ವೇದನೆ ಮುಂತಾದ ನಿಮಿತ್ತಗಳಿಂದ ಜೀವವು ತನ್ನ ಮೂಲ ಶರೀರವನ್ನು ಬಿಡದೇ ಅಂದರೆ ಕೆಲವು ಆತ್ಮ ಪ್ರದೇಶಗಳು ಶರೀರದಿಂದ ಹೊರಗೆ ಹೊರಡುತ್ತವೆ. ಇದನ್ನು ಸಮುದ್ಘಾತವೆಂದು ಹೇಳುತ್ತಾರೆ. ಸಮುದ್ಘಾತದಲ್ಲಿ ಏಳು ಭೇದಗಳು ಇರುತ್ತವೆ.
೧. ವೇದನಾ ಸಮುದ್ಘಾತ
೨. ಕಷಾಯ ಸಮುದ್ಘಾತ
೩. ವೈಕ್ರಿಯಿಕ ಸಮುದ್ಘಾತ
೪. ಮಾರಣಾಂತಿಕ ಸಮುದ್ಘಾತ
೫. ತೈಜಸ ಸಮುದ್ಘಾತ
೬. ಆಹಾರಕ ಸಮುದ್ಘಾತ
೭. ಕೇವಲಿ ಸಮುದ್ಘಾತ
ವೇದನಾ ಸಮುದ್ಘಾತ
ತೀವ್ರ ವೇದನೆಯ ಕಾರಣದಿಂದ ಮೂಲ ಶರೀರವನ್ನು ಬಿಡದೇ ಜೀವದ ಕೆಲವು ಆತ್ಮ ಪ್ರದೇಶಗಳು ಶರೀರದಿಂದ ಹೊರಗೆ ಹೊರಡುವುದು ವೇದನಾ ಸಮುದ್ಘಾತವಾಗಿದೆ. ಇದರಲ್ಲಿ ಆತ್ಮಪ್ರದೇಶಗಳು ಶರೀರ ಪ್ರಮಾಣದ ಮೂರು ಪಟ್ಟು ಹೊರಗೆ ಹರಡುತ್ತವೆ.
ಕಷಾಯ ಸಮುದ್ಘಾತ
ತೀವ್ರ ಕಷಾಯದ ಉದಯವಾದಾಗ ಬೇರೆ ಜೀವದ ಘಾತ ಮಾಡುವ ಸಲುವಾಗಿ ಆತ್ಮ ಪ್ರದೇಶಗಳು ಶರೀರದಿಂದ ಹೊರಗೆ ಹರಡುವುದಕ್ಕೆ ಕಷಾಯ ಸಮುದ್ಘಾತ ಎನ್ನುವರು. ಇದರಲ್ಲಿಯೂ ಸಹ ಆತ್ಮ ಪ್ರದೇಶಗಳು ಶರೀರ ಪ್ರಮಾಣಕ್ಕಿಂತ ಮೂರು ಪಟ್ಟು ಹೊರಗೆ ಹರಡುತ್ತದೆ.
ವೈಕ್ರಿಯಿಕ ಸಮುದ್ಘಾತ
ಯಾವುದೇ ಪ್ರಕಾರದ ವಿಕ್ರಿಯ ಉತ್ಪನ್ನ ಮಾಡುವ ಸಲುವಾಗಿ ಅಂದರೆ ಶರೀರವನ್ನು ಸಣ್ಣದು ಇಲ್ಲವೇ ದೊಡ್ಡದು ಮಾಡುವುದು ಅಥವಾ ಬೇರೆ ಶರೀರ ಮಾಡುವ ಸಲುವಾಗಿ ಆತ್ಮಪ್ರದೇಶಗಳು ಮೂಲ ಶರೀರವನ್ನು ಬಿಡದೇ ಹೊರಗೆ ಹೊರಡುವುದು ವೈಕ್ರಿಯಿಕ ಸಮುದ್ಘಾತವಾಗಿದೆ. ಇದು ದೇವ ಮತ್ತು ನಾರಕಿಯರಿಗೆ ಆಗೇ ಆಗುತ್ತದೆ. ಆದರೆ ವಿಕ್ರಿಯಾ ಋದ್ಧಿಧಾರಿ ಮುನಿರಾಜರಿಗೆ ಹಾಗೂ ವಿದ್ಯಾಧರರಿಗೂ ಸಹ ಆಗುತ್ತದೆ. ಭೋಗ ಭೂಮಿಯ ಜೀವಿಗಳಿಗೂ ಸಹ ಆಗುತ್ತದೆ.
ಮಾರಣಾಂತಿಕ ಸಮುದ್ಘಾತ
ಮರಣವಾಗುವ ಅಂತರ್ಮುಹೂರ್ತ ಮೊದಲು ಆತ್ಮ ಪ್ರದೇಶಗಳು ಹೊಸ ಜನ್ಮ ಸ್ಥಾನದ ಸ್ಪರ್ಶ ಮಾಡಿ ಮರಳಿ ತಿರುಗಿ ಬರುವುದು ಮಾರಣಾಂತಿಕ ಸಮುದ್ಘಾತವಾಗಿದೆ.
ತೈಜಸ ಸಮುದ್ಘಾತ
ಜೀವಗಳ ಅನುಗ್ರಹ ಮತ್ತು ವಿನಾಶದಲ್ಲಿ ಸಮರ್ಥ ತೈಜಸ ಶರೀರದ ರಚನೆಯಾಗುವ ಸಲುವಾಗಿ ತೈಜಸ ಸಮುದ್ಘಾತವಾಗುತ್ತದೆ. ಇದರಲ್ಲಿ ಎರಡು ಭೇದಗಳಿವೆ.
೧. ಶುಭ ತೈಜಸ ಸಮುದ್ಘಾತ
೨. ಅಶುಭ ತೈಜಸ ಸಮುದ್ಘಾತ
ಶುಭ ತೈಜಸ ಸಮುದ್ಘಾತ
ಲೋಕದಲ್ಲಿ ರೋಗ, ಬರಗಾಲ ಮುಂತಾದ ಅನೇಕ ಪೀಡೆಗಳು ಉಂಟಾದಾಗ ಅದನ್ನು ನೋಡಿದಾಗ ಕರುಣೆ ಉತ್ಪನ್ನವಾದ ಬಳಿಕ ಸಂಯಮಿ ಮಹಾಮುನಿಯ ಬಲಭುಜದಿಂದ ಒಂದು ಪುರುಷಾಕಾರದ ಗೊಂಬೆಯು ಹೊರಡುತ್ತದೆ. ಅದು ೧೨ ಯೋಜನ ಕ್ಷೇತ್ರದಲ್ಲಿ ಹಬ್ಬಿದ ಉಪದ್ರವವನ್ನು ಶಾಂತಗೊಳಿಸಿ ತಿರುಗಿಬಂದು ಮುನಿಯ ಶರೀರದಲ್ಲಿ ಪ್ರವೇಶಿಸುತ್ತದೆ.
ಅಶುಭ ತೈಜಸ ಸಮುದ್ಘಾತ
ಯಾವುದೇ ಕಾರಣದಿಂದ ಭಯಂಕರ ಕ್ರೋಧ ಉಂಟಾದಾಗ ಸಂಯಮಿ ಮಹಾಮುನಿಯ ಎಡ ಭುಜದಿಂದ ಬೆಕ್ಕಿನ ಆಕಾರದ ಒಂದು ಗೊಂಬೆಯು ಹೊರಡುತ್ತದೆ. ಅದು 12 × 9 ಯೋಜನ ಕ್ಷೇತ್ರದಲ್ಲಿ ಭಯಂಕರ ಅಗ್ನಿಯನ್ನು ಹಚ್ಚಿ ವಿರೋಧಿಯಾಗಿದ್ದ ವಸ್ತುಗಳನ್ನು ಭಸ್ಮಗೊಳಿಸಿ ಮರಳಿ ಹೋಗುತ್ತದೆ ಮತ್ತು ಆ ಮುನಿಯನ್ನೂ ಭಸ್ಮಗೊಳಿಸುತ್ತದೆ.
ಆಹಾರಕ ಸಮುದ್ಘಾತ
ತತ್ವಗಳಲ್ಲಿ ಶಂಕೆ ಉಂಟಾದ ಬಳಿಕ ಅದರ ನಿವಾರಣೆಯ ಸಲುವಾಗಿ ಅಥವಾ ತೀರ್ಥಯಾತ್ರೆಯ ಸಲುವಾಗಿ ಅಥವಾ ತೀರ್ಥಂಕರರ ಪಂಚಕಲ್ಯಾಣಕ ದರ್ಶನ ಸಲುವಾಗಿ ಆಹಾರ ಋದ್ಧಿಧಾರಿ ಮುನಿರಾಜರು ಆಹಾರಕ ಶರೀರದ ರಚನೆಯನ್ನು ಮಾಡುತ್ತಾರೆ. ಇದು ಒಂದು ಮೊಳದ ಬಿಳಿಬಣ್ಣದ ಮನುಷ್ಯ ಆಕಾರವುಳ್ಳದ್ದಾಗಿರುತ್ತದೆ. ಮತ್ತು ಅಂತರ್ಮುಹೂರ್ತದಲ್ಲಿ ಕಾರ್ಯವನ್ನು ಮುಕ್ತಾಯಗೊಳಿಸಿ , ತಿರುಗಿ ಮುನಿರಾಜರ ಶರೀರದಲ್ಲಿ ಪ್ರವೇಶವಾಗುತ್ತದೆ.
ಕೇವಲಿ ಸಮುದ್ಘಾತ
ಆಯುವು ಅಂತರ್ಮುಹೂರ್ತ ಇನ್ನೂ ಇರುವಾಗ ನಾಮ, ಗೋತ್ರ ಹಾಗೂ ವೇದನೀಯ ಕರ್ಮದ ಹೆಚ್ಚಿನ ಸ್ಥಿತಿಯನ್ನು ಆಯುಕರ್ಮದ ಸರಿಸಮ ಮಾಡುವ ಸಲುವಾಗಿ ಆತ್ಮ ಪ್ರದೇಶಗಳನ್ನು ಶರೀರದಿಂದ ಹೊರಗೆ ಹೊರಡಿಸಿ ಸರ್ವಲೋಕದಲ್ಲಿ ಹಬ್ಬಿಸುವುದಕ್ಕೆ ಕೇವಲಿ ಸಮುದ್ಘಾತ ಎನ್ನುವರು. ಇದು ಎಲ್ಲಾ ಕೇವಲಿಗಳಿಗೆ ಆಗುವುದಿಲ್ಲ. ಇದರಲ್ಲಿ ಕೇವಲ ೮ ಸಮಯ ತಗಲುತ್ತದೆ.
ಮೇಲಿನ ಏಳು ಸಮುದ್ಘಾತಗಳ ಹೊರತು ಬೇರೆ ಸಮಯಗಳಲ್ಲಿ ಆತ್ಮವು ತನ್ನ ಶರೀರ ಪ್ರಮಾಣ ಆಕಾರದಲ್ಲಿ ಇರುತ್ತದೆ..