ಹನ್ನೆರಡು ಅನುಪ್ರೇಕ್ಷೆಗಳು

ಹನ್ನೆರಡು ಅನುಪ್ರೇಕ್ಷೆಗಳು

ದ್ವಾದಶಾನುಪ್ರೇಕ್ಷಾ

ಯಾವುದಾದರೂ ಪದಾರ್ಥವನ್ನು ಮತ್ತೆ ಮತ್ತೆ ಚಿಂತನೆ ಮಾಡುವುದನ್ನು ಅನುಪ್ರೇಕ್ಷಾ ಎಂದು ಹೇಳುತ್ತಾರೆ. ವಿಚಾರಗಳು ನಮ್ಮ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತವೆ. ಜೀವನದಲ್ಲಿ ಘಟಿಸಬಹುದಾದ ಘಟನೆಗಳನ್ನು ನಾವು ಮನಸ್ಸಿನಲ್ಲಿಯೇ ವಿಶ್ಲೇಷಣೆ ಮಾಡಿಕೊಂಡರೆ ಬಹಳ ಸಾರವತ್ತಾದ ತತ್ವಗಳು ನಮಗೇ ಗೋಚರವಾಗುತ್ತವೆ, ನಮ್ಮ ಮನೋಬಲವು ಹೆಚ್ಚುತ್ತದೆ ಮತ್ತು ನಾವು ಸತ್ಯ ಪುರುಷಾರ್ಥದ ಕಡೆಗೆ ಪ್ರಯತ್ನ ಶೀಲರಾಗುತ್ತೇವೆ. ಸಂಸಾರ, ಶರೀರ ಮತ್ತು ಭೋಗಗಳ ಸ್ವರೂಪಗಳನ್ನು ನಾವು ಮತ್ತೆ ಮತ್ತೆ ವಿಚಾರ ಮಾಡಿದರೆ ಆಗ ಅದರ ನಿಸ್ಸಾರತೆಯು ನಮ್ಮ ಅರಿವಿಗೆ ಬರತೊಡಗುತ್ತದೆ ಮತ್ತು ಸಹಜವಾಗಿಯೇ ವೈರಾಗ್ಯವು ಅಂಕುರಿಸತೊಡಗುತ್ತದೆ. ಆದ್ದರಿಂದ ಇವುಗಳನ್ನು ವೈರಾಗ್ಯದ ಉತ್ಪತ್ತಿಯಲ್ಲಿ ತಾಯಿಯಂತೆ ಎಂದು ಹೇಳಲಾಗಿದೆ. ಜೈನದರ್ಶನದಲ್ಲಿ ಹನ್ನೆರಡು ಅನುಪ್ರೇಕ್ಷೆಗಳು ಪ್ರಸಿದ್ಧವಾಗಿವೆ. ಇವುಗಳನ್ನು ಹನ್ನೆರಡು ಭಾವನೆಗಳೆಂದೂ ಸಹ ಹೇಳುತ್ತಾರೆ. ಅವುಗಳೆಂದರೆ ಅನಿತ್ಯ, ಅಶರಣ, ಸಂಸಾರ, ಏಕತ್ವ, ಅನ್ಯತ್ವ, ಅಶುಚಿತ್ವ, ಅಸ್ರವ,‌ ಸಂವರ, ನಿರ್ಜರ, ಲೋಕ, ಬೋಧಿದುರ್ಲಭ ಮತ್ತು ಧರ್ಮ.

ಅನಿತ್ಯ_ಅನುಪ್ರೇಕ್ಷಾ

ಸಂಸಾರದಲ್ಲಿ ಯಾವುದು ಉತ್ಪನ್ನವಾಗಿದೆಯೋ, ಖಂಡಿತವಾಗಿಯೂ ಅದರ ವಿನಾಶವಾಗಿಯೇ ತೀರುತ್ತದೆ. ಪ್ರಪಂಚದಲ್ಲಿನ ಪ್ರತಿಯೊಂದು ಸಂಯೋಗವೂ ವಿನಾಶಶೀಲವಾಗಿದೆ. ಕ್ಷಣ ಭಂಗುರವಾಗಿದೆ. ನಮ್ಮ ಶರೀರವಾಗಲೀ , ಸಂಪತ್ತಾಗಲೀ, ಅಥವಾ ಸಂಬಂಧಿಗಳೇ ಆಗಲಿ ಎಲ್ಲವೂ ನಮ್ಮನ್ನು ಅಗಲಿ ಹೋಗುತ್ತವೆ. ಇವುಗಳ ಅಸ್ತಿತ್ವವು ನಸುಕಿನ ತಾರೆಗಳಂತೆ ಸ್ವಲ್ಪಹೊತ್ತಿನಲ್ಲಿಯೇ ಮಾಯವಾಗಿ ಹೋಗುತ್ತವೆ. ಈ ರೀತಿಯಾಗಿ ಚಿಂತನೆ ಮಾಡುವುದು ಅನಿತ್ಯ ಅನುಪ್ರೇಕ್ಷೆಯಾಗಿದೆ.

ಅಶರಣ_ಅನುಪ್ರೇಕ್ಷಾ

ಜನ್ಮ , ಜರಾ, ಮತ್ತು ಮರಣದಿಂದ ಈ ಪ್ರಪಂಚದಲ್ಲಿ ಯಾರೂ ಯಾರನ್ನೂ ಉಳಿಸಲಾರರು. ಎಷ್ಟೇ ದೊಡ್ಡ ಪರಿಕರವಿರಲಿ ಅಥವಾ ಪರಿವಾರವಿರಲಿ, ಧನವಿರಲಿ ಮತ್ತು ವೈಭವವಿರಲಿ ಅಥವಾ ದೇವೀ ದೇವತೆಗಳ ಉಪಾಸನೆಯನ್ನು ಮಾಡಲಿ, ಮೃತ್ಯುವಿನ ಸಮಯದಲ್ಲಿ ಇವುಗಳ ಆಟವೇನೂ ನಡೆಯುವುದಿಲ್ಲ, ಎಲ್ಲಾ ಸಾಧನಗಳಿದ್ದರೂ ಸಹ ನಿಷ್ಪ್ರಾಣರಾಗುತ್ತಾರೆ. ಹುಟ್ಟಿದವರು ಸಾಯಲೇಬೇಕು. ಬೆಲೆ ಬಾಳುವ ಔಷಧಗಳು, ಮಂತ್ರ-ತಂತ್ರ ಮತ್ತು ಪ್ರಪಂಚದ ವಸ್ತುಗಳೆಲ್ಲ ವ್ಯರ್ಥವೆಂದು ಸಿದ್ಧವಾಗುತ್ತವೆ. ಸಿಂಹದ ಬಾಯಿಯಲ್ಲಿರುವ ಜಿಂಕೆಯನ್ನು ಉಳಿಸಲು ಯಾರಿಂದಲೂ ಹೇಗೆ ಸಾಧ್ಯವಾಗುವುದಿಲ್ಲವೋ, ಹಾಗೆಯೇ ಈ ಜೀವವನ್ನು ಮೃತ್ಯುರೂಪಿ ಸಿಂಹದ ಬಾಯಿಯಿಂದ ಉಳಿಸಲು ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ದೇವ , ಧರ್ಮ ಮತ್ತು ಗುರುಗಳೇ ನಮಗೆ ಶರಣವಾಗಿರುವರು, ಅವರು ನಮ್ಮನ್ನು ಮೃತ್ಯುವಿನಿಂದ ಆತಂಕದಿಂದ ಉಳಿಸುತ್ತಾರೆ. ಈ ರೀತಿಯಾಗಿ ಚಿಂತನೆ ಮಾಡುವುದು ಅಶರಣ ಅನುಪ್ರೇಕ್ಷೆಯಾಗಿದೆ.

ಸಂಸಾರ_ಅನುಪ್ರೇಕ್ಷಾ

ಜನ್ಮ, ಜರಾ ಮತ್ತು ಮರಣ ರೂಪೀ ಈ ಸಂಸಾರದಲ್ಲಿ ಎಲ್ಲಾ ಜೀವರುಗಳು ನಾಲ್ಕು ಗತಿಗಳಲ್ಲಿ ಸುತ್ತುತ್ತಾ ಅನುಭವಿಸುತ್ತಿವೆ. ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳೂ ದುಃಖಿಗಳೇ ಆಗಿವೆ. ವಾವರಗಳು ವೈಭವ ಸಂಪನ್ನರಾಗಿರಲಿ, ಅವರ ಹತ್ತಿರ ಎಲ್ಲಾ ರೀತಿಯ ಸುಖಭೋಗಗಳಿರಲಿ ಅಥವಾ ಯಾವ ವೈಭವವೂ ಇಲ್ಲದಿರಲಿ, ದರಿದ್ರನಾಗಿರಲಿ, ಏನೂ ಇಲ್ಲದಿರಲಿ, ಪ್ರತಿಯೊಬ್ಬರೂ ದುಃಖಿಗಳೇ ಆಗಿದ್ದಾರೆ. ವ್ಯತ್ಯಾಸವೇನೆಂದರೆ ಹಣಮಂತನು ಇನ್ನೂ ಹೆಚ್ಚು ಬೇಕೆಂದು ದುಖಿಯಾಗುತ್ತಾನೆ ಮತ್ತು ಹಣವಿಲ್ಲದವನು ಅಭಾವದ ಕಾರಣದಿಂದ ದುಃಖಿಯಾಗುತ್ತಾನೆ. ಬಡವನು ನನ್ನ ಅಭಾವವನ್ನು ನಿವಾರಿಸಿಕೊಳ್ಳಲು ಪ್ರಯತ್ನ ಪಡುತ್ತಾನೆ ಮತ್ತು ಸಂಪನ್ನ ವರ್ಗದವರು ಮತ್ತೂ ಹೆಚ್ಚು ಗಳಿಸಲು ಇಚ್ಚಿಸುತ್ತಾರೆ. ಈ ರೀತಿಯಾಗಿ ಎಲ್ಲರೂ ಆಶೆ ಮತ್ತು ತೃಷೆಗೆ ಅಧೀನರಾಗಿ ಅದಕ್ಕೆ ಅನುಸಾರವಾಗಿ ದುಃಖಿಗಳಾಗುತ್ತಾರೆ. ಈ ರೀತಿಯಾಗಿ ಚಿಂತನೆಯನ್ನು ಮಾಡುವುದು ಸಂಸಾರ ಅನುಪ್ರೇಕ್ಷೆಯಾಗಿದೆ.

ಏಕತ್ವ_ಅನುಪ್ರೇಕ್ಷಾ

ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಒಬ್ಬನೇ ಜನ್ಮವೆತ್ತುತ್ತಾನೆ. ಜನ್ಮವೆತ್ತುವ ಸಮಯದಲ್ಲಿ ಅವನ ಜೊತೆ ಯಾರೂ ಬರುವುದಿಲ್ಲ, ಎಲ್ಲ ಸಂಬಂಧಗಳೂ – ಜೊತೆಗಾರರೂ, ಆಪ್ತರೂ, ನೆಂಟರೂ, ಎಲ್ಲರೂ ಮಧ್ಯದಲ್ಲಿ ಸಿಗುವರು ಹಾಗೂ ಸಾಯುವುದೂ ಸಹ ಒಬ್ಬನೇ. ಮಿತ್ರ- ಗೆಳೆಯರು, ಜನ್ಮ ಸಮಯದಲ್ಲಿ ಜೊತೆಯಾಗಿ ಬರುವುದಿಲ್ಲ ಮತ್ತು ಮರಣದ ನಂತರ ಯಾರೂ ಅವನ ಜೊತೆಯಲ್ಲಿ ಹೋಗುವುದಿಲ್ಲ. ತನ್ನ ಸುಖ ಮತ್ತು ದುಃಖವನ್ನು ತಾನೊಬ್ಬನೇ ಅನುಭವಿಸಬೇಕಾಗುತ್ತದೆ. ತನ್ನ ಸಂಸಾರ ಯಾತ್ರೆಯಲ್ಲಿ ಅವನು ತಾನೊಬ್ಬನೇ ಪೂರ್ಣ ಮಾಡಬೇಕಾಗುತ್ತದೆ. ಈ ರೀತಿಯಾಗಿ ವಿಚಾರ ಮಾಡುವುದು ಏಕತ್ವ ಅನುಪ್ರೇಕ್ಷೆಯಾಗಿದೆ.

ಅನ್ಯತ್ವ_ಅನುಪ್ರೇಕ್ಷಾ

ಹೊರಗಿನಿಂದ ಕಾಣುವ ಧನ – ವೈಭವ ಹಾಗೂ ಪರಿವಾರ – ಪರಿಜನ ಎಲ್ಲರೂ ನನ್ನಿಂದ ಬೇರೆಯಾದವರು, ಇವರಾರೂ ನನ್ನವರಲ್ಲ, ನನ್ನ ಜೊತೆಯಲ್ಲಿ ಗಾಢವಾದ ಸಂಬಂಧವುಳ್ಳ ಈ ದೇಹವೂ ಸಹ ನನ್ನದಲ್ಲ. ಹಾಲು ಮತ್ತು ನೀರಿನಂತೆ ಬೆರೆತಿರುವ ಕಾರಣ ಈ ದೇಹ ಮತ್ತು ಆತ್ಮ ಒಂದಾಗಿರುವಂತೆ ಕಾಣುತ್ತವೆ, ಆದರೆ ವಿವೇಕದಿಂದ ಇವುಗಳ ಭೇದವನ್ನು ತಿಳಿಯಬಹುದು. ನಾನು ನನ್ನ ಪುರುಷಾರ್ಥದಿಂದ ನನ್ನ ಆತ್ಮನನ್ನು ಶರೀರ ಬಂಧನದಿಂದ ಮುಕ್ತ ಮಾಡಬಲ್ಲೆನು. ಈ ರೀತಿಯಾಗಿ ವಿಚಾರ ಮಾಡುವುದು ಅನ್ಯತ್ವ ಅನುಪ್ರೇಕ್ಷೆಯಾಗಿದೆ.

ಅಶುಚಿ_ ಅನುಪ್ರೇಕ್ಷಾ

ಮೇಲಿನಿಂದ ಬೆಳ್ಳಗೆ ಅಥವಾ ಕಪ್ಪಗೆ, ಸುಂದರ ಅಥವಾ ಕುರೂಪವಾಗಿ ಕಾಣುವ ಶರೀರವು ಒಳಗಿನಿಂದ ಅಷ್ಟೇ ಘೃಣಾಸ್ಪದವಾಗಿದೆ. ಇದರೊಳಗೆ ಯಾವ ಸಾರವೂ ಇಲ್ಲ. ಇದನ್ನು ಶುಚಿ ಮಾಡಲು ಎಷ್ಟು ಪ್ರಯತ್ನಿಸಿದರೂ, ಅದು ಅಷ್ಟೇ ಕೊಳಕಾಗಿಯೇ ಆಗುತ್ತದೆ. ಆಷ್ಟೇ ಅಲ್ಲ ಇದರ ಸಂಪರ್ಕದಲ್ಲಿ ಬರುವ ಕೇಸರಿ, ಚಂದನ, ಪುಷ್ಪ ಮುಂತಾದ ಪವಿತ್ರ ಸಾಮಗ್ರಿಗಳೂ ಸಹ ಅಪವಿತ್ರವಾಗಿ ಬಿಡುತ್ತವೆ. ಈ ಶರೀರವನ್ನು ಶೃಂಗರಿಸುವುದೆಂದರೆ ಮಲದ ಗಡಿಗೆಯನ್ನು ಹೂವಿನಿಂದ ಅಲಂಕರಿಸಿದಂತೆ. ಈ ಶರೀರದ ಮೂಲಕವಾಗಿ ತಪಸ್ಸನ್ನು ಮಾಡುವುದೊಂದೇ ಇದರ ಸಾರ್ಥಕತೆಯಾಗಿದೆ. ಇದರಿಂದಾಗಿ ಇದು ಪವಿತ್ರವಾಗುತ್ತದೆ. ಈ ರೀತಿಯಾಗಿ ವಿಚಾರ ಮಾಡುವುದು ಅಶುಚಿ ಅನುಪ್ರೇಕ್ಷೆಯಾಗಿದೆ.

ಅಸ್ರವ_ಅನುಪ್ರೇಕ್ಷಾ

ನಾನು ನನ್ನ ಮನ, ವಚನ ಮತ್ತು ಕಾಯಗಳ ಕ್ರಿಯೆಯಿಂದ ನಿರಂತರವಾಗಿ ಅನೇಕ ಪ್ರಕಾರವಾದ ಕರ್ಮಗಳನ್ನು ಅಸ್ರವ ಮಾಡಿಕೊಳ್ಳುತ್ತಿದ್ದೇನೆ, ಇದರಿಂದಾಗಿ ಅನೇಕ ಪ್ರಕಾರವಾದ ಕರ್ಮಗಳು ನನ್ನ ಆತ್ಮನನ್ನು ನಾನಾ ಪ್ರಕಾರವಾದ ಯೋನಿಗಳಲ್ಲಿ ತಿರುಗಿಸುತ್ತಿವೆ. ನನ್ನ ಅಜ್ಞಾನವು ದೂರವಾಗುವವರೆಗೆ ಈ ಅಸ್ರವದಿಂದ ನಾನು ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಪ್ರಕಾರವಾಗಿ ಚಿಂತನೆ ಮಾಡುವುದು ಅಸ್ರವ ಅನುಪ್ರೇಕ್ಷೆಯಾಗಿದೆ.

ಸಂವರಾ_ಅನುಪ್ರೇಕ್ಷಾ

ಪ್ರತಿ ಸಮಯದಲ್ಲೂ ಆಗುವ ಕರ್ಮಗಳ ಅಸ್ರವದ ಈ ಪ್ರಕ್ರಿಯೆಗಳನ್ನು ತಡೆಯದೆ ನಮ್ಮ ಆತ್ಮದ ವಿಕಾಸವು ಸಂಭವವಾಗುವುದಿಲ್ಲ. ಸಂವರದ ಮಾರ್ಗದಿಂದಲೇ ಕರ್ಮಗಳನ್ನು ತಡೆಯಬಹುದಾಗಿದೆ. ಈ ಸಾಧನವು ನನ್ನ ಜೀವನದಲ್ಲಿ ಹೇಗೆ ವಿಕಾಸ ಹೊಂದಬಲ್ಲದು, ಈ ಪ್ರಕಾರವಾಗಿ ವಿಚಾರ ಮಾಡುವುದೇ ಸಂವರ ಅನುಪ್ರೇಕ್ಷೆಯಾಗಿದೆ.

ನಿರ್ಜರಾ_ಅನುಪ್ರೇಕ್ಷಾ

ಕರ್ಮಗಳು ಉದುರಿ ಹೋಗುವುದನ್ನು ನಿರ್ಜರಾ ಎಂದು ಹೇಳುತ್ತಾರೆ. ತಪದ ಮೂಲಕವಾಗಿ ಸರ್ವ ಕರ್ಮಗಳೂ ತೊಳೆದು ಹೋಗುತ್ತವೆ. ನಾನು ಕರ್ಮಗಳನ್ನು ನಿರ್ಜರೆ ಮಾಡುವ ತನಕ ಆತ್ಮಿಕ ಸುಖವನ್ನು ಪಡೆದುಕೊಳ್ಳಲಾರೆ. ಸಂವರ ಪೂರ್ವಕವಾಗಿ ಯಾವಾಗ ತಪರೂಪೀ ಜ್ಯೋತಿಯು ನನ್ನ ಅಂತರಂಗದಲ್ಲಿ ಪ್ರಕಟವಾಗುತ್ತದೆಯೋ, ಆಗಲೇ ನನ್ನ ಆತ್ಮವು ಪ್ರಕಾಶಮಾನವಾಗುವುದು. ಈ ಪ್ರಕಾರವಾಗಿ ವಿಚಾರ ಮಾಡುವುದು ನಿರ್ಜರಾ ಅನುಪ್ರೇಕ್ಷೆಯಾಗಿದೆ.

ಲೋಕ_ಅನುಪ್ರೇಕ್ಷಾ

ನನ್ನ ಆತ್ಮ ಸ್ವರೂಪವನ್ನು ಮರೆತು ನಾನು ಅನಾದಿ ಕಾಲದಿಂದ ಈ ಲೋಕದಲ್ಲಿ ಸುತ್ತಿದ್ದೇನೆ. ಈ ಲೋಕವು ಆರು ದ್ರವ್ಯಗಳ ಸಂಯೋಗ / ಸಂಯುಕ್ತ ರೂಪವಾಗಿದೆ. ಇದನ್ನು ಯಾರೂ ಮಾಡಿಲ್ಲ ಮತ್ತು ಇದರ ವಿನಾಶವೂ ಸಹ ಸಾಧ್ಯವಿಲ್ಲ, ಇದು ಅನಾದಿನಿದನವಾದದ್ದು. ಹದಿನಾಲ್ಕು ರಜ್ಜು ಎತ್ತರವಾದ ಪುರುಷಕಾರದ ಈ ಲೋಕದಲ್ಲಿ‌ ನಾನು ಅಜ್ಞಾನದಿಂದ ತಿರುಗುತ್ತಾ ಹೇಳಲಾರದಷ್ಟು ದುಃಖಕ್ಕೆ ಪಾತ್ರನಾಗಿದ್ದೇನೆ. ಇನ್ನು ಹೇಗಾದರೂ ಆಗಲಿ, ಈ ಪರಿಭ್ರಮಣವನ್ನು ನಾಶಮಾಡಿ ನನ್ನ ಶಾಶ್ವತ ಸ್ವರೂಪವನ್ನು ಪ್ರಾಪ್ತ ಮಾಡಿಕೊಳ್ಳಬೇಕು. ಅದನ್ನು ಪ್ರಾಪ್ತಿ ಮಾಡಿಕೊಂಡ ನಂತರ ಯಾವ ರೀತಿಯ ಜನನ-ಮರಣಗಳೂ ಇರುವುದಿಲ್ಲ. ಈ ಪ್ರಕಾರವಾಗಿ ಚಿಂತಿಸುವುದು ಲೋಕ ಅನುಪ್ರೇಕ್ಷೆಯಾಗಿದೆ.

ಬೋಧಿದುರ್ಲಭಅನುಪ್ರೇಕ್ಷೆ

ಧನ ಧಾನ್ಯಾದಿ ಬಾಹ್ಯ ಸಾಂಸಾರಿಕ ಸಂಪತ್ತನ್ನು ನಾನು ಅನೇಕ ಸಲ ಪ್ರಾಪ್ತಿ ಮಾಡಿಕೊಂಡಿದ್ದೇನೆ, ಆದರೆ ಇವುಗಳಿಂದ ನನಗೆ ಯಾವ ಪ್ರಕಾರವಾದ ಸುಖ ಅಥವಾ ಸಂತೋಷಗಳು ಸಿಗಲಿಲ್ಲ. ಆದರೆ ಸಂಸಾರದಿಂದ ಪಾರಾಗುವ ಈ ಜ್ಞಾನವು ನನಗೆ ಬಹಳ ದುರ್ಲಭತೆಯಿಂದ ಪ್ರಾಪ್ತವಾಗಿದೆ. ಯಾವುದಾದರೂ ಪಟ್ಟಣದ ನಾಲ್ಕು ರಸ್ತೆಗಳು ಕೂಡುವ ಚೌಕದಲ್ಲಿ ರತ್ನಗಳ ರಾಶಿಯು ಸಿಗುವಷ್ಟೇ ಇದರ ಪ್ರಾಪ್ತಿ ಬಹಳ ದುರ್ಲಭವಾಗಿದೆ. ಆದ್ದರಿಂದ ರತ್ನಗಳಿಗಿಂತಲೂ ಅಮೂಲ್ಯವಾದ ಈ ಬೋಧಿರತ್ನವನ್ನು ಪಡೆದು ಇನ್ನು ಇದರ ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿಯೂ ನಾನು ತೊಡಗಬೇಕಾಗಿದೆ. ಈ ಪ್ರಕಾರವಾದ ಚಿಂತನೆಯನ್ನು ಮಾಡುವುದು ಬೋಧಿದುರ್ಲಭ‌ ಅನುಪ್ರೇಕ್ಷೆಯೆಂದು ಹೇಳುತ್ತಾರೆ.

ಧರ್ಮ_ಅನುಪ್ರೇಕ್ಷಾ

ಲೋಕದಲ್ಲಿನ ಎಲ್ಲಾ ಸಂಯೋಗಗಳೂ, ಸಂಬಂಧಗಳು ಇಲ್ಲಿಯೇ ಬಿಟ್ಟು ಹೋಗುತ್ತವೆ. ಧರ್ಮವೊಂದೇ ಜೀವನ ಜೊತೆಯಲ್ಲಿ ಪರಲೋಕಕ್ಕೆ ಸಹ ಹೋಗುತ್ತದೆ. ಧರ್ಮವೇ ಇದರ ನಿಜವಾದ ಸಹಾಯಕ / ಜೊತೆಗಾರ. ಇದೇ ನಿಜವಾದ ಮಿತ್ರ. ಈ ಪ್ರಕಾರವಾದ ಚಿಂತನೆಯಿಂದ ತಮ್ಮ ಧಾರ್ಮಿಕ ಶೃದ್ಧೆಯನ್ನು ದೃಢಪಡಿಸಿಕೊಳ್ಳುವುದು ಧರ್ಮ – ಅನುಪ್ರೇಕ್ಷೆಯಾಗಿದೆ.

ಈ ಹನ್ನೆರಡು ಪ್ರಕಾರದ ಅನುಪ್ರೇಕ್ಷ ಗಳಿಗೆ ನಮ್ಮ ಜೀವನದಲ್ಲಿ ಬಹಳ ಮಹತ್ವವಿದೆ. ಇವುಗಳ ಮೇಲೆ ಅನೇಕ ಗ್ರಂಥಗಳನ್ನು ಪ್ರಾಕೃತ ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ. ಹಿಂದಿಯ‌ ಅನೇಕ ಕವಿಗಳು ಇವುಗಳನ್ನು ತಮ್ಮ ಲೇಖನಿಯ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ. ಅವುಗಳನ್ನು ಆಧರಿಸಿ ನಾವು ಸಹಜವಾಗಿ ಸವಿಸ್ತಾರವಾಗಿ ಇವುಗಳನ್ನು ಚಿಂತಿಸಬಹುದಾಗಿದೆ.

Translate »
error: Content is protected !!