ ಸುಭಿಕ್ಷತೆ ಆಗುತ್ತದೆ. ಘಾತಿ ಕರ್ಮಗಳು ನಾಶವಾದ ತಕ್ಷಣ ತೀರ್ಥಂಕರ ಭಗವಂತರಲ್ಲಿ ಪರಮ ಪವಿತ್ರತೆಯೂ ಉಂಟಾಗುತ್ತದೆ. ಅವರ ಆತ್ಮ ತೇಜವು ಲೋಕದಲ್ಲೆಲ್ಲಾ ಪ್ರಸಾರವಾಗತೊಡಗುತ್ತದೆ. ಅವರ ಪ್ರಭಾವವೂ ಅಸಾಧಾರಣವಾಗಿರುತ್ತದೆ. ಈ ಕಾರಣದಿಂದಲೇ ತೀರ್ಥಂಕರರು ಎಲ್ಲೆಲ್ಲಿ ವಿಹಾರ ಮಾಡುತ್ತಾರೋ ಅಲ್ಲಿ ಎಲ್ಲರೂಸಂತೃಪ್ತರೂ, ಸುಖಿಗಳೂ , ಸ್ವಸ್ಥರೂ ( ಆರೋಗ್ಯ ಶಾಲಿಗಳು ) ಹಾಗೂ ಸಂಪನ್ನರೂ ಆಗುತ್ತಾರೆ. ಭಗವಂತರ ಆತ್ಮ ಪ್ರಭಾವದಿಂದ ಪ್ರಕೃತಿಯು ಪ್ರಫುಲ್ಲಿತವಾಗುತ್ತದೆ. ಪೃಥ್ವಿಯು ಧನ ಧಾನ್ಯದಿಂದ ಪರಿಪೂರ್ಣವಾಗುತ್ತದೆ. ಶ್ರೇಷ್ಠ ಅಹಿಂಸಾಮಯಿ ಒಂದು ಆತ್ಮನ ಪ್ರಭಾವವಿದಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯನ ಭಾವಗಳ ಪ್ರಭಾವವು ವಾತಾವರಣದ ಮೇಲೆ ಬೀಳುತ್ತದೆ ಎಂದು ಸಿದ್ಧವಾಗಿದೆ. ಪವಿತ್ರಾತ್ಮರ ಶರೀರದಿಂದ ಹೊರಡುವ ತರಂಗಗಳು ವಾತಾವರಣವನ್ನು ವಿಶುದ್ಧವನ್ನಾಗಿ ಮಾಡುತ್ತದೆ. ಅಪವಿತ್ರ ಆತ್ಮಗಳು ವಾತಾವರಣವನ್ನು ವಿಷಮಯವನ್ನಾಗಿಸುತ್ತದೆ. ತೀರ್ಥಂಕರ ಪ್ರಭುಗಳು ಪರಮ ಪವಿತ್ರರಾಗಿದ್ದಾರೆ. ಅವರ ಸಾಮೀಪ್ಯದಿಂದಾಗಿ ಭೂಮಿಯು ಸುಭಿಕ್ಷವಾಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
೨. ಗಗನ ಗಮನ
ಘಾತಿ ಕರ್ಮಗಳು ನಾಶವಾಗುವುದರಿಂದ ಯೋಗ ಶಕ್ತಿಯಿಂದಾಗಿ ತೀರ್ಥಂಕರ ಭಗವಂತರ ಶರೀರದಲ್ಲಿ ವಿಶೇಷವಾದ ಹಗುರತನವು ಬರುತ್ತದೆ. ಇದರಿಂದಾಗಿ ಶರೀರದ ಗುರುತ್ವದ ಕಾರಣದಿಂದ ಅವರು ಭೂಮಿಯ ಮೇಲೆ ಇರಬೇಕಾಗುವುದಿಲ್ಲ. ಪಕ್ಷಿಗಳಲ್ಲಿಯೂ ಗಗನ ಗಮನತೆಯು ಕಾಣುತ್ತದೆ. ಆದರೆ ಅದಕ್ಕಾಗಿ ಅವುಗಳು ತಮ್ಮ ರೆಕ್ಕೆಯನ್ನು ಉಪಯೋಗಿಸಬೇಕಾಗುತ್ತದೆ. ತೀರ್ಥಂಕರ ಭಗವಂತರ ಶರೀರವು ತಾನಾಗಿಯೇ ಭೂಮಿಯಿಂದ ಮೇಲೆ ಎದ್ದಿರುತ್ತದೆ. ಅನ್ಯ ಸಂಸಾರೀ ಜೀವರಂತೆ ಇನ್ನು ಭಗವಂತರು ಭೂತಲಕ್ಕೆ ಭಾರ ಸ್ವರೂಪರಾಗಿಲ್ಲ ಎಂಬುದು ಇದರಿಂದ ಸಿದ್ಧವಾಗುತ್ತದೆ.
ಘಾತಿ ಕರ್ಮಗಳ ನಾಶದಿಂದ ಉತ್ಪನ್ನವಾಗುವ ಹತ್ತು ಅತಿಶಯಗಳು
೩. ಅಪ್ರಾಣಿ ವಧ
ತೀರ್ಥಂಕರ ಭಗವಂತರು ಅಹಿಂಸೆಯ ಪ್ರತಿಮೂರ್ತಿಗಳು. ಅವರ ಬಳಿ ಹಿಂಸೆಯ ಪರಿಣಾಮಗಳು ದೂರವಾಗುತ್ತವೆ. ಅವರ ವಿಹಾರವಾದಡೆಯಲ್ಲೆಲ್ಲಾ ಸಮಸ್ತ ಜೀವಿಗಳಿಗೂ ಅಭಯ ಪ್ರಾಪ್ತವಾಗುತ್ತದೆ. ಅತಿಕ್ರೂರಿಗಳಾದ ಪ್ರಾಣಿಗಳೂ ಸಹ ತೀರ್ಥಂಕರ ಪ್ರಭುವಿನ ಪ್ರಭಾವದಿಂದ ಕರುಣಾಮೂರ್ತಿಗಳಾಗುತ್ತವೆ. ದಯಾಮೂರ್ತಿಯಾದ ಭಗವಂತರ ಸಮೀಪದಲ್ಲಿ ಜನ್ಮಜಾತ ವೈರವಿರುವ ಜೀವಗಳೂ ಸಹ ಪಾರಸ್ಪರಿಕ ವೈರವನ್ನು ಮರೆತು ಬಿಡುತ್ತವೆ. ಸಿಂಹ ಮತ್ತು ಹಸುವೂ ಸಹ
ಒಂದೇ ತೀರದಲ್ಲಿ ನಿಂತು ನೀರು ಕುಡಿಯುತ್ತವೆ.
೪. ಭೋಜನದ ( ಆಹಾರದ ) ಅಭಾವ
ಕೈವಲ್ಯೋಪಲಬ್ಧಿಯ ನಂತರ ತೀರ್ಥಂಕರ ಭಗವಂತರ ಆತ್ಮವು ಪರಿಪೂರ್ಣವಾಗಿ ವಿಕಾಸ ಹೊಂದುತ್ತದೆ. ಅವರು ಪರಮ ಯೋಗಿಗಳಾಗಿರುತ್ತಾರೆ. ತಮ್ಮ ಶರೀರದ ಸಂರಕ್ಷಣೆಗಾಗಿ ಅವರಿಗೆ ಭೋಜನದ ಅವಶ್ಯಕತೆ ಇರುವುದಿಲ್ಲ. ಅವರ ಯೋಗ ಶಕ್ತಿಯ ಕಾರಣದಿಂದ ಸೂಕ್ಷ್ಮ ಪುದ್ಗಲ ಪರಮಾಣುಗಳ ಆಗಮನವು ಯಾವ ಪ್ರಯಾಸವಿಲ್ಲದೇ ಆಗುತ್ತಿರುತ್ತದೆ. ಈ ಪರಮಾಣುಗಳಿಂದಲೇ ಅವರ ಶರೀರದ ಪೋಷಣೆಯೂ ಮತ್ತು ಸಂರಕ್ಷಣೆಯೂ ಆಗುತ್ತಿರುತ್ತದೆ.
ಘಾತಿ ಕರ್ಮಗಳ ನಾಶದಿಂದ ಉತ್ಪನ್ನವಾಗುವ ಹತ್ತು ಅತಿಶಯಗಳು
ಉಪಸರ್ಗದ ಅಭಾವ
ಕೇವಲಜ್ಞಾನಿ ಅವಸ್ಥೆಯಲ್ಲಿ ಭಗವಂತರಿಗೆ ಯಾವುದೇ ಪ್ರಕಾರದ ಉಪಸರ್ಗವು ಉಂಟಾಗುವುದಿಲ್ಲ. ಅವರ ಸಾಮೀಪ್ಯ ( ಸಾನಿಧ್ಯ ) ಹೊಂದಿದ ತಕ್ಷಣ ವ್ಯಕ್ತಿಯ ಅಂತರಂಗದ ಕಲುಷತೆ ದೂರವಾಗುತ್ತದೆ. ವೈರ, ವೈಮನಸ್ಯ ಮತ್ತು ಪ್ರತೀಕಾರದ ಭಾವನೆ ಉತ್ಪನ್ನವಾಗುವುದಿಲ್ಲ. ಹೀಗಿರುವಾಗ ಅವರ ಮೇಲೆ ಉಪಸರ್ಗದ ಭಾವನೆಯಾದರೂ ಉಂಟಾಗಲು ಹೇಗೆ ಸಾಧ್ಯ ?
೬. ಚತುರ್ಮುಖತೆ
ತೀರ್ಥಂಕರ ಭಗವಂತರು ಸಮವಸರಣದಲ್ಲಿ ಮಂಡಿತರಾದಾಗ , ಒಂದೇ ಮುಖವಿದ್ದರೂ ಸಹ ಚತುರ್ಮುಖಿಯಾಗಿರುವಂತೆ ಕಂಡು ಬರುತ್ತಾರೆ. ಅವರ ಕಾಂತಿ ನಾಲ್ಕು ದಿಕ್ಕಿನಲ್ಲಿಯೂ ಕಾಣಿಸುತ್ತಿರುತ್ತದೆ. ನೋಡುವವರಿಗೆ ಅವರ ಮುಖ ಮುದ್ರೆಯು ತಮ್ಮೆಡೆಯೇ ಇರುವಂತೆ ತೋರುತ್ತದೆ. ಆದರೆ ಅವರ ಮುಖವು ಪೂರ್ವಾಭಿಮುಖವಾಗಿಯೋ ಅಥವಾ ಉತ್ತರಾಭಿಮುಖವಾಗಿಯೋ ಇರುತ್ತದೆ. ಇದೆಲ್ಲಾ ಭಗವಂತರಲ್ಲಿ ಉಂಟಾದ ಆತ್ಮ ತೇಜದಿಂದ ಸಂಭವಿಸುತ್ತದೆ. ಈ ಕಾರಣದಿಂದಲೇ ಒಂದೇ ಮುಖವುಳ್ಳವರಾದರೂ ಸಮವಸರಣದ ನಾಲ್ಕೂ ದಿಕ್ಕುಗಳಲ್ಲಿಯೂ ಬೇರೆ ಬೇರೆ ರೂಪದಿಂದ ಪ್ರಭುವಿನ ಕಾಂತಿಯ ದರ್ಶನವಾಗುತ್ತದೆ.
ಭಗವಂತರ ಚತುರ್ಮುಖತೆ ಅವರ ಸರ್ವಜ್ಞತೆಯ ದ್ಯೋತಕವಾಗಿದೆ. ಕೇವಲಜ್ಞಾನ ಉಂಟಾದ ಮೇಲೆ ಜಗತ್ತಿನ ಚರಾಚರ ಸಮಸ್ತ ಪದಾರ್ಥಗಳನ್ನು ತಿಳಿಯತೊಡಗುತ್ತಾರೆ. ಜಗತ್ತಿನ ಯಾವ ವಸ್ತುವೂ ಅವರ ಜ್ಞಾನ ದೃಷ್ಟಿಯಿಂದ ಹೊರಗಿರಲು ಸಾಧ್ಯವಿಲ್ಲ. ಪ್ರಾಯಶಃ ಇವರ ಚತುರ್ಮುಖತೆಯು ಇದನ್ನೇ ಪ್ರದರ್ಶನ ಮಾಡುತ್ತದೆ.
ಘಾತಿ ಕರ್ಮಗಳ ನಾಶದಿಂದ ಉತ್ಪನ್ನವಾಗುವ ಹತ್ತು ಅತಿಶಯಗಳು
೭. ಸರ್ವ ವಿದ್ಯೇಶ್ವರತಾ
ಸರ್ವ ಪದಾರ್ಥಗಳನ್ನು ಗ್ರಹಿಸುವ ಕೇವಲಜ್ಞಾನದ ಜ್ಯೋತಿಯಿಂದ ಅಲಂಕೃತರಾದ ಕಾರಣದಿಂದ ಭಗವಂತರು ಸರ್ವ ವಿದ್ಯೆಗಳಿಗೆ ಸ್ವಾಮಿಗಳಾಗುತ್ತಾರೆ. ಆಚಾರ್ಯ ಪ್ರಭಾಚಂದ್ರರು ತಮ್ಮ ಕ್ರಿಯಾ ಕಲಾಪ ಗ್ರಂಥದಲ್ಲಿ ಸರ್ವ ವಿದ್ಯೆಯ ಅರ್ಥವನ್ನು ದ್ವಾದಶಾಂಗ ರೂಪವಿದ್ಯಾ ಎಂದು ಹೇಳಿದ್ದಾರೆ. ಈ ವಿದ್ಯೆಗಳ ಮೂಲ ಜನಕರು ಭಗವಂತರಾಗಿರುವ ಕಾರಣದಿಂದ ಭಗವಂತರನ್ನು ಸರ್ವವಿದ್ಯೆಗಳ ಈಶ್ವರನೆಂದು ಹೇಳಲಾಗಿದೆ.
೮. ನೆರಳು ಬೀಳದಿರುವುದು
ಭಗವಂತರ ಶರೀರವು ಅವರ ತಪಸ್ಸಿನ ತೇಜದಿಂದ ಕಾಂತಿಯುತವಾಗಿರುತ್ತದೆ. ಕೇವಲಜ್ಞಾನ ಉಂಟಾದ ಕೂಡಲೇ ಅವರ ಶರೀರವು ನಿಗೋದ ಜೀವಿಗಳಿಂದ ರಹಿತವಾಗುತ್ತದೆ. ಆತ್ಮನ ನಿರ್ಮಲತೆಯ ಅನುಸರಣೆ ಮಾಡುತ್ತಾ ಅವರ ಶರೀರವು ಸ್ಫಟಿಕ ಮಣಿಯಂತೆ ಅತ್ಯಂತ ನಿರ್ಮಲವೂ ಮತ್ತು ಪಾರದರ್ಶಕವೂ ಆಗುತ್ತದೆ. ಆದ್ದರಿಂದಲೇ ಭಗವಂತರ ಶರೀರವು ನೆರಳಿಲ್ಲದ್ದಾಗಿರುತ್ತದೆ. ನೆರಳು ಪ್ರಕಾಶದ ಆವರಣದ ಕಾರಣದಿಂದಾಗಿ ಉತ್ಪನ್ನವಾಗುತ್ತದೆ. ಭಗವಂತರ ಶರೀರವು ಸಾಮಾನ್ಯ ಮನುಷ್ಯನ ಶರೀರಕ್ಕಿಂತಲೂ ಅತಿಶಯ ವಿಶಿಷ್ಟವಾಗಿರುತ್ತದೆ. ಅದು ಪ್ರಕಾಶಕ್ಕೆ ಆವರಣವಾಗುವುದಕ್ಕೆ ಬದಲಾಗಿ ಸ್ವತಃ ಪ್ರಕಾಶವನ್ನು ಪ್ರದಾನ ಮಾಡುತ್ತದೆ. ಆದ್ದರಿಂದ ಅದು ಛಾಯಾ ರಹಿತವಾಗಿರುತ್ತದೆ.
ಘಾತಿ ಕರ್ಮಗಳ ನಾಶದಿಂದ ಉತ್ಪನ್ನವಾಗುವ ಹತ್ತು ಅತಿಶಯಗಳು
೯. ನಿರ್ನಿಮೇಷ ದೃಷ್ಟಿ
ಸಾಧಾರಣ ಮನುಷ್ಯರು ಅಲ್ಪ ಸಾಮಾರ್ಥ್ಯವುಳ್ಳವರಾಗಿರುತ್ತಾರೆ. ಅವರಿಗೆ ತಮ್ಮ ಶಕ್ತಿ ಹೀನತೆಯ ಕಾರಣದಿಂದ ಯಾವುದಾದರೂ ವಸ್ತುವನ್ನು ನೋಡಿದ ಮೇಲೆ ಕಣ್ಣುಗಳಿಗೆ ಸ್ವಲ್ಪ ವಿಶ್ರಾಂತಿಯನ್ನು ಕೊಡುವುದಕ್ಕಾಗಿ ರಪ್ಪೆಗಳನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ವೀರ್ಯಾಂತರಾಯ ಕರ್ಮವು ಕ್ಷಯವಾಗಿರುವ ಕಾರಣದಿಂದ ಭಗವಂತರು ಅನಂತ ವೀರ್ಯದಿಂದ ಸಮನ್ವಿತರಾಗಿರುತ್ತಾರೆ. ಆದ್ದರಿಂದ ಅವರು ರೆಪ್ಪೆ ಮಿಟುಕಿಸುವುದಿಲ್ಲ. ಇದರ ಜೊತೆಗೆ ದರ್ಶನಾವರಣೀಯ ಕರ್ಮಗಳು ಪೂರ್ಣವಾಗಿ ಕ್ಷಯವಾಗುವುದರಿಂದ ನಿದ್ರಾದಿ ವಿಕಾರಗಳೂ ಸಹ ದೂರವಾಗುತ್ತವೆ. ಆದ್ದರಿಂದ ಸಾಧಾರಣ ಜನಗಳಂತೆ ಜಿನೇಂದ್ರ ದೇವರು ನಿದ್ರೆಗೋಸ್ಕರವಾಗಿ ಕಣ್ಣುಗಳನ್ನು ಮುಚ್ಚುವ ಪ್ರಸಂಗವೇ ಬರುವುದಿಲ್ಲ.
ಕಣ್ಣುಗಳನ್ನು ತೆರೆಯುವುದು ಜ್ಞಾನದ ಮತ್ತು ಕಣ್ಣುಗಳನ್ನು ಮುಚ್ಚುವುದು ಅಜ್ಞಾನದ ಪ್ರತೀಕವಾಗಿ ಮನ್ನಿಸಲಾಗುತ್ತದೆ. ಭಗವಂತರು ಕಣ್ಣುಗಳನ್ನು ಮುಚ್ಚದಿರುವುದು ಅವರ ಶಾಶ್ವತವಾದ ಅನಂತವಾದ ಎಂದೂ ನಷ್ಟವಾಗದ ಜ್ಞಾನ ಜ್ಯೋತಿಯ ಪ್ರತೀಕವಾಗಿ ಕಂಡು ಬರುತ್ತದೆ.
೧೦. ಉಗುರು ಮತ್ತು ಕೂದಲು ಬೆಳೆಯದಿರುವುದು
ಕೇವಲಜ್ಞಾನವಾದ ನಂತರ ಭಗವಂತರ ನಖ ಎಂದರೆ ಉಗುರು ಮತ್ತು ಕೂದಲುಗಳು ಬೆಳೆಯುವುದಿಲ್ಲ. ಅವು ಇದ್ದ ಹಾಗೆಯೇ ಇರುತ್ತದೆ. ಉಗುರು ಮತ್ತು ಕೂದಲುಗಳು ಮಲವೆಂದು ( ಕೊಳೆಯೆಂದು ) ತಿಳಿಯಲಾಗುತ್ತದೆ. ಕೇವಲಜ್ಞಾನವಾದ ನಂತರ ಭಗವಂತರ ಪುಣ್ಯಮಯವಾದ ದೇಹದಲ್ಲಿ ಉಗುರು ಮತ್ತು ಕೂದಲುಗಳನ್ನು ಬೆಳೆಸುವಂತಹ ಪರಮಾಣುಗಳು ಕಂಡುಬರುವುದಿಲ್ಲ. ಮಲರೂಪವನ್ನು ಧಾರಣೆ ಮಾಡುವಂತಹ ಪರಮಾಣುಗಳು ಈಗ ಬರುವುದೇ ಇಲ್ಲ. ಆದ್ದರಿಂದ ಉಗುರು ಮತ್ತು ಕೂದಲುಗಳು ಬೆಳೆಯುವುದೂ ಇಲ್ಲ ಮತ್ತು ಕಡಿಮೆಯಾಗುವುದೂ ಸಹ ಇಲ್ಲ.
ದೇವಕೃತ ಹದಿನಾಲ್ಕು ಅತಿಶಯಗಳು
ತೀರ್ಥಂಕರ ಭಗವಂತರಿಗೆ ದೇವಕೃತ ಹದಿನಾಲ್ಕು ಅತಿಶಯಗಳಾಗುತ್ತವೆ.
1. ಸರ್ವಾರ್ಧ ಮಾಗಧೀ ಭಾಷಾ
2. ಪಾರಸ್ಪರೀಕ ಮೈತ್ರೀ
3. ಹತ್ತು ದಿಕ್ಕುಗಳೂ ನಿರ್ಮಲವಾಗಿರುವುದು
4. ನಿರ್ಮಲ ಆಕಾಶ
5. ವೃಕ್ಷಗಳಲ್ಲಿ ಎಲ್ಲಾ ಋತುಗಳ ಫಲ ಪುಷ್ಪಗಳಿರುವುದು
6. ದರ್ಪಣದಂತೆ ನಿರ್ಮಲವಾದ ಪೃಥ್ವೀ
7. ಮಂದ ಮತ್ತು ಸುಗಂಧಿತ ವಾಯುವು ಬೀಸುವುದು
8. ಭೂಮಿಯು ಕಂಟಕ ರಹಿತವಾಗುವುದು
9. ಆಕಾಶದಲ್ಲಿ ಜಯ ಜಯಕಾರ ಧ್ವನಿ
10. ಗಂಧೋದಕ ವೃಷ್ಟಿ
11. ಎಲ್ಲಾ ಜೀವರಿಗೂ ಪರಮಾನಂದವಾಗುತ್ತದೆ
12. ಸ್ವರ್ಣ ಕಮಲದ ರಚನೆ
13. ಧರ್ಮ ಚಕ್ರವು ಮುಂದೆ ಚಲಿಸುವುದು
14. ಅಷ್ಟ ಮಂಗಲ ದ್ರವ್ಯಗಳು ಪ್ರಭುವಿನ ಮುಂದೆ ಚಲಿಸುವುದು.
ದೇವಕೃತ ಹದಿನಾಲ್ಕು ಅತಿಶಯಗಳು
೧. ಸರ್ವಾರ್ಧ ಮಾಗಧೀ ಭಾಷಾ
ಭಗವಂತರ ಅಮೃತಮಯೀ ವಾಣಿಯು ಸರ್ವಜೀವಿಗಳಿಗೂ ಕಲ್ಯಾಣಿಕಾರಿಯಾಗಿರುತ್ತದೆ. ಹಾಗೂ ಮಾಗಧ ಜಾತಿಯ ದೇವರು ಅದನ್ನು ಎಲ್ಲಾ ಭಾಷೆಗಳಲ್ಲಿಯೂ ಪರಿಣಮಿಸುವಂತೆ ಮಾಡುತ್ತಾರೆ. ಈ ನಿಮಿತ್ತದಿಂದಾಗಿಯೇ ಭಗವಂತರ ವಾಣಿಯ ಲಾಭವನ್ನು ಪಶು ಪಕ್ಷಿಗಳೂ ಸಹ ಪಡೆದುಕೊಳ್ಳುತ್ತವೆ. ಶ್ರುತಸಾಗರಸೂರಿಗಳ ಅನುಸಾರವಾಗಿ ಭಗವಂತನ ಭಗವಂತನ ವಾಣಿಯು ಅರ್ಧ ಮಾಗಧೀ ಮತ್ತು ಅರ್ಧ ಸರ್ವಭಾಷಾತ್ಮಕವಾಗಿ ಇರುತ್ತದೆ. ಆದ್ದರಿಂದಲೂ ಸಹ ಅದನ್ನು ಸರ್ವಾರ್ಧ ಮಾಗಧೀ ಎಂದು ಕರೆಯುತ್ತಾರೆ.
೨. ಪಾರಸ್ಪರೀಕ ಮೈತ್ರಿ
ಭಗವಂತರ ಸಮೀಪಕ್ಕೆ ಬರುವಂತಹ ಪರಸ್ಪರ ಜನ್ಮಜಾತ ವೈರಿಗಳಾದ ಹಾವು, ನವಿಲು, ಮುಂಗುಸಿ ಮುಂತಾದ ಜೀವಗಳೂ ಸಹ ವೈರ / ವಿರೋಧವನ್ನು ತ್ಯಾಗ ಮಾಡಿ ಮೈತ್ರೀ ಭಾವವನ್ನು ಪ್ರಾಪ್ತಮಾಡಿಕೊಳ್ಳುತ್ತವೆ. ಪ್ರೀತಿಂಕರ ಎಂಬ ದೇವರಿನ ದೇವರು ಜನಗಳ ಮನಸ್ಸಿನ ವೈರವನ್ನು ದೂರಮಾಡಿ ಅವರಲ್ಲಿ ಪ್ರೀತಿ ಭಾವವನ್ನು ಉತ್ಪನ್ನ ಮಾಡುತ್ತಾರೆ.
ದೇವಕೃತ ಹದಿನಾಲ್ಕು ಅತಿಶಯಗಳು
೩. ಹತ್ತು ದಿಕ್ಕುಗಳೂ ನಿರ್ಮಲವಾಗಿರುವುದು
ಹತ್ತು ದಿಕ್ಕುಗಳೂ ಹೊಗೆ, ಧೂಳು, ಮತ್ತು ಅಂಧಕಾರ ರಹಿತವಾಗಿರುತ್ತದೆ.
೪. ನಿರ್ಮಲ ಆಕಾಶ
ಆಕಾಶವು ಮೇಘ ಪಟಲ ರಹಿತವಾಗಿರುತ್ತದೆ.
೫. ವೃಕ್ಷಗಳಲ್ಲಿ ಎಲ್ಲಾ ಋತುಗಳ ಫಲ ಪುಷ್ಪಗಳಿರುವುದು
ಭಗವಂತರ ವಿಹಾರ ಕ್ಷೇತ್ರಗಳಲ್ಲಿ ಪೃಥ್ವಿಯು ಧನ ಧಾನ್ಯಗಳಿಂದ ಪರಿಪೂರ್ಣವಾಗಿರುತ್ತದೆ. ಆರು ಋತುಗಳ ಫಲ ಪುಷ್ಪಗಳು ಒಂದೇ ಸಾರಿ ಉತ್ಪನ್ನವಾಗುತ್ತವೆ. ಈ ವಿಷಯವಾಗಿ ಪೂಜ್ಯಪಾದ ಸ್ವಾಮಿಗಳು ಹೀಗೆ ಹೇಳುತ್ತಾರೆ – ಭಗವಂತರ ವಿಹಾರದಿಂದಾಗಿ ಪೃಥ್ವಿಯು / ಪ್ರಕೃತಿಯು ಎಷ್ಟೊಂದು ಪುಲಕಿತಳಾಗುತ್ತಾಳೆಂದರೆ ಹರ್ಷದಿಂದ ಭಗವಂತರ ವೈಭವವನ್ನು ನೋಡುತ್ತಿರುವಂತೆ ಕಾಣುತ್ತಾಳೆ.
೬. ದರ್ಪಣದಂತೆ ನಿರ್ಮಲವಾದ ಪೃಥ್ವೀ
ಭಗವಂತರ ವಿಹಾರ ಸಮಯದಲ್ಲಿ ದೇವಗಣವು ಒಂದು ಯೋಜನದವರೆಗೆ ಭೂಮಿಯನ್ನು ಕನ್ನಡಿಯಂತೆ ಅತ್ಯಂತ ಸ್ವಚ್ಛವೂ , ನಿರ್ಮಲವೂ , ರತ್ನಮಯವೂ ಮತ್ತು ಮನೋಹರವನ್ನಾಗಿ ಮಾಡುತ್ತದೆ.
ದೇವಕೃತ ಹದಿನಾಲ್ಕು ಅತಿಶಯಗಳು
೭. ಮಂದ ಮತ್ತು ಸುಗಂಧಿತ ವಾಯುವು ಬೀಸುವುದು
ಎಲ್ಲಿ ಭಗವಂತರ ವಿಹಾರವು ಆಗುತ್ತದೆಯೋ , ಅಲ್ಲಿ ಮಂದ – ಮಂದ ಸುಗಂಧಿತ ವಾಯು ( ಗಾಳಿ ) ಬೀಸುವುದು. ಅದರಿಂದ ಭಗವಂತರ ಆಗಮನದ ಸೂಚನೆ ಕಂಡುಬರುವುದು.
೮. ಭೂಮಿಯು ಕಂಟಕ ರಹಿತವಾಗಿರುವುದು
ಮಂದ ಮತ್ತು ಸುಗಂಧಿತ ವಾಯುವು ಬೀಸುವುದರಿಂದ ಭಗವಂತರ ವಿಹಾರವು ಎಲ್ಲಿ ಆಗುತ್ತದೆಯೋ , ಅಲ್ಲಿ ಒಂದು ಯೋನದವರೆಗಿನ ಪೃಥ್ವಿಯು ಧೂಳು, ಕಂಟಕ, ತೃಣ, ಕ್ರಿಮಿಕೀಟ, ಮರಳು ಮುಂತಾದ ಚುಚ್ಚುವ ಪದಾರ್ಥಗಳಿಂದ ರಹಿತವಾಗುತ್ತದೆ.
೯. ಆಕಾಶದಲ್ಲಿ ಜಯಜಯಕಾರ ಧ್ವನಿ
ಭಗವಂತರ ವಿಹಾರ ಕಾಲದಲ್ಲಿ ದೇವತೆಗಳು ಮತ್ತು ಮನುಷ್ಯರು ಮಾಡುವ ಜಯ ಜಯಕಾರ ಧ್ವನಿಯಿಂದ ಆಕಾಶವೆಲ್ಲವೂ ನಿನಾದಿಸುತ್ತದೆ / ಪ್ರತಿಧ್ವನಿಸುತ್ತದೆ.
೧೦. ಗಂಧೋದಕ ವೃಷ್ಟಿ
ಮೇಘಕುಮಾರ ಜಾತಿಯ ದೇವರು ಭಗವಂತರ ಮುಂದೆ – ಮುಂದೆ ಸುಗಂಧಿತ ಜಲವನ್ನು ವರ್ಷಿಸುತ್ತಾರೆ / ಸುರಿಸುವರು.
೧೧. ಎಲ್ಲಾ ಜೀವರಿಗೂ ಪರಮಾನಂದವಾಗುತ್ತದೆ
ಭಗವಂತರ ವಿಹಾರ ಕಾಲದಲ್ಲಿ ಸಮಸ್ತ ಜೀವರಿಗೂ ಪರಮಾನಂದವೂ ಉಕ್ಕಿಬರುತ್ತದೆ.
ದೇವಕೃತ ಹದಿನಾಲ್ಕು ಅತಿಶಯಗಳು
೧೨. ಸ್ವರ್ಣ ಕಮಲದ ರಚನೆ
ಭಗವಂತರ ವಿಹಾರ ಸಮಯದಲ್ಲಿ ಅವರ ಚರಣಗಳ ಕೆಳಗೆ , ಮುಂದೆ – ಹಿಂದೆ ನಾಲ್ಕು ದಿಕ್ಕಿನಲ್ಲಿಯೂ ಏಳು – ಏಳು ಸ್ವರ್ಣ ಕಮಲಗಳನ್ನು ದೇವತೆಗಳು ರಚಿಸುತ್ತಾರೆ. ಕ್ರಿಯಾಕಲಾಪಕ್ಕೆ ಅನುಸಾರವಾಗಿ ಅಷ್ಟದಿಕ್ಕುಗಳಲ್ಲಿಯೂ ಮತ್ತು ಅದರ ಅಷ್ಟ ಅಂತರಾಲದಲ್ಲಿಯೂ ಏಳು – ಏಳು ಕಮಲಗಳು ರಚನೆಯಾಗುವುದರಿಂದ ೧೧೨ ಹಾಗೂ ಹದಿನಾರು ಸ್ಥಾನಗಳ ಹದಿನಾರು ಅಂತರಾಗಳಲ್ಲಿಯೂ ಹಿಂದಿನಂತೆಯೇ ಏಳು – ಏಳು ಈ ಪ್ರಕಾರವಾಗಿ ೧೧೨ + ೧೧೨ + ೧ = ೨೨೫ ಕಮಲಗಳನ್ನು ದೇವತೆಗಳು ರಚಿಸುತ್ತಾರೆ.
ವಿಹಾರದ ಮುದ್ರೆ
ಈ ಪ್ರಸಂಗದಿಂದ ಸ್ಪಷ್ಟವಾಗುವುದೇನೆಂದರೆ ಭಗವಂತರ ವಿಹಾರವು ಪದ್ಮಾಸನ ಮುದ್ರೆಯಿಂದ ಆಗುವುದಿಲ್ಲ. ಏಕೆಂದರೆ ಅವರು ಕಾಲಿಡುವ ಸ್ಥಳದಲ್ಲಿಯೇ ಒಂದು ಕಮಲದ ರಚನೆಯಾಗುತ್ತದೆ. ಪದ್ಮಾಸನ ಮುದ್ರೆಯಲ್ಲಿ ಅವರು ಗಮನ ಮಾಡುತ್ತಿದ್ದರೆ ಚರಣವನ್ನಿಡುವ ಸ್ಥಳದಲ್ಲಿ ಒಂದು ಕಮಲದ ರಚನೆಯಾಗುತ್ತಿರಲಿಲ್ಲ. ಆಚಾರ್ಯ ಮಾನತುಂಗರೂ ಸಹ ಹೀಗೆಯೇ ಹೇಳಿದ್ದಾರೆ – ” ಪಾದೌ ಪದಾನಿ ತವ ಯತ್ರ ಜಿನೇಂದ್ರದತ್ತಃ ಪದ್ಮಾನಿ ತತ್ರ ವಿಬುದಾಃ ಪರಿಕಲ್ಪಯಂತಿ ”
ಕಮಲವು ಲಕ್ಷ್ಮೀ ಮತ್ತು ವೈಭವದ ಪ್ರತೀಕವಾಗಿದೆ. ಲಕ್ಷ್ಮೀಯು ಕಮಲಾಸನದಲ್ಲಿ ವಿರಾಜಿಸುತ್ತಾಳೆ. ಭಗವಂತರ ಪ್ರತಿಯೊಂದು ಹೆಜ್ಜೆಯಲ್ಲಿಯೂ ಕಮಲಗಳ ರಚನೆಯಾಗುವುದೆಂದರೆ ಅವರ ಶ್ರೀ ಚರಣಗಳಲ್ಲಿ ಪ್ರಪಂಚದ ಸಮಸ್ತ ವೈಭವವವನ್ನು ನೀವಾಳಿಸಿ ಬಿಸಾಡುವುದರ ಪ್ರತೀಕವಾಗಿದೆ. ಹಾಗೂ ಭಗವಂತರು ಅವುಗಳ ಮೇಲೆ ನಾಲ್ಕು ಅಂಗುಲದಷ್ಟು ಮೇಲೆ ವಿಹಾರ ಮಾಡುವುದು ಅವರ ಅಸಂಪೃಕ್ತತೆಯ ಪ್ರತೀಕವಾಗಿದೆ.
ದೇವಕೃತ ಹದಿನಾಲ್ಕು ಅತಿಶಯಗಳು
೧೩. ಧರ್ಮಚಕ್ರವು ಮುಂದೆ ಚಲಿಸುವುದು
ಭಗವಂತರ ಮುಂದೆ ಸೂರ್ಯನಂತೆ ದೇದಿಪ್ಯಮಾನವಾದ ಸಹಸ್ರ ಅರಗಳುಳ್ಳ ಧರ್ಮಚಕ್ರವು ಚಲಿಸುತ್ತದೆ. ಅದನ್ನು ಯಕ್ಷೇಂದ್ರನು ತನ್ನ ಮಸ್ತಕದ ಮೇಲಿಟ್ಟುಕೊಂಡು ನಡೆಯುತ್ತಾನೆ. ಭಗವಂತರ ಮುಂದೆ ಧರ್ಮಚಕ್ರವು ಹೋಗುವುದೆಂದರೆ , ಅದು ಅವರ ಇಂದ್ರಿಯ ಜಯದ ಪ್ರತೀಕವಾಗಿದೆ. ಹೇಗೆ ಚಕ್ರವರ್ತಿಯ ಚಕ್ರರತ್ನವು ಸಮಸ್ತ ರಾಜರನ್ನು ನಮ್ರೀಬೂತರನ್ನಾಗಿ ಮಾಡಿ, ಚಕ್ರವರ್ತಿಯ ಸಾಮ್ರಾಜ್ಯವನ್ನು ಏಕಛತ್ರವನ್ನಾಗಿ ಮಾಡುತ್ತದೆಯೋ , ಹಾಗೆಯೇ ಧರ್ಮಚಕ್ರವೂ ಸಹ ತಮ್ಮ ಸಂಪೂರ್ಣ ವಿಕಾರಗಳನ್ನು ಗೆದ್ದು ತಮ್ಮ ಸಂಪೂರ್ಣ ಆತ್ಮ ಸಾಮ್ರಾಜ್ಯವನ್ನು ಸೂಚಿಸುವಂತರಾಗಿರುತ್ತದೆ.
೧೪. ಅಷ್ಟ ಮಂಗಳ ದ್ರವ್ಯಗಳು ಪ್ರಭುವಿನ ಮುಂದೆ ಚಲಿಸುವುದು
ವಿಹಾರ ಕಾಲದಲ್ಲಿ ಭಗವಂತರ ಮುಂದೆ ಧ್ವಜ ಸಹಿತವಾಗಿ ಅಷ್ಟಮಂಗಲ ದ್ರವ್ಯಗಳು ಚಲಿಸುತ್ತವೆ. ೧. ಧ್ವಜ, ೨. ಭೃಂಗಾರ, ೩. ಕಲಶ, ೪. ದರ್ಪಣ, ೫. ಬೀಸಣಿಗೆ, ೬. ಚಾಮರ, ೭. ಛತ್ರ, ೮. ಸುಪ್ರತಿಷ್ಠ . ಇವು ಅಷ್ಟಮಂಗಲ ದ್ರವ್ಯಗಳು ಲೋಕ ಮಂಗಲವನ್ನು ಸೂಚಿಸುತ್ತದೆ.
ಈ ಹದಿನಾಲ್ಕು ಅತಿಶಯಗಳನ್ನು ಕೇವಲಜ್ಞಾನವಾದ ಮೇಲೆ ಭಕ್ತಿಯ ರಾಗದಿಂದ ತುಂಬಿದ ( ರಂಜಿತರಾದ ) ದೇವತೆಗಳು ಮಾಡುತ್ತಾರೆ…