ಉತ್ತಮ ಬ್ರಹ್ಮಚರ್ಯಧರ್ಮ

ಉತ್ತಮ ಬ್ರಹ್ಮಚರ್ಯಧರ್ಮ

ಬ್ರಹ್ಮನಲ್ಲಿ ಅಂದರೆ ಆತ್ಮ ಚರಿಯ ಅಂದರೆ‌ ಆತ್ಮನಲ್ಲಿ‌ ಲೀನನಾಗುವುದು , ಆತ್ಮ ಧರ್ಮವನ್ನು ಪಾಲಿಸುವುದು ಬ್ರಹ್ಮಚರ್ಯವಾಗಿದೆ. ಕಾಮಾದಿ ವಿಕಾರಗಳನ್ನು ಗೆದ್ದು ತನ್ನ ಆತ್ಮನ ನೈಜ ಗುಣಗಳನ್ನು ಪ್ರಕಾಶಿಸಿ ಆತ್ಮೋನ್ನತಿಯನ್ನು ಸಾಧಿಸುವುದೇ ಉತ್ತಮ ಬ್ರಹ್ಮಚರ್ಯ ಧರ್ಮವಾಗಿದೆ.

ಬ್ರಹ್ಮಚರ್ಯ ಏಕೆ ಬೇಕು?

ಮನುಷ್ಯನ ಜೀವನದ ಸುಗಮ‌ ಸೂತ್ರಕ್ಕಾಗಿ ಮುನಿವರೇಣ್ಯರು, ಹಿರಿಯರು ಹಲವು ಮಾರ್ಗಗಳನ್ನು ಬೋಧಿಸಿದ್ದಾರೆ. ಅದರಲ್ಲಿ ಬ್ರಹ್ಮಚರ್ಯವೂ ಒಂದು. ಭಾರತೀಯ ಪರಂಪರೆಯಲ್ಲಿ ಮೊದಲೆಲ್ಲ ಸಂಸ್ಕಾರಗಳು ರಕ್ತಗತವಾಗಿಯೇ ಬರುತ್ತಿದ್ದವು. ಆದರೆ ಇಂದಿನ ಕಾಲಮಾನದಲ್ಲಿ ನಮ್ಮ ಸಂಸ್ಕಾರಗಳು ಪತನವಾಗುತ್ತಿವೆ. ಅದರಲ್ಲೂ ಈಗೀನ ಬಾಲ, ಯುವ ಜನರಲ್ಲಂತೂ ಕಾಮ ಇತ್ಯಾದಿ ವಿಕಲ್ಪಗಳು ವಿಜ್ರಂಭಿಸುತ್ತಿವೆ. ಇದರಿಂದ ನಡೆಯುವಂಥ ದುಷ್ಪರಿಣಾಮಗಳು ಒಂದೆರರಡಲ್ಲ, ನೂರಾರು ಈ ಸಂಬಂಧವಾಗಿ ಅಪರಾಧಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳು ಟಿವಿ, ಸಿನೆಮಾ ಇತ್ಯಾದಿ ಅಶ್ಲೀಲತೆಯನ್ನೇ ಬಂಡವಾಳವಾಗಿಸಿಕೊಂಡು ತಮ್ಮ ವ್ಯಾಪಾರ ವಹಿವಾಟನ್ನು ವೃದ್ಧಿಗೊಳಿಸುತ್ತಿವೆ. ಇದರ ಪಾಶದಲ್ಲಿ ಬಿದ್ದ ನಮ್ಮ ಯುವ ಸಮೂಹ ತಮ್ಮ ಬದುಕನ್ನು ನೈತಿಕ ಅಧಃಪತನದತ್ತ‌‌ ಕೊಂಡೊಯ್ಯುತ್ತಿದ್ದಾರೆ. ಒಂದು ಕಾಲದಲ್ಲಿ ನಮ್ಮಲ್ಲಿ ಸ್ತ್ರೀಯನ್ನು ದೇವತಾ ರೂಪದಲ್ಲಿ‌ ಕಾಣಲಾಗುತ್ತಿತ್ತು. ಈಗಂತೂ ಸ್ರ್ತೀಯನ್ನು ಭೋಗದ ಸಾಮಾಗ್ರಿಯಂತೆ ಕಾಣಲಾಗುತ್ತಿದೆ. ಜನರಲ್ಲಿ ಬ್ರಹ್ಮಚರ್ಯದ ಪರಿಕಲ್ಪನೆ ಇಲ್ಲದೇ ಇರುವುದರಿಂದ ತಮ್ಮ ಬದುಕನ್ನೇ ಅಲ್ಲದೇ‌ ಸಮಾಜವನ್ನೂ ವಿನಾಶದಂಚಿಗೆ ದೂಡುತ್ತಿದ್ದಾರೆ. ರಾಜ ಯಶೋಧರನ ಪತ್ನಿ ಅಮೃತಮತಿ ಕಾಮ ಲಾಲಸೆಗಾಗಿ ಬಲಿ ಬಿದ್ದು ತಾನೂ ಅಲ್ಲದೇ ಪೂರ್ತಿ ಪರಿವಾರದ ವಿನಾಶಕ್ಕೆ ಕಾರಣಳಾದಳು. ರಾವಣನು ಸೀತೆಯಲ್ಲಿ‌ ಕಾಮದಾಟ ನಡೆಸಬೇಕೆಂಬ ಕಾರಣದಿಂದ ಮಾಡಿದ ಕಾರ್ಯದಿಂದಾಗಿ ನರಕವಾಸಿಯಾಗಿದ್ದಾನೆ. ಕಾಮದಾಹಕ್ಕೆ ಬಲಿಯಾದವರು ಕ್ಷಣಿಕ ಸುಖದ ಮತ್ತಿನಲ್ಲಿ ತೇಲಾಡಿ ಮರುಕ್ಷಣವೇ ಪಶ್ಚಾತ್ತಾಪದ ಬೇಗುದಿಯಲ್ಲಿ ಬೇಯಬೇಕಾಗುತ್ತದೆ. ಕಾಮೋದ್ರಿಕ್ತನು ಎಂದೂ ಸಮಚಿತ್ತನಾಗಿರುವುದಿಲ್ಲ.

ಉತ್ತಮ ಬ್ರಹ್ಮಚರ್ಯ ಧರ್ಮವೇಶ್ರೇಷ್ಟ

ನಮ್ಮ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು. ಪತ್ನಿಯ ಹೊರತು ಬೇರೆ ಸ್ತ್ರೀಯರು ಅಕ್ಕತಂಗಿಯರೆಂಬ ಮಾನ್ಯತೆಯನ್ನು ನಮ್ಮ ಪರಂಪರೆ ನೀಡಿದೆ. ಮುನಿ ಶ್ರೇಷ್ಟರುಗಳು ಉತ್ತಮ ಬ್ರಹ್ಮಚರ್ಯದ ಮೂಲಕ ಆತ್ಮನ್ನೋತಿಯನ್ನು ಸಾಧಿಸಿ ಮೋಕ್ಷಗಾಮಿಗಳಾಗಿದ್ದಾರೆ. ಕಾಮೋತ್ತೇಜಕವಾದ ಪ್ರಕ್ರಿಯಗಳತ್ತ ವಾಲದೇ ಆತ್ಮನ ಸಹಜ ಗುಣಗಳನ್ನು ಅರಿತು ಬದುಕನ್ನು ಹಸನುಗೊಳಿಸುವುದು ಉತ್ತಮರ ಲಕ್ಷಣವಾಗಿದೆ. ಲಕ್ಷ್ಮಣನು ಉತ್ತಮ ಬ್ರಹ್ಮಚರ್ಯದ ಮೂಲಕ ಸೀತೆಯ ಕಾಲುಂಗುರವನ್ನು ಮಾತ್ರ ಗುರುತಿಟ್ಟುಕೊಂಡಿದ್ದ. ಕಾಮದಿಂದಾಗಿ ಮನುಷ್ಯ , ಪ್ರಾಣಿಗಳು ಹೊಡೆದಾಡಿ ಸತ್ತಿವೆ. ಪುರಾಣ, ಇತಿಹಾಸದಲ್ಲೂ ಕೂಡ ಉತ್ತಮ ಶೀಲವ್ರತವನ್ನು ಪಾಲಿಸಿಕೊಂಡು ಸಾಧನೆಗೈದ ಅನೇಕ ಉದಾಹರಣೆಗಳಿವೆ. ಕುಶೀಲದ ವಿಚಾರ ಮಾಡದೇ ಇದ್ದರೆ ಪಾಪಗಳಿಂದ ದೂರ ಇರಬಹುದು. ಕುಶೀಲ ರಹಿತರಾದರೆ ಸಂಸಾರ ಭ್ರಮಣೆ ಕಡಿಮೆಯಾಗುತ್ತದೆ. ಬ್ರಹ್ಮಚರ್ಯವು ವ್ಯಕ್ತಿಗೆ ಶೋಭೆಯನ್ನು ನೀಡುತ್ತದೆ ಹಾಗೂ ಸಕಲ ಸದ್ಗುಣಗಳು ಮನೆ ಮಾಡುತ್ತವೆ. ಸಾಧು ಜನರಿಂದ ಪ್ರಶಂಸಗೆ ಒಳಗಾಗುತ್ತಾನೆ. ಆತ್ಮನ ಹಿತದ ದಾರಿಯಲ್ಲಿ ಸಾಗುತ್ತಾನೆ.

ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ಬ್ರಹ್ಮಚರ್ಯ ಧರ್ಮದ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ

ನಿರಂಜನ್ಜೈನ್ಅಳದಂಗಡಿ
9945563529.

Translate »
error: Content is protected !!