ಉತ್ತಮ ತಪಧರ್ಮ

ಉತ್ತಮ ತಪಧರ್ಮ

ಇಚ್ಛೆಗಳನ್ನು ನಿಯಂತ್ರಿಸಿಕೊಳ್ಳುವುದೇ ಉತ್ತಮ ತಪವಾಗಿದೆ. ಲೋಕಿಕ ಜೀವನದ ಬಹಳ ಆಸೆ, ಆಕಾಂಕ್ಷೆಗಳನ್ನು ದೂರೀಕರಿಸಿ , ಹಿಂಸಾ ಮಾರ್ಗವನ್ನು‌ ತೊರೆದು , ಧರ್ಮ ಮಾರ್ಗದಲ್ಲಿ ಮುನ್ನಡೆಯುತ್ತಾ ನಮಗೆ ದೊರೆತಿರುವ ಮನುಷ್ಯ ಪರ್ಯಾಯವನ್ನು ತಪದ ಮೂಲಕ ಸತ್ಫಲಗೊಳಿಸುವುದೇ ಉತ್ತಮ ತಪ ಧರ್ಮವಾಗಿದೆ. ಉತ್ತಮ ತಪ ಧರ್ಮದಿಂದ ಮಾತ್ರ ಶಾಶ್ವತ ಸುಖದ ಒಡೆಯನಾಗಬಹುದು.

ಬಹಳ ಇಚ್ಛೆಯಿಂದ ದುಃಖ

ಮನುಷ್ಯನ ಸುಖೀ ಜೀವನಕ್ಕೆ ಹಲವು ಕಾರಣಗಳಿರುತ್ತವೆ ಅಂತೆಯೇ ದುಃಖಕ್ಕೂ ಹಲವು ಕಾರಣಗಳಿರುತ್ತದೆ. ತನ್ನ ಅಜ್ಞಾನದ ಕಾರಣದಿಂದಾಗಿ ತನ್ನ ಇಚ್ಛೆಗಳನ್ನು ಪೊರೈಸಿಕೊಳ್ಳಲು ವಾಮಮಾರ್ಗಕ್ಕೆ ಇಳಿದು ಅಪಾರವಾದ ನಷ್ಟವನ್ನು, ದುಃಖವನ್ನು ಅನುಭವಿಸುತ್ತಾನೆ. ತನು, ಮನ, ಕಾಯವನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ‌ ಹುಚ್ಚು ಕಲ್ಪನೆಗಳ ಬೆನ್ನೇರಿ ನಿರೀಕ್ಷೆಗೂ ಮೀರಿದ ಇಚ್ಛೆಗಳ ಈಡೇರಿಕೆಗೆ ಅನುಗುಣವಾಗಿ ಮುನ್ನಡೆಯುತ್ತಾ ಶೋಕ ಸಾಗರದಲ್ಲಿ ಮುಳುಗೇಳುತ್ತಾನೆ. ಶಾಶ್ವತ ಸುಖವೆಂಬುದು ಕೇವಲ ಮೋಕ್ಷದಲ್ಲಿದೆಯೇ ಹೊರತು ಈ ಸಂಸಾರದಲ್ಲಿ ಇರುವುದಿಲ್ಲ. ಅದು ಬಿಟ್ಟು ಈ ಸಂಸಾರವೇ ಪರಮ ಶ್ರೇಷ್ಠವಾದ‌ ಸುಖವೆಂದು ಭಾವಿಸಿ ಭ್ರಮಾಲೋಕದಲ್ಲಿ ವಿಹರಿಸಿ ಕ್ಷಣಭಂಗುರವಾದ ಸುಖ ಸಾಮ್ರಾಜ್ಯವೇ ಅನಂತವಾದುದೆಂದು ಭ್ರಮಿಸುತ್ತಲೇ ಇರುವಾಗಲೇ ನಶ್ವರ ಸುಖದ ಕೊನೆಯಾದಾಗ ಅತೀವ ದುಃಖವನ್ನು ಅನುಭವಿಸುತ್ತಾನೆ. ರಾವಣನು ಸೀತೆಯ ಅನುಪಮ ಸೌಂದರ್ಯ ರಾಶಿಯ‌ ಕಂಡು ಆಕೆಯಲ್ಲಿ ಮೋಹಿತನಾಗಿ ಹಾಗೂ ಆಕೆಯೊಡನೆ ಕಾಮದಿಚ್ಛೆಯ ಮಾಡಿದ ಪರಿಣಾಮವಾಗಿ ನಾಶವಾಗುತ್ತಾನೆ. ದುರ್ಯೋಧನನು ಅಗಾಧ ಸಾಮ್ರಾಜ್ಯ ಒಡೆಯ ತಾನೊಬ್ಬನೇ ಇರಬೇಕೆಂಬ ಅಧಿಕ ಇಚ್ಛೆಯನ್ನು ಮಾಡಿದ ಕಾರಣದಿಂದ ಘನಘೋರ ಯುದ್ಧದ ನಿಮಿತ್ತದಿಂದಾಗಿ ಅಪಾರವಾದ ಬಂಧು ಬಾಂಧವರನ್ನು ಕಳೆದುಕೊಂಡು ಕೊನೆಗೆ ತಾನೂ ನಾಶವಾಗುತ್ತಾನೆ. ಈ ಪ್ರಪಂಚದಲ್ಲಿ ಅದೆಷ್ಟೋ ಜನರು ಅಧಿಕ ಇಚ್ಛೆಗಳ ವಶೀಭೂತರಾಗಿ‌ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ದುಃಖ ಪಟ್ಟಿದ್ದಾರೆ.

ಇಚ್ಛೆಗಳ ನಿರೋಧವೇ ಉತ್ತಮ ತಪ

ಇಚ್ಛೆಗಳನ್ನು ನಿಯಂತ್ರಿಸದಾಗಲೇ‌ ಅಹಿಂಸಾ ಪಥದ ಮಾರ್ಗ ಪ್ರಾರಂಭವಾಗುತ್ತದೆ. ಇಚ್ಛೆಗಳ ನಿರೋಧದಲ್ಲಿಯೇ ಅಹಿಂಸೆಯು ಅಡಕವಾಗಿದೆ. ನಿರೋಧಗೊಳಿಸಲು ಪ್ರಾರಂಭವಾದಾಗಲೇ ತಪವು ಪ್ರಾರಂಭವಾಗುತ್ತದೆ. ತಪದಿಂದ ಆತ್ಮವು ಉನ್ನತಿಯತ್ತ ಸಾಗುತ್ತದೆ. ನಮ್ಮ ಶಕ್ತಿ, ಸಾಮಾರ್ಥ್ಯ, ಯೋಗ್ಯತೆಗಳಿಗನುಸಾರವಾಗಿ ಇಚ್ಛೆಗಳನ್ನು ದಮನಿಸಿ ತಪದ ಮಾರ್ಗದಲ್ಲಿ ಮುನ್ನಡೆಯಬೇಕು. ಇದ್ದುದರಲ್ಲಿ ಇದ್ದದ್ದನ್ನು ಅನುಭವಿಸುವುದು ಅಂದರೆ ಸಹಜತೆಯಿಂದ ಜೀವಿಸುವುದು ಜಾಣತನವಾಗಿದೆ. ಚಕ್ರವರ್ತಿ, ರಾಜ ಮಹಾರಾಜ ಮುಂತಾದ ಉನ್ನತೋನ್ನತವಾದ ಪದವಿಗಳಿದ್ದರೂ ಅದನ್ನು ಇಚ್ಚಿಸದೇ ತೃಣಕ್ಕೆ ಸಮಾನವೆಂದು ಭಾವಿಸಿ‌ ಅದೆಷ್ಟೋ ಮಹಾಪುರುಷರು ಉತ್ತಮ ತಪದ ಮೂಲಕ ತೀರ್ಥಂಕರ ಪದವಿಯನ್ನು ಪಡೆದುಕೊಂಡರು. ಹಲವು ಪುರುಷರು ಭವಭವಾಂತರಗಳಲ್ಲಿ ಅದೆಷ್ಟೋ ಪದವಿಗಳನ್ನು ಪಡೆದರೂ ಅದೆಲ್ಲವೂ ನಶ್ವರವಾದುದು ಎಂದು ಭಾವಿಸಿ ಕೊನೆಗೆ ವೈರಾಗ್ಯ ಹೊಂದಿ ಉತ್ತಮ ತಪದ ಮೂಲಕ ಸಾಧನೆಗೈದು ಲೋಕಾಗ್ರದಲ್ಲಿ ಸ್ಥಿರವಾಗಿದ್ದಾರೆ. ಇಚ್ಛೆಗಳನ್ನು ನಿಯಂತ್ರಸಿಕೊಳ್ಳಲು ಮಹಾ ಪುರುಷರಷ್ಟೇ ಸಮರ್ಥರಲ್ಲ, ಸಾಮಾನ್ಯರಾದ ನಮ್ಮಿಂದಲೂ ಸಾಧ್ಯ ಇದೆ. ಆದರೆ ಪ್ರಮಾಣದಲ್ಲಿ ಅಂತರವಿದೆ. ವ್ರತ ಉಪವಾಸಾದಿಗಳನ್ನು ಮಾಡುತ್ತಾ ಧರ್ಮಚಿಂತನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಉತ್ತಮ ತಪದ ಪ್ರಾರಂಭಿಕ ಹಂತದಲ್ಲಿ ತಮ್ಮನ್ನು ತಾವು ಅನುಷ್ಠಾನಗೊಳಿಸಿಕೊಳ್ಳಬಹುದು. ಪೂಜ್ಯ‌ ಮುನಿಗಳು ಮಹಾವ್ರತಗಳನ್ನು ಅಂಗೀಕರಿಸಿ ಉತ್ತಮ ತಪದ ಮಾರ್ಗದಲ್ಲಿ‌ ಸಂಚರಿಸುತ್ತಾರೆ. ತನು, ಮನ, ವಚನದಲ್ಲಿ ಮೂಡುವ ವಿಕೃತ ಇಚ್ಛೆಗಳನ್ನು ದಮನಗೊಳಿಸಬೇಕು. ಇಚ್ಛಾ ರಹಿತನಾಗಿ ಬಾಳಿನ ಸುವರ್ಣ ಪಥವನ್ನು ಆರಿಸಿಕೊಳ್ಳಬೇಕಾದ ಅವಕಾಶ ನಮ್ಮ ಬಳಿಯೇ ಇರುತ್ತದೆ. ಇದನ್ನು ಆಯ್ಕೆ ಮಾಡಿಕೊಳ್ಳುವ ಮನೋಭಾವನೆಯನ್ನು ನಾವೇ ಮೈಗೂಡಿಸಿಕೊಳ್ಳಬೇಕು. ಅದೇಷ್ಟೋ ಭವ್ಯಾತ್ಮರು ಈಗಲೂ ಲೌಕಿಕ ಇಚ್ಛೆಗಳನ್ನು ತೊರೆದು ಭವ್ಯತ್ತೋಮವಾದ ನಿರ್ಗ್ರಂಥ ಪಥದಲ್ಲಿ ದಾಪುಗಾಲು ಇಡುತ್ತಿರುವುದನ್ನು ನಾವು ಕಾಣಬಹುದು. ಆಧುನಿಕ ಸಮಾಜದಲ್ಲಂತೂ ಇಚ್ಛೆಗಳ ಈಡೇರಿಕೆಗಾಗಿ‌ ಹಲವರು ದುಃಖ ಪಡುವುದನ್ನು ಕಾಣುತ್ತೇವೆ. ಇಚ್ಛೆಗಳನ್ನು ದಮನಿಸುವವನು ಗುಡಿಸಲಲ್ಲಿ ಇದ್ದರೂ ಸುಖದ ಅರಮನೆಯಲ್ಲಿ ಜೀವನ ನಡೆಸುತ್ತಾನೆ. ಅಧಿಕ ಇಚ್ಛಾಕಾಂಕ್ಷಿಯು ಅರಮನೆಯಲ್ಲಿದ್ದರೂ ದುಃಖದ ಜೀವನ ನಡೆಸುತ್ತಾನೆ.

ಭವ್ಯೋತ್ತಮರಾದ ನಾವುಗಳು ನಮ್ಮ ಜೀವನದಲ್ಲಿ ಉತ್ತಮ ತಪ ಧರ್ಮದ ಗುಣವನ್ನು ಅಳವಡಿಸಿ ಧರ್ಮದ ಮಾರ್ಗದಲ್ಲಿ ಮುನ್ನಡೆಯುತ್ತಾ ಪಾವನರಾಗೋಣ ಎಂದು ಹಾರೈಸುತ್ತೇನೆ

ನಿರಂಜನ್ಜೈನ್ಅಳದಂಗಡಿ
9945563529.

Translate »
error: Content is protected !!