ದಶ ಧರ್ಮ

ಮುನಿ_ಆಚಾರ

ದಶ_ಲಕ್ಷಣ

ಆಗಮಗಳಲ್ಲಿ ಮುನಿಗಳ ಆಚಾರಂಗವನ್ನು ಕೆಳಕಂಡಂತೆ ಹೇಳಿದ್ದಾರೆ – 28 ಮೂಲ ಗುಣಗಳು, 10 ಧರ್ಮಗಳು, ಮೂರು ಗುಪ್ತಿಗಳು, 22 ಪರೀಷಹಗಳು, 12 ಅನುಪ್ರೇಕ್ಷೆಗಳು, 12 ತಪಗಳು, ಧ್ಯಾನ ಮತ್ತು ಮಾರಣಾಂತಿಕ ಸಲ್ಲೇಖನಾ. ಇವುಗಳಲ್ಲಿ 12 ಅನುಪ್ರೇಕ್ಷೆಗಳು ಮತ್ತು ಸಲ್ಲೇಖನಾ ಶ್ರಾವಕ ಮತ್ತು ಮುನಿಗಳು ಇಬ್ಬರಿಗೂ ಅವಶ್ಯಕವಾದವುಗಳು. ಆದ್ದರಿಂದ ಇವುಗಳ ವರ್ಣನೆಯನ್ನು ಶ್ರಾವಕಾಚಾರದ ಅಂತರ್ಗತ ಮಾಡಲಾಗಿದೆ. ಈ ಖಂಡದಲ್ಲಿ ಮುನಿ ಆಚಾರದ ಉಳಿದ ಅಂಗಗಳ ಮೇಲೆ ಬೆಳಕು ಬೀರುವ ಸೂತ್ರಗಳ ನಿರೂಪಣೆಯನ್ನು ಮಾಡಲಾಗುತ್ತದೆ.

ಹತ್ತು_ಧರ್ಮ

ಯತಿ ಧರ್ಮವು ಹತ್ತು ವಿಧವಾಗಿದೆ.

ಮುನಿಗಳ ಧರ್ಮವನ್ನು ಯತಿ ಧರ್ಮವೆಂದು ಹೇಳುತ್ತಾರೆ. ಯತಿ ಧರ್ಮವು‌ ಹತ್ತು ವಿಧವಾಗಿದೆ – ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಅರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ‌ ಅಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ. ಈ ಉತ್ತಮ ದಶ ಧರ್ಮಗಳು ಆತ್ಮನ ಭಾವನಾತ್ಮಕ ಪರಿವರ್ತನೆಯಿಂದ ಉತ್ಪನ್ನವಾದ ವಿಶುದ್ಧ ಪರಿಣಾಮಗಳು. ಇವುಗಳು ಆತ್ಮನನ್ನು ಅಶುಭ ಕರ್ಮಗಳ ಬಂಧದಿಂದ ತಡೆಯುವ ಕಾರಣದಿಂದ ಸಂವರಕ್ಕೆ ಕಾರಣವಾಗಿದೆ. ಖ್ಯಾತಿ, ಪೂಜೆ ಮುಂತಾದವುಗಳಿಂದ ನಿರಪೇಕ್ಷವಾದ ಕಾರಣಗಳಿಂದ ಇವುಗಳಿಗೆ ಉತ್ತಮವೆಂಬ ವಿಶೇಷಣವನ್ನು ಕೊಡಲಾಗಿದೆ.

ಉತ್ತಮ_ಕ್ಷಮಾ

ಕ್ರೋಧಕ್ಕೆ ಕಾರಣ ಉಂಟಾದರೂ ಸಹ ಕ್ರೋಧವನ್ನು ಮಾಡದೆ ಇರುವುದು ಕ್ಷಮೆಯಾಗಿದೆ. ಕ್ಷಮೆ ಹೇಡಿತನವಲ್ಲ. ಸಮರ್ಥನಾದರೂ ಸಹ ಕ್ರೋಧವನ್ನು ಉಂಟು ಮಾಡುವ ನಿಂದಾ, ಅಪಮಾನ, ಬೈಗುಳ, ಗಲೀಜು ಮಾತುಗಳು ಮುಂತಾದ ಪ್ರತಿಕೂಲ ವ್ಯವಹಾರಗಳಾದರೂ ಮನವು ಕಲುಷಿತವಾಗದಿರುವುದು ಉತ್ತಮ ಕ್ಷಮೆಯಾಗಿದೆ.

ಉತ್ತಮ_ಮಾರ್ಧವ

ಚಿತ್ತದಲ್ಲಿ ಮೃದುತ್ವ ಮತ್ತು ವ್ಯವಹಾರದಲ್ಲಿ ವಿನಮೃತಾ ಇದು ಮಾರ್ಧವ ಗುಣವಾಗಿದೆ. ಇದು ಮಾನ ಕಷಾಯದ ಅಭಾವದಲ್ಲಿ ಪ್ರಕಟವಾಗುತ್ತದೆ. ಜಾತಿ-ಕುಲ, ಜ್ಞಾನ, ತಪ, ವೈಭವ, ಪ್ರಭುತ್ವ, ಮತ್ತು ಐಶ್ವರ್ಯ ಸಂಬಂಧೀ ಅಭಿಮಾನವನ್ನು ಮದವೆನ್ನುತ್ತಾರೆ. ಇವುಗಳು ವಿನಶ್ವರವಾದುದೆಂದು ತಿಳಿದು ಮಾನ ಕಷಾಯವನ್ನು ಗೆಲ್ಲುವುದು‌‌ ಉತ್ತಮ ಮಾರ್ದವವೆನಿಸಿಕೊಳ್ಳುತ್ತದೆ.

ಉತ್ತಮ_ಆರ್ಜವ

ಆರ್ಜವದ ಅರ್ಥವೆಂದರೆ ಋಜುತಾ ಅಥವಾ ಸರಳತೆ ಎಂದರೆ ಒಳಗೆ-ಹೊರಗೆ ಒಂದಾಗಿರುವುದು. ಮನದಲ್ಲಿ ಒಂದು, ವಚನದಲ್ಲಿ ಒಂದು ಮತ್ತು ಮಾಡುವುದು ಮತ್ತೊಂದು, ಈ ಪ್ರವೃತ್ತಿ ಕುಟಿಲವಾದದ್ದು ಅಥವಾ ವಾಮಾಚಾರವಾಗಿದೆ. ಈ ಮಾಯಾ ಕಷಾಯವನ್ನು ಗೆದ್ದು ಮನ, ವಚನ ಮತ್ತು ಕಾಯದ ಕ್ರಿಯೆಗಳನ್ನು ಒಂದೇ ರೀತಿಯಾಗಿ ಇಟ್ಟುಕೊಳ್ಳುವುದು ಉತ್ತಮ ಆರ್ಜವವಾಗಿದೆ.

ಉತ್ತಮ_ಶೌಚ

ಶೌಚದ ಅರ್ಥವೆಂದರೆ ಪವಿತ್ರತೆ – ಶುದ್ಧತೆ. ಮದ ಮತ್ತು ಕ್ರೋಧಗಳನ್ನು ಹೆಚ್ಚಿಸುವ ಎಷ್ಟು ದುರ್ಭಾವನೆಗಳಿವೆಯೋ, ಅವುಗಳಲ್ಲಿ ಲೋಭವು ಅತ್ಯಂತ ಪ್ರಬಲವಾದದ್ದು. ಈ ಲೋಕದ ಮೇಲೆ ಹಿಡಿತವನ್ನು ಸಾಧಿಸುವುದೇ ಅಥವಾ ಈ ಲಾಭವನ್ನು ಗೆಲ್ಲುವುದೇ ಉತ್ತಮ ಶೌಚವಾಗಿದೆ.

ಉತ್ತಮ_ಸತ್ಯ

ಬೇರೆಯವರ ಮನಸ್ಸಿಗೆ ಸಂತಾಪವನ್ನು ಉಂಟು ಮಾಡುವ, ನಿಷ್ಠುರ ಮತ್ತು ಕರ್ಕಶ, ಕಠೋರ ವಚನಗಳನ್ನು ತ್ಯಾಗ ಮಾಡಿ, ಎಲ್ಲರಿಗೂ ಹಿತಕಾರಿಯಾದ ಪ್ರಿಯ ವಚನಗಳನ್ನು ಆಡುವುದು ಉತ್ತಮ ಸತ್ಯ ಧತ್ಮವಾಗಿದೆ. ಅಪ್ರಿಯವಾದ ಸತ್ಯವೂ ಸಹ ಅಸತ್ಯದ ಪರಿಧಿಯಲ್ಲಿಯೇ ಸೇರುತ್ತದೆ.

ಉತ್ತಮ_ಸಂಯಮ

ಸಂಯಮದ ಅರ್ಥವೆಂದರೆ ಆತ್ಮ ನಿಯಂತ್ರಣ, ಐದು ಇಂದ್ರಿಯಗಳ ಪ್ರವೃತ್ತಿಗಳ ಮೇಲೆ ಅಂಕುಶವನ್ನು ಹಾಕಿ ಅವುಗಳ ಸ್ವೇಚ್ಛಾ ಮತ್ತು ವ್ಯರ್ಥ ಪ್ರವೃತ್ತಿಗಳ ಮೇಲೆ ನಿಯಂತ್ರಣವಿರಿಸಿಕೊಳ್ಳುವುದು ಉತ್ತಮ ಸಂಯಮವಾಗಿದೆ.

ಉತ್ತಮ_ತಪ

ಇಚ್ಛೆಗಳನ್ನು ನಿರೋಧಿಸುವುದು ತಪವಾಗಿದೆ. ವಿಷಯ ಕಷಾಯಗಳನ್ನು ನಿಗ್ರಹಿಸಿ, ಹನ್ನೆರಡು ರೀತಿಯ ತಪದಲ್ಲಿ ಮನಸ್ಸನ್ನು ತೊಡಗಿಸುವುದು ಉತ್ತಮ ತಾಪ ಧರ್ಮವಾಗಿದೆ. ಧರ್ಮದ ಮುಖ್ಯ ಉದ್ದೇಶವೆಂದರೆ ಚಿತ್ತದ ವೃತ್ತಿಗಳನ್ನು ಉನ್ಮೂಲನ ಮಾಡುವುದು ಅಥವಾ ಬೇರುಸಹಿತ ಕಿತ್ತೆಸೆಯುವುದು.

ಉತ್ತಮ_ತ್ಯಾಗ

ಪರಿಗ್ರಹಗಳ ನಿವೃತ್ತಿಯನ್ನು ತ್ಯಾಗವನ್ನು ಹೇಳುತ್ತಾರೆ. ಯಾವ ಪ್ರತ್ಯುಪಕಾರವನ್ನು ಅಪೇಕ್ಷಿಸದೇ ತನ್ನಲ್ಲಿರುವ ಜ್ಞಾನ ಮುಂತಾದ ಸಂಪತ್ತನ್ನು ಬೇರೆಯವರ ಹಿತಕ್ಕಾಗಿ ಮತ್ತು ಕಲ್ಯಾಣಕ್ಕಾಗಿ ಉಪಯೋಗಿಸುವುದು ಉತ್ತಮ ತ್ಯಾಗವಾಗಿದೆ.

ಉತ್ತಮ_ಅಕಿಂಚನ್ಯ

ಮಮತ್ವದ ಪರಿತ್ಯಾಗವನ್ನು ಅಕಿಂಚನ್ಯವೆನ್ನುತ್ತಾರೆ. ಅಕಿಂಚನ್ಯದ ಅರ್ಥವೆಂದರೆ ನನ್ನದೆಂಬುದು ಏನೂ ಇಲ್ಲ. ಮನೆ, ಮಠ, ಧನ – ಸಂಪತ್ತು, ಬಂಧು-ಬಾಂಧವರು ಮತ್ತು ಶರೀರವು ಸಹ ನನ್ನದಲ್ಲ. ಈ ರೀತಿಯ ಅನಾಸಕ್ತ ಭಾವವು ಉತ್ಪನ್ನವಾಗುವುದು ಉತ್ತಮ ಅಕಿಂಚನ್ಯ ಧರ್ಮವಾಗಿದೆ. ಎಲ್ಲವನ್ನೂ ತ್ಯಾಗ ಮಾಡಿದ ನಂತರವೂ ಆ ತ್ಯಾಗದ ಮೇಲೆ ಮಹತ್ವ ಉಳಿಯಬಹುದು, ಅಕಿಂಚನ್ಯ ಧರ್ಮದಲ್ಲಿ ಆ ತ್ಯಾಗದ ಬಗ್ಗೆ ಉಂಟಾಗುವ ಮಮತ್ವವನ್ನೂ ಸಹ ಬಿಡಿಸಲಾಗುತ್ತದೆ.

ಉತ್ತಮ_ಬ್ರಹ್ಮಚರ್ಯ

ಬ್ರಹ್ಮ ಎಂದರೆ ಆತ್ಮನಲ್ಲಿ ರಮಣ ಮಾಡುವುದು ಬ್ರಹ್ಮಚರ್ಯವಾಗಿದೆ. ರಾಗೋತ್ಪಾದನೆಯ ಸಾಧನೆಗಳಿದ್ದರೂ ಸಹಾ ಅವೆಲ್ಲವುಗಳಿಂದ ವಿರಕ್ತನಾಗಿ ಆತ್ಮೋನ್ಮುಖಿಯಾಗುವುದು ಉತ್ತಮ ಬ್ರಹ್ಮಚರ್ಯವಾಗಿದೆ.

ಈ ರೀತಿಯಾಗಿ ಈ ಹತ್ತು ಧರ್ಮಗಳನ್ನು ಮುನಿಧರ್ಮ ಅಥವಾ ಯತಿ ಧರ್ಮವೆಂದು ಹೇಳುತ್ತಾರೆ. ವಾಸ್ತವವಾಗಿ ಧರ್ಮ ಹತ್ತಲ್ಲ ಒಂದೇ ಇರುವುದು. ಇವು ಧರ್ಮದ ಹತ್ತು ಲಕ್ಷಣಗಳು. ಇವುಗಳು ಆತ್ಮನ ಕ್ರೋಧಾದಿಗಳ ಅಭಾವದಲ್ಲಿ ಪ್ರಕಟವಾಗುತ್ತವೆ. ಆದ್ದರಿಂದ ಇವುಗಳನ್ನು ದಶಲಕ್ಷಣ ಧರ್ಮವೆಂದೂ ಸಹ ಕರೆಯುತ್ತಾರೆ.

Translate »
error: Content is protected !!