ಯಾವುದು ಪ್ರಾಸಂಗಿಕ ಅರ್ಥದ ಜ್ಞಾನ ಮಾಡಿಸುವುದೋ ಅದನ್ನು ನಿಕ್ಷೇಪವೆಂದು ಕರೆಯುತ್ತಾರೆ. ಶಬ್ದವನ್ನು ಎಲ್ಲಿ , ಯಾವ ಅರ್ಥದಲ್ಲಿ ಪ್ರಯೋಗ ಮಾಡಲಾಗಿದೆಯೋ ಈ ಮಾತನ್ನು ನಿಕ್ಷೇಪವು ಹೇಳುತ್ತದೆ. ಇದು ೪ ಪ್ರಕಾರವಾಗಿದೆ.
೧. ನಾಮ ನಿಕ್ಷೇಪ
೨. ಸ್ಥಾಪನಾ ನಿಕ್ಷೇಪ
೩. ದ್ರವ್ಯ ನಿಕ್ಷೇಪ
೪. ಭಾವ ನಿಕ್ಷೇಪ
೧. ನಾಮ ನಿಕ್ಷೇಪ
ಗುಣ, ಜಾತಿ , ಕ್ರಿಯೆ ಮುಂತಾದವುಗಳ ಹೊರತು ಯಾವುದೇ ಹೆಸರಿಡುವುದು ನಾಮ ನಿಕ್ಷೇಪವಾಗಿದೆ. ಅಂದರೆ ಹೆಸರಿಗೆ ತಕ್ಕಂತಹ ಗುಣಗಳು ಇರದಿದ್ದರೂ ಸಹ ಲೋಕ ವ್ಯವಹಾರದಲ್ಲಿ ಹೆಸರನ್ನು ಇಡಲಾಗುತ್ತದೆ. ಉದಾಹರಣೆಗೆ ಒಬ್ಬ ಕುರುಡನ ಹೆಸರು ನಯನಸುಖ ಅಂತಾ ಕರೆಯುವುದು, ಬಡವನಿದ್ದರೂ ಅವನಿಗೆ ಶ್ರೀಮಂತ ಅಂತಾ ಹೆಸರಿಡುವುದು ನಾಮ ನಿಕ್ಷೇಪವಾಗಿದೆ.
೨. ಸ್ಥಾಪನಾ ನಿಕ್ಷೇಪ
ಕಟ್ಟಿಗೆ , ಕಲ್ಲು ಮುಂತಾದ ಪದಾರ್ಥಗಳಲ್ಲಿ ಆಕಾರ ಉಂಟುಮಾಡಿ ಕಲ್ಪನೆ ಮಾಡುವುದು ಸ್ಥಾಪನಾ ನಿಕ್ಷೇಪವಾಗಿದೆ. ಉದಾಹರಣೆಗೆ ಕಲ್ಲು ಅಥವಾ ಧಾತುವಿನ ಮೂರ್ತಿಯಲ್ಲಿ ತೀರ್ಥಂಕರರ ಸ್ಥಾಪನೆ ಮಾಡುವುದು. ಇದರಲ್ಲಿ ಎರಡು ಭೇದಗಳು ಇವೆ.
A. ತದಾಕಾರ ಸ್ಥಾಪನಾ
B. ಅತದಾಕಾರ ಸ್ಥಾಪನಾ
ತದಾಕಾರ ಸ್ಥಾಪನಾ
ಹೇಗೆ ಆಕಾರವಿದೆಯೋ ಅದೇ ರೀತಿಯಾಗಿ ಮಾಡುವುದು. ಹಾಗೇ ತೀರ್ಥಂಕರರು ಅಥವಾ ಯಾವುದೇ ಮಹಾಪುರುಷರ ಆಕೃತಿ ಮಾಡಿಸುವುದು.
ಅತದಾಕಾರ ಸ್ಥಾಪನಾ
ಹೇಗೆ ಆಕಾರವಿದೆಯೋ ಹಾಗೇ ಮಾಡದೇ ಬೇರೆ ಪ್ರಕಾರದಿಂದ ಮಾಡುವುದು . ಉದಾಹರಣೆಗೆ ಚೆಸ್ ಆಟದಲ್ಲಿ ರಾಜ, ಮಂತ್ರಿ , ಆನೆ, ಕುದುರೆ, ಸೈನಿಕ ಮುಂತಾದವುಗಳ ಸ್ಥಾಪನೆ.
೩. ದ್ರವ್ಯ ನಿಕ್ಷೇಪ
ಭೂತಕಾಲ ಮತ್ತು ಭವಿಷ್ಯತ್ ಕಾಲದ ಪರ್ಯಾಯವನ್ನು ಧ್ಯಾನದಲ್ಲಿ ಇಟ್ಟುಕೊಂಡು ಅದನ್ನು ವರ್ತಮಾನದಲ್ಲಿ ಹೇಳುವುದು ದ್ರವ್ಯ ನಿಕ್ಷೇಪವಾಗಿದೆ. ಉದಾಹರಣೆಗೆ ಸೇಠನ ಮಗನಿಗೆ ( ಅವನು ಭವಿಷ್ಯದಲ್ಲಿ ಸೇಠನಾಗುತ್ತಾನೆ ) ಈಗಿನಿಂದಲೇ ಸೇಠಜಿ ಎಂದು ಕರೆಯುವುದು. ಇದೇ ಪ್ರಕಾರ ಶಿಕ್ಷಕರು ನಿವೃತ್ತಿಯಾದರೂ ಸಹ ಶಿಕ್ಷಕನೆಂದು ಸಂಬೋಧಿಸುವುದು.
೪. ಭಾವ ನಿಕ್ಷೇಪ
ಕೇವಲ ವರ್ತಮಾನದ ಪರ್ಯಾಯದ ಮುಖ್ಯತೆಯ ಅನುಸಾರವಾಗಿ ಹೇಳುವುದು ಭಾವ ನಿಕ್ಷೇಪವಾಗಿರುತ್ತದೆ. ಉದಾಹರಣೆಗೆ ನೀರಿಗೆ ನೀರು ಎಂದು ಹೇಳುವುದು , ಒಂದು ವೇಳೆ ನೀರು ಗಟ್ಟಿಯಾದರೆ ಅದನ್ನು ಮಂಜುಗಡ್ಡೆ ಎಂದು ಹೇಳುವುದು . ಒಂದು ವೇಳೆ ಉಷ್ಣವಾಗಿ ಹಾರಿ ಹೋದರೆ ಅದನ್ನು ಆವಿ ಎಂದು ಹೇಳುವುದು. ಅಂದರೆ ದ್ರವ್ಯದ ವರ್ತಮಾನ ಪರ್ಯಾಯವನ್ನು ಅದೇ ರೀತಿಯಾಗಿ ಹೇಳುವುದು ಭಾವ ನಿಕ್ಷೇಪವಾಗಿದೆ.
ಮುಂದುವರೆಯುತ್ತದೆ…