ಸಮ್ಯಕ್ತ್ವ ಮತ್ತು ಮಿಥ್ಯಾತ್ವ
ಸಮ್ಯಕ್ತ್ವ
ತತ್ವಗಳ ಯಥಾರ್ಥ ಶ್ರದ್ಧೆ ಮಾಡುವುದನ್ನು ಸಮ್ಯಕ್ತ್ವವೆಂದು ಕರೆಯುತ್ತಾರೆ. ಮಿಥ್ಯಾತ್ವದ ಅಭಾವವೇ ಸಮ್ಯಕ್ತ್ವವಾಗಿದೆ.
ಸಮ್ಯಕ್ತ್ವದ ಭೇದಗಳು
ಸಮ್ಯಕ್ತತ್ವದಲ್ಲಿ ಔಪಶಮಿಕ ಸಮ್ಯಕ್ತ್ವ, ಕ್ಷಾಯಿಕ ಸಮ್ಯಕ್ತ್ವ, ಮತ್ತು ಕ್ಷಾಯೋಪಶಮಿಕ ಸಮ್ಯಕ್ತ್ವವೆಂದು ಮೂರು ಭೇದಗಳಿರುತ್ತವೆ.
೧. ಔಪಶಮಿಕ ಸಮ್ಯಕ್ತ್ವ
ದರ್ಶನ ಮೋಹನೀಯ ಕರ್ಮದ ಮೂರು ಪ್ರಕೃತಿಗಳು ( ಮಿಥ್ಯಾತ್ವ, ಸಮ್ಯಗ್ ಮಿಥ್ಯಾತ್ವ, ಮತ್ತು ಸಮ್ಯಕ್ತ್ವ ಪ್ರಕೃತಿ) ಹಾಗೂ ಚಾರಿತ್ರ ಮೋಹನೀಯ ಕರ್ಮದ ನಾಲ್ಕು ಪ್ರಕೃತಿಗಳು ( ಅನಂತಾನುಬಂಧಿ ಕ್ರೋಧ, ಅನಂತಾನುಬಂಧಿ ಮಾನ, ಅನಂತಾನುಬಂಧಿ ಮಾಯಾ, ಮತ್ತು ಅನಂತಾನುಬಂಧಿ ಲೋಭ ) ಹೀಗೆ ಒಟ್ಟು ಏಳು ಪ್ರಕೃತಿಗಳು ಸಮ್ಯಕ್ತ್ವದ ಘಾತಮಾಡುವಂಥವುಗಳಾಗಿವೆ. ಈ ೭ ಪ್ರಕೃತಿಗಳ ಉಪಶಮದಿಂದ ಯಾವ ತತ್ವ ಶ್ರದ್ಧಾನವಾಗುವುದೋ ಅದನ್ನು ಔಪಶಮಿಕ ಸಮ್ಯಕ್ತವವೆಂದು ಕರೆಯುತ್ತಾರೆ.
ಉಪಶಮದ ಅರ್ಥವೆಂದರೆ ಒತ್ತಿ ಇಡುವುದು. ಕರ್ಮದ ಶಕ್ತಿಯನ್ನು ಕೆಲವು ಸಮಯದ ತನಕ ಪ್ರಕಟವಾಗಗೊಡದಿರುವುದು ಅಂದರೆ ಕರ್ಮಗಳು ಉದಯದಲ್ಲಿ ಬರಲು ಅಯೋಗ್ಯಗೊಳಿಸುವುದು ಉಪಶಮವಾಗಿದೆ. ಉದಾಹರಣೆಗೆ ಹೊಲಸು ನೀರಿನಲ್ಲಿ ಪಟಕ ಹಾಕುವುದರಿಂದ ಮಲಿನವೆಲ್ಲವೂ ಕೆಳಗೆ ಕೂತುಕೊಳ್ಳುತ್ತದೆ. ಮತ್ತು ಸ್ವಚ್ಛ ನೀರು ಮೇಲೆ ನಿಲ್ಲುತ್ತದೆ. ಇದೇ ಪ್ರಕಾರ ಕರ್ಮದ ಉಪಶಮದಿಂದ ಅಂತರ್ಮುಹೂರ್ತದ ಸಲುವಾಗಿ ಜೀವದ ಪರಿಣಾಮವು ಅತ್ಯಂತ ನಿರ್ಮಲವಾಗಿರುತ್ತದೆ. ಈ ಅವಸ್ಥೆಯಲ್ಲಿ ಕರ್ಮವು ಬೂದಿಯಲ್ಲಿ ಮುಚ್ಚಿದ ಬೆಂಕಿಯಂತೆ ಸತ್ತಾದಲ್ಲಿ ಇರುತ್ತದೆ. ಆದರೆ ಸ್ವಲ್ಪ ಸಮಯದ ಸಲುವಾಗಿ ನಿಷ್ಕ್ರೀಯವಾಗಿರುತ್ತದೆ. ಅದೇ ಪ್ರಕಾರವಾಗಿ ಈ ಏಳೂ ಪ್ರಕೃತಿಗಳ ಉಪಶಮದಿಂದ ಈ ಔಪಶಮಿಕ ಸಮ್ಯಕ್ತ್ವವು ಉತ್ಪನ್ನವಾಗುತ್ತದೆ. ಇದರ ಕಾಲವು ಅಂತರ್ಮುಹೂರ್ತವಾಗಿರುತ್ತದೆ. ಅಂದರೆ ಅಂತರ್ಮುಹೂರ್ತದ ನಂತರ ಇದು ಅವಶ್ಯವಾಗಿ ಬಿಟ್ಟುಹೋಗುತ್ತದೆ. ಔಪಶಮಿಕ ಸಮ್ಯಕ್ತ್ವವು ಎರಡು ಪ್ರಕಾರವಾಗಿರುತ್ತದೆ.
1. ಪ್ರಥಮೋಪಶಮ ಸಮ್ಯಕ್ತ್ವ
2. ದ್ವಿತೀಯೋಪಶಮ ಸಮ್ಯಕ್ತ್ವ
ಪ್ರಥಮೋಪಶಮ ಸಮ್ಯಕ್ತ್ವ
ಮಿಥ್ಯಾದೃಷ್ಟಿ ಜೀವದ ಮಿಥ್ಯಾತ್ವವು ದೂರಾಗಿ ಯಾವ ಉಪಶಮ ಸಮ್ಯಕ್ತ್ವವಾಗುವುದೋ ಅದು ಪ್ರಥಮೋಪಶಮ ಸಮ್ಯಕ್ತ್ವವಾಗಿದೆ.
ದ್ವಿತೀಯೋಪಶಮ ಸಮ್ಯಕ್ತ್ವ
ಉಪಶಮ ಶ್ರೇಣಿ ಏರುವಂಥ ಜೀವನಿಗೆ ಕ್ಷಯೋಪಶಮ ಸಮ್ಯಗ್ದರ್ಶನದಿಂದ ಮತ್ತೆ ಯಾವ ಉಪಶಮ ಸಮ್ಯಕ್ತ್ವವಾಗುತ್ತದೆಯೋ ಅದನ್ನು ದ್ವಿತೀಯೋಪಶಮ ಸಮ್ಯಕ್ತ್ವವೆನ್ನುತ್ತಾರೆ.
ಸಮ್ಯಕ್ತ್ವ ಮತ್ತು ಮಿಥ್ಯಾತ್ವ
ಕ್ಷಾಯಿಕ ಸಮ್ಯಕ್ತ್ವ
ಕ್ಷಯದ ಅರ್ಥವು ನಾಶವಾಗುವುದೆಂದರ್ಥ. ಕರ್ಮವು ಆತ್ಮನಿಂದ ಸಂಪೂರ್ಣವಾಗಿ ದೂರವಾಗುವುದಕ್ಕೆ ಕ್ಷಯವೆಂದು ಕರೆಯುತ್ತಾರೆ. ಪಟಕ ಹಾಕಿದ ಬಳಿಕ ಸ್ವಚ್ಛವಾದ ನೀರನ್ನು ಬೇರೆ ಪಾತ್ರೆಯಲ್ಲಿ ಹಾಕುವುದರಿಂದ ಆ ನೀರಿನಲ್ಲಿ ಮಲಿನತೆಯು ಸಂಪೂರ್ಣವಾಗಿ ಬೇರೆಯಾಗಿ ಬಿಡುತ್ತದೆ. ಇದೇ ದರ್ಶನ ಮೋಹನೀಯ ಕರ್ಮದ ಮೂರು ಪ್ರಕೃತಿಗಳು, ಚಾರಿತ್ರ ಮೋಹನೀಯದ ನಾಲ್ಕು ಪ್ರಕೃತಿಗಳು ಒಟ್ಟು ಏಳೂ ಪ್ರಕೃತಿಗಳು ಕ್ಷಯವಾಗುವುದರಿಂದ ತತ್ವಗಳ ಕುರಿತು ಯಾವ ದೃಢ ಶ್ರದ್ಧಾನವು ಉತ್ಪನ್ನವಾಗುವುದೋ ಅದು ಕ್ಷಾಯಿಕ ಸಮ್ಯಕ್ತ್ವವಾಗಿರುತ್ತದೆ. ಇದು ನಿರ್ಮಲ , ಅಕ್ಷಯ ಮತ್ತು ಮೇರುವಿನ ಸಮಾನ ಅಕಂಪವಾಗಿರುತ್ತದೆ. ಹಾಗೆಯೇ ಒಂದು ಸಲ ಪ್ರಾಪ್ತವಾದ ಬಳಿಕ ಯಾವುದೇ ಪರಿಸ್ಥಿತಿಯಲ್ಲಿ ಬಿಟ್ಟು ಹೋಗುವುದಿಲ್ಲ. ಭವದ ಅಪೇಕ್ಷೆಯಿಂದ ಕ್ಷಾಯಿಕ ಸಮ್ಯಗ್ದೃಷ್ಟಿ ಜೀವವು ಅಂತರ್ಮುಹೂರ್ತದಲ್ಲಿ ಅಥವಾ ಹೆಚ್ಚು ಹೆಚ್ಚೆಂದರೆ ನಾಲ್ಕನೇ ಭವದಲ್ಲಿ ಮುಕ್ತಿಯನ್ನು ಹೊಂದುತ್ತಾನೆ.
ಇದು ಕೇವಲಿ ಅಥವಾ ಶ್ರುತಕೇವಲಿಯ ಪಾದ ಮೂಲದಲ್ಲಿಯೇ ಆಗುತ್ತದೆ. ಈ ಕಾಲದಲ್ಲಿ ಇವೆರಡೂ ಪ್ರಾಪ್ತವಾಗಲಾರವು. ಆದಾಗ್ಯೂ ಇಂದು ಕ್ಷಾಯಿಕ ಸಮ್ಯಕ್ತ್ವವು ಪ್ರಾಪ್ತವಾಗುವ ಸಂಭವವಿಲ್ಲ.
ಸಮ್ಯಕ್ತ್ವ ಮತ್ತು ಮಿಥ್ಯಾತ್ವ
ಕ್ಷಾಯೋಪಶಮಿಕ ಸಮ್ಯಕ್ತ್ವ
ನಾಲ್ಕು ಅನಂತಾನುಬಂಧಿ ಕಷಾಯ, ಮಿಥ್ಯಾತ್ವ ಮತ್ತು ಸಮ್ಯಗ್ಮಿಥ್ಯಾತ್ವ ಈ ಆರು ಪ್ರಕೃತಿಗಳ ಅನುದಯದಿಂದ ಹಾಗೂ ಸಮ್ಯಕ್ತ್ವ ಪ್ರಕೃತಿಯ ಉದಯದಿಂದ ಯಾವ ಸದೋಷ ತತ್ವಾರ್ಥ ಶ್ರದ್ಧಾನವು ಉತ್ಪನ್ನವಾಗುತ್ತದೆಯೋ ಅದು ಕ್ಷಾಯೋಪಶಮಿಕ ಸಮ್ಯಕ್ತ್ವವಾಗಿದೆ.
ಕರ್ಮಗಳ ಏಕದೇಶ ಕ್ಷಯ ಮತ್ತು ಏಕದೇಶ ಉಪಶಮವಾಗುವುದು ಕ್ಷಯೋಪಶಮವಾಗಿರುತ್ತದೆ. ಒಂದು ವೇಳೆ ಈ ಅವಸ್ಥೆಯಲ್ಲಿ ಕೆಲವು ಕರ್ಮಗಳ ಉದಯವು ಸಹ ವಿದ್ಯಮಾನವಿರುತ್ತದೆ. ಆದರೆ ಅದರ ಶಕ್ತಿಯು ಅತ್ಯಂತ ಕ್ಷೀಣವಾಗಿರುವ ಕಾರಣ ಅದು ಜೀವದ ಗುಣಗಳನ್ನು ಘಾತ ಮಾಡುವಲ್ಲಿ ಸಮರ್ಥವಾಗುವುದಿಲ್ಲ. ಆದ್ದರಿಂದ ಕರ್ಮಗಳ ಉದಯವಾಗುತ್ತಲೇ ಯಾವ ಜೀವದ ಗುಣಗಳ ಅಂಶವು ಉಪಲಬ್ದವಿರುತ್ತದೆಯೋ ಅದನ್ನು ಕ್ಷಯೋಪಶಮವೆನ್ನುತ್ತಾರೆ.
ಯಾವ ಪ್ರಕಾರ ಮದ್ಯ ಹಾಕಿದ ಪಾತ್ರೆಯನ್ನು ತೊಳೆಯುವುದರಿಂದ ಸ್ವಲ್ಪ ಮಾದಕತೆಯು ನಾಶವಾಗುತ್ತದೆಯೋ ಮತ್ತು ಸ್ವಲ್ಪ ಮಾದಕತೆಯು ಇನ್ನೂ ಇರುತ್ತದೆಯೋ ಅದೇ ಪ್ರಕಾರವಾಗಿ ಪರಿಣಾಮಗಳ ನಿರ್ಮಲತೆಯಿಂದ ಮೇಲೆ ಹೇಳಿದ ಪ್ರಕೃತಿಗಳ ಕ್ಷಯೋಪಶಮ ( ಅಂದರೆ ಏಕದೇಶ ಕ್ಷಯ ಮತ್ತು ಏಕದೇಶ ಉಪಶಮ ) ಆಗುವುದರಿಂದ ಕ್ಷಾಯೋಪಶಮಿಕ ಸಮ್ಯಕ್ತ್ವವು ಉತ್ಪನ್ನವಾಗುತ್ತದೆ.
ಕ್ಷಾಯೋಪಶಮಿಕ ಸಮ್ಯಗ್ದೃಷ್ಟಿ ಜೀವದ ಶ್ರದ್ಧಾನವು ತತ್ವಗಳ ಮೇಲೆ ದೃಢವಾಗಿರುವುದಿಲ್ಲ. ಕುಗುರು ಮತ್ತು ಕುದೃಷ್ಟಾಂತಗಳ ಮೂಲಕ ಅದಕ್ಕೆ ಸಮ್ಯಕ್ತ್ವವನ್ನು ದೂರಗೊಳಿಸುವಲ್ಲಿ ತಡವಾಗುವುದಿಲ್ಲ. ಇದು ದಿನದಲ್ಲಿ ಅನೇಕ ಸಲ ಬಿಡಲು ಸಾಧ್ಯವಿದೆ. ಹಾಗೂ ಪುನಃ ಪ್ರಾಪ್ತವಾಗಬಹುದಾಗಿದೆ.
ಆದಾಗ್ಯೂ ಈ ಶ್ರದ್ಧಾನವು ಶಿಥಿಲ ಮತ್ತು ದೂರವಾದರೆ ನಿಶ್ಚಯದಿಂದ ಇದು ದರ್ಶನ ಮೋಹದ ಕ್ಷಯದ ನಿಮಿತ್ತವಾಗಿರುತ್ತದೆ. ಅಂದರೆ ಕ್ಷಾಯೋಪಶಮಿಕ ಸಮ್ಯಕ್ತ್ವದಿಂದಲೇ ಕ್ಷಾಯಿಕ ಸಮ್ಯಕ್ತ್ವವಾಗುತ್ತದೆ.
ಸಮ್ಯಕ್ತ್ವ ಮತ್ತು ಮಿಥ್ಯಾತ್ತ್ವ
ಸಮ್ಯಗ್ದೃಷ್ಟಿ
ಯಾವನು ಏಳು ತತ್ವಗಳಲ್ಲಿ ಯಥಾರ್ಥ ಶ್ರದ್ಧೆಯುಳ್ಳವನಿರುತ್ತಾನೋ ಅವನು ಸಮ್ಯಗ್ದರ್ಶನ ಸಹಿತನಾಗಿರುತ್ತಾನೆ. ಅವನು ಯಥಾರ್ಥ ದೇವ, ಶಾಸ್ತ್ರ, ಗುರುಗಳಲ್ಲಿ ಶ್ರದ್ಧೆಯಿಟ್ಟಿರುತ್ತಾನೆ. ಅವನಿಗೆ ಸಮ್ಯಗ್ದೃಷ್ಟಿಯೆಂದು ಕರೆಯುತ್ತಾರೆ. ೨೫ ದೋಷಗಳಿಂದ ರಹಿತ ಹಾಗೂ ೮ ಅಂಗ ಸಹಿತನಿದ್ದು ಸಮ್ಯಗ್ದರ್ಶನವನ್ನು ಪಾಲಿಸುತ್ತಾನೋ ಅವನು ಸಮ್ಯಗ್ದೃಷ್ಟಿಯಾಗಿರುತ್ತಾನೆ. ಸಮ್ಯಗ್ದೃಷ್ಟಿ ಜೀವದ ಭಾವನೆಗಳಲ್ಲಿ ಸಮತೆಯಿರುತ್ತದೆ. ಅವನು ಯಾರಿಗೂ ಪೀಡೆಯನ್ನು ಕೊಡಬಯಸುವುದಿಲ್ಲ. ಅವನಲ್ಲಿ ಅಹಂಕಾರ, ಮಮಕಾರಗಳು ಇರುವುದಿಲ್ಲ. ಇಂದ್ರಿಯ ವಿಷಯಗಳಲ್ಲಿ ಉದಾಸೀನನಾಗಿರುತ್ತಾನೆ. ಅವನು ಆತ್ಮ ನಿರೀಕ್ಷಣೆಯ ಮೂಲಕ ತನ್ನ ದೋಷಗಳ ಕುರಿತು ಎಚ್ಚರವುಳ್ಳವನಾಗಿರುತ್ತಾನೆ. ಪರಪದಾರ್ಥಗಳ ಮೇಲಿನ ರಾಗ ಭಾವವು ದೂರಾಗಿರುತ್ತದೆ. ಅವನು ಮನೆಯಲ್ಲಿದ್ದರೂ ನೀರಿನಲ್ಲಿ ಕಮಲವಿರುವ ರೀತಿಯಲ್ಲಿ ಅಲಿಪ್ತನಾಗಿರುತ್ತಾನೆ. ಅವನು ಎಂದೂ ಕುದೇವ, ಕುಗುರು ಹಾಗೂ ಕುಧರ್ಮಗಳ ವಿನಯ ಮಾಡುವುದಿಲ್ಲ.
ಸಮ್ಯಕ್ತ್ವ ಮತ್ತು ಮಿಥ್ಯಾತ್ವ
ಸಮ್ಯಗ್ದೃಷ್ಟಿ ಜೀವಗಳ ಜನ್ಮ
ದೇವಗತಿ ಮತ್ತು ನರಕಗತಿಯ ಸಮ್ಯಗ್ದೃಷ್ಟಿ ಜೀವಗಳು ಕರ್ಮಭೂಮಿಯಲ್ಲಿ ಮನುಷ್ಯರಾಗಿ ಹುಟ್ಟುತ್ತಾರೆ. ಮನುಷ್ಯ ಮತ್ತು ತೀರ್ಯಂಚ ಗತಿಯ ಸಮ್ಯಗ್ದೃಷ್ಟಿ ಜೀವಗಳು ಒಂದು ವೇಳೆ ಪೂರ್ವಭವದಲ್ಲಿಯೇ ಮನುಷ್ಯ ಮತ್ತು ತೀರ್ಯಂಚ ಆಯುಷ್ಯವನ್ನು ಬಂಧಿಸಿಕೊಂಡಿರದಿದ್ದರೆ ಮರಣಹೊಂದಿ ಸ್ವರ್ಗ ಲೋಕದಲ್ಲಿ ಜನ್ಮ ಹೊಂದುತ್ತಾರೆ. ಈ ಪಂಚಮ ಕಾಲದಲ್ಲಿ ಭರತ ಕ್ಷೇತ್ರದಲ್ಲಿ ಸಮ್ಯಗ್ದೃಷ್ಟಿ ಜೀವಗಳು ಹುಟ್ಟುವುದಿಲ್ಲ. ಯಾವ ಮನುಷ್ಯರು ಇಲ್ಲಿ ಜನ್ಮ ಪಡೆಯುತ್ತಾರೋ ಅವರು ಪೂರ್ವ ಜನ್ಮದ ವ್ರತ, ಸಂಯಮ ರಹಿತ ಮಿಥ್ಯಾದೃಷ್ಟಿಯಾಗಿರುತ್ತಾರೆ. ಇಲ್ಲಿ ಹುಟ್ಟಿದ ಬಳಿಕ ಕೆಲವೇ ಭಾಗ್ಯಶಾಲಿ ಜೀವಗಳಿಗೆ ಕಾಲಲಬ್ದಿ ಮುಂತಾದವುಗಳು ಪ್ರಾಪ್ತವಾದ ಬಳಿಕ ಸಮ್ಯಕ್ತ್ವ ಪ್ರಾಪ್ತವಾಗುತ್ತದೆ.
ಸಮ್ಯಗ್ದೃಷ್ಟಿ ಜೀವವು ಆವೃತ್ತಿಯಾಗಿದ್ದರೂ ಸಹ ಭವನವಾಸಿ, ವ್ಯಂತರ, ಜ್ಯೋತಿಷ್ಕ ದೇವತೆಗಳಲ್ಲಿ , ಕೆಳಗಿನ ಆರು ನರಕಗಳಲ್ಲಿ , ತೀರ್ಯಂಚಗಳಲ್ಲಿ , ಸ್ತ್ರೀ ಪರ್ಯಾಯದಲ್ಲಿ, ನಪುಂಸಕರಾಗಿ, ಸ್ಥಾವರವಾಗಿ, ವಿಕತ್ರಯಗಳಲ್ಲಿ, ನೀಚ ಕುಲಗಳಲ್ಲಿ , ಅಂಗವಿಕಲರಾಗಿ, ಅಲ್ಪಾಯುಷಿಗಳಾಗಿ ಹಾಗೂ ದರಿದ್ರರಾಗಿ ಜನ್ಮ ಪಡೆಯುವುದಿಲ್ಲ. ಪದ್ಮಾವತಿ ಮತ್ತು ಚಕ್ರೇಶ್ವರಿ ದೇವಿಯರು ಸ್ತ್ರೀ ಪರ್ಯಾಯದಲ್ಲಿ ಇರುತ್ತಾರೆ. ಮತ್ತು ಭವನವಾಸಿಯರೂ ಸಹ ಮತ್ತು ಕ್ಷೇತ್ರಪಾಲ ವ್ಯಂತರದೇವರಿದ್ದಾರೆ. ಇವರೂ ಸಹ ಜನ್ಮ ಹೊಂದುವ ಸಮಯದಲ್ಲಿ ಸಮ್ಯಗ್ಧೃಷ್ಟಿಯಿರುವುದಿಲ್ಲ.
ಮಿಥ್ಯಾತ್ವ ಮತ್ತು ಮಿಥ್ಯಾದೃಷ್ಟಿ
ಮಿಥ್ಯಾತ್ವ
ಏಳು ತತ್ವಗಳ ಕುರಿತು ಯಥಾರ್ಥ ಶ್ರದ್ಧೆಯಿರದಿರುವುದು ಮಿಥ್ಯಾತ್ವವಾಗಿದೆ. ನಿಜವಾದ ದೇವ, ಶಾಸ್ತ್ರ, ಗುರುಗಳ ಮೇಲೆ ಶ್ರದ್ಧೆಯಿಡದೇ ಕುದೇವ, ಕುಶಾಸ್ತ್ರ, ಕುಗುರುಗಳ ಮೇಲೆ ಶ್ರದ್ಧೆ ಮಾಡುವುದು ಮಿಥ್ಯಾತ್ವವಾಗಿದೆ. ಖೊಟ್ಟಿ, ರಾಗಿ, ದ್ವೇಷಿ, ಕ್ರೋಧಿ ವಿಕಾರ ಪರಿಣಾಮಿ , ಶಸ್ತ್ರಧಾರಿ ಮುಂತಾದವುಗಳನ್ನು ಪೂಜ್ಯವೆಂದು ತಿಳಿಯುವುದು, ತಪಸ್ವಿನಿ, ಯಕ್ಷಿಣಿ ಮುಂತಾದವರು ಧನ, ಸಂಪತ್ತು , ಪದವಿ, ಸಂತಾನ , ವೈಭವ ಮುಂತಾದವುಗಳನ್ನು ಕೊಡುವಂಥವರು ಹಾಗೂ ರೋಗಾದಿಗಳನ್ನು ದೂರಮಾಡುವವರೆಂದು ನಂಬುವುದು, ಕ್ಷೇತ್ರಪಾಲ , ಯಕ್ಷ, ಪದ್ಮಾವತಿ, ಚಕ್ರೇಶ್ವರಿ ಮುಂತಾದವರು ಜಿನ ಶಾಸನ ರಕ್ಷಕರೆಂದು ತಿಳಿಯುವುದು ನಂಬುವುದು, ಇವರೆಲ್ಲರ ಪೂಜೆ ಮಾಡುವುದು ಮಿಥ್ಯಾತ್ವವಾಗಿರುತ್ತದೆ. ಪಿತ್ತವಾದ ರೋಗಿಗೆ ಸಿಹಿ ಹಾಲು ಹೇಗೆ ಕಹಿಯೆನಿಸುತ್ತದೆಯೋ ಅದೇ ಪ್ರಕಾರವಾಗಿ ಮಿಥ್ಯಾತ್ವ ಕರ್ಮದ ಉದಯದಿಂದ ಜೀವನಿಗೆ ಸತ್ಯಧರ್ಮದ ಕುರಿತು ರುಚಿ ಅನಿಸುವುದಿಲ್ಲ.
ಮಿಥ್ಯಾತ್ವ ಮತ್ತು ಕಷಾಯಗಳು ದುಃಖದ ಕಾರಣವಾಗಿರುವುದರಿಂದ ಪಾಪವಾಗಿರುತ್ತದೆ. ಮಿಥ್ಯಾತ್ವವು ಎಲ್ಲಕ್ಕಿಂತ ದೊಡ್ಡ ಪಾಪವೆಂದು ಹೇಳಿದ್ದಾರೆ. ಇದು ಎಲ್ಲಕ್ಕಿಂತ ಹೆಚ್ಚು ಅಹಿತಕಾರಿಯಾಗಿರುತ್ತದೆ. ಈ ಮಿಥ್ಯಾತ್ವಕ್ಕೆ ಸರಿಸಮಾನವಾಗಿ ಜೀವನಿಗೆ ಅಹಿತವುಂಟುಮಾಡುವ ಯಾವ ಚೇತನ ಹಾಗೂ ಅಚೇತನ ದ್ರವ್ಯಗಳು ಈ ಲೋಕದಲ್ಲಿ ಇಲ್ಲವೇ ಇಲ್ಲ. ಆದ್ದರಿಂದ ಇದನ್ನು ತ್ಯಾಗ ಮಾಡುವ ಪ್ರಯತ್ನ ಮಾಡಬೇಕು.
ಮಿಥ್ಯಾತ್ವ ಮತ್ತು ಮಿಥ್ಯಾದೃಷ್ಟಿ
ಮಿಥ್ಯಾತ್ವದ ಲಕ್ಷಣ
ಮಿಥ್ಯಾತ್ವದಲ್ಲಿ ಎರಡು ಲಕ್ಷಣಗಳಿವೆ.
೧. ಗೃಹೀತ ( ಅಧಿಗಮಜ ) ಮಿಥ್ಯಾತ್ವ
೨. ಅಗೃಹೀತ ( ನೈಸರ್ಗಿಕ ) ಮಿಥ್ಯಾತ್ಬ
ಗೃಹೀತ ( ಅಧಿಗಮಜ ) ಮಿಥ್ಯಾತ್ವ
ಇನ್ನೊಬ್ಬರ ಮೂಲಕ ಉಪದೇಶ ಕೇಳಿ ಕುದೇವ, ಕುಗುರು, ಕುಶಾಸ್ತ್ರಗಳಲ್ಲಿ ಯಾವ ಶ್ರದ್ಧಾನವಾಗುವುದೋ ಅಥವಾ ಜೀವಾದಿ ಪದಾರ್ಥಗಳಲ್ಲಿ ಯಾವ ಅಶ್ರದ್ಧಾನ ಉತ್ಪನ್ನವಾಗುವುದೋ ಅದು ಗೃಹೀತ ಮಿಥ್ಯಾತ್ವವಾಗಿದೆ.
ಅಗೃಹೀತ ( ನೈಸರ್ಗಿಕ ) ಮಿಥ್ಯಾತ್ವ
ಇನ್ನೊಬ್ಬರ ಉಪದೇಶವಿಲ್ಲದೇ ಮಿಥ್ಯಾತ್ವ ಕರ್ಮದ ಉದಯದಿಂದ ಸತ್ಯ, ದೇವ, ಗುರು, ಶಾಸ್ತ್ರಗಳಲ್ಲಿ ಅಶ್ರದ್ಧೆಯುಂಟಾಗುತ್ತದೆ. ಅದುವೇ ಅಗೃಹೀತ ಮಿಥ್ಯಾತ್ವವಾಗಿದೆ. ಹೇಗೆಂದರೆ ಯಾರ ಉಪದೇಶವಿಲ್ಲದೇ ಅನಾದಿಕಾಲದಿಂದ ಶರೀರವನ್ನೇ ಆತ್ಮನೆಂದು ನಂಬುವುದು , ಪುತ್ರ, ಸ್ತ್ರೀ, ಧನ, ಸಂಪತ್ತು ಮುಂತಾದವುಗಳಲ್ಲಿ ತನ್ನತನವನ್ನು ಮಾನಿಸುವುದು ಮುಂತಾದವುಗಳು ಅಗೃಹೀತ ಮಿಥ್ಯಾತ್ವವಾಗಿರುತ್ತದೆ.
ಮಿಥ್ಯಾತ್ವ ಮತ್ತು ಮಿಥ್ಯಾದೃಷ್ಟಿ
ಮಿಥ್ಯಾತ್ದದ ಭೇದಗಳು
ಮಿಥ್ಯಾತ್ವದಲ್ಲಿ ೫ ಭೇದಗಳಿವೆ.
೧. ಏಕಾಂತ ಮಿಥ್ಯಾತ್ವ
೨. ವಿಪರೀತ ಮಿಥ್ಯಾತ್ವ
೩. ವಿನಯ ಮಿಥ್ಯಾತ್ವ
೪. ಸಂಶಯ ಮಿಥ್ಯಾತ್ವ
೫. ಅಜ್ಞಾನ ಮಿಥ್ಯಾತ್ವ
ಏಕಾಂತ ಮಿಥ್ಯಾತ್ವ
ಅನೇಕ ಧರ್ಮ ( ಗುಣ ) ವುಳ್ಳ ವಸ್ತುವಿನ ಯಾವುದೇ ಒಂದು ಧರ್ಮದ ಕಥನಮಾಡಿ ಉಳಿದ ಧರ್ಮಗಳನ್ನು ನಿಷೇಧ ಮಾಡುವುದು ಏಕಾಂತ ಮಿಥ್ಯಾತ್ವವಾಗಿದೆ. ಉದಾಹರಣೆಗೆ ಜೀವವು ಸಂಪೂರ್ಣ ನಿತ್ಯ ಅಥವಾ ಅನಿತ್ಯವಾಗಿದೆ ಎಂದು ತಿಳಿಯುವುದು ಏಕಾಂತ ಮಿಥ್ಯಾತ್ವವಾಗಿದೆ.
ವಿಪರೀತ ಮಿಥ್ಯಾತ್ವ
ವಿಪರೀತ ಶ್ರದ್ಧೆ ಮಾಡುವುದು ಅಂದರೆ ಅಧರ್ಮಕ್ಕೆ ಧರ್ಮವೆಂದು ತಿಳಿಯುವುದು ವಿಪರೀತ ಮಿಥ್ಯಾತ್ವವಿರುತ್ತದೆ. ಉದಾಹರಣೆಗೆ ಹಿಂಸೆಯಿಂದ ಜೀವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಕೇವಲಿ ಭಗವಂತರು ಕವಲಾಹಾರ ಮಾಡುತ್ತಾರೆ, ಸ್ತ್ರೀ ಪರ್ಯಾಯದಿಂದ ಮೋಕ್ಷವಾಗುತ್ತದೆ ಮುಂತಾದವುಗಳು.
ವಿನಯ ಮಿಥ್ಯಾತ್ವ
ಸುದೇವ ಹಾಗೂ ಕುದೇವ , ಶಾಸ್ತ್ರ ಹಾಗೂ ಕುಶಾಸ್ತ್ರ ಹಾಗೂ ಕುಗುರುಗಳು, ಸುಗುರುಗಳು ಎಲ್ಲರೂ ಸಮಾನರೆಂದು ವಿನಯ ಮಾಡುವುದು ವಿನಯ ಮಿಥ್ಯಾತ್ವವಾಗಿದೆ.
ಸಂಶಯ ಮಿಥ್ಯಾತ್ವ
ಪದಾರ್ಥದ ಸ್ವರೂಪಗಳಲ್ಲಿ ಸಂಶಯ ಪಡುವುದು ಸಂಶಯ ಮಿಥ್ಯಾತ್ವವಾಗಿದೆ. ಸತ್ಯ ಹಾಗೂ ಸುಳ್ಳು ಧರ್ಮಗಳಲ್ಲಿಂದ ಯಾವುದೇ ಒಂದರ ನಿಶ್ಚಯವಾಗದಿರುವುದು ಸಂಶಯ ಮಿಥ್ಯಾತ್ವವಾಗಿದೆ. ಉದಾಹರಣೆಗೆ ನಿರ್ಗ್ರಂಥ ಮುದ್ರೆಯಿಂದ, ಮೋಕ್ಷವಾಗುತ್ತದೆ, ಅಥವಾ ವಸ್ತ್ರಸಹಿತ ಮುದ್ರೆಯಿಂದ ಮೋಕ್ಷವಾಗುತ್ತದೆ. ಸಮ್ಯಗ್ದರ್ಶನ ಜ್ಞಾನ ಚಾರಿತ್ರಗಳೇ ಮೋಕ್ಷಮಾರ್ಗವಾಗಿದೆ. ಅಥವಾ ಇಲ್ಲ. ಇಂತಹ ಸಂಶಯ ಮಾಡುವುದು ಸಂಶಯ ಮಿಥ್ಯಾತ್ವವಾಗಿದೆ.
ಅಜ್ಞಾನ ಮಿಥ್ಯಾತ್ವ
ವಿವೇಕ ರಹಿತನಾಗಿ ಹಿತಾಹಿತದ ಜ್ಞಾನವಿಲ್ಲದಿರುವುದು ಅಜ್ಞಾನ ಮಿಥ್ಯಾತ್ವವಾಗಿದೆ. ಜೀವಾದಿ ಪದಾರ್ಥಗಳ ಸರಿಯಾದ ಸ್ವರೂಪ ಜ್ಞಾನವಿಲ್ಲದಿರುವುದು ಅಜ್ಞಾನ ಮಿಥ್ಯಾತ್ವವಾಗಿದೆ.
ಮಿಥ್ಯಾತ್ವ ಮತ್ತು ಮಿಥ್ಯಾದೃಷ್ಟಿ
ಮಿಥ್ಯಾ ದರ್ಶನ – ಜ್ಞಾನ – ಚಾರಿತ್ರ
ಸಮ್ಯಕ್ತ್ವವಿಲ್ಲದೇ ಯತಾರ್ಥ ದರ್ಶನ ಜ್ಞಾನ ಮತ್ತು ಚಾರಿತ್ರವಾಗುವುದಿಲ್ಲ. ಸಮ್ಯಕ್ತ್ವವಿಲ್ಲದೇ ಉಂಟಾಗುವ ಯಾವ ದರ್ಶನ , ಜ್ಞಾನ ಮತ್ತು ಚಾರಿತ್ರಗಳು ಅವು ಮಿಥ್ಯಾ ದರ್ಶನ, ಮಿಥ್ಯಾ ಜ್ಞಾನ, ಮಿಥ್ಯಾ ಚಾರಿತ್ರವಾಗಿದೆ. ಇವುಗಳ ಸಂಕ್ಷಿಪ್ತ ವಿವರಣೆಯು ಕೆಳಗಿನಂತೆ ಇದೆ.
೧. ಮಿಥ್ಯಾ ದರ್ಶನ
ಮಿಥ್ಯಾತ್ವ ಕರ್ಮದ ಉದಯದಿಂದ ಯಾವ ತತ್ವಗಳ ಅಶ್ರದ್ಧಾನ ರೂಪ ಪರಿಣಾಮಗಳಾಗುತ್ತವೆಯೋ ಅಂದರೆ ಅರ್ಹಂತ ಭಗವಾನರ ಮೂಲಕ ಉಪದೇಶಿಸಲ್ಪಟ್ಟ ಮಾರ್ಗದಲ್ಲಿ ಶ್ರದ್ಧೆಯಾಗದಿರುವುದು ಮಿಥ್ಯಾದರ್ಶನವಾಗಿದೆ. ಆತ್ಮ ತತ್ವದಿಂದ ಅಪರಿಚಿತವಾದ ಸಂಸಾರಿ ಜೀವದ ಶರೀರ, ಧನ, ಪುತ್ರ, ಸ್ತ್ರೀ ಮುಂತಾದವುಗಳು ನನ್ನವು ಇವೆಯೆಂದು ತಿಳಿಯುವುದು ಮಿಥ್ಯಾದರ್ಶನವಾಗಿದೆ.
೨. ಮಿಥ್ಯಾ ಜ್ಞಾನ
ಮಿಥ್ಯಾತ್ವದ ಸದ್ಭಾವದಿಂದ ಉಂಟಾಗುವ ಜ್ಞಾನವು ಮಿಥ್ಯಾ ಜ್ಞಾನವಾಗಿರುತ್ತದೆ. ಸಮ್ಯಗ್ದರ್ಶನಕ್ಕಿಂತ ಮೊದಲು ಯಾವ ಜ್ಞಾನವಾಗುತ್ತದೆಯೋ ಅದು ಮಿಥ್ಯಾ ಜ್ಞಾನವಾಗಿರುತ್ತದೆ. ಉದಾಹರಣೆಗೆ ಕಹಿ ಕುಂಬಳಕಾಯಿ ಹಾಕಿದ ನಂತರ ಅದನ್ನು ತೆಗೆದು ಆ ಪಾತ್ರೆಯಲ್ಲಿ ಹಾಕಿದ ಹಾಲು ಕಹಿಯಾಗುವಂತೆ. ಅದೇ ಪ್ರಕಾರ ಮಿಥ್ಯಾದರ್ಶನದ ಕಾರಣ ಮತಿಜ್ಞಾನ ಮುಂತಾದವು ಮಿಥ್ಯೆಯಾಗುತ್ತದೆ. ಮತಿಜ್ಞಾನ, ಶ್ರುತಜ್ಞಾನ ಮತ್ತು ಅವಧಿಜ್ಞಾನಗಳು ಮಿಥ್ಯಾದೃಷ್ಟಿಗಳಿಗಾದರೆ ಅದನ್ನು ಕುಮತಿಜ್ಞಾನ, ಕುಶ್ರುತಜ್ಞಾನ ಮತ್ತು ವಿಭಂಗ ಅವಧಿಜ್ಞಾನವೆಂದು ಹೇಳುತ್ತಾರೆ.
ಮಿಥ್ಯಾತ್ವ ಮತ್ತು ಮಿತತ್ಯಾದೃಷ್ಟಿ
ಮಿಥ್ಯಾ ದರ್ಶನ, ಜ್ಞಾನ , ಚಾರಿತ್ರ
ಮಿಥ್ಯಾ ಜ್ಞಾನ
ಮಿಥ್ಯಾಜ್ಞಾನದ ಭೇದಗಳು.
ಕ. ಕುಮತಿ ಜ್ಞಾನ
ಮಿಥ್ಯಾತ್ವದಿಂದ ಕೂಡಿದ ಮತಿಜ್ಞಾನವು ಕುಮತಿಜ್ಞಾನವಾಗಿದೆ.
ಖ. ಕುಶ್ರುತ ಜ್ಞಾನ
ಮಿಥ್ಯಾತ್ವದಿಂದ ಕೂಡಿದ ಶ್ರುತಜ್ಞಾನವು ಕುಶ್ರುತ ಜ್ಞಾನವಾಗಿದೆ.
ಗ. ವಿಭಂಗ ಅವಧಿಜ್ಞಾನ
ಮಿಥ್ಯಾತ್ವದಿಂದ ಕೂಡಿದ ಅವಧಿಜ್ಞಾನವು ವಿಭಂಗ ಅವಧಿಜ್ಞಾನವಾಗಿದೆ.
ಈ ಮೂರು ಕುಜ್ಞಾನಗಳು ಆತ್ಮಹಿತದ ಕಾರಣವಾಗಿರುವುದಿಲ್ಲ. ಉದಾಹರಣೆಗೆ ಒಬ್ಬ ಮಗನು ಗೃಹಸ್ಥನ ಯಾವ ಕಾರ್ಯವನ್ನು ಮಾಡುವುದಿಲ್ಲ. ತಂದೆ ತಾಯಿಗಳ ಸೇವೆಯನ್ನು ಮಾಡುವುದಿಲ್ಲ. ವ್ಯಸನಿಯಿದ್ದಾನೆ ಮತ್ತು ಮಾಡಬಾರದ ಕೆಲಸಗಳಲ್ಲಿ ತನ್ಮಯನಿರುತ್ತಾನೆ. ಅವನು ಹಿತಕಾರಿಯವನಲ್ಲ. ಇಂಥವನನ್ನು ಪುತ್ರನೆಂದು ಕರೆಯದೇ ಕುಪುತ್ರನೆಂದು ಕರೆಯುತ್ತಾರೆ. ಇದೇ ಪ್ರಕಾರವಾಗಿ ಈ ಮೂರೂ ಜ್ಞಾನಗಳು ಸಹ ಆತ್ಮನ ಹಿತಕಾರಿಯಾಗಿರುವುದಿಲ್ಲ. ಮತ್ತು ಇವುಗಳನ್ನು ಕುಜ್ಞಾನವೆಂದು ಹೇಳುತ್ತಾರೆ.
ಮಿಥ್ಯಾಚಾರಿತ್ರ
ಸಮ್ಯಕ್ತ್ವವಿಲ್ಲದ ಚಾರಿತ್ರವು ಮಿಥ್ಯಾ ಚಾರಿತ್ರವಾಗಿರುತ್ತದೆ. ಅರಹಂತ ಭಗವಾನರ ಮೂಲಕ ಹೇಳಲಾದ ಮೋಕ್ಷಮಾರ್ಗದ ವಿಪರೀತ ಮಾರ್ಗದ ಮೇಲೆ ನಡೆಯುವುದು ಮಿಥ್ಯಾ ಚಾರಿತ್ರವಾಗಿದೆ. ಯಾವ ಪ್ರಕಾರ ಸಕ್ಜರೆ ಮಿಶ್ರಿತ ಸಿಹಿಯಾದ ಹಾಲು ಪಿತ್ತ ಜ್ವರದಿಂದ ಬಳಲುವ ವ್ಯಕ್ತಿಗೆ ಕಹಿಯಾಗಿ ಅನಿಸುತ್ತದೆಯೋ ಅದೇ ಪ್ರಕಾರ ಮಿಥ್ಯಾದೃಷ್ಟಿಗೂ ಸಹ ವಸ್ತುವಿನ ಸ್ವರೂಪವು ವಿಪರೀತವಾಗಿಯೇ ತಿಳಿದು ಬರುತ್ತದೆ, ಮಿಥ್ಯಾದರ್ಶನವಾಗಿದೆ.
ಮಿಥ್ಯಾದೃಷ್ಟಿ
ಯಾರು ದೋಷಯುಕ್ತವಾದ ದೇವನನ್ನು ಹಿಂಸೆಯಿಂದ ಕೂಡಿದ ಧರ್ಮವನ್ನು ಮತ್ತು ಪರಿಗ್ರಹದಿಂದ ಕೂಡಿದ ಗುರುವನ್ನು ಮನ್ನಿಸುತ್ತಾನೆಯೋ , ಅವರ ಸ್ತುತಿ ಮಾಡುತ್ತಾನೆಯೋ ಪೂಜಿಸುತ್ತಾನೆಯೋ ಅವನು ಮಿಥ್ಯಾದೃಷ್ಟಿಯಿದ್ದಾನೆ. ಅಂದರೆ ಯಾರು ನಿಜವಾದ ದೇವ, ಶಾಸ್ತ್ರ ಮತ್ತು ಗುರುವಿನ ಹೊರತು ಬೇರೆಯವರನ್ನು ಒಪ್ಪುತ್ತಾನೆಯೋ ಅವನು ಮಿಥ್ಯಾದೃಷ್ಟಿಯಿದ್ದಾನೆ.