ಈ ಸಲ ನಮ್ಮ ಯಾತ್ರೆ ಗುಜರಾತ್ ರಾಜ್ಯದಲ್ಲಿ ಇರುವ ಗಿರಿನಾರ್ , ಪಾಲಿತಾನ, ಪಾವಘಢ ಎಂಬ ಮೂರು ಸಿದ್ಧ ಕ್ಷೇತ್ರಗಳ ದರ್ಶನ
ಬಹಳ ಸಮಯದ ನಂತರ ನಮ್ಮ ಭಾವನೆಗೆ ಪೂರಕವಾದ ಸಂದರ್ಭ ಒದಗಿ ಬಂತು. ಅದುವೇ ಸಿದ್ಧಕ್ಷೇತ್ರದ ದರ್ಶನ. ಭರತಭೂಮಿಯಲ್ಲಿ ಅನೇಕ ಕಡೆ ಸಿದ್ಧ ಕ್ಷೇತ್ರಗಳಿದ್ದರೂ ಈ ಸಲ ಆಯ್ದುಕೊಂಡ ಪುಣ್ಯ ಕ್ಷೇತ್ರ ಗುಜರಾತ್ ರಾಜ್ಯದಲ್ಲಿ ಇರುವ ಗಿರಿನಾರ್, ಪಾಲಿತಾನ, ಪಾವಘಢ .ರಾಮಾಯಣ ಮತ್ತು ಮಹಾಭಾರತ ನಡೆದ ಸಮಯದಲ್ಲಿ ಅನೇಕ ಭವ್ಯ ಜೀವಿಗಳು ಸಂಸಾರದ ಅಸಾರತೆಯನ್ನು ಗಮನಿಸಿ ಅಷ್ಟಕರ್ಮಗಳನ್ನು ಗೆದ್ದು ವೀತರಾಗಿಯಾಗಿ ಈ ಪಾವನ ಕ್ಷೇತ್ರಗಳಿಂದ ಮೋಕ್ಷವನ್ನು ಪಡೆದು ಮುಕ್ತಿಲಕ್ಷ್ಮಿಯನ್ನು ವರಿಸಿದ ಪುಣ್ಯ ಭೂಮಿ.
ನಮ್ಮಲ್ಲಿ ಕೆಲವರು ಹೇಳುವುದುಂಟು ತೀರ್ಥಯಾತ್ರೆಗಳೆಲ್ಲ 60ವರ್ಷ ದಾಟಿದ ನಂತರ ಮಾಡಬೇಕೆಂದು .ಆದರೆ ನನಗೆ ಅನಿಸುತ್ತದೆ ಅದು ತೀರ್ಥ ಯಾತ್ರೆಯಲ್ಲ, ಅದು ಅಂತಿಮ ಯಾತ್ರೆಗೆ ಸಜ್ಜು ಆಗುವುದರ ಸಂಕೇತವೆಂದು. ಶರೀರ ಕೂಡ ಆತ್ಮಕಲ್ಯಾಣಕ್ಕೆ ಸಹಕಾರಿ ಶರೀರ ಸ್ವಸ್ಥ ಇರುವಾಗಲೇ ಅದರಿಂದ ಪುಣ್ಯಕೆಲಸವನ್ನು ತೆಗೆದುಕೊಳ್ಳಬೇಕು. ಇದುವೇ ನಿಜವಾದ ಶರೀರದ ಸದುಪಯೋಗ.
ಸುಮಾರು ಒಂದುವರೆ ತಿಂಗಳ ಹಿಂದೆ ಈ ಸಿದ್ಧಕ್ಷೇತ್ರಗಳನ್ನು ದರ್ಶನ ಮಾಡಬೇಕೆಂದು ನಿರ್ಧರಿಸಿ ನಮ್ಮ ಸಹಮಿತ್ರರೊಡಗೂಡಿ ಆಲೋಚಿಸಿ ಯಾತ್ರಾ ಕಾರ್ಯಕ್ರಮದ ನೀಲನಕಾಶೆಯನ್ನು ಸಿದ್ಧಪಡಿಸಿ ಯಾತ್ರೆಗೆ ಹೊರಡಲು ಸನ್ನಧ್ಧವಾಯಿತು ಆದರೇನು ಮಾಡುವುದು ಕೆಲವೊಂದು ಸಲ ನಮ್ಮ ಲೆಕ್ಕಚಾರಗಳು ನಮ್ಮ ಮಿತಿಯಲ್ಲಿ ಇರುವುದಿಲ್ಲ,ರೈಲ್ವೆ ಟಿಕೇಟ್ ಕನ್ಫರ್ಮ್ ಆಗದೇ ಇರುವ ಕಾರಣದಿಂದಾಗಿ ಯಾತ್ರೆಯನ್ನು ಮುಂದೂಡುವ ಆಲೋಚನೆ ಮಾಡಿದೆವು.ಯಾರಿಗೂ ಈ ನಿರ್ಧಾರ ಕೈಗೊಳ್ಳಲು ಮನಸ್ಸು ಇರಲಿಲ್ಲ .ಆದರೆ ನಮ್ಮ ಆತ್ಮೀಯ ಬಳಗದಲ್ಲಿ ಒಬ್ಬರು ಸ್ವಲ್ಪ ಬುದ್ಧಿ ಪ್ರಯೋಗ ಮಾಡಿ ಕೇರಳದ ಶೋರನೂರಿನಿಂದ ಕನ್ಫರ್ಮ್ ಟಿಕೆಟ್ ಇರುವುದನ್ನು ಗಮನಿಸಿ ಅಲ್ಲಿಂದ ಟಿಕೇಟ್ ಕಾದಿರಿಸಿ ನಮ್ಮ ಯಾತ್ರೆಯ ಸಂಕಲ್ಪಕ್ಕೆ ಚುರುಕನ್ನು ಮೂಡಿಸಿದರು. ಕೆಲವೊಂದು ಸಲ ಹಾಗೆಯೇ ಪುಣ್ಯದ ಪ್ರಾಬಲ್ಯ ಇದ್ದರೆ ನೆನೆಸಿದ ಕಾರ್ಯ ಸಿದ್ಧಿಸುವುದು. ಏನೇ ಇರಲಿ ಸದ್ಭಾವನೆಗೆ ಫಲಶ್ರುತಿ ಎಂಬಂತೆ ನಮ್ಮ ಯಾತ್ರೆಯು 1-10-2019ನೇ ಮಂಗಳವಾರದಂದು ಆರಂಭವಾಗಿ 8-10-2019ನೇ ಮಂಗಳವಾರದ ವರೆಗೆ ಅಂತ ನಿರ್ಧರಿಸಿ ಅದಕ್ಕೆ ಬೇಕಾಗುವ ಪೂರ್ವತಯಾರಿಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿದೆವು.
ಯಾತ್ರೆಯ ದಿನ ಹತ್ತಿರ ಬರುತ್ತಿದ್ದಂತೆ ಆತ್ಮೀಯ ಬಂಧುಗಳು ಚುರುಕಿನ ತಯಾರಿಯಲ್ಲಿ ಇದ್ದರು.30-9-2019ನೇ ಸೋಮವಾರದಂದು ಯಾತ್ರೆಗೆ ಹೊರಡಲು ಸನ್ನಧ್ಧರಾಗಿ ರಾತ್ರಿ ಮೂಡಬಿದ್ರೆಯ ಶ್ರೀ ಕೃಷ್ಣರಾಜಹೆಗ್ಡೆಯವರ ಮನೆಯಲ್ಲಿ ಸೇರಿದೆವು.. ಬೆಳಿಗ್ಗೆ ಬೇಗನೆ ಎದ್ದು ಶುಚಿರ್ಭೂತರಾಗಿ ಮೂರು ವಾಹನಗಳಲ್ಲಿ 11ಮಂದಿಯ ಯಾತ್ರಾರ್ಥಿಗಳ ಬಳಗ ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್ ಅನ್ನು ಬೆಳಿಗ್ಗೆ 4ಗಂಟೆ ಸುಮಾರಿಗೆ ತಲುಪಿತು. ಸಮಯಕ್ಕೆ ಸರಿಯಾಗಿ ಕೇರಳದ ಕಡೆಯಿಂದ ನಮ್ಮ ರೈಲು ನಿಗದಿತ ಸಮಯಕ್ಕೆ ಸರಿಯಾಗಿ ತಲುಪಿತು.ರೈಲು ಮರುದಿನ ಬೆಳಿಗ್ಗೆ 7.30ಕ್ಕೆ ಗುಜಾರಾತಿನ ಅಹ್ಮದಾಬಾದ್ ತಲುಪಿತು.. ಪೂರ್ವ ನಿರ್ಧಾರದಂತೆ ಗುಜರಾತಿನ ಮೂಲೆ ಮೂಲೆಗಳನ್ನು ನಮ್ಮನ್ನು ತಿರುಗಿಸಲು ಕಾದಿದ್ದ ನಮ್ಮ ವ್ಯಾನ್ ಗೆ ನಮ್ಮ ಲಗೇಜ್ ಗಳನ್ನು ತುಂಬಿಸಿ ಅಹ್ಮದಾಬಾದ್ ನಲ್ಲಿ ಇರುವ ಸುಮತಿ ಬಲ್ಲಾಳ್ ಅವರ ಮಗಳಾದ ಶಮ ಬಲ್ಲಾಳ್ ಅವರ ಮನೆಯಲ್ಲಿ ಗುಜರಾತಿನ ತಿಂಡಿ ತಿನಿಸುಗಳನ್ನು ಸ್ವೀಕರಿಸಿ ,ಮುಂದಿನ ಯಾತ್ರೆಗೆ ಬೇಕಾಗುವ ಆಹಾರವನ್ನು ಅಲ್ಲಿಂದಲೂ ಹಿಡಿದುಕೊಂಡು ಮತ್ತೆ ಸ್ವಲ್ಪ ಕುಶಲೋಪರಿ ಮುಗಿಸಿದೆವು. 6ವರ್ಷದ ಅವರ ಮಗು ಕೂಡ ನಮ್ಮೊಂದಿಗೆ ಯಾತ್ರೆಗೆ ಹೊರಡಲು ತುದಿಗಾಲಿನಲ್ಲಿ ನಿಂತಿತು. ನಮ್ಮದು ಪುಣ್ಯವೇ ಸರಿ. ಇನ್ನೊಂದು ಜೀವಕ್ಕೆ ಸಿದ್ಧಕ್ಷೇತ್ರದ ದರ್ಶನದಲ್ಲಿ ನಾವು ನಿಮಿತ್ತ ರಾದ್ವಿ .ತದನಂತರ ನಮ್ಮ ಪ್ರಯಾಣ “ಜೂನಘಢ್ ” ಕಡೆಗೆ ಸಾಗಿತು .ಈ ಪ್ರಯಾಣ ಸುಮಾರು 320ಕಿ.ಮೀ. ಇದರ ನಡುವಿನಲ್ಲಿ “ರಾಜ್ ಕೋಟ್” ನಲ್ಲಿ ಇರುವ ಜಿನಾಲಯಗಳನ್ನು ದರ್ಶನ ಮಾಡಿ ರಾತ್ರಿ 8ಗಂಟೆಗೆ ಜೂನಘಢ್ ತಲುಪಿದೆವು.
ಊರ್ಜಯಂತಗಿರಿ(ಗಿರಿನಾರ್) ಎನ್ನುವ ಪುರಾಣ ಪ್ರಸಿದ್ಧ ,ನಿರ್ವಾಣಭೂಮಿ ಇರುವುದೇ ಇಲ್ಲಿ. ಈ ಗಿರಿಯನ್ನು ಸಂಸ್ಕ್ರತ ಸಾಹಿತ್ಯದಲ್ಲಿ ರೈವತಕ ಪರ್ವತವೆಂದು ಕರೆಯಲಾಗಿದೆ.ಈ ಅವಸರ್ಪಿಣಿಯ ಚತುರ್ಥಕಾಲದ 22ನೇ ತೀರ್ಥಂಕರರಾದ ಭ|ನೇಮಿನಾಥರು ಮುಕ್ತಿ ಪಡೆದ ಪುಣ್ಯ ಭೂಮಿ .ಇದೇ ಭೂಮಿಯಿಂದ ಪ್ರದ್ಯುಮ್ನ ,ಶಂಭುಕುಮಾರ, ಅನಿರುದ್ಧಾದಿ 72ಕೋಟಿ 700ಮುನಿಗಳು ಇದೇ ಕ್ಷೇತ್ರದಿಂದ ಮೋಕ್ಷವನ್ನು ಪಡೆದಿರುವುದು. ಯಾವುದೇ ಕ್ಷೇತ್ರಕ್ಕೆ ಹೋಗುವಾಗ ಆ ಕ್ಷೇತ್ರದ ಸ್ಥಳವಿಶೇಷ ಗೊತ್ತಿದ್ದರೆ ಆ ಯಾತ್ರೆಯು ಅರ್ಥಗರ್ಭಿತವಾಗಿರುತ್ತದೆ.
ಬೆಳ್ಳಂಬೆಳಗ್ಗೆ ಸುಮಾರು 3.30ಕ್ಕೆ ಗಿರಿನಾರ್ ಎಂಬ ಉನ್ನತವಾದ ಪರ್ವತವನ್ನು ಹತ್ತಲು ಶುರುಮಾಡಿದೆವು. ಇದೇನು ಸಣ್ಣ ಪುಟ್ಟ ಬೆಟ್ಟವಲ್ಲ ಹತ್ತಿದ ನಂತರವೇ ಗಮನಕ್ಕೆ ಬಂತು ಸರಿಸುಮಾರು 9,999ಮೆಟ್ಟಿಲುಗಳನ್ನು ಏರಬೇಕು.ಕೊನೆಯಲ್ಲಿ 5ನೇ ಕೂಟದಲ್ಲಿ ಸಿಗುವ ಚರಣ ಪಾದುಕವೇ ಭಗವಾನ್ ನೇಮಿನಾಥರು ಮೋಕ್ಷ ಹೊಂದಿದ ಜಾಗ. ಇಲ್ಲಿಗೆ ಬೆಳಿಗ್ಗೆ 8.30ಕ್ಕೆ ನಾವು ಎಲ್ಲ ಮೆಟ್ಟಿಲುಗಳನ್ನು ಜಯಿಸಿ ಸ್ವಾಮಿಯ ಪಾದ ಕಮಲದ ದರ್ಶನ ಮಾಡಿದೆವು… ಉನ್ನತವಾದ ಗಿರಿಯನ್ನು ಏರಿ ಧನ್ಯರಾದೆವು.ಅಲ್ಲಿಯೇ ಕೆಳಗಿನ ಸ್ಥರದಲ್ಲಿ ಸ್ವಾಮಿಯನ್ನು ಭಕ್ತಿಯಿಂದ ನೆನೆದು ಪುಂಜವನ್ನು ಇರಿಸಿದೆವು. ಮಹಾಪುರಾಣದ ಸ್ವಾಧ್ಯಾಯ ಕೂಡ ಅಲ್ಲಿಯೇ ಆಯಿತು… ಜೀವನದ ಅಮೂಲ್ಯ ಕ್ಷಣಗಳಲ್ಲಿ ಇದು ಒಂದು …
ತದನಂತರ ಕೆಳಗೆ ಇಳಿಯುತ್ತಾ 4ನೇ,3ನೇ, 2ನೇ, 1ನೇ ಕೂಟವನ್ನು ದರ್ಶನ ಮಾಡುತ್ತ ಆ ಪಾವನ ಗಿರಿಯನ್ನು ನೆನೆಸುತ್ತ ಮತ್ತೆ ದರ್ಶನ ಆಗಲಿ ಅಂತ ಭಾವನೆ ಮಾಡುತ್ತಾ..ನೇಮಿನಾಥ ಸ್ವಾಮಿಯ ಕಥೆಯನ್ನು ಮನಸ್ಸಿಗೆ ತಂದುಕೊಂಡು ಮಹಾಭಾರತದ ಸಮಯಕ್ಕೆ ಹೋಗಿ ಬಂದಿರುವುದರಲ್ಲಿ ಸಂಶಯವಿಲ್ಲ .ಇತಿಹಾಸದ ದೃಷ್ಟಿಯಿಂದಲೂ ಸುಮಾರು 2000ಸಾವಿರ ವರ್ಷಗಳ ಹಿಂದಿನಿಂದಲೂ ಜೈನ ಸಂಸ್ಕೃತಿಯ ಆರಾಧಕರ ಮಹಾನ್ ಕ್ಷೇತ್ರವಾಗಿದೆ. ಗಿರಿನಾರಿನ ಚಂದ್ರಗುಫದಲ್ಲಿದ್ದ ಆಚಾರ್ಯ ಧರಸೇನರು ಭೂತಬಲಿ ಮತ್ತು ಪುಷ್ಪದಂತರಿಗೆ ಕರ್ಮಶಾಸ್ತ್ರದ ಅಧ್ಯಯನವನ್ನು ಮಾಡಿಸಿದ್ದರು. ಸ್ವಾಮಿ ಸಮಂತಭದ್ರರು ಮತ್ತು ಧವಳಾ ಟೀಕೆಯಲ್ಲಿ ಕೂಡ ಈ ಕ್ಷೇತ್ರವನ್ನು ಉಲ್ಲೇಖಿಸಿದ್ದಾರೆ. ಇಂಥ ಪರಮ ಪವಿತ್ರವಾದ ಊರ್ಜಯಂತ ಗಿರಿ ಕ್ಷೇತ್ರವನ್ನು ದರ್ಶನ ಮಾಡಿ ನಾವೂ ಪುನೀತರಾದೆವು.
ಗಿರಿನಾರಿನ ಉನ್ನತವಾದ ಶ್ರೇಣಿಗಳು ಕಣ್ಣೆದುರೆ ಇರುವಂತೆಯೇ ನಮ್ಮ ಪ್ರಯಾಣ ಐತಿಹಾಸಿಕ ಸ್ಥಳವಾದ ಸೋಮನಾಥ ಮಂದಿರವನ್ನು ನೋಡಿ ಇನ್ನೊಂದು ಸಿದ್ಧಕ್ಷೇತ್ರವಾದ “ಪಾಲಿತಾನ”ದ ಕಡೆಗೆ ಸ್ವಲ್ಪ ವೇಗವಾಗಿ ಕ್ರಮಿಸಿದೆವು.
ದಾರಿ ಮಧ್ಯದಲ್ಲಿ ನಾವೇ ಮಾಡಿದ ಆಹಾರವನ್ನು ಸೇವಿಸುತ್ತಾ ಶರೀರದ ಪಾಲನೆಯನ್ನು ಕೂಡ ಮಾಡಿದೆವು. ಸುಮಾರು 20ಕ್ಕಿಂತ ಅಧಿಕ ಭಕ್ಷ್ಯಗಳನ್ನು ನಮ್ಮ ಬಳಗದ ಮಹಿಳೆಯರು ತಂದಿದ್ದರು ಅವರ ಶ್ರಮಕ್ಕೆ ನಿಜವಾಗಿಯೂ ಶಹಬಾಸ್ ಹೇಳಲೇಬೇಕು.. ಯಾತ್ರೆಯ ಪೂರ ನಮಗೆ ಹಸಿವೆಯ ನೆನಪು ಆಗದ ಹಾಗೆ ನೋಡಿ ಕೊಂಡಿದ್ದಾರೆ .ಇದರ ಎಲ್ಲ ಕ್ರೇಡಿಟ್ ಮಹಿಳೆಯರಿಗೆ ಸಲ್ಲಬೇಕು.
ಪ್ರಯಾಣದ ವೇಳೆಯಲ್ಲಿ ಹರಿವಂಶಪುರಾಣದ ಸ್ವಾಧ್ಯಾಯವೂ ಆಗುತಿತ್ತು..ತತ್ವ ಚರ್ಚೆ ಆಗುತ್ತಿತ್ತು ಒಟ್ಟಾರೆಯಾಗಿ ಯಾತ್ರೆಯ ದಿನಗಳನ್ನು ಸದುಪಯೋಗ ಮಾಡಿಕೊಂಡಿದ್ದೇವೆ ಅನ್ನುವ ಸಂತೃಪ್ತಿಯಿದೆ.
ರಾತ್ರಿ 11ಗಂಟೆಯ ಸುಮಾರಿಗೆ ಪಾಲಿತಾನ ತಲುಪಿದೆವು ..ಅಲ್ಲಿಯ ದಿಗಂಬರ ಧರ್ಮಶಾಲೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ 5.30ಕ್ಕೆ ಪಾಲಿತಾನದ ಬೆಟ್ಟವನ್ನು ಏರಲು ಶುರುಮಾಡಿದೆವು.
ಧರ್ಮ ,ಭೀಮ, ಅರ್ಜುನ ಎಂಬ ಮೂರು ಮಂದಿ ಪಾಂಡವರು ಮತ್ತು 8ಕೋಟಿ ದ್ರವಿಡರಾಜರು ಮೋಕ್ಷ ಹೊಂದಿದ ಶತ್ರುಂಜಯ(ಪಾಲಿತಾನ) ಗಿರಿಯನ್ನು ದರ್ಶನ ಮಾಡುವ ಸಲುವಾಗಿ ಬಹಳ ಆನಂದದಿಂದ ದಾಪುಗಾಲು ಇಟ್ಟೆವು.ಪಾಂಡವರು ದಿಗಂಬರರಾಗಿ ತಪಸ್ಸು ಮಾಡುವ ಸಂದರ್ಭದಲ್ಲಿ ಅವರಿಗೆ ಆದ ಉಪಸರ್ಗವನ್ನು ನೆನೆಯುತ್ತಾ ಆ ಉಪಸರ್ಗವನ್ನು ಗೆದ್ದು ಮೋಕ್ಷ ಹೊಂದಿದ ಧರ್ಮ ,ಭೀಮ, ಅರ್ಜುನ ಮೂರು ಮಂದಿ ಪಾಂಡವರನ್ನು ಭಕ್ತಿಯಿಂದ ಸ್ಮರಣೆ ಮಾಡುತ್ತಾ ಪಾಲಿತಾನದ ಮೇಲಿರುವ ದಿಗಂಬರ ಜಿನಾಲಯವನ್ನು ತಲುಪಿದೆವು. ಮಡಿ ವಸ್ತ್ರವನ್ನು ಧರಿಸಿ ಜಿನಾಭಿಷೇಕ ಮಾಡಿ ಅಲ್ಲಿಯೂ ಸ್ವಾಧ್ಯಾಯ ಜಪಾದಿಗಳನ್ನು ಮಾಡಿ ಆ ಸಿದ್ಧ ಕ್ಷೇತ್ರದ ದರುಶನದಿಂದ ಸಮ್ಯಕ್ತ್ವದ ಜಾಗೃತಿಯಾಯಿತು.
ಪಾಲಿತಾನದಿಂದ ಸುಮಾರು 70ಕಿ.ಮೀ ದೂರದ ಸಮುದ್ರದ ತೀರದಲ್ಲಿ ಘೋಘ ಅನ್ನುವ ಪ್ರದೇಶ ಇದೆ ಅಲ್ಲಿ ಒಂದು ದಿಗಂಬರ ಜಿನಾಲಯವಿದೆ.ಅದು ಬಹಳ ಪ್ರಾಚೀನ ಮಂದಿರವಾಗಿದ್ದು ಶ್ರೀಪಾಲರಾಜನು ತನ್ನ ಶಕ್ತಿಯಿಂದ ಸಹಸ್ರಕೂಟ ಜಿನಾಲಯವನ್ನು ತೋರಿಸಿದ ಜಾಗ ಅತಿಶಯಕ್ಷೇತ್ರ… ಶ್ರೀಪಾಲ ರಾಜನ ಕಥೆಯನ್ನು ಈ ಹಿಂದೆ ಕೇಳಿದ್ದರಿಂದ ಅಲ್ಲಿಗೆ ತೆರಳುವ ನಮ್ಮ ಉತ್ಸಾಹ ಇಮ್ಮಡಿ ಗೊಂಡಿತ್ತು… ಕೊನೆಗೂ ನಾವು ಅಂದುಕೊಂಡಹಾಗೆ ಅತಿಶಯಕ್ಷೇತ್ರವನ್ನು ತಲುಪಿದೆವು .ಏನು ಭವ್ಯ ಜಿನಾಲಯ!! ಅಲ್ಲಿಯ ಜಿನಬಿಂಬಗಳನ್ನು ನೋಡಲು ಎರಡು ಕಣ್ಣುಗಳು ಸಾಲವು…ನಮಗ್ಯಾರಿಗೂ ಅಲ್ಲಿಂದ ಹಿಂದೆ ಬರಲು ಮನಸ್ಸು ಇರಲಿಲ್ಲ…. ನೋಡಿದಷ್ಟು ನಮ್ಮ ಅಂತಃಕರಣದ ಭಕ್ತಿ ಚಿಲುಮೆ ಅಧಿಕವಾಗಿ ಹೊರಹೊಮ್ಮುತ್ತಿತ್ತು. ಆ ಕ್ಷೇತ್ರವನ್ನು ನೋಡಿದ ನಮ್ಮ ಕಣ್ಣುಗಳೇ ಧನ್ಯವು…ಒಲ್ಲದ ಮನಸ್ಸಿನಿಂದ ಈ ಕ್ಷೇತ್ರವನ್ನು ಬಿಟ್ಟು ಮುಂದೆ ಗಿರ್ ಅರಣ್ಯದ ಕಡೆಯಿಂದ ಪಾವಗಢಕ್ಕೆ ರಾತ್ರಿ 11.30ಕ್ಕೆ ತಲುಪಿದೆವು.
ಶ್ರೀ ರಾಮನ ಮಕ್ಕಳಾದ ಲವಕುಶರು ಮತ್ತು ಲಾಟಾ ದೇಶದ ಐದುಕೋಟಿ ರಾಜರು ಕರ್ಮವನ್ನು ಕ್ಷಯಮಾಡಿ ಮೋಕ್ಷ ಹೊಂದಿದ ಪಾವನ ಕ್ಷೇತ್ರ.. ಬೆಳಿಗ್ಗೆ ಬೇಗ ಎದ್ದು ‘ರೋಪ್- ವೇ’ ಮೂಲಕ ಪಾವಗಢದ ಶಿಖರದ ಮೇಲೆ ಏರಿದೆವು.. ಮೊಘಲರ ಕಾಲದಲ್ಲಿ ಆದ ತೀವ್ರ ದಾಳಿಯಿಂದಾಗಿ ನಮ್ಮ ಅನೇಕ ಜಿನಾಲಯಗಳು ನಾಶ ಹೊಂದಿವೆ..ಆದರೂ ಕೆಲವು ಜಿನಾಲಯಗಳು ಪ್ರಾಚೀನತೆಯನ್ನು ತೋರುವುದರಲ್ಲಿ ಹಿಂದೆ ಬಿದ್ದಿಲ್ಲ. ಎಲ್ಲ ಜಿನಾಲಯಗಳನ್ನೂ ದರ್ಶನ ಮಾಡಿ ಅಲ್ಲಿಯೂ ಸ್ವಾಧ್ಯಾಯ ಮತ್ತು ಜಿನಾಭಿಷೇಕವನ್ನು ನೋಡಿ ಮೂರು ಸಿದ್ಧ ಕ್ಷೇತ್ರದ ದರ್ಶನವನ್ನು ಪೂರ್ಣಗೊಳಿಸಿದೆವು.ಅಂದು ಜೀವದಯಾಷ್ಠಮಿಯ ದಿನವಾಗಿತ್ತು ಅಲ್ಲಿಂದ ನಮ್ಮ ಊರಿನ ಎಲ್ಲ ಕೃತ್ರಿಮ ಜಿನಾಲಯಗಳನ್ನು ಸ್ಮರಿಸುತ್ತ ಅಹಿಂಸೆಯನ್ನು ನಮ್ಮಲ್ಲಿ ಇನ್ನು ಹೆಚ್ಚು ಅಳವಡಿಸಿಕೊಳ್ಳಲು ಆಗಲಿ ಎನ್ನುವ ಭಾವನೆ ಮಾಡುತ್ತಾ ಬೆಟ್ಟದಿಂದ ಕೆಳಮುಖವಾಗಿ ಇಳಿದೆವು.
ಪವಿತ್ರ ಸಿದ್ಧಕ್ಷೇತ್ರವನ್ನು ದರ್ಶನ ಮಾಡುತ್ತ,ಮುನಿಗಳು ತ್ಯಾಗಿ ವೃಂದವನ್ನು ದರ್ಶನ ಮಾಡುತ್ತಾ ಅನೇಕರು ವ್ರತಗಳನ್ನು ತೆಗೆದುಕೊಂಡರು .ಕೆಲವರು ಶಕ್ತಿ ಅನುಸಾರ ತ್ಯಾಗವನ್ನು ಮಾಡಿದರು .ಒಂದು ಅರ್ಥ ಪೂರ್ಣವಾದ ಯಾತ್ರೆ ಇದಾಗಿತ್ತು.
ಮುಂದೆ ಪಾವಘಡದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಸ್ಟ್ಯಾಚ್ಯು ಆಫ್ ಯ್ಯುನಿಟಿಯನ್ನು ನೋಡುವ ಸಲುವಾಗಿ ಸರ್ದಾರ್ ಸರೋವರ ಡ್ಯಾಮ್ ಕಡೆಗೆ ಹೊರಟೆವು ಅಲ್ಲಿಯ ಆಧುನಿಕ ಪ್ರತಿಮೆ ,ಆಣೆಕಟ್ಟು ಇತ್ಯಾದಿಗಳನ್ನು ನೋಡುತ್ತಾ ರಾತ್ರಿ ಅಹ್ಮದಾಬಾದ್ ತಲುಪಿದೆವು. ಮರುದಿವಸ ಬೆಳಿಗ್ಗೆ ರಾಷ್ಟ್ರಪಿತ ಗಾಂಧೀಜಿಯ ಶಬರಮತಿ ಆಶ್ರಮಕ್ಕೆ ಹೋದೆವು ಸ್ವಾತಂತ್ರ್ಯ ಪೂರ್ವದ ಅನೇಕ ಭಿತ್ತಿಚಿತ್ರಗಳನ್ನು ನೋಡಿ ಆಶ್ಚರ್ಯಚಿಕಿತರಾದೆವು. ಈ ಎಲ್ಲ ಯಾತ್ರೆಯ ಮಾರ್ಗದರ್ಶಿ ಅಜಿತ್ ಜೈನ್ ಡೊಂಬಿವೆಲಿ(ಬಾಂಬೆ)ಇವರ ಮಾರ್ಗದರ್ಶನ ಮರೆಯಲಾಗದು.
ಒಟ್ಟಿನಲ್ಲಿ ಧಾರ್ಮಿಕ -ಸಾಮಾಜಿಕ ಕ್ಷೇತ್ರಗಳನ್ನು ನೋಡಿ ಎಲ್ಲಿಯೂ ಸಮಯವನ್ನು ವ್ಯರ್ಥಗೊಳಿಸದೆ ಪರಿಪೂರ್ಣ ಯಾತ್ರೆಗೆ ನಮ್ಮ ಎಲ್ಲ ಆತ್ಮೀಯ ಬಂಧುಗಳು ಸಹಕರಿಸಿದ್ದು ಅವಿಸ್ಮರಣೀಯ ..
ನಮ್ಮೊಂದಿಗೆ ಬಂದ ಸಾಧರ್ಮ ಬಂಧುಗಳಿವರು: ಕೃಷ್ಣರಾಜ್ ಕೆ ಹೆಗ್ಡೆ, ಯತಿರಾಜ್ ಜೈನ್, ಅವಕಾಶ್ ಪಡಿವಾಳ್, ಅಜಿತ್ ಕುಮಾರ್ ಜೈನ್ ನಾರಾವಿ,ಸತ್ಯವತಿ ಆರ್ ಬಲ್ಲಾಳ್, ಸುಮತಿ ಬಲ್ಲಾಳ್, ಸುಮತಿ ಪಡಿವಾಳ್,ಸುಮನ ಭಂಡಾರಿ ಜೈನ್, ಚೇತನ ಕೃಷ್ಣರಾಜ್ ಹೆಗ್ಡೆ, ನೀನಾ ಜೈನ್ ,ಐಶ್ವರ್ಯ ಅವಕಾಶ್ ಜೈನ್ , ಸಾನ್ವಿ ರಾಯ್.
✍ ಅಜಿತ್ ಕುಮಾರ್ ಜೈನ್ ನಾರಾವಿ









