ಶ್ರವಣಬೆಳಗೊಳದ ಜೈನಮಠ

ಶ್ರವಣ ಬೆಳಗೊಳದ ಭಟ್ಟಾರಕ ಪರಂಪರೆ

ಶ್ರವಣಬೆಳಗೊಳದ ಜೈನಮಠಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆದರೆ, ಮಠಾಧೀಶರ ಪರಂಪರೆಯ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಆದರೆ, ಲಭ್ಯವಿರುವ ದಾಖಲೆಗಳ ಪ್ರಕಾರ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೂ ಸೇರಿ 19 ಮಠಾಧಿಪತಿಗಳು ಪಟ್ಟಾಭಿಷಕ್ತರಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ.

9ನೇ ಶತಮಾನದಲ್ಲಿ ಬಾಹುಬಲಿ ಮೂರ್ತಿ ನಿರ್ಮಾಣವಾದ ನಂತರ ಅಂದಿನಿಂದಲೂ ಮಹಾಮಸ್ತಕಾಭಿಷೇಕ ನಡೆದುಕೊಂಡು ಬಂದಿದೆ. ಈಗ ನಡೆಯುತ್ತಿರುವುದು 88ನೇ ಮಹಾಮಸ್ತಕಾಭಿಷೇಕ. ಆದರೆ, ಮೊದಲನೆಯ ಅಭಿಷೇಕದ ಸಾರಥ್ಯ ವಹಿಸಿದ್ದ ಸ್ವಾಮೀಜಿ ಯಾರು ಎಂಬ ನಿಖರ ದಾಖಲೆಗಳಿಲ್ಲ. ಕ್ರಿ.ಶ.1398ರಲ್ಲಿ ಲಭ್ಯವಾಗಿರುವ ಶಾಸನಗಳ ಮಾಹಿತಿಯಂತೆ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳು ಏಳು ಮಹಾಮಸ್ತಕಾಭಿಷೇಕ ಮಾಡಿದ್ದರು. ನಂತರ ಶಾಂತವರ್ಣಿ, ಮೈಸೂರಿನ ಒಡೆಯರ್‌ ನೆರವಿನೊಂದಿಗೆ ಜೈನ ಮಠಾಧ್ಯಕ್ಷರು ಮಹಾಮಸ್ತಕಾಭಿಷೇಕಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಮಠಕ್ಕೆ 9ನೇ ಶತಮಾನದಲ್ಲಿ ರಾಜವಂಶಗಳು ಮಠಾಧೀಶರನ್ನು ನೇಮಕ ಮಾಡಿದ ದಾಖಲೆಯಿದೆ. ಆ ದಾಖಲೆಗಳ ಪ್ರಕಾರ ಪ್ರಾಚೀನ ಜೈನ ಭಟ್ಟಾರಕ ಪರಂಪರೆ ಈ ಕೆಳಕಂಡಂತಿದೆ.

1. ಶ್ರೀ ಮತಿಸಾಗರ ಭಟ್ಟಾರಕರನ್ನು 904ರಲ್ಲಿ ಗಂಗರಸ ಸತ್ಯವಾಕ್ಯ ಪೆರ್ಮಾಡಿ ನೇಮಿಸಿದ್ದ. (ಕ್ರಿ.ಶ.904ರಲ್ಲಿ ದೊರೆತಿರುವ ಶಾಸನದಲ್ಲಿ ಉಲ್ಲೇಖವಿದೆ)

2. ಶ್ರೀ ನೇಮಿಚಂದ್ರ ಸಿದ್ದಾಂತಾಚಾರ್ಯರನ್ನು 981 ಚಾವುಂಡರಾಯನು ಪೀಠಕ್ಕೇರಿಸಿದ್ದ.

3. ಶ್ರೀ ಕುಂದಕುಂದಾಚಾರ್ಯ ಪಾಂಡ್ಯರಾಯನು ಪಟ್ಟಕ್ಕೇರಿಸಿದ್ದ.

4. ಶ್ರೀ ಸಿದ್ಧಾಂತಾಚಾರ್ಯರನ್ನು ವೀರಪಾಂಡ್ಯನು ನೇಮಿಸಿದ್ದನೆಂಬ ದಾಖಲೆಯಿದೆ.

5. ಶ್ರೀ ಅಮಲಕೀರ್ತಾಚಾರ್ಯ ಕುನ ಪಾಂಡ್ಯನು ನೇಮಿಸಿದ್ದ.

6. ಶ್ರೀ ಸೋಮನಂದಾಚಾರ್ಯ ಕ್ರಿ.ಶ 1050ರಲ್ಲಿ ವಿನಿಯಾದಿತ್ಯ ಹೊಯ್ಸಳ ನೇಮಿಸಿದ್ದ.

7. ಶ್ರೀ ತ್ರಿಧಾಮ ವಿಬುಧಾನಂದಾಚಾರ್ಯರು ಕ್ರಿ.ಶ 1070ರಲ್ಲಿ ವಿನಯಾದಿತ್ಯ ಹೊಯ್ಸಳನಿಂದ ಪಟ್ಟಕ್ಕೇರಿದ್ದರು.

8. ಶ್ರೀ ಪ್ರಭಾಚಂದ್ರ ಸಿದ್ಧಾಂತಾಚಾರ್ಯರನ್ನು 1090ರಲ್ಲಿ ಎರೆಯಂಗ ನೇಮಿಸಿದ್ದ.

9. ಶ್ರೀ ಗುಣಭದ್ರಾಚಾರ್ಯ
ಜೈನ ಮಠದ ಪಟ್ಟಕ್ಕೆ 1102ರಲ್ಲಿ ಬಲ್ಲಾಳರಾಯ ನೇಮಿಸಿದ್ದ.

10. ಶ್ರೀಶುಭಚಂದ್ರಾಚಾರ್ಯ ಕ್ರಿ.ಶ.1110ರಲ್ಲಿ ಬಿಟ್ಟಿದೇವ ನೇಮಿಸಿದ್ದು, 1119ರಿಂದ ಈಚೆಗೆ ಗುರುಗಳಿಗೆ ಚಾರುಕೀರ್ತಿ ಪಂಡಿತಾಚಾರ್ಯ ಎಂಬ ನಾಮಾಂಕಿತ ವಾಡಿಕೆಯಲ್ಲಿ ಬಂದಿದೆ.

11. ಶ್ರೀ ಚಿನ್ನಯ್ಯಸ್ವಾಮಿ ಶ್ರವಣಬೆಳಗೊಳದ ಮನೆತನದವರು.

12. ಶ್ರೀ ಗಜಪತಿಸ್ವಾಮಿ(ಶಾಸಿ) ಮದ್ರಾಸ್‌ ಪ್ರಾಂತ್ಯದವರು.

13. ಶ್ರೀ ಶಾಂತರಾಜಸ್ವಾಮಿ ಮದ್ರಾಸ್‌ ಪ್ರಾಂತ್ಯದವರು. ಇವರು 1915ರಂದು ಸ್ವರ್ಗಸ್ಥರಾದರು.

14. ಶ್ರೀ ಸೆಲ್ವರಸುಸ್ವಾಮಿ 1915ರಿಂದ 1926ರ ವರೆಗೆ ಪೀಠಾಧ್ಯಕ್ಷರಾಗಿದ್ದರು. ಇವರೂ ಮದ್ರಾಸ್‌ಪ್ರಾಂತ್ಯದವರಾಗಿದ್ದು, 1926ರ ಜನವರಿ 16ರಂದು ಸ್ವರ್ಗಸ್ಥರಾದರು.

15. ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳು (ಶ್ರೀ ನೇಮಿಸಾಗರವರ್ಣಿಜೀ) ದಕ್ಷಿಣ ಕನ್ನಡವರು. ಅವರು 1928ರಲ್ಲಿ ಪಟ್ಟಾಭಿಷಕ್ತರಾದರು.

16. ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು. (ಶ್ರೀ ಚಾರುಕೀರ್ತಿ ಪಂಡಿತಾಚಾರ್ಯರೆಂದೂ ಇವರನ್ನು ಕರೆಯಲಾಗಿದ್ದು, ಇವರನ್ನು ಚಲ್ವರಸರು ತಮಿಳುನಾಡಿನಿಂದ ಕರೆತಂದಿದ್ದರು. ಶ್ರವಣಬೆಳಗೊಳದ ಶ್ರೀಮಠಕ್ಕೆ 3 ವರ್ಷಗಳ ಕಾಲ ಶ್ರೀದೋರ್ಬಲಿ ಜಿನದಾಸಶಾಸಿಗಳ ಆಡಳಿತ ಇದ್ದು, ಈ ಅವಧಿಯಲ್ಲಿ ಮಠಕ್ಕೆ ಪೀಠಾಧಿಪತಿಗಳಿರಲಿಲ್ಲ ಎಂಬ ದಾಖಲೆಯಿದೆ.

17. ಚಿದಾನಂದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ರಿ.ಶ.1700 (17ನೇ ಶತಮಾನ)ರಲ್ಲಿ ಪೀಠಾಧ್ಯಕ್ಷರಾಗಿದ್ದರು.

18. ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳು. (ಶ್ರೀ ಭಟ್ಟಾಕಲಂಕ ಸ್ವಾಮೀಜಿ) 1947ರಲ್ಲಿ ಪಟ್ಟಾಭಿಷಕ್ತರಾಗಿ 1969ರ ವರೆಗೆ ಪೀಠದಲ್ಲಿದ್ದರು.

19. ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿಭಟ್ಟಾರಕ ಮಹಾಸ್ವಾಮಿಗಳು (ಪ್ರಸ್ತುತ ಶ್ರೀಗಳವರು) 1971ರಿಂದ ಶ್ರವಣಬೆಳಗೊಳದ ಪೀಠಾಧ್ಯಕ್ಷರಾಗಿ ಮುಂದುವರೆದಿದ್ದಾರೆ.

1119ರಿಂದ ಈಚೆಗೆ ಇಲ್ಲಿಯ ಗುರುಗಳಿಗೆ ಚಾರುಕೀರ್ತಿ ಪಂಡಿತಾಚಾರ್ಯ ಎಂಬ ಹೆಸರಿದೆ. ಕ್ರಿ.ಶ.19ನೇ ಶತಮಾನದಲ್ಲಿ ಶ್ರೀ ಶುಭಚಂದ್ರಾಚಾರ್ಯರು ತಮ್ಮ ಮಂತ್ರ ವಿದ್ಯೆಯ ಬಲದ ಮೇಲೆ, ಹೊಯ್ಸಳ ರಾಜನಾದ ವಿಷ್ಣುವರ್ಧನನನ್ನು ಮತ್ತು ರಾಜ್ಯದ ಜನತೆಯನ್ನೂ ದೊಡ್ಡ ಆಪತ್ತಿನಿಂದ ಪಾರು ಮಾಡಿದರೆಂಬ ಗೌರವದಿಂದ ಇವರಿಗೆ “ಚಾರುಕೀರ್ತಿ ಪಂಡಿತಾಚಾರ್ಯ’ ಎಂಬ ಬಿರುದನ್ನು ನೀಡಿದರು.

1981ರಲ್ಲಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ್ದರಿಂದ “ಕರ್ಮಯೋಗಿ’ ಎಂದು ಬಿರುದು ನೀಡಿದ್ದರು.
🌴🌴🌴🌴🌴🌴🌴🌴

Translate »
error: Content is protected !!