ಸಲ್ಲೇಖನ

ಸಲ್ಲೇಖನದ ಅರ್ಥ ಸಲ್ಲೇಖನಾ ( ಸತ್ + ಲೇಖನಾ ) ಎಂದರೆ ಕಾಯ ಮತ್ತು ಕಷಾಯಗಳನ್ನು ಚೆನ್ನಾಗಿ ಕೃಶ ಮಾಡುವುದು ಸಲ್ಲೇಖನವಾಗಿದೆ. ಇದನ್ನೇ ಸಮಾಧಿ ಎಂದೂ ಸಹ ಹೇಳುತ್ತಾರೆ. ಮೃತ್ಯುವಿಗೆ ಬಹಳ ಹತ್ತಿರವಾದಾಗ ಎಲ್ಲಾ ರೀತಿಯ ವಿಷಾದಗಳನ್ನು ಬಿಟ್ಟು ಸಮತಾ ಪೂರ್ವಕವಾಗಿ ದೇಹತ್ಯಾಗ ಮಾಡುವುದೇ ಸಲ್ಲೇಖನ ಅಥವಾ ಸಮಾಧಿ ಮರಣವಾಗಿದೆ. ಜೈನ ಸಾಧಕನು ಮಾನವ ಶರೀರವನ್ನು ತನ್ನ ಸಾಧನೆಯ ಸಾಧನವೆಂದು ತಿಳಿಯುತ್ತ ಜೀವನಪರ್ಯಂತ ಎಷ್ಟು ಬೇಕೋ ಅಷ್ಟು ಅದರ ರಕ್ಷಣೆಯನ್ನು ಮಾಡುತ್ತಾನೆ. ಆದರೆ ಅತ್ಯಂತ ವೃದ್ಧಾಪ್ಯದಲ್ಲಿ, ಇಂದ್ರಿಯಗಳ ಶೀಥಿಲತೆ ಉಂಟಾದಾಗ, ಅತ್ಯಧಿಕ ದುರ್ಬಲತೆ ಉಂಟಾದಾಗ ಅಥವಾ ಮರಣಕ್ಕೆ ಬೇರೆ ಯಾವುದಾದರೂ ಕಾರಣವು ಎದುರಿಗೆ ಬಂದಾಗ ಮತ್ತು ಶರೀರವು ಅವನ ಸಾಧನೆಗೆ ಸಾಧಕವಾಗದೇ ಬಾಧಕವಾಗಿ ಕಾಣಿಸಿದರೆ, ಆಗ ಅವನಿಗೆ ಅವನ ಶರೀರವೇ ಭಾರವಾಗಿರುವಂತೆ ತೋರುತ್ತದೆ. ಇಂಥ ಸ್ಥಿತಿಯಲ್ಲಿ ಅವನು ಯೋಚಿಸುತ್ತಾನೆ ಶರೀರವನ್ನು ನಾನು ಎಷ್ಟೋ ಸಲ ಪ್ರಾಪ್ತ ಮಾಡಿಕೊಂಡಿದ್ದೇನೆ, ಇದು ನಾಶವಾದರೆ ಮತ್ತೆ ಸಿಗಬಹುದು, ಶರೀರ ಬಿಟ್ಟು ಹೋದರೆ ನನ್ನದೇನೂ ನಷ್ಟವಾಗುವುದಿಲ್ಲ. ಆದರೆ ನಾನು ಧರಿಸಿರುವ ವ್ರತ, ಸಂಯಮ ಮತ್ತು ಧರ್ಮಗಳು ನನ್ನ ಜೀವನದ ಅಮೂಲ್ಯ ನಿಧಿಗಳಾಗಿವೆ. ಬಹಳ ದುರ್ಬಲತೆಯಿಂದ ನಾನು ಇವುಗಳನ್ನು ಪಡೆದುಕೊಂಡಿದ್ದೇನೆ. ನಾನು ಇವುಗಳನ್ನು ಸಂರಕ್ಷಿಸಿಕೊಳ್ಳಬೇಕು. ಇವುಗಳ ಮೇಲೆ ಯಾವ ರೀತಿಯ ಕುತ್ತು ಬರಬಾರದು, ಹೀಗೆ ನಾನು ಪ್ರಯತ್ನಪಡಬೇಕು. ಇದರಿಂದ ನಾನು ಮತ್ತೆ ಮತ್ತೆ ಶರೀರವನ್ನೆತ್ತುವುದು ತಪ್ಪುತ್ತದೆ ಮತ್ತು ನನ್ನ ಅಭೀಷ್ಟ ಸುಖವು ಸಿದ್ಧಿಸುತ್ತದೆ, ಹೀಗೆ ಯೋಚಿಸಿ ಅವನು ಯಾವ ವಿಷಾಧವೂ ಇಲ್ಲದೆ ಪ್ರಸನ್ನ ಚಿತ್ತನಾಗಿ ( ಶಾಂತಚಿತ್ತನಾಗಿ ) ಆತ್ಮ ಚಿಂತನೆಯನ್ನು ಮಾಡುತ್ತಾ ಆಹಾರ ಮುಂತಾದವನ್ನು ಕ್ರಮವಾಗಿ ಬಿಡುತ್ತಾ ದೇಹೋತ್ಸರ್ಗ ಮಾಡಲು ಉತ್ಸುಕನಾಗುತ್ತಾನೆ, ಇದರ ಹೆಸರೇ ಸಲ್ಲೇಖನವಾಗಿದೆ.

ಸಲ್ಲೇಖನ ಆತ್ಮಘಾತವಲ್ಲ

ದೇಹತ್ಯಾಗದ ಈ ಪ್ರಕ್ರಿಯೆಯನ್ನು ತಿಳಿದುಕೊಳ್ಳದ ಕಾರಣದಿಂದ ಕೆಲವರು ಇದನ್ನು ಆತ್ಮಘಾತವೆಂದು ಎಂದು ಕರೆಯುತ್ತಾರೆ. ಆದರೆ ಸಲ್ಲೇಖನ ಆತ್ಮಘಾತವಲ್ಲ. ಜೈನಧರ್ಮದಲ್ಲಿ ಆತ್ಮ ಘಾತವನ್ನು ಪಾಪ ಹಿಂಸೆ ಮತ್ತು ಆತ್ಮನಿಗೆ ಅಹಿತಕಾರಿ ಎಂದು ತಿಳಿಯಲಾಗಿದೆ. ಆತ್ಮಘಾತ ಮತ್ತು ಸಲ್ಲೇಖನಾ ಎರಡರಲ್ಲಿಯೂ ಪ್ರಾಣಗಳ ವಿಮೋಚನೆಯಾಗುತ್ತದೆ ಎಂಬುದೇನೋ ಸರಿ, ಆದರೆ ಎರಡರ ಮನೋವೃತ್ತಿಯಲ್ಲಿಯೂ ಮಹದಂತರವಿದೆ. ಆತ್ಮಘಾತವನ್ನು ಜೀವನದಲ್ಲಿ ಅತ್ಯಂತ ನಿರಾಶೆ ಮತ್ತು ತೀವ್ರವಾದ ಮಾನಸಿಕ ಅಸಂತುಲನದ ಸ್ಥಿತಿಯಲ್ಲಿ ಮಾಡಿಕೊಳ್ಳಲಾಗುತ್ತದೆ, ಆದರೆ ಸಲ್ಲೇಖನವನ್ನು ಪರಮ ಉತ್ಸಾಹದಿಂದ ಸಮಭಾವವನ್ನು ಧರಿಸಿ ಸ್ವೀಕರಿಸಲಾಗುತ್ತದೆ. ಆತ್ಮಘಾತವನ್ನು ಕಷಾಯಗಳಿಂದ ಪ್ರೇರಿತವಾಗಿ ಮಾಡಿಕೊಳ್ಳಲಾಗುತ್ತದೆ, ಆದರೆ ಸಲ್ಲೇಖನದ ಮೂಲಾಧಾರವು ಸಮತೆಯಾಗಿದೆ. ಆತ್ಮಘಾತಕನಿಗೆ ಆತ್ಮದ ಅವಿನಶ್ವರತೆಯ ತಿಳಿವು ಇರುವುದಿಲ್ಲ. ಅವನು ದೀಪವು ಆರಿಹೋಗುವ ಹಾಗೆ ಶರೀರದ ವಿನಾಶವನ್ನು ಜೀವನದ ಮುಕ್ತಿ ಎಂದು ತಿಳಿಯುತ್ತಾನೆ. ಆದರೆ ಸಲ್ಲೇಖನದ ಪ್ರಮುಖ ಆಧಾರವು ಆತ್ಮನ ಅಮರತೆಯನ್ನು ತಿಳಿದು ತನ್ನ ಪರಲೋಕ ಯಾತ್ರೆಯನ್ನು ಸುಧಾರಿಸಿಕೊಳ್ಳುವುದು. ಸಲ್ಲೇಖನವು ಜೀವನದ ಅಂತ್ಯ ಸಮಯದಲ್ಲಿ ಶರೀರವು ಅತ್ಯಂತ ನಿರ್ಮಲವಾಗಿದ್ದಾಗ, ಅನುಪಯುಕ್ತವೆಂದು ಕಂಡಾಗ, ಭಾರಸ್ವರೂಪವಾದಾಗ ಅಥವಾ ಮರಣಕ್ಕೆ ಬೇರೆ ಕಾರಣಗಳು ಎದುರಾದಾಗ ಅಪರಿಹಾರ್ಯವೆಂದು ಕಂಡುಬಂದಾಗ ಸ್ವೀಕರಿಸಲಾಗುತ್ತದೆ, ಆದರೆ ಆತ್ಮಘಾತವನ್ನು ಜೀವನದ ಯಾವ ಕ್ಷಣದಲ್ಲಿ ಬೇಕಾದರೂ ಮಾಡಿಕೊಳ್ಳಬಹುದಾಗಿದೆ. ಆತ್ಮಘಾತಿಯ ಪರಿಣಾಮದಲ್ಲಿ ದೀನತೆ ಭೀತಿ ಮತ್ತು ವ್ಯಥೆ ಕಂಡುಬರುತ್ತದೆ. ಆದರೆ ಸಲ್ಲೇಖನದಲ್ಲಿ ಪರಮ ವೈರಾಗ್ಯ, ಪರಮ ಉತ್ಸಾಹ, ನೀರ್ಬೀಕತಾ ಮತ್ತು ಶೌರ್ಯದ ಸದ್ ಭಾವವಿರುತ್ತದೆ. ಆತ್ಮಘಾತ ವಿಕೃತ ಚಿತ್ತದ ಪರಿಣಾಮವಾಗಿದೆ, ಆದರೆ ಸಲ್ಲೇಖನ ನಿರ್ವಿಕಾರ ಮನೋವೃತ್ತಿಯ ಪರಿಣಾಮವಾಗಿದೆ. ಆತ್ಮಘಾತದಲ್ಲಿ ಸಾಯುವುದೊಂದೇ ಲಕ್ಷ್ಯ ಇರುವುದು, ಆದರೆ ಸಲ್ಲೇಖನ ಧ್ಯೇಯ ಮರಣಕ್ಕೆ ಯೋಗ್ಯವಾದ ಪರಿಸ್ಥಿತಿ ನಿರ್ಮಾಣವಾದಾಗ ತನ್ನ ಸದ್ಗುಣಗಳ ರಕ್ಷೆ ಮತ್ತು ತನ್ನ ಜೀವನ ನಿರ್ಮಾಣ ಮಾಡಿಕೊಳ್ಳುವುದಾಗಿದೆ. ಒಂದರ ಲಕ್ಷ್ಯ ತನ್ನ ಜೀವನವನ್ನು ಕೆಡಿಸಿಕೊಳ್ಳುವುದು ಆದರೆ ಮತ್ತೊಂದರ ಲಕ್ಷ್ಯ ಜೀವನವನ್ನು ಸುಧಾರಿಸಿಕೊಳ್ಳುವುದು ಆಗಿದೆ.

ಆಚಾರ್ಯ ಶ್ರೀ ಪೂಜ್ಯಪಾದ ಸ್ವಾಮಿಯವರು ತಮ್ಮ ಸರ್ವಾರ್ಥಸಿದ್ಧಿಯಲ್ಲಿ ಒಂದು ಉದಾಹರಣೆಯ ಮೂಲಕ ಈ ವಿಷಯವನ್ನು ಸ್ಪಷ್ಟಪಡಿಸುತ್ತಾ ಹೀಗೆ ಹೇಳುತ್ತಾರೆ – ಯಾರಾದರೂ ಗೃಹಸ್ಥನ ಮನೆಯಲ್ಲಿ ಬಹು‌ ಮೂಲ್ಯವಾದ ವಸ್ತುವನ್ನು ಇಟ್ಟಿದ್ದರೆ, ಆಕಸ್ಮಿಕವಾಗಿ ಭೀಕರವಾದ ಅಗ್ನಿಯಿಂದ ಮನೆಯು ಉರಿಯತೊಡಗಿದರೆ ಆಗ ಅವನು ಹೇಗಾದರೂ ಮಾಡಿ ಆ ಬೆಂಕಿಯನ್ನು ಆರಿಸಲು ಪ್ರಯತ್ನ ಪಡುತ್ತಾನೆ. ಆದರೆ ಏನೇನು ಪ್ರಯತ್ನಪಟ್ಟರೂ ಅಗ್ನಿಯು ಹಿಡಿತಕ್ಕೆ ಸಿಗದೆ ಹೆಚ್ಚು ಹೆಚ್ಚು ಹಬ್ಬುತ್ತಾ ಹೋದರೆ ಇಂಥ ವಿಷಮ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯು ತನ್ನ ಮನೆಯ ಮಮತ್ವವನ್ನು ಬಿಟ್ಟು ಬಹು ಮೌಲ್ಯ ವಸ್ತುಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಶೀಲನಾಗುತ್ತಾನೆ. ಆಗ ಆ ಗೃಹಸ್ಥನನ್ನು ಮನೆಯ ವಿಧ್ವಂಸಕನೆಂದು ಹೇಳಲಾಗುವುದಿಲ್ಲ. ಏಕೆಂದರೆ ಅವನು ತನ್ನ ಕಡೆಯಿಂದ ಮನೆಯನ್ನು ರಕ್ಷಿಸಲು ಪೂರ್ಣವಾಗಿ ಪ್ರಯತ್ನ ಶೀಲನಾಗಿದ್ದಾನೆ, ಆದರೆ ಯಾವಾಗ ರಕ್ಷಣೆಯು ಅಸಂಭವಾಗುತ್ತದೆಯೋ ಆಗ ಒಬ್ಬ ಕುಶಲ ವ್ಯಕ್ತಿಯಂತೆ ವಸ್ತುಗಳನ್ನು ಸಂರಕ್ಷಿಸುವುದು ಅವನ ಕರ್ತವ್ಯವಾಗುತ್ತದೆ. ಇದೇ ಪ್ರಕಾರವಾಗಿ ರೋಗಾದಿಗಳಿಂದ ಗ್ರಸ್ತನಾದಾಗಲೂ ಸಹ ತಕ್ಷಣವೇ ಸಲ್ಲೇಖನವನ್ನು ತೆಗೆದುಕೊಳ್ಳುವುದಿಲ್ಲ. ಸಾಧಕನಾದವನು ಶರೀರವನ್ನು ತನ್ನ ಸಾಧನೆಯ ವಿಶೇಷ ಸಾಧನವನ್ನಾಗಿ ತಿಳಿದು ಯಥಾ ಸಂಭವವಾಗಿ ರೋಗಾದಿಗಳಿಗೆ, ಚಿಕಿತ್ಸೆಯನ್ನು ಮಾಡಿಸುತ್ತಾನೆ. ಆದರೆ ಬಹಳಷ್ಟು ಪ್ರಯತ್ನ ಪಟ್ಟರೂ ಸಹ ರೋಗವು ಅಸಾಧ್ಯವಾದಾಗ, ಅದಕ್ಕೆ ಚಿಕಿತ್ಸೆಯು ಸಾಧ್ಯವೇ ಇಲ್ಲವೆಂದು ಗೊತ್ತಾದಾಗ, ಆ ವಿಷಮ ಪರಿಸ್ಥಿತಿಯಲ್ಲಿ ಮೃತ್ಯುವು ಹಾಗೆ ಆಗುತ್ತದೆ ಎಂದು ತಿಳಿದು ತನ್ನ ವೃತಗಳ ರಕ್ಷಣೆಯಲ್ಲಿ ಪ್ರಯತ್ನ ಶೀಲನಾಗುತ್ತ ತನ್ನ ಸಂಯಮವನ್ನು ರಕ್ಷಣೆ ಮಾಡಿಕೊಳ್ಳಲು ಸಮ ಭಾವಪೂರ್ವಕವಾಗಿ ಮೃತ್ಯು ರಾಜನ ಸ್ವಾಗತದಲ್ಲಿ ತತ್ಪಪರನಾಗುತ್ತಾನೆ.

ಸಲ್ಲೇಖನವನ್ನು ಆತ್ಮ ಘಾತವೆಂದು ಹೇಳಲಾಗುವುದಿಲ್ಲ. ಇದಂತೂ ದೇಹವನ್ನು ತ್ಯಾಗಮಾಡುವ ತರ್ಕಸಂಗತವಾದ ವೈಜ್ಞಾನಿಕ ಪದ್ಧತಿಯಾಗಿದೆ. ಇದರಿಂದ ಅಮರತ್ವ ಉಂಟಾಗುತ್ತದೆ.

ಸಲ್ಲೇಖನದ ಮಹತ್ವ

ಸಲ್ಲೇಖನವನ್ನು ಸಾಧನೆಯ ಅಂತಿಮ ಕ್ರಿಯೆ ಎಂದು ಹೇಳುತ್ತಾರೆ. ಅಂತಿಮ ಕ್ರಿಯೆ ಎಂದರೆ ಮೃತ್ಯವಿನ ಸಮಯದ ಕ್ರಿಯೆ, ಇದನ್ನು ಸುಧಾರಿಸುವುದು ಎಂದರೆ ಕಾಯ ಮತ್ತು ಕಷಾಯವನ್ನು ಕೃಶಮಾಡಿ ಸನ್ಯಾಸವನ್ನು ಧಾರಣೆ ಮಾಡುವುದು. ಇದೇ ಜೀವನಪೂರ್ತಿ ಮಾಡಿದ ತಪದ ಫಲವಾಗಿದೆ. ಹೇಗೆ ವರ್ಷವಿಡೀ ವಿದ್ಯಾಲಯಕ್ಕೆ ಹೋಗಿ ಅಧ್ಯಯನ ಮಾಡಿದ ವಿದ್ಯಾರ್ಥಿಯು, ಒಂದು ವೇಳೆ ಪರೀಕ್ಷೆಗೆ ಕುಳಿತುಕೊಳ್ಳದಿದ್ದರೆ ವರ್ಷಪೂರ್ತಿಯ ವ್ಯಾಸಂಗ ನಿರರ್ಥಕವಾಗುತ್ತದೆ. ಅದೇ ರೀತಿ ಜೀವನ ಪೂರ್ತಿ ಸಾಧನೆ ಮಾಡಿದ ನಂತರವೂ ಸಹ ಸಲ್ಲೇಖನಪೂರ್ವಕವಾಗಿ ಮರಣವಾಗದಿದ್ದರೆ ಸಾಧನೆಯ ವಾಸ್ತವಿಕ ಫಲವು ಸಿಗುವುದಿಲ್ಲ.‌ ಆದ್ದರಿಂದ ಪ್ರತಿಯೊಬ್ಬ ಸಾಧಕನೂ ಸಲ್ಲೇಖನವನ್ನು ಅವಶ್ಯಕವಾಗಿ ಮಾಡಬೇಕು. ಮುನಿ ಮತ್ತು ಶ್ರಾವಕ‌ ಇಬ್ಬರಿಗೂ ಸಲ್ಲೇಖನವು ಅನಿವಾರ್ಯವಾಗಿದೆ. ತಮ್ಮಿಂದಾದಷ್ಟು ಇದಕ್ಕಾಗಿ ಪ್ರಯತ್ನವನ್ನು ಸಹ ಪಡಬೇಕು. ಯುದ್ಧದ ಅಭ್ಯಾಸ ಮಾಡಿದ ಪುರುಷನು ರಣಾಂಗಣದಲ್ಲಿ ಸಫಲತೆಯನ್ನು ಹೇಗೆ ಹೊಂದುತ್ತಾನೆಯೋ ಹಾಗೆಯೇ ಪೂರ್ವದಲ್ಲಿ ಮಾಡಿದ ಅಭ್ಯಾಸ ಬಲದಿಂದಲೇ ಸಲ್ಲೇಖನವು ಸಫಲವಾಗುತ್ತದೆ.

ಆದ್ದರಿಂದ ಎಲ್ಲಿಯವರೆಗೆ ಈ ಭವದ ಅಭಾವ ಉಂಟಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಪ್ರತಿ ಸಮಯದಲ್ಲೂ ನಮಗೆ ಸಮತಾ ಪೂರ್ವಕವಾಗಿ ಮರಣವಾಗಲಿ ಎಂಬ ಭಾವದಿಂದ ಪುರುಷಾರ್ಥವನ್ನು ಮಾಡಬೇಕು. ಸಲ್ಲೇಖನವಿಲ್ಲದೆ ಸಾಧನೆಯು ಅಪೂರ್ಣವಾಗುತ್ತದೆ. ಹೇಗೆ ಮಂದಿರ ನಿರ್ಮಾಣವಾದ ನಂತರ ಎಲ್ಲಿಯವರೆಗೆ ಅದರ ಮೇಲೆ ಕಲಶ ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯ ತನಕ ಅದು ಶೋಭಾಸ್ಪದವಾಗಿ ಕಾಣುವುದಿಲ್ಲ. ಅದೇ ರೀತಿಯಲ್ಲಿ ಜೀವನ ಪೂರ್ತಿ ಮಾಡಿದ ಸಾಧನೆ ಸಲ್ಲೇಖನವು ವಿನಃ ಅಪೂರ್ಣವಾಗಿ ಬಿಡುತ್ತದೆ. ಸಲ್ಲೇಖನವು ಸಾಧನೆಯ ಮಂಟಪದ ಮೇಲೆ ಇಟ್ಟ ಕಳಶಾರೋಹಣವಾಗಿದೆ.

ಸಲ್ಲೇಖನದ ವಿಧಿ

ಸಲ್ಲೇಖನಾ ಅಥವಾ ಸಮಾಧಿಯ ಅರ್ಥ ಒಂದೇ ಸಲ ಎಲ್ಲಾ ಪ್ರಕಾರದ ಆಹಾರ ಪಾನೀಯಗಳನ್ನು ಬಿಟ್ಟು ಕುಳಿತುಕೊಂಡು ಬಿಡುವುದು ಎಂದಲ್ಲ. ಬದಲಾಗಿ ಅದಕ್ಕೆ ಒಂದು ನಿಶ್ಚಿತ ಕ್ರಮವಿದೆ. ಆ ಕ್ರಮವನ್ನು ಧ್ಯಾನದಲ್ಲಿ ಇಟ್ಟುಕೊಂಡೇ ಸಲ್ಲೇಖನವನ್ನು ಮಾಡಬೇಕು ಮತ್ತು ಮಾಡಿಸಬೇಕು. ಇದನ್ನು ಧ್ಯಾನದಲ್ಲಿ ಇಟ್ಟುಕೊಳ್ಳದೆ ಒಂದೇ ಸಲ ಎಲ್ಲಾ ರೀತಿಯ ಆಹಾರ ಪಾನೀಯಗಳನ್ನು ತ್ಯಾಗ ಮಾಡಿಸುವುದರಿಂದ ಸಾಧಕರು ಎಷ್ಟು ಕಠಿಣತೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಸಲ ತಮ್ಮ ತಮ್ಮ ಸಂಯಮದಿಂದಲೂ ವಿಮುಖರಾಗಬೇಕಾಗುತ್ತದೆ. ಆದ್ದರಿಂದ ಸಾಧಕನಿಗೆ ಯಾವುದೇ ರೀತಿಯ ವ್ಯಾಕುಲತೆ ಉಂಟಾಗಬಾರದು ಮತ್ತು ಅವನು ತನ್ನ ಕಾಯ ಮತ್ತು ಕಷಾಯಗಳನ್ನು ಕ್ರಮವಾಗಿ ಕೃಶಗೊಳಿಸುತ್ತಾ ದೇಹೋತ್ಸರ್ಗದ ಕಡೆಗೆ ಮುಂದೆ ಸಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಲ್ಲೇಖನದ ವಿಧಿಯನ್ನು ನಿರೂಪಿಸಲಾಗಿದೆ.

ಸಲ್ಲೇಖನಾ ವಿಧಿಯಲ್ಲಿ ಕಷಾಯಗಳನ್ನು ಕೃಶ ಮಾಡುವ ಉಪಾಯವನ್ನು ತಿಳಿಸುತ್ತಾ ಹೇಳಿದ್ದಾರೆ – ಸಾಧಕನಾದವನು ಸರ್ವಪ್ರಥಮವಾಗಿ ತನ್ನ ಕುಟುಂಬದ, ತನ್ನ ಪರಿಜನರ, ಮಿತ್ರರ ಮೋಹವನ್ನು, ತನ್ನ ಶತ್ರುಗಳ ಜೊತೆಗೆ ವೈರವನ್ನು ಮತ್ತು ಎಲ್ಲಾ ರೀತಿಯ ಬಾಹ್ಯ ಪದಾರ್ಥಗಳ ಮಹತ್ವವನ್ನು ಶುದ್ಧ ಮನಸ್ಸಿನಿಂದ ತ್ಯಾಗಮಾಡಿ, ಮಧುರ ವಾಣಿಯಿಂದ ತನ್ನ ಸ್ವಜನರಿಂದಲೂ, ಪರಿಜನರಿಂದಲೂ ಕ್ಷಮೆಯಾಚನೆಯನ್ನು ಮಾಡಬೇಕು ಹಾಗೂ ತಾನೂ ಸಹ ಅವರನ್ನು ಕ್ಷಮಿಸಬೇಕು. ನಂತರ ಯಾರಾದರೂ ಯೋಗ್ಯ ಗುರು ( ನಿರ್ಯಾಪಕಾಚಾರ್ಯ ) ಗಳ ಹತ್ತಿರ ಹೋಗಿ ಕೃತ, ಕಾರಿತ, ಅನುಮೋದನೆಯಿಂದ ಮಾಡಿದ ಎಲ್ಲಾ ಪಾಪಗಳನ್ನು ಕಪಟ ಭಾವವಿಲ್ಲದೆ ಆಲೋಚಿಸಿ ಮರಣ ಪರ್ಯಂತ ಮಹಾವ್ರತವನ್ನು ಧಾರಣೆ ಮಾಡಿಕೊಳ್ಳಬೇಕು. ಅದರ ಜೊತೆಗೆ ಎಲ್ಲಾ ಪ್ರಕಾರದ ಶೋಕ, ಭಯ, ಸಂತಾಪ, ಖೇದ, ವಿಷಾದ, ಕಾಲುಷ್ಯ, ಅರತಿ ಮುಂತಾದ ಅಶುಭ ಭಾವಗಳನ್ನು ತ್ಯಜಿಸಿ ತನ್ನ ಬಲ, ವೀರ್ಯ, ಸಾಹಸ ಮತ್ತು ಉತ್ಸಾಹಗಳನ್ನು ಹೆಚ್ಚಿಸಿಕೊಳ್ಳುತ್ತಾ ಗುರುಗಳು ಹೇಳುವ ಅಮೃತವಾಣಿಯನ್ನು ಕೇಳಿ ಮನಸನ್ನು ಪ್ರಸನ್ನವಾಗಿಟ್ಟ ಕೊಳ್ಳಬೇಕು.

ಈ ರೀತಿಯಿಂದ ಜ್ಞಾನಪೂರ್ವಕವಾಗಿ ಕಷಾಯಗಳನ್ನು ಕೃಶಗೊಳಿಸುವುದರ ಜೊತೆಗೆ ತನ್ನ ಕಾಯವನ್ನು ಕೃಶ ಮಾಡಿಕೊಳ್ಳುವುದಕ್ಕಾಗಿ ಸರ್ವ ಪ್ರಥಮವಾಗಿ ಪುಷ್ಟಿಕರವಾದ ಆಹಾರವನ್ನು ಬೇಳೆ, ಅನ್ನ, ರೊಟ್ಟಿ ಮುಂತಾದವುಗಳನ್ನು ತ್ಯಾಗ ಮಾಡಬೇಕು ಹಾಗೂ ಹಾಲು-ಮೊಸರು, ಅಂಬಲಿ ಮುಂತಾದ ಪೇಯ ಪದಾರ್ಥಗಳನ್ನು ಅವಲಂಬಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ನಂತರ ಅವುಗಳನ್ನು ಸಹ ತ್ಯಜಿಸಿ ಕೇವಲ ಬಿಸಿನೀರನ್ನು ಗ್ರಹಣೆ ಮಾಡಬೇಕು. ಈ ರೀತಿಯಾಗಿ ಚಿತ್ತವನ್ನು ಸ್ಥಿರವಾಗಿ ಇಟ್ಟುಕೊಂಡು ಮೇಲೆ ಹೇಳಿದ ಅಭ್ಯಾಸ ಮತ್ತು ಶಕ್ತಿಯನ್ನು ಹೆಚ್ಚಿಸಿಕೊಂಡು ಧೈರ್ಯಪೂರ್ವಕವಾಗಿ ಕೊನೆಯಲ್ಲಿ ಜಲವನ್ನೂ ಸಹ ತ್ಯಾಗ ಮಾಡಬೇಕು. ಮತ್ತು ತನ್ನ ವ್ರತಗಳನ್ನು ನಿರತಿಚಾರವಾಗಿ ಪಾಲಿಸುತ್ತಾ ಪಂಚನಮಸ್ಕಾರ ಮಂತ್ರದ ಸ್ಮರಣೆ ಮಾಡುತ್ತಾ ಶಾಂತಿಪೂರ್ವಕವಾಗಿ ದೇಹ ತ್ಯಾಗವನ್ನು ಮಾಡಬೇಕು. ಇದು ಸಲ್ಲೇಖನದ ಸಂಕ್ಷಿಪ್ತ ರೂಪವಾಗಿದೆ.

Translate »
error: Content is protected !!