ನಾಕೋಪಾಮಾನಶೈಲ ಕನಕಗಿರಿ

ಕರ್ನಾಟಕವು ಜೈನಧರ್ಮ ಮತ್ತು ಸಂಸ್ಕøತಿಯನ್ನುಬೆಳಸಿದ ಪಾವನಭೂಮಿಯಾಗಿದೆ. ಕರುನಾಡಿನ ಉದ್ದಗಲಕ್ಕೂ ಇಂದಿಗೂ ಬಹಳ ಪ್ರಾಚೀನ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನಲೆಯನ್ನು ಹೊಂದಿದ ಹಲವು ಜೈನಕ್ಷೇತ್ರಗಳು ಕಾಣಸಿಗುತ್ತವೆ. ಕರ್ನಾಟಕವು
ಕ್ರಿ.ಶ.3ನೇ ಶತಮಾನಕ್ಕಿಂತಲೂ ಹಿಂದಿನಿಂದಲೂ ಜೈನಧರ್ಮವನ್ನು ಪೋಷಿಸಿಕೊಂಡು ಬಂದಿದೆ ಎಂಬುದಕ್ಕೆ ಈ ಕ್ಷೇತ್ರಗಳಲ್ಲಿ ದೊರೆತಿರುವ ಶಾಸನಗಳ ಉಲ್ಲೇಖಗಳು ಸಾಕ್ಷ್ಯವನ್ನು ನೀಡುತ್ತವೆ. ಕರ್ನಾಟಕದ ಉತ್ತರದ ಬೀದರ್ ಜಿಲ್ಲೆಯಿಂದ ಹಿಡಿದೂ ದಕ್ಷಿಣದ ಚಾಮರಾಜನಗರ ಜಿಲ್ಲೆಯವರೆಗೂ ಜೈನಕ್ಷೇತ್ರಗಳು ಕಾಣಸಿಗುತ್ತವೆ. ಇಂತಹ ಪ್ರಾಚೀನ ಜೈನ ಕ್ಷೇತ್ರಗಳಲ್ಲೊಂದು ಚಾಮರಾಜನಗರ ಜಿಲ್ಲೆಯ ಕನಕಗಿರಿ.

“ನಾಕೋಪಮಾನ ಶೈಲ” ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವ ಕನಕಗಿರಿಯನ್ನು ಕನಕಾದ್ರಿ, ಮಲಯಾದ್ರಿ ಎಂದು ಕರೆಯಲಾಗುತ್ತಿತ್ತೆಂದು ಹಲವು ಗ್ರಂಥಗಳು ಉಲ್ಲೇಖಿಸಿವೆ. ಇದು ಮೈಸೂರಿನಿಂದ ಸುಮಾರು 45 ಕಿ,ಮಿ ದೂರದಲ್ಲಿ, ಕೌಲಂದೆ ಗ್ರಾಮದಿಂದ 15 ಕಿ.ಮೀ.ದೂರದಲ್ಲಿ ಚಾಮರಾಜನಗರ ದಿಂದ 15 ಕಿ.ಮೀ ದೂರದಲ್ಲಿ, ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಗೂರುನಿಂದ 10 ಕಿ,ಮೀ,ದೂರದಲ್ಲಿ ಕಾಣಸಿಗುವ ಮಲೆಯೂರು ಗ್ರಾಮದ ಸಮೀಪ ಕಂಡುಬರುವ ಸುಮಾರು 660 ಮೀ ಎತ್ತರದ ಶಿಲಾಮಯ ಬಂಡೆಗಳಿಂದ ಆವೃತವಾದ ಬೆಟ್ಟದ ಪ್ರದೇಶವೇ ಈ ಕನಕಗಿರಿ ಕ್ಷೇತ್ರ.

ಪ್ರಾಚೀನ ಹೇಮಾಂಗ ದೇಶವೆಂದು ಕರೆಯಲಾಗುತ್ತಿದ್ದ ಭಾಗವೇ ಈಗಿನ ಕನಕಗಿರಿಯ ಪ್ರದೇಶವಾಗಿತ್ತು. ಈ ಪ್ರದೇಶವನ್ನು ಜೀವಂದರಕುಮಾರ ಎಂಬ ರಾಜನು ಆಳ್ವಿಕೆ ನೆಡಸುತ್ತಿದ್ದ ಬಗ್ಗೆ ಜೈನಾಗಮಗಳು ಉಲ್ಲೇಖಿಸುತ್ತವೆ.ಇಲ್ಲಿಗೆ ಭಗವಾನ್ ಮಹಾವೀರಸ್ವಾಮಿಯ ಸಮವಸರಣ ಸಭೆಯು ದಕ್ಷಿಣದ ಹೇಮಾಂಗ ದೇಶಕ್ಕೆ ವಿಹಾರ ಬಂದಾಗ ಇಲ್ಲಿಯೇ ಧರ್ಮಸಭೆಯು ನಡೆದಿತ್ತು. ಆಗ ರಾಜ ಜೀವಂದರನು ವೈರಾಗ್ಯ ಪರವಶನಾಗಿ ಸನ್ಯಾಸ ದೀಕ್ಷೆ ಪಡೆದನೆಂದು ಪುರಾಣಗಳಿಂದ ತಿಳಿಯುತ್ತದೆ.

ಜೈನಾಚಾರ್ಯ ಸಿಂಹನಂದಿಗಳಿಂದ ಪ್ರೇರಣೆಗೊಂಡು ಗಂಗ ಸಾಮ್ರಾಜ್ಯ ಸ್ಥಾಪನೆಯಾದ ನಂತರದಲ್ಲಿ ಗಂಗರಾಜರ ಭಾಗವಾಗಿದ್ದ ಕನಕಗಿರಿಯು ಪ್ರಸಿದ್ದ ಜೈನ ಕ್ಷೇತ್ರವಾಗಿ ಬೆಳಗಿತು. ಗಂಗರಾಜರ ಕಾಲದಲ್ಲಿ ಇಲ್ಲಿ ಒಂದು ಭಗವಾನ್ ಪಾಶ್ರ್ವನಾಥರ ಶಿಲಾಮಯ ಜೈನಬಸದಿ ನಿರ್ಮಾಣವಾಯಿತು. ನಂತರದಲ್ಲಿ ಈ ಭಾಗವು ಹೊಯ್ಸಳರಾಜರ ಆಳ್ವಿಕೆಗೆ ಓಳಪಟ್ಟಿತು. ಒಮ್ಮೆ ಪ್ರಸಿದ್ಧ ಹೊಯ್ಸಳರಾಜ ಬಲ್ಲಾಳರಾಯನು ಚೋಳರೊಡನೆ ಯುದ್ದಮಾಡುವುದಕ್ಕಿಂತ ಮುಂಚಿತವಾಗಿ ಈ ಕ್ಷೇತ್ರ ದರ್ಶನಮಾಡಿದ ನಂತರದಲ್ಲಿ ಯುದ್ಧ ಕೈಗೊಂಡನಂತೆ,ಮುಂದೆ ಅವನಿಗೆ ಯುದ್ಧದಲ್ಲಿ ವಿಜಯದೊರಕಿತೆಂದು ಅಲ್ಲಿಂದ ಮುಂದೆ ಇಲ್ಲಿನ ಪಾಶ್ರ್ವನಾಥನನ್ನು ‘ವಿಜಯಪಾಶ್ರ್ವನಾಥ’ ಎಂದು ಕರೆದನೆಂದು ಹೇಳಲಾಗುತ್ತದೆ. ಇ ಈ ಬಸದಿಯು 350 ಮಟ್ಟಿಲುಗಳುಳ್ಳ ಎತ್ತರವಾದ ಶಿಲಾಮಯ ಬೆಟ್ಟದ ಮೇಲೆ ಕಂಗೊಳಿಸುತ್ತದೆ. ಬಸದಿಯ ಸುತ್ತ ಪ್ರಾಕಾರವಿದ್ದು ಪೂರ್ಣ ಸ್ಥಳೀಯ ಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದೆ. ಬಸದಿಯು ನವರಂಗ, ಸುಖನಾಸಿ, ಗರ್ಭಗುಡಿಯನ್ನು ಹೊಂದಿದೆ. ಬೆಟ್ಟದ ಮೇಲೆ ನಾಗದೇವತೆಯ ವಿಗ್ರಹಗಳು, ಪಾಶ್ರ್ವನಾಥರ ಯಕ್ಷ ಧರಣೇಂದ್ರಯಕ್ಷ, ಮತ್ತು ಪದ್ಮಾವತಿಯ ವಿಗ್ರಹಗಳು ಕಂಡುಬರುತ್ತವೆ. ಬೆಟ್ಟದ ಮತ್ತೊಂದೆಡೆಗೆ ಜೈನರ 24 ತೀರ್ಥಂಕರರ ಪಾದುಕೆಯುಳ್ಳ ಕೂಟಗಳು ಸಾಲಾಗಿ ಕಂಡುಬರುತ್ತವೆ. ಇದು ಉತ್ತರ ಭಾರತದ ಸಮ್ಮೇದ ಶಿಖರಜಿಯನ್ನು ದರ್ಶನಮಾಡಿದಷ್ಟೆ ಅನುಭವವನ್ನು ಉಂಟುಮಾಡುತ್ತದೆ. ಹಾಗೂ ಇಲ್ಲಿ ಬೃಹತ್ ಬಂಡೆಯ ಮೇಲೆ ತೀರ್ಥಂಕರರ ಉಬ್ಬುಶಿಲ್ಪಗಳು ಕಂಡುಬರುತ್ತವೆ. ಇಲ್ಲಿ ಪಾಶ್ರ್ವನಾಥರ ಹಾಗೂ ಮಾತೆ ಪದ್ಮಾವತಿಯ ಉಬ್ಬುಶಿಲ್ಪ ಮನೋಜ್ಞವಾಗಿವೆ. ಈ ಗುಡ್ಡವನ್ನು ಉರಿಸಿಂಗಮ್ಮನ ಬೆಟ್ಟ ಎಂದು ಸ್ಥಳಿಯರು ಕರೆಯುತ್ತಾರೆ.ಊರಿಗೆ ಮಳೆ ಬರದೆ ಬರಗಾಲ ಬಂದಾಗ ಈ ಉಬ್ಬುಶಿಲ್ಪಗಳಿಗೆ ಪೂಜೆಮಾಡಿದ ಮರುಕ್ಷಣದಲ್ಲಿ ಮಳೆ ಬರುತ್ತದೆ ಎಂಬ ಸ್ಥಳಿಯರ ಹೇಳಿಕೆಯಾಗಿದೆ.ಇಲ್ಲಿ 25ಕ್ಕೂ ಹೆಚ್ಚು ಶಿಲಾಶಾಸನಗಳು ಕಾಣಸಿಗುತ್ತವೆ. ಅಲ್ಲದೇ ಇಲ್ಲಿನ ಬೆಟ್ಟದಲ್ಲಿ ಹಲವು ಕಟ್ಟೆಗಳು,ಬಾವಿಗಳು ಕಂಡುಬರುತ್ತವೆ. ಇತ್ತೀಚೆಗೆ ಸುಮಾರು 18 ಅಡಿ ಎತ್ತರವುಳ್ಳ ಶ್ರವಣಬೆಳಗೂಳದ ಬಾಹುಬಲಿ ಶಿಲ್ಪವನ್ನೇ ಹೋಲುವ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದು ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮಲೆಯೂರು ಗ್ರಾಮದಲ್ಲಿನ ಎಲ್ಲಾ ಮತಿಯರು ಇಂದಿಗೂ ಈ ಕ್ಷೇತ್ರದ ಮೇಲೆ ಅಪಾರ ಭಕ್ತಿ, ಶ್ರದ್ಧೆಯನ್ನು ಹೊಂದಿದ್ದು ಮಾಘ ಮಾಸದಲ್ಲಿ ಸಾತ್ವಿಕ ಮತ್ತು ಶಾಕಾಹಾರಿಗಳಾಗಿ ಒಂದು ವಾರಗಳ ಕಾಲ ವಿಶೇಷವಾಗಿ ಜೈನೇಶ್ವರಿದೇವಿಯ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ.

ನಾಕೋಪಮಾನ ಶೈಲ ಕನಕಗಿರಿ

ಪ್ರಾಚೀನ ಪುರಾಣಗಳಲ್ಲಿ ಈ ಕ್ಷೇತ್ರವನ್ನು ‘ನಾಕೋಪಮಾನ ಶೈಲ’ ಎಂದರೆ ‘ಸ್ವರ್ಗದಂತಿರುವ ಶಿಖರ’ ಎಂದು ಬಣ್ಣಿಸಲಾಗಿದೆ. ಇಲ್ಲಿ ಹಲವು ಜೈನಮುನಿಗಳು ಇಲ್ಲಿನ ಪ್ರಕೃತಿ ನಿರ್ಮಿತ ಗುಹೆಗಳಲ್ಲಿ ತಪಗೈದು ಮುಕ್ತಿಪಡೆಯಲು ಪ್ರಯತ್ನಶೀಲರಾಗಿದ್ದರಿಂದ ಈ ಹೆಸರು ಗ್ರಂಥಗಳಲ್ಲಿ ಉಲ್ಲೇಖಿತ ವಾಗಿರಬಹುದು ಎನ್ನುವುದು ಇಲ್ಲಿನ ಇತಿಹಾಸ ಸಂಶೋಧಕರ ಅಭಿಪ್ರಾಯವಾಗಿದೆ. ಇದು ಪ್ರಕೃತಿಯ ಸುಂದರ ವನರಾಶಿಯ ತಾಣ ವಾಗಿದ್ದರಿಂದ  ಹಲವು ಜೈನಮುನಿಗಳಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಎಂಬುದಕ್ಕೆ ಇಲ್ಲಿ ದೊರೆತಿರುವ ಸುಮಾರು 25 ಶಾಸನಗಳಿಂದ ತಿಳಿದು ಬರುತ್ತದೆ. ಇಲ್ಲಿ  ಜೈನಮುನಿಗಳಾದ ಆಚಾರ್ಯ ಪೂಜ್ಯಪಾದರು, ಅಜಿತಮುನಿಗಳು, ಚಂದ್ರಕೀರ್ತಿ, ಚಂದ್ರಸೇನ, ವಜ್ರನಂದಿ ಸಿದ್ಧಾಂತ  ದೇವ,  ವಾಧಿಸಿಂಹ,  ಭಟ್ಟಾಕಳಂಕ, ಮುನಿಚಂದ್ರದೇವ, ಲಲಿತಕೀರ್ತಿ ಭಟ್ಟಾರಕರು ಸೇರಿದಂತೆ ಹಲವು ಮುನಿಗಳು ತಪಗೈದು ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಯಾದ ಬಗ್ಗೆ ಇಲ್ಲಿನ ಶಾಸನಗಳು, ನಿಷಧಿಗಳು ಸಾಕ್ಷ್ಯಗಳಾಗಿವೆ.ಅಲ್ಲದೇ ಇಲ್ಲಿ ಪ್ರಾಚೀನಕಾಲದಲ್ಲಿ ಪ್ರಸಿದ್ಧವಾದ ಶ್ರೀಗಂಧದ, ಚಂದನದ ವೃಕ್ಷಗಳು ಹೆಚ್ಚು ಇದ್ದವೆಂದು, ಇಲ್ಲಿನ ಚಂದನವು ‘ಮಲೆಯಗಿರಿ ಚಂದನ’ ಎಂದು ಪ್ರಸಿದ್ಧಿ ಪಡೆದಿತ್ತೆಂದು ಹೇಳಲಾಗುತ್ತದೆ.  ಹಾಗಯೇ ಇಲ್ಲಿ ಸೂರ್ಯಪುರದ ಮಹಾನ್ ತಪಸ್ವಿಗಳಾದ ಸುಪ್ರತಿಷ್ಟಮುನಿಗಳು ತಪಸ್ಸು ಮಾಡಿ ಕೇವಲಜ್ಞಾನ ಪಡೆದರೆಂದು, ಜ್ಞಾನಚಂದ್ರಮುನಿಗಳು ತಮ್ಮ ತಪಪ್ರಭಾವದಿಂದ ಕೇವಲಜ್ಞಾನ ಪಡೆದು ಧರ್ಮೋಪದೇಶ ಮಾಡಿ ಮೋಕ್ಷ ಪಡೆದರೆಂದು ಜೈನಪುರಾಣಗಳು ತಿಳಿಸುತ್ತವೆ.

ಪೂಜ್ಯಪಾದರ ಸಾಧನಾಕ್ಷೇತ್ರ

ಕ್ರಿ.ಶ.500ರ ಅವಧಿಯಲ್ಲಿ ಆಯುರ್ವೇದ ವೈದ್ಯಕ್ಷೇತ್ರದಲ್ಲಿ ಅಪಾರ ಸಾಧನೆಮಾಡಿದ, ವ್ಯಾಕರಣಶಾಸ್ತ್ರಜ್ಞರಾದ, ಆಚಾರ್ಯ ಪೂಜ್ಯಪಾದರು ಜೈನೇಂದ್ರವ್ಯಾಕರಣ, ಸರ್ವಾಥಸಿದ್ಧಿ, ಇಷ್ಟೋಪದೇಶ,  ಲೋಕೋಪಕಾರ,ಸಮಾಧಿಶತಕ, ಕಲ್ಯಾಣಕಾರಕಚಿಕಿತ್ಸಾಶಾಸ್ತ್ರ ಇತ್ಯಾದಿ ಗ್ರಂಥಗಳನ್ನು ಬರೆದು ಹೆಸರಾಗಿದ್ದಾರೆ.ಅಲ್ಲದೇ ಸಿದ್ದರಸ ಪ್ರವೀಣರೆನಿಸಿದ್ದು ಚಾರಣಮುನಿ ಗಳೆನಿಸಿದ್ದಾರೆ.ಇವರು ತಮ್ಮ ಅಂತಿಮ ದಿನಗಳನ್ನು ಇಲ್ಲಿಯೇ ಕಳೆದು ತಪಗೈದು ಸಿದ್ದಿ ಪಡೆದು ಸಾಧನೆಮಾಡಿ ಮುಕ್ತಿ ಪಡೆದಿದ್ದಾರೆ. ಹಾಗೂ ಅವರು ಇಲ್ಲಿ ದೇಶ, ರಾಜ್ಯ, ಪುರ, ಪ್ರಜೆಗಳ ಮತ್ತು ವಿಶ್ವಶಾಂತಿಗಾಗಿ ಇಲ್ಲಿ ಶಾಂತಿಮಂತ್ರ ರಚಿಸಿ ಪ್ರಾರ್ಥನೆ  ಸಲ್ಲಿಸಿರುವ ಉಲ್ಲೇಖವಿದೆ. ಈಗಲೂ ಇಲ್ಲಿ ಇವರ ಸಮಾಧಿಸ್ಥಳ ಇಂದಿಗೂ ಇಲ್ಲಿ  ಪೂಜನೀಯ ಸ್ಥಳವಾಗಿದೆ. ಇಲ್ಲಿನ ಬೆಟ್ಟದ  ಮೇಲೆ ಪ್ರಾಚೀನ ಭವ್ಯಮಂಟಪದಲ್ಲಿ ಪೂಜ್ಯಪಾದರ ಚರಣಪಾದುಕೆಗಳನ್ನು ಸ್ಥಾಪಿಸಲಾಗಿದೆ.

ಕಾಳಸರ್ಪ ದೋಷ ಪರಿಹಾರಕ ಕ್ಷೇತ್ರ

ಜೋತಿಷ್ಯಶಾಸ್ತ್ರದ ಪ್ರಕಾರ ಜನರಲ್ಲಿನ ತಮ್ಮ ಜಾತಕದ ಅನ್ವಯವಾಗಿ ರಾಹು ಮತ್ತು ಕೇತು ಗ್ರಹಗಳ ದೋಷದಿಂದ ಉಂಟಾಗುವ ‘ಕಾಳಸರ್ಪದೋಷ’ವು ಪರಿಹಾರವಾಗುತ್ತದೆಂಬ ನಂಬಿಕೆ ಇರುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಎಲ್ಲಿಯೂ ನೆಲಸದ ರೀತಿಯಲ್ಲಿ ಅಭಿಮುಖಿಗಳಾಗಿ ವಿಶೇಷರೂಪದಲ್ಲಿ ನೆಲೆಸಿರುವ ಜೈನಯಕ್ಷಿಯರಾದ ರಾಹುವಿನ ಪ್ರತೀಕ ವಾದ ಕೂಷ್ಮಾಂಡಿನಿದೇವಿ, ಕೇತುವಿನ ಪ್ರತೀಕವಾದ ಪದ್ಮಾವತಿದೇವಿಯರಿಗೆ ವಿಶೇಷ ಪೂಜೆ ಮಾಡಿಸಿದಲ್ಲಿ ಕೆಲವೇ ದಿನಗಳಲ್ಲಿ ದೋಷಪರಿಹಾರವಾಗುತ್ತದೆಂಬ ನಂಬಿಕೆ ಜೈನ ಮತ್ತು ಜೈನೇತರ ಭಕ್ತರಲ್ಲಿದೆ. ಪ್ರಾಚೀನ ಕಾಲದಿಂದಲೂ ಹಲವು ರಾಜಮನೆತನದ ರಾಜ ಮಹಾರಾಜರು ಇಲ್ಲಿಗೆ ಆಗಮಿಸಿ ಕಾಳಸರ್ಪದೋಷಕ್ಕೆ ಪರಿಹಾರ ಕಂಡುಕೊಂಡಿದ್ದರೆಂದು ಹೇಳಲಾಗುತ್ತದೆ. ಈಗಲೂ ದೇಶ-ವಿದೇಶಗಳಿಂದ ಹಲವು ಜನರು ಕಾಳಸರ್ಪದೋಷದ ಪರಿಹಾರಾರ್ಥವಾಗಿ ಆಗಮಿಸಿ ಪೂಜೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುತಿದ್ದಾರೆ.

ನಾಗಾರ್ಜುನನ ಸಿದ್ಧಿಕ್ಷೇತ್ರ

ಜೈನಾಚಾರ್ಯ ಪೂಜ್ಯಪಾದರ ಸಹೋದರಿ ಕಮಲಿನಿಯು  ತನ್ನ ಪತಿವಿಯೋಗದ ನಂತರದಲ್ಲಿ ಕಷ್ಟದಲ್ಲಿದ್ದಾಗ ಕಷ್ಟ ನಿವಾರಣೆಗಾಗಿ ಪೂಜ್ಯಪಾದರು ಅವಳ ಮಗ ನಾಗಾರ್ಜುನ ನಿಗೆ ಜೈನಯಕ್ಷಿ ಪದ್ಮಾವತಿಯನ್ನು ಸಿದ್ಧಿಸಿಕೊಳ್ಳುವ ಮಂತ್ರವನ್ನು ನೀಡಿ ಅದರ ವಿಧಿಯನ್ನು ಕಲಿಸಿದರು. ಅವರ ಪ್ರಭಾವದಿಂದಾಗಿ ನಾಗಾರ್ಜುನನು ಕನಕಗಿರಿಯ ಬೆಟ್ಟದ ಮೇಲಿರುವ ಗುಹೆಯಲ್ಲಿ ನೆಲೆಸಿ ಪದ್ಮಾವತಿಯ ಮಂತ್ರಸಿದ್ಧಿಯನ್ನು ಜಪಿಸಲಾಗಿ ಪದ್ಮಾವತಿ ಪ್ರತ್ಯಕ್ಷಳಾಗಿ ವನಸ್ಪತಿಯಿಂದ ಬಂಗಾರ ತಯಾರಿಸುವ ಸಿದ್ಧಿರಸದ ರಹಸ್ಯವನ್ನು ತಿಳಿಸಿ, ಲೋಕಕಲ್ಯಾಣಕ್ಕಾಗಿ ಮಾತ್ರ ಇದರ ಪ್ರಯೋಗಮಾಡಲು ತಿಳಿಸಿದಳು. ಆದರೆ ನಾಗಾರ್ಜುನ ನು ಸಿದ್ದರಸ ಪ್ರಯೋಗಮಾಡಿ ತಾನಿದ್ದ ಪರ್ವತವನ್ನೆಲ್ಲಾ ಸುವರ್ಣಗೊಳಿಸಲು ಪ್ರಯೋಗ ಮಾಡಿದಾಗ ಪದ್ಮಾವತಿಯು ಪ್ರತ್ಯಕ್ಷಳಾಗಿ ಮುಂದೆ ಆಗಬಹುದಾದ ಅನಾಹುತವನ್ನು ತಡೆದು ಇಲ್ಲಿ ಪಾಶ್ರ್ವನಾಥ ತೀರ್ಥಂಕರರನ್ನು ಪ್ರತಿಷ್ಠಾಪಿಸಿ ಪಾಪ ಪರಿಹರಿಸಿಕೊಳ್ಳಲು ಆದೇಶ ನೀಡಿದಳೆಂದು ಸ್ಥಳೀಯ ಕತೆಯೊಂದರಲ್ಲಿ ಹೇಳಲಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಇಲ್ಲಿ ‘ನಾಗಾರ್ಜುನಗವಿ’ ಯೊಂದು ಕಂಡುಬರುತ್ತದೆ. ಮತ್ತು ನಾಗಾರ್ಜುನ ಸಿದ್ದರಸ ಪ್ರಯೋಗ ಬಳಸಲಾಗುತ್ತಿದ್ದ ಬಾವಿಯು ಬೆಟ್ಟದ ಹಿಂಬದಿಯ ಬುಡದಲ್ಲಿದೆ ಇದನ್ನು ನಾಗಾರ್ಜುನಬಾವಿ ಎನ್ನಲಾಗುತ್ತದೆ.

ರಾಜಮನೆತನಗಳಾದ ಹೊಯ್ಸಳ,ಗಂಗ,ವಿಜಯನಗರದ ಅರಸರು ಈ ಕ್ಷೇತ್ರಕ್ಕಾಗಿ ಬಸದಿಯ ಪೂಜಾವ್ಯವಸ್ಥೆಗಾಗಿ ಕನಕಗಿರಿಯ ಸುತ್ತಲಿನ ಗ್ರಾಮಗಳ ಆದಾಯವನ್ನು,ಹಾಗೂ ಜಮೀನುಗಳನ್ನು ದತ್ತಿಬಿಟ್ಟಿರುವ ಉಲ್ಲೇಖವನ್ನು ಇಲ್ಲಿ ದೊರತಿರುವ ತಾಮ್ರಶಾಸನ ಮತ್ತು ಶಿಲಾಶಾಸನಗಳು ಉಲ್ಲೇಖಿಸುತ್ತವೆ.  ಕ್ರಿ.ಶ.1985 ರಿಂದ ಇಲ್ಲಿಯೇ ನೆಲೆಸಿದ್ದ ಜೈನಮುನಿಗಳಾದ ಚಂದ್ರಸಾಗರ ಮುನಿಗಳು ಕ್ಷೇತ್ರದ ಬೆಳವಣಿಗಾಗಿ ಪ್ರಯತ್ನಶೀಲರಾಗಿ ಇಲ್ಲಿ 24 ತೀರ್ಥಂಕರರ ಕೂಟಗಳನ್ನು ನಿರ್ಮಿಸಿ ಬಸದಿಯ ಸುತ್ತ ವಿದ್ಯುತ್ ವ್ಯವಸ್ಥೆ ಮಾಡಿಸಿ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಮಾಡಿಸಿ ಕ್ಷೇತ್ರವನ್ನು ಬೆಳಕಿಗೆ ತಂದರು ಮತ್ತು ಇಲ್ಲಿಯೇ ಸಮಾಧಿಮರಣವನ್ನು ಹೊಂದಿ ಚಿರಸ್ಮರಣೀಯ ರಾಗಿದ್ದಾರೆ.

ಪ್ರಾಚೀನಕಾಲದಲ್ಲಿ ಪ್ರಸಿದ್ಧವಾದ ಜೈನಕ್ಷೇತ್ರವಾಗಿದ್ದ ಕನಕಗಿರಿಯು ಶ್ರವಣಬೆಳಗೂಳ ಜೈನಮಠದ ಪರಂಪರೆಯ ಆಡಳಿತಕ್ಕೆ ಒಳಪಟ್ಟಿತ್ತು. ಆನಂತರ ಇಲ್ಲಿ ಕ್ರಿ.ಶ.1997ರಲ್ಲಿ ನೂತನವಾಗಿ ಜೈನಮಠ ಸ್ಥಾಪನೆಯಾಗಿದ್ದು, ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಠಾಧೀಶರಾಗಿ ಈ ಕ್ಷೇತ್ರದ ಬೆಳವಣಿಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಲ್ಲಿ ಆಯುರ್ವೇದ ಸಸ್ಯೋದ್ಯಾನ ನಿರ್ಮಿಸಿದ್ದಾರೆ. ಹಲವು ಧಾರ್ಮಿಕ ಕಾರ್ಯಕ್ರಮ ಕೈಗೊಂಡಿದ್ದಾರೆ,ಗುರುಕುಲ  ಶಿಕ್ಷಣಸಂಸ್ಥೆ ತೆರದು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುತ್ತಿದ್ದಾರೆ. ಸಂಸ್ಕøತ, ಪ್ರಾಕೃತ, ಕನ್ನಡದ ಗ್ರಂಥ  ಪ್ರಕಾಶನ ಸಂಸ್ಥೆ ತೆರೆದು ಹಲವು ಗ್ರಂಥ ಪ್ರಕಟಿಸಿದ್ದಾರೆ,ಇಲ್ಲಿ ಪ್ರವಾಸಿಗರಿಗಾಗಿ ಉತ್ತಮ ವಸತಿನಿಲಯಗಳನ್ನು ತರೆದಿದ್ದಾರೆ. ಇತ್ತೀಚೆಗೆ ಈ ಪವಿತ್ರ  ಕ್ಷೇತ್ರದ ಬೆಟ್ಟದ ಬುಡದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿಸಿದ್ದಾರೆ.

ಜೈನಮುನಿಗಳ ತಪಸಾಧನೆಯಿಂದ ತಪೋಭೂಮಿಯಾಗಿರುವ ಸಾಧನೆಯಿಂದ ಸಿದ್ಧಿಗೊಂಡಿರುವ ಸಾಧನಾಭೂಮಿಯಾದ ಈ ಕ್ಷೇತ್ರದರ್ಶನಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ. ಪ್ರಕೃತಿಯ ರಮ್ಯ ವೈಭವದಿಂದ ಆವೃತವಾಗಿರುವ ಈ ಕ್ಷೇತ್ರ ಪ್ರವಾಸಿಗರ, ಚಾರಣಿಗರ, ಭಕ್ತರ ಸ್ವರ್ಗಶಿಖರದಂತಿದ್ದು  ಪ್ರವಾಸಿ ಕ್ಷೇತ್ರವಾಗಿ ಇನ್ನಷ್ಟೂ ಅಭಿವೃದ್ಧಿಗೊಂಡಲ್ಲಿ ಒಂದು ಗಿರಿಧಾಮದಂತೆ ಕಂಗೊಳಿಸಲೆಂಬುದು ಜನರ ಆಶಯವಾಗಿದೆ.

ಲೇಖನ: ವೀರೇಂದ್ರ ಬೇಗೂರು.
8310375564

Translate »
error: Content is protected !!